ತೆರೆಯ ಮುಂದೆ ಕಮಲ್ ಹಾಸನ್ ಪ್ರಕರಣ, ತೆರೆಯ ಹಿಂದೆ ???

Most read

ತೆರೆಯ ಮುಂದೆ ನಡೆವುದೆಲ್ಲವೂ ಒಂದು ಥರದಲ್ಲಿ ನಾಟಕವೇ. ಜಗವೇ ನಾಟಕರಂಗ ಬಿಡಿ. ಅದನ್ನೇ ನಿಜವೆಂದು ನಂಬುವವರು, ನಂಬಿದಂತೆ ನಟಿಸುವವರು, ನಂಬದಿದ್ದರೂ ನಂಬಿದಂತೆ ತೋರ್ಪಡಿಸಿಕೊಳ್ಳಬೇಕಾದ ಪರಿಸ್ಥಿತಿಗೆ ಸಿಲುಕಿದವರು… ಹೀಗೆ ಪ್ರೇಕ್ಷಕರಲ್ಲಿಯೂ ನಾನಾ ವಿಧ.

ಆದರೆ ಪರದೆಯ ಹಿಂದೆ ನಡೆವುದು ಹೆಚ್ಚಿನ ಜನರ ಕಣ್ಣುಗಳಿಗೆ ಕಾಣುವುದೇ ಇಲ್ಲ.  ಇದು ಮನದ ಕಣ್ಣಿಗೆ ಮಾತ್ರ ಗೋಚರಿಸುವಂಥದು. ಇದೇ ನಿಜ ಜೀವನ. 

ನಾನೀಗ ಪ್ರಸ್ತಾಪಿಸಹೊರಟಿರುವುದು ತೆರೆಯ ಹಿಂದಿನ ಜೀವನ.

ಜೂನ್ ಮೂರು 2025 ರ ಮಂಗಳವಾರದ ʼದ ಹಿಂದೂʼ ಇಂಗ್ಲಿಷ್ ದೈನಿಕದಲ್ಲಿ  ಸ್ಟೇಟ್ ಆಫ್ ಪ್ಲೇ ಅಂಕಣದಲ್ಲಿ ಡಿ ಸುರೇಶ್ ಕುಮಾರ್ ಎಂಬವರು ನಾಗರೀಕತೆ ಮತ್ತು ಅದರ ಅಸಮಾಧಾನಗಳು (civilisation and its discontents) ಎಂಬ ಶೀರ್ಷಿಕೆಯಡಿ ತಮಿಳುನಾಡಲ್ಲಿ ಇತ್ತೀಚೆಗೆ ಜರುಗಿದ ಎರಡು ಘಟನೆಗಳ ಬಗ್ಗೆ ಬರೆಯುತ್ತಾರೆ.

ಇದನ್ನು ಬರೆಯುವ ಮೊದಲು ಪೀಠಿಕೆಯಲ್ಲಿ ಅವರು ಒಂದು ಸಮಾಜದ ಗುರುತು (ಅಸ್ಮಿತೆ) ಅದರ ನಾಗರೀಕತೆ ಮತ್ತು ಸಂಸ್ಕೃತಿಯಲ್ಲಿ ಹೆಣೆದು ಕೊಂಡಿರುತ್ತದೆ, ಇವುಗಳನ್ನು ಮರುವಿಮರ್ಶೆಗೆ ಒಡ್ಡುವ ಅಥವಾ ವ್ಯವಸ್ಥಿತಗೊಳಿಸುವ ಯಾವುದೇ ಪ್ರಯತ್ನವೂ ರಾಜಕೀಯ  ಪರಿಣಾಮವನ್ನು ಆಹ್ವಾನಿಸುತ್ತದೆ ಎನ್ನುತ್ತಾರೆ.

