ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಯ ಸಮರ್ಥನೆ, ಪ್ರಭುತ್ವದ ಗುಲಾಮಗಿರಿ ಧೋರಣೆ

Most read

ಕನ್ನಡ ಪ್ಲಾನೆಟ್‌ ನಲ್ಲಿ ಪ್ರಕಟಿತವಾದ “ರಂಗಾಯಣಗಳ ಕಾಸು, ರಾಜಧಾನಿಯಲ್ಲಿ ರಂಗಪರಿಷೆಯ ಸೊಗಸು” ಲೇಖನಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಯಾಗಿರುವ ಮಾನ್ಯ ಕಿರಣ್ ಸಿಂಗ್ ರವರು ಕೂಡಲೇ ತಮ್ಮ ಸಮರ್ಥನೆ ಬರೆದು ಕಳಿಸುವ ಮೂಲಕ ತಮ್ಮ ಪ್ರಭುತ್ವ ನಿಷ್ಠೆಯನ್ನು ವ್ಯಕ್ತಪಡಿಸಿದರು. ರಂಗಾಯಣ ಹಾಗೂ ಪ್ರಾಧಿಕಾರದಲ್ಲಿದ್ದ ಸಂಸ್ಕೃತಿ ಇಲಾಖೆಯ ಉಳಿಕೆ ಹಣವನ್ನು ವಾಪಸ್ ಪಡೆದು ರಂಗಪರಿಷೆಗೆ ಹಂಚಿಕೆ ಮಾಡಲಾಗಿದೆ ಎಂಬುದು ಅವರ ಪ್ರತಿಕ್ರಿಯೆ ಆಗಿತ್ತು. ಆದರೆ ಲೇಖನದಲ್ಲಿ ವ್ಯಕ್ತಪಡಿಸಲಾದ ಯಾವುದೇ  ಸಂದೇಹಗಳಿಗೆ ಸಿಂಗ್ ರವರು ಉತ್ತರಿಸದೇ ಮೌನವಾಗಿದ್ದರು – ಶಶಿಕಾಂತ ಯಡಹಳ್ಳಿ, ರಂಗಕರ್ಮಿ.

ಲೇಖನದಲ್ಲಿ ವ್ಯಕ್ತಪಡಿಸಲಾದ ಯಾವುದೇ  ಸಂದೇಹಗಳಿಗೆ ಸಿಂಗ್ ರವರು ಉತ್ತರಿಸದೇ ಮೌನವಾಗಿದ್ದರಿಂದ ಈ ಕೆಳಗಿನ ಪ್ರಶ್ನೆಗಳ ಪಟ್ಟಿಯನ್ನು ಅವರಿಗೆ ಬರೆದು ಕಳುಹಿಸಿ ಸ್ಪಷ್ಟೀಕರಣ ಕೇಳಲಾಯ್ತು

  • ಸರಕಾರಿ ಕಾರ್ಯಕ್ರಮಗಳಿಗೆ ಬಳಸಿ ಉಳಿದ ಹಣವನ್ನು ರಂಗಾಯಣ ಹಾಗೂ ಕುವೆಂಪು ಪ್ರಾಧಿಕಾರಗಳಲ್ಲಿ ಜಮೆ ಮಾಡುತ್ತಾ ಬಂದಿದ್ದು ಈಗ ಆ ಹಣವನ್ನು ರಂಗಪರಿಷೆಗೆ ಬಳಸಲಾಗಿದೆಯಲ್ಲವೇ, ಅದೇ ಸಂಸ್ಕೃತಿ ಇಲಾಖೆ ರಂಗಾಯಣಗಳಿಗೆ ಈ ಹಿಂದೆ ಕೊಡಮಾಡುತ್ತಿದ್ದ ಒಂದು ಕೋಟಿ ಅನುದಾನವನ್ನು 40 ಲಕ್ಷಕ್ಕೆ ಇಳಿಸಿದ್ದು ಅನ್ಯಾಯವಲ್ಲವೇ? ಇಷ್ಟು ಕಡಿಮೆ ಹಣದಲ್ಲಿ ಹತ್ತು ಜನ ಕಲಾವಿದರು ಹಾಗೂ ತಂತ್ರಜ್ಞರಿಗೆ ವೇತನ ಪಾವತಿಸಿ ರಂಗಕಾರ್ಯಗಳನ್ನು ಮಾಡಲು ಸಾಧ್ಯವೇ? ಉಳಿಕೆಯಾದ ಇಲಾಖೆಯ ಹಣವನ್ನು ಆಯಾ ರಂಗಾಯಣಗಳಿಗೆ ಬಳಸಲು ಕೊಟ್ಟಿದ್ದರೆ ರಂಗಾಯಣಗಳು ಸಶಕ್ತವಾಗುತ್ತಿದ್ದವಲ್ಲವೇ? ಕನ್ನಡ ಮತ್ತು ಸಂಸ್ಕೃತಿ