ಹೀಗೆ ಹೇಳುವಾಗ ಒಂದು ಸಮಾಜ ತನ್ನ ಅಸ್ಮಿತೆಯನ್ನು ಮತಾಂಧದ ರೀತಿಯಲ್ಲಿ ಕಾಪಿಟ್ಟುಕೊಳ್ಳಲು ಬಯಸುತ್ತದೆ. ಯಾವುದೇ ರೀತಿಯ ಹೊಸಕಾಣ್ಕೆ, ಹೊಸ ವ್ಯಾಖ್ಯಾನ, ಸಣ್ಣ ಬದಲಾವಣೆ, ಸುಧಾರಣೆ ಯಾವುದನ್ನೂ ಸಹಿಸುವುದಿಲ್ಲ, ಯಥಾಸ್ಥಿತಿ ಕಾಪಾಡಿಕೊಳ್ಳಲು ಆಗ್ರಹಿಸುತ್ತದೆ ಎಂಬ ಅರ್ಥ ಬರುತ್ತದೆ. ತಮಿಳರ ಮೇಲೆ ಈ ಆರೋಪ ಯಾವಾಗಲೂ ಇರುವುದೇ.  ಭಾಷಾಭಿಮಾನ, ಸ್ವಾಭಿಮಾನ, ದ್ರಾವಿಡ ಅಸ್ಮಿತೆಯ ಬಗ್ಗೆ ಅಭಿಮಾನ  ಸಹಜತೆಗಿಂತ ತುಸು ಜಾಸ್ತಿ ಎಂದೇ ಆರೋಪ. ಇದು ತೆರೆಯಮೇಲೆ ನಡೆಯುವ ಆಟದ ಪರಿಣಾಮವಾದರೆ ಈಗ ತೆರೆ ಮರೆಯಲ್ಲಿ ನಡೆಯುವುದನ್ನು ನೋಡೋಣ.

ಲೇಖಕರು ತಮ್ಮ ಪೀಠಿಕೆಯಲ್ಲಿ ಪ್ರಸ್ತಾಪಿಸಿದ ವಿಷಯವನ್ನು ಸಮರ್ಥಿಸುವಂತೆ ಕಳೆದ ಹದಿನೈದು ದಿನಗಳಲ್ಲಿ ತಮಿಳುನಾಡಲ್ಲಿ ರಾಜಕೀಯ ಪಕ್ಷಗಳು ಎರಡು ವಿಷಯಗಳ ಮೇಲೆ ತಮ್ಮ ಪ್ರತಿರೋಧವನ್ನು ಹೊರಹಾಕಿದರು ಎಂದು ಬರೆಯುತ್ತಾರೆ.

ಒಂದು : ತಮ್ಮ ನಾಗರೀಕತೆಯ ಪ್ರಾಚೀನತೆಗೆ ಸಂಬಂಧಿಸಿದ್ದು,

ಮತ್ತೊಂದು : ತಮಿಳರ ರೂಢಿಗತ ಆರ್ಥಿಕ ನಡೆಗೆ ಸಂಬಂಧಿಸಿದ್ದು.

ಹ್ಞೂ, ತಮಿಳರು ಸುಮ್ನೆ ಬಿಡ್ತಾರಾ? ಎಂಬ ಮಾತು ಕನ್ನಡಿಗರ ಮಾತಿನಲ್ಲಿ ಆಗಾಗ ಕೇಳಿಬರುತ್ತದೆ. ಇದರಲ್ಲಿ ಗುಪ್ತವಾಗಿ ಮೆಚ್ಚುಗೆ ಇರಬಹುದಾದರೂ ಹೊರಮೈಯಲ್ಲಿ ‘ಒಂಥರಾ ಕರ್ಮಠರು’ ಎಂಬ ಪೂರ್ವಾಗ್ರಹದಿಂದ ಹೊರಬರುವ ಉದ್ಘಾರವಿದು.

ಹ್ಞಾ ಈಗ ಮೇಲಿನ ಲೇಖಕರು ಪ್ರಸ್ತಾಪಿಸುವ ಎರಡು ಪ್ರಸಂಗಗಳ ಬಳಿ ಬರೋಣ.

ಒಂದು ಈಗಾಗಲೇ ಹೇಳಿದಂತೆ ತಮಿಳು ನಾಗರೀಕತೆಯ ಪ್ರಾಚೀನತೆಗೆ ಸಂಬಂಧಿಸಿದ್ದು.  ಪುರಾತತ್ವ ಶಾಸ್ತ್ರಜ್ಞ ಕೆ. ಅಮರನಾಥ್ ರಾಮಕೃಷ್ಣ ದಶಕಗಳ ಕಾಲ ಉತ್ಖನನ, ಸಂಶೋಧನೆ ನಡೆಸಿ ತಯಾರಿಸಿದ ಕೀಝಾಡಿ ಉತ್ಖನನ ವರದಿಯನ್ನು ಜನವರಿ 2023 ರಲ್ಲಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ವರದಿಯಲ್ಲಿ ಏನಿದೆಯೆಂದರೆ  ಸಂಗಂ ಯುಗದಲ್ಲಿ ಇದ್ದ ವೈಭವದ ನಗರ ನಾಗರೀಕತೆಯ ಕುರುಹು ವೇದಕಾಲಕ್ಕಿಂತಲೂ ಹಿಂದಿನದ್ದಲ್ಲವಾದರೂ ಅದರ ಸಮಕಾಲೀನವಂತೂ ಹೌದು ಎಂಬ ಅಂಶ.