* ರಂಗಾಯಣದ ಖಾತೆಯಲ್ಲಿದ್ದ ಉಳಿಕೆ ಹಣವನ್ನು ವಾಪಸ್ ಪಡೆದು ಬಳಸಿದ್ದು ರಂಗಪರಿಷೆ ಎನ್ನುವ ಜಾತ್ರೆಗೆ. ಎಂಟು ದಿನದ ಪರಿಷೆಗೆ ಒಂದೂವರೆ ಕೋಟಿಯಷ್ಟು ಹಣವನ್ನು ಸಂಸ್ಕೃತಿ ಇಲಾಖೆ ಬಿಡುಗಡೆ ಮಾಡಿದ್ದು ಅನಗತ್ಯವೆಂದು ಅಧಿಕಾರಿಗಳಿಗೆ ಅನ್ನಿಸಲೇ ಇಲ್ಲವೇ?

* ವಯೋವೃದ್ಧ ಕಲಾವಿದರಿಗೆ ಸರಿಯಾಗಿ ಮಾಸಾಶನ ಕೊಡಲು ಸಂಸ್ಕೃತಿ ಇಲಾಖೆಯಲ್ಲಿ ಹಣವಿಲ್ಲ, ಸಾಂಸ್ಕೃತಿಕ ಸಂಘ ಸಂಸ್ಥೆಗಳಿಗೆ ಅನುದಾನ ಕೊಡಲು ಸಾಧ್ಯವಾಗುತ್ತಿಲ್ಲ, ರಂಗಮಂದಿರಗಳ ನಿರ್ವಹಣೆ ಇಲಾಖೆಯಿಂದ ಆಗುತ್ತಿಲ್ಲ. ಇಂತಹ ಅತ್ಯಗತ್ಯವಾದ ಬಾಬತ್ತುಗಳಿಗೆ ಹಣ ಇಲ್ಲ ಎನ್ನುವ ಇಲಾಖೆಯು ರಂಗಪರಿಷೆಯಂತಹ ಅದ್ದೂರಿ ಕಾರ್ಯಕ್ರಮಗಳಿಗೆ, ಜಯಂತಿಗಳಿಗೆ ಕೋಟಿ ಕೋಟಿ ಹಣವನ್ನು ಖರ್ಚು ಮಾಡುತ್ತಿರುವುದು ಯಾವ ರೀತಿ ಸಮಂಜಸವಾಗಿದೆ?

* ಇದೇ ರಂಗಪರಿಷೆಯ ಮಾದರಿಯಲ್ಲಿಯೇ ರಂಗನಿರಂತರ ತಂಡವು ಕೇವಲ 18 ಲಕ್ಷಗಳ ಖರ್ಚಿನಲ್ಲಿ ನಾಲ್ಕೈದು ದಿನಗಳ ರಾಷ್ಟ್ರೀಯ ನಾಟಕೋತ್ಸವವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಮಾಡುತ್ತಾ ಮಾದರಿಯೊಂದನ್ನು ಹಾಕಿಕೊಟ್ಟಿದೆ. ಅದರಲ್ಲಿ ಆಹ್ವಾನಿತ ನಾಟಕಗಳ ಖರ್ಚೂ ಸೇರಿರುತ್ತದೆ. ನಿಮ್ಮ ಇಲಾಖೆಯ ಪ್ರಾಯೋಜಕತ್ವದಲ್ಲಿ ಆಯೋಜಿಸಲಾದ ರಂಗಪರಿಷೆಯಲ್ಲಿ ಪ್ರದರ್ಶನಗೊಂಡ ಮುಖ್ಯ ನಾಟಕಗಳ ಖರ್ಚು ವೆಚ್ಚವನ್ನು ಎನ್‌ ಎಸ್‌ ಡಿ ಭರಿಸಿದೆ. ಹಾಗಿದ್ದರೂ ನಿಮ್ಮ ರಂಗಪರಿಷೆಯ ಬಜೆಟ್ಟು ಯಾಕೆ ಒಂದೂವರೆ ಕೋಟಿಯಷ್ಟಾಗಿದೆ?

* ಇದೇ ಹಣವನ್ನು ಮೂರು ರಂಗಾಯಣಗಳಿಗೆ ಹೆಚ್ಚುವರಿಯಾಗಿ ಹಂಚಿಕೆ ಮಾಡಿದ್ದರೆ ಒಂದಿಷ್ಟು ಕಲಾವಿದರನ್ನು ಆಯ್ಕೆ ಮಾಡಿ ಒಂದು ವರ್ಷಗಳ ಕಾಲ ನಿರಂತರವಾಗಿ ರಂಗ ಚಟುವಟಿಕೆಗಳನ್ನು ಮಾಡಬಹುದಾಗಿತ್ತು. ಆದರೆ ಸಂಸ್ಕೃತಿ ಇಲಾಖೆಗೆ ಎಂಟು ದಿನಗಳ ರಂಗಜಾತ್ರೆ ಮುಖ್ಯವಾಯಿತೇ ಹೊರತು ಆರ್ಥಿಕ ಕೊರತೆಯಿಂದ ಸೊರಗಿ ಹೋಗಿರುವ ರಂಗಾಯಣಗಳು ಅಮುಖ್ಯವಾದವು. ಸರಕಾರಿ ಕೃಪಾಪೋಷಿತ ರಂಗಾಯಣಗಳನ್ನು ನಿರ್ಲಕ್ಷಿಸಿ ಅದ್ದೂರಿ ರಂಗಪರಿಷೆ ಆಯೋಜಿಸುವ ಅನಿವಾರ್ಯತೆ ಏನಿತ್ತು?

* ಪ್ರಾದೇಶಿಕ ಸಾಂಸ್ಕೃತಿಕ ಸಮಾನತೆಗೆ ಆದ್ಯತೆ ಕೊಡಬೇಕಾದ ಸಂಸ್ಕೃತಿ ಇಲಾಖೆಯು ಬೆಂಗಳೂರು ಕೇಂದ್ರಿತ ಅದ್ದೂರಿ ಕಾರ್ಯಕ್ರಮಗಳಿಗೆ ಸಂಪನ್ಮೂಲಗಳನ್ನು ಬಳಸಿದ್ದು ಸಾಂಸ್ಕೃತಿಕ ದ್ರೋಹವಲ್ಲವೇ?