ಕೀಝಾಡಿ ಉತ್ಖನನ ಸೈಟಿನಲ್ಲಿ ಪುರಾತತ್ವ ಶಾಸ್ತ್ರಜ್ಞ ಕೆ. ಅಮರನಾಥ್ ರಾಮಕೃಷ್ಣ

ಭಾರತೀಯ ಪುರಾತತ್ವ ಇಲಾಖೆ ಅಮರನಾಥರನ್ನು ತಮ್ಮ 982 ಪುಟಗಳ ವರದಿಯನ್ನು ಪರಿಷ್ಕರಿಸಲು ಕೋರಿದೆ. ಈ ಕೋರಿಕೆ ಬೇರೆ ಇಬ್ಬರು ಸ್ವತಂತ್ರ ತಜ್ಞರು ಕೊಟ್ಟ ಅಭಿಪ್ರಾಯಕ್ಕಾಗಿ ಮತ್ತು ಸದರಿ ವರದಿಯ ಸತ್ಯಾಸತ್ಯತೆಯನ್ನು ಒರೆಗೆ ಹಚ್ಚಿ, ಪರಿಶೀಲಿಸಿ ಅದನ್ನು ಎತ್ತಿಹಿಡಿಯುವ ಉದ್ದೇಶ ಹೊಂದಿದೆ ಎಂದು ಹೇಳಿದೆ. ಆದರೆ ಈ ಕೋರಿಕೆಯ ಸಮಯ ಮತ್ತು ವರಸೆ ಕೇಂದ್ರದ ಮೇಲೆ ತಮಿಳರ ಬಹುಕಾಲದ ರಾಜಕೀಯ ಅನುಮಾನವನ್ನು ಮತ್ತೆ ಎಬ್ಬಿಸಿದೆ. ವಿಜ್ಞಾನಿ ಅಮರನಾಥರು ತನ್ನ ವರದಿ ಎಲ್ಲಾ ರೀತಿಯ ಸವಿವರವಾದ ಸಾಕ್ಷಿಗಳನ್ನು ಹೊಂದಿದೆ ಎಂದು ಹೇಳಿ,  ಇಲಾಖೆಯು ಪರಿಷ್ಕರಣೆಗಾಗಿ ಮಾಡಿದ ಕೋರಿಕೆಯನ್ನು ಸ್ಪಷ್ಟವಾಗಿ ತಿರಸ್ಕರಿಸುತ್ತಾರೆ. ಆಡಳಿತ ಪಕ್ಷವಾದ ಡಿಎಂಕೆ ಮತ್ತು ಅದರ ಬೆಂಬಲ ಪಕ್ಷಗಳಾದ ಸಿಪಿಐಎಂ ಮತ್ತು ವಿಡುತಲೖ ಚಿರುತೖಗಳ್ ಕಚ್ಚಿ ಎಲ್ಲವೂ ಕೇಂದ್ರದ ಬೇಡಿಕೆಯನ್ನು ಅನುಮಾನದಿಂದ ನೋಡುತ್ತವೆ.. ಭಾರತದ ಇತಿಹಾಸ ಕಥನದಲ್ಲಿನ ವೇದಕಾಲಕ್ಕಿರುವ ಪ್ರಾಚೀನತೆಯ ಮಹತ್ವಕ್ಕೆ ಈ ವರದಿ ಸವಾಲೆಸೆಯಬಹುದೆಂಬ ಅಂಜಿಕೆಯಿಂದ ಈ ಥರದ ಕೋರಿಕೆಯನ್ನು ಭಾರತೀಯ ಪುರಾತತ್ವ ಇಲಾಖೆ ಸಲ್ಲಿಸಿದೆ ಎಂದೇ ನಂಬುತ್ತವೆ. ಏಎಸ್ಐ(Archaeological Survey of India) ‘ಇತಿಹಾಸದ ಒತ್ತಡ’ ದಿಂದ ಈ ಕೋರಿಕೆಯನ್ನು ಸಲ್ಲಿಸಿದೆ, ಬಹುತ್ವ ಭಾರತದಲ್ಲಿ ಇತಿಹಾಸದ ಬಗ್ಗೆ ಈ ಬಗೆಯ ಪಕ್ಷಪಾತ ಒಳ್ಳೆಯದಲ್ಲ ಹಾಗೂ ಜವಾಬ್ದಾರಿಯುತವಾದ ಅಧ್ಯಯನ ಬೇಕು ಎಂದು ಐಎಎಸ್ ಅಧಿಕಾರಿಯಾಗಿದ್ದ ಇತಿಹಾಸಕಾರ ಆರ್. ಬಾಲಕೃಷ್ಣನ್ ಹೇಳುತ್ತಾರೆ.