* ಸರಕಾರದ ಸಾಂಸ್ಕೃತಿಕ ಸಂಸ್ಥೆಗಳಾದ ಆರೂ ರಂಗಾಯಣಗಳಿಗೆ ಅಗತ್ಯವಾದ ಅನುದಾನವನ್ನು ಒದಗಿಸುವುದು ಸಂಸ್ಕೃತಿ ಇಲಾಖೆಯ ಕರ್ತವ್ಯವಾಗಿದೆ. ಅನುದಾನ ಕೊಡಲು ಸಾಧ್ಯವಾಗದೇ ಇದ್ದಲ್ಲಿ ಈ ರಂಗಾಯಣಗಳಲ್ಲಿ ಇಲಾಖೆ ಇಟ್ಟಿರುವ ತನ್ನ ಉಳಿಕೆ ಹಣವನ್ನು ಆಯಾ ರಂಗಾಯಣಗಳಿಗೆ ಯಾಕೆ ಕೊಡಬಾರದು? ರಂಗಾಯಣಗಳನ್ನು ಅತ್ತ ಸಾಯಲೂ ಆಗದ ಇತ್ತ ಬದಕಲೂ ಆಗದ ಅತಂತ್ರ ಸ್ಥಿತಿಯಲ್ಲಿ ಇಟ್ಟು ಬೆಂಗಳೂರಿನಲ್ಲಿ ರಂಗಜಾತ್ರೆ ಮಾಡುತ್ತಿರುವ ಸರಕಾರ ಹಾಗೂ ಸಂಸ್ಕೃತಿ ಇಲಾಖೆಯನ್ನು ಯಾಕೆ ಪ್ರಶ್ನಿಸಬಾರದು?

* ಸಚಿವರಿಗೆ ಹಾಗೂ ಕೆಲವು ಸಾಂಸ್ಕೃತಿಕ ದಲ್ಲಾಳಿಗಳಿಗೆ ಈ ಸೂಕ್ಷ್ಮಗಳು ಅರ್ಥವಾಗುವುದಿಲ್ಲ. ಅವರು ತಮ್ಮದೇ ಆದ ಲಾಭಕೋರತನದತ್ತ ಚಿತ್ತ ನೆಟ್ಟಿರುತ್ತಾರೆ. ಆದರೆ ಜವಾಬ್ದಾರಿಯುತ ಅಧಿಕಾರಿಯಾಗಿರುವ ಕಿರಣ್ ಸಿಂಗ್ ರಂತವರು ಸಚಿವರಿಗೆ ಅರ್ಥವಾಗುವಂತೆ ತಿಳಿಸಿ ಹೇಳಬೇಕು. ಒಂದು ರಂಗಪರಿಷೆಗೆ ಖರ್ಚಾಗುವ ಹಣದಲ್ಲಿ ಮೂರು ರಂಗಾಯಣಗಳು ಒಂದು ವರ್ಷ ನಿರಂತರವಾಗಿ ಕಾರ್ಯಕ್ರಮ ರೂಪಿಸಬಹುದು ಎಂದು ಮನದಟ್ಟು ಮಾಡಿಸಬೇಕಾಗಿತ್ತು. ಒಂದು ಪರಿಷೆಯ ಹಣದಲ್ಲಿ ಹಲವಾರು ಅರ್ಹ ಸಂಘಸಂಸ್ಥೆಗಳಿಗೆ ಅನುದಾನ ಕೊಟ್ಟು ರಾಜ್ಯಾದ್ಯಂತ ಸಾಂಸ್ಕೃತಿಕ ಕಾರ್ಯಕ್ರಮಗಳು ವರ್ಷ ಪೂರ್ತಿ ನಡೆಯುವಂತೆ ಪ್ರೋತ್ಸಾಹಿಸ ಬಹುದಾಗಿತ್ತು. ಒಂದು ರಂಗಪರಿಷೆಗೆ ಖರ್ಚಾದ ಹಣದಲ್ಲಿ ವಯೋವೃದ್ಧ ಕಲಾವಿದರಿಗೆಲ್ಲಾ ಮೂರು ವರ್ಷಗಳ ಅವಧಿಯವರೆಗೂ ಮಾಶಾಸನ ಕೊಡಬಹುದಾಗಿತ್ತು. ಒಂದು ರಂಗಪರಿಷೆಯ ಹಣದಲ್ಲಿ ಸಂಸ್ಕೃತಿ ಇಲಾಖೆಯ ಆಧೀನದಲ್ಲಿರುವ ರಂಗಮಂದಿರಗಳಿಗೆ ಅತ್ಯಗತ್ಯವಾದ ಲೈಟ್ಸ್ ಮತ್ತು ಸೌಂಡ್ ಸಿಸ್ಟಂ ಅಳವಡಿಸಬಹುದಾಗಿತ್ತು. ಒಂದೇ ಒಂದು ರಂಗಪರಿಷೆಗೆ ಮಾಡಲಾದ ವೆಚ್ಚದಲ್ಲಿ ಒಂದು ಇಲ್ಲವೇ ಎರಡು ಶಾಶ್ವತ ಕಿರು ರಂಗಮಂದಿರಗಳನ್ನು ಕಟ್ಟಬಹುದಾಗಿತ್ತು. ಇಂತಹ ಅತ್ಯಗತ್ಯವಾದ ಸಲಹೆ ಸೂಚನೆಗಳನ್ನು ಅಧಿಕಾರಿಗಳು ಸಚಿವರಿಗೆ ಕೊಟ್ಟು ಮನವರಿಕೆ ಮಾಡಿಸಬೇಕಾಗಿತ್ತು.

* ಆದರೆ ಇದೆಲ್ಲವನ್ನೂ ಬಿಟ್ಟು ಮಂತ್ರಿಗಳು ಹೇಳಿದ್ದೇ ವೇದವಾಕ್ಯವೆಂದು ಮಾನಸಿಕ ಗುಲಾಮತನವನ್ನು ಅಧಿಕಾರಸ್ಥರು ತೋರಿಸುವುದರಿಂದಲೇ ಇಂತಹ ಅಪಸವ್ಯಗಳು ಘಟಿಸಲು ಸಾಧ್ಯ‌. ಅತ್ಯಂತ ಸೂಕ್ಷ್ಮ ಮನಸ್ಸಿನ ಸ್ನೇಹಜೀವಿ ಅಧಿಕಾರಿಯಾದ ಕಿರಣ್ ಸಿಂಗ್ ರವರಿಗೆ ಇನ್ನೂ ಹೆಚ್ಚು ಹೇಳುವ ಅಗತ್ಯವಿಲ್ಲ. ಸಂಸ್ಕೃತಿ ಇಲಾಖೆಯ ಅಧಿಕಾರಿಯಾದ ಮೇಲೆ ಸಾಂಸ್ಕೃತಿಕ ನಿಷ್ಠೆ ಹಾಗೂ ಬದ್ಧತೆ ಮುಖ್ಯವಾಗಬೇಕೇ ಹೊರತು ಮಂತ್ರಿಗಳು ಹೇಳಿದ್ದನ್ನೆಲ್ಲಾ ಪ್ರಶ್ನಿಸದೆ ಜಾರಿಗೊಳಿಸುವ ಗುಲಾಮಗಿರಿತನವಲ್ಲ.

ಇದನ್ನೂ ಓದಿ- ರಂಗಾಯಣಗಳ ಕಾಸು; ರಾಜಧಾನಿಯಲ್ಲಿ ರಂಗಪರಿಷೆಯ ಸೊಗಸು

ಇಷ್ಟು ಪ್ರಶ್ನೆಗಳನ್ನು ಸಂಸ್ಕೃತಿ ಸಚಿವರಾದ ಶಿವರಾಜ ತಂಗಡಗಿಯವರ ಆಪ್ತ ವಲಯದ ಅಧಿಕಾರಿಯಾದ ಕಿರಣ್ ಸಿಂಗ್ ರವರಿಗೆ ಕೇಳಲಾಯ್ತು. ಅದಕ್ಕೆ ಅವರು ಕೊಟ್ಟ ಉತ್ತರ ಹೀಗಿದೆ.