ತಮಿಳರ ಈ ರೀತಿಯ ಪ್ರತಿಕ್ರಿಯೆಗೆ  ಕೇಂದ್ರ ಸಂಸ್ಕೃತಿ ಸಚಿವಾಲಯ ಏಎಸ್ಐ ಮೂಲಕ ಸ್ಪಷ್ಟೀಕರಣ ಒದಗಿಸಿತು. ಈ ತರದ ಆರೋಪ ಹುರುಳಿಲ್ಲದ್ದು ಎಂದೂ, ಸತ್ಯಕ್ಕೆ ದೂರವಾದ್ದು ಎಂದೂ, ಪರಿಶೀಲನೆಯ ಪ್ರಕ್ರಿಯೆಯಲ್ಲಿ ಯಾವ ರೀತಿಯ ಪೂರ್ವಾಗ್ರಹವಿಲ್ಲ ಎಂದೂ ಹೇಳುತ್ತಾ ಹೇಳುತ್ತಾ  ಅನುದಾನ ನಿಂತು, ಉತ್ಖನನವೂ ನಿಂತುಹೋಗಿದ್ದು ತೆರೆಮರೆಯ ದೊಡ್ಡಾಟ.!! ಆದರೆ ತೆರೆಯ ಮೇಲೆ ಈ ಯಾವ ವಿಷಯವೂ ಬರುವುದೇ ಇಲ್ಲ. ತಮಿಳರ ಹಿಂದಿ ಹೇರಿಕೆ ವಿರೋಧಿ ನಿಲುವು ಭಕ್ತರಿಗಂತೂ ದುರಭಿಮಾನವಾಗೇ ಕಾಣಿಸುತ್ತದೆ.

ಲೇಖಕರು ಪ್ರಸ್ತಾಪಿಸುವ ಇನ್ನೊಂದು ಪ್ರಸಂಗ  ಗೋಲ್ಡ್‌ ಲೋನ್‌ ಗೆ ಸಂಬಂಧಿಸಿದ್ದು. ತಮಿಳರು ಆಭರಣ ಪ್ರಿಯರು, ಬಂಗಾರವನ್ನು ಪ್ರೀತಿಸುವವರು ಎಂಬುದು ಮೇಲ್ನೋಟದ ಅಭಿಪ್ರಾಯ. ಆದರೆ ಬಂಗಾರವನ್ನು ಆರ್ಥಿಕ ಚಟುವಟಿಕೆಯ ಮಾಧ್ಯಮವಾಗಿಯೂ ಅವರು ಉಪಯೋಗಿಸುತ್ತಾರೆ. ಹಾಗಾಗಿ ಮಧ್ಯಮ ವರ್ಗದ, ಕೆಳಮಧ್ಯಮ ವರ್ಗದ ಮಹಿಳೆಯರು ಹೆಚ್ಚಾಗಿ ಬಂಗಾರ ಅಡವಿಟ್ಟು, ತುರ್ತು ಸಂದರ್ಭದಲ್ಲಿ ಸಾಲ ಪಡೆಯುವುದು ಸಾಮಾನ್ಯ ಸಂಗತಿ. ಹೀಗೆ ಬಂಗಾರದ ಮೇಲೆ ಸಾಲ ಮಾಡಿ, ಆ ಸಾಲದ ಹಣವನ್ನು ಬಂಡವಾಳವಾಗಿಸಿ ಸ್ವ ಉದ್ಯೋಗದಲ್ಲಿ ತೊಡಗುವುದು  ತಮಿಳು ನಾಡಲ್ಲಿ ಹೆಚ್ಚು. ಈಗ ತೆರೆಮರೆಯಾಟ ನೋಡಿ. 2025 ರ ರಿಸರ್ವ್ ಬ್ಯಾಂಕು ಬಂಗಾರದ ಸಾಲಕ್ಕೆ ತಂದ ನಿರ್ದೇಶನಗಳು.

ಒಂದು: ಬಂಗಾರದ ಮೌಲ್ಯದ 75% ಮಾತ್ರ ಸಾಲ ಸಿಗುವುದು.

ಎರಡು: ಅಡವಿಡುವ ಬಂಗಾರದ ಒಡೆತನಕ್ಕೆ ಪುರಾವೆ ಒದಗಿಸುವುದು,

ಮೂರು: ಅಡವಿಡುವ