‘ನಿಮ್ಮ ಎಲ್ಲ ಭಾವನೆಗಳನ್ನು ನಾನು ಗೌರವಿಸುತ್ತೇನೆ. ನಿಮ್ಮ ವಾದವು ಸಮಂಜಸವಾಗಿದೆ. ಆದರೆ ಒಂದು ನಿರ್ದಿಷ್ಟ ವಿಷಯದ ಬಗ್ಗೆ  ಸ್ಪಷ್ಟನೆ ಮಾತ್ರ ಕೊಟ್ಟಿದ್ದೇನೆ. ಅದು ನನಗೆ ತಿಳಿದ ಮಟ್ಟಿಗೆ ಮಾತ್ರ.

ನಾನು ಕೇವಲ ಒಬ್ಬ ಕೆಳಹಂತದ ಅಧಿಕಾರಿ ಮಾತ್ರ. ತಾವು ಹೇಳಿದ ಎಲ್ಲ ಅಂಶಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಅಥವಾ ಆದೇಶ ಮಾಡುವ ಅಧಿಕಾರ ನನಗೆ ಇಲ್ಲ. ಇಲಾಖಾ ಮುಖ್ಯಸ್ಥರು ಹಾಗೂ ಇಲಾಖೆ ಕಾರ್ಯದರ್ಶಿಗಳಿಗೆ ಹಾಗೂ ಸಚಿವರಿಗೆ ನೀವು ಹೇಳಿರುವ ಎಲ್ಲಾ ಅಂಶಗಳನ್ನು ತಲುಪಿಸುವ ಕೆಲಸವನ್ನು ನಾನು ಮಾಡಬಲ್ಲೆ.

ತಮಗೆ ತಿಳಿದ ಹಾಗೆ ನಾನು ಸಾಂಸ್ಕೃತಿಕ ಲೋಕದ ಭಾವನೆಗಳನ್ನು ಹಂಚಿಕೊಳ್ಳುವ ಸಂವಹನ ಮಾಧ್ಯಮ ಮಾತ್ರ ಆಗಬಲ್ಲೆ ,ಆದರೆ ಅಂತಿಮವಾಗಿ ತೀರ್ಮಾನ ಆಗುವುದು ಸರ್ಕಾರದ ಹಂತದಲ್ಲಿ. ನನ್ನ ಇತಿಮಿತಿಯಲ್ಲಿ ನಾನು ನನ್ನ ಸಾಮರ್ಥ್ಯ ಮೀರಿ ಕೆಲಸ ಮಾಡಲು ಪ್ರಯತ್ನಿಸುತ್ತೇನೆ.

ನೀವು ಹೇಳಿರುವ ಎಲ್ಲಾ ಅಂಶಗಳ ಬಗ್ಗೆ ಇಲಾಖಾ ಮುಖ್ಯಸ್ಥರ ಗಮನಕ್ಕೆ ತರುತ್ತೇನೆ”.

ಸಿಂಗ್ ರವರ ಈ ಪ್ರತಿಕ್ರಿಯೆಗೂ ನನ್ನ ಉತ್ತರ ” ನೀವು ನಿರ್ಧಾರ ತೆಗೆದುಕೊಳ್ಳಿ ಅಥವಾ ಆದೇಶ ಮಾಡಿ ಎಂದು ನಾನು ಹೇಳುತ್ತಿಲ್ಲ. ಸಾಂಸ್ಕೃತಿಕ ಕ್ಷೇತ್ರದ ಅರಿವಿಲ್ಲದ ಮಂತ್ರಿಗಳಿಗೆ ಸಲಹೆ ರೂಪದ ಮಾರ್ಗದರ್ಶನ ಮಾಡಿ ಎಂಬುದು ನನ್ನ ಬೇಡಿಕೆ”

ಇದನ್ನೂ ಓದಿ- ರಂಗಪರಿಷೆ ಮತ್ತು ಭಾರತ ರಂಗ ಮಹೋತ್ಸವ; ಹೀಗೊಂದು ಅವಲೋಕನ

ಇದಕ್ಕೂ ಸಿಂಗ್ ರವರು “ಖಂಡಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳ ಜವಾಬ್ದಾರಿ ದೊಡ್ಡದಿದೆ, ವಾಸ್ತವವಾಗಿ ಅವರು ನಿಮ್ಮೆಲ್ಲ ಪ್ರಶ್ನೆಗಳಿಗೆ ಉತ್ತರ ಕೊಡಬೇಕು. ನಾನು ಎಷ್ಟೇ ಆದರೂ ನಿಯೋಜನೆಯ ಮೇಲೆ ಬಂದು ಒಂದು ನಿರ್ದಿಷ್ಟ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಇಲಾಖೆ ನಿರ್ದೇಶಕರು ಹಾಗೂ ಜಂಟಿ ನಿರ್ದೇಶಕರು ಹೇಳಬೇಕಾಗಿರುವುದನ್ನು ನಾನು ಹೇಳುತ್ತಿದ್ದೇನೆ. ನಾನು ಸಹ ಪ್ರತಿಕ್ರಿಯಿಸದೆ ಸುಮ್ಮನೆ ಇರಬಹುದಿತ್ತು ,ಆದರೆ ನಾನು ಹಾಗೆ ಮಾಡಲಾರೆ, ಸಾಧ್ಯವಾದಷ್ಟು ಸಾಂಸ್ಕೃತಿಕ ಲೋಕದ ಭಾವನೆಗಳನ್ನು ಸಂಬಂಧಪಟ್ಟವರಿಗೆ ತಲುಪಿಸುವಾಗ ಪ್ರಾಮಾಣಿಕ ಪ್ರಯತ್ನ ಸದಾ ಮಾಡುತ್ತೇನೆ” ಎಂದು ಉತ್ತರಿಸಿದರು.

ಕಿರಣ್ ಸಿಂಗ್ ರವರ ಹೇಳಿಕೆಯಲ್ಲಿ ಪ್ರಾಮಾಣಿಕತೆ ಇದ್ದಿದ್ದೇ ಆದರೆ ಈ ಕೂಡಲೇ ರಂಗಪರಿಷೆಗೆ ಆದ ಖರ್ಚು ವೆಚ್ಚಗಳ ಕುರಿತು ತನಿಖೆ ಮಾಡಿಸಲು ಸಚಿವಾಲಯಕ್ಕೆ ಪತ್ರ ಬರೆದು ಒತ್ತಾಯಿಸಲಿ. ಇಷ್ಟೊಂದು ಖರ್ಚು ಯಾಕೆ ಆಗಿದೆ ಎಂಬುದನ್ನು ಕಂಡು ಹಿಡಿಯಲಿ. ಹಾಗೆಯೇ ರಂಗಾಯಣಗಳ ಖಾತೆಯಿಂದ ಉಳಿಕೆ ಹಣವನ್ನು ವಾಪಸ್ ಪಡೆಯಲು ಮಾಡಲಾದ ಆದೇಶವನ್ನು ಈ ಕೂಡಲೇ ವಾಪಸ್ ಪಡೆಯಬೇಕೆಂದೂ ಹಾಗೂ ಆ ಉಳಿಕೆ ಹಣವನ್ನು ಆಯಾ ರಂಗಾಯಣ ಪ್ರಾಧಿಕಾರದ ಕಾರ್ಯಯೋಜನೆಗಳಿಗೆ ಕೊಡಮಾಡಬೇಕೆಂದು ಸಂಸ್ಕೃತಿ ಇಲಾಖೆಯ ಸಚಿವರಿಗೆ ಮನವರಿಕೆ ಮಾಡಿಕೊಡಲಿ. ಎಲ್ಲಾ ರಂಗಾಯಣಗಳಿಗೂ ಕೂಡಲೇ ಕನಿಷ್ಟ ಒಂದು ಕೋಟಿಗೆ ಕಡಿಮೆ ಇಲ್ಲದಂತೆ ಅನುದಾನವನ್ನು ಹಂಚಿಕೆ ಮಾಡಬೇಕೆಂದು ಸಚಿವರಿಗೆ ಕೇಳಿಕೊಳ್ಳಲಿ. ಕಲಾವಿದರಿಗೆ ಮಾಸಾಶನ, ಸಂಘ ಸಂಸ್ಥೆಗಳಿಗೆ ಅನುದಾನವನ್ನೂ ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಲಿ. ರಂಗಮಂದಿರಗಳಿಗೆ ಅಗತ್ಯ ಪರಿಕರಗಳನ್ನು ಒದಗಿಸಲು ಆದ್ಯತೆ ನೀಡಬೇಕೆಂದು ತಂಗಡಗಿ ಸಾಹೇಬರಿಗೆ ಒತ್ತಾಯ ಮಾಡಲಿ. ಈ ರೀತಿಯ ಅದ್ದೂರಿ ರಂಗಜಾತ್ರೆ ಹಾಗೂ ಜಯಂತಿಗಳನ್ನು ಕಡಿಮೆ ಖರ್ಚಿನಲ್ಲಿ ಆಯೋಜಿಸಬೇಕೆಂದೂ ತಿಳಿಸಿ ಹೇಳಲಿ. ಆಗ ಅಧಿಕಾರಿಗಳ ಸಾಂಸ್ಕೃತಿಕ ನಿಷ್ಠೆಯನ್ನು ಒಪ್ಪಿಕೊಳ್ಳಬಹುದಾಗಿದೆ. ಮೇಲೆ ತಿಳಿಸಿದ ಕಾರ್ಯಗಳನ್ನು ಮುತುವರ್ಜಿ ವಹಿಸಿ ಕಿರಣ್ ಸಿಂಗ್ ರವರು ಮಾಡಿಸಿದ್ದೇ ಆದರೆ ಅವರನ್ನು ಕರೆಸಿ ಗೌರವ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸುವ ಕೆಲಸವನ್ನು ಮಾಡಲಾಗುವುದು. ಒಟ್ಟಿನ ಮೇಲೆ ರಾಜ್ಯಾದ್ಯಂತ ಸಾಂಸ್ಕೃತಿಕ ಕಾರ್ಯಕ್ರಮಗಳು ತೀವ್ರಗೊಳ್ಳಬೇಕು. ಕಲಾವಿದರಿಗೆ ಅನುಕೂಲಗಳು ದಕ್ಕಬೇಕು. ಸರಕಾರಿ ಸಾಂಸ್ಕೃತಿಕ ಸಂಸ್ಥೆಗಳು ಆರ್ಥಿಕ ಕೊರತೆಯಿಂದ ನರಳದೇ ಅರಳುವಂತಾಗಬೇಕು. ಅದಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಸಾಂಸ್ಕೃತಿಕ ನಿಷ್ಠೆಯಿಂದ ಕಾರ್ಯಪ್ರವೃತ್ತರಾಗಬೇಕು.


ಶಶಿಕಾಂತ ಯಡಹಳ್ಳಿ

ರಂಗ ಕರ್ಮಿ

ಇದನ್ನೂ ಓದಿ- ರಂಗಾಯಣಗಳ ಕಾಸು; ರಾಜಧಾನಿಯಲ್ಲಿ ರಂಗಪರಿಷೆಯ ಸೊಗಸು

ರಂಗಪರಿಷೆ ಮತ್ತು ಭಾರತ ರಂಗ ಮಹೋತ್ಸವ; ಹೀಗೊಂದು ಅವಲೋಕನ

More articles

Latest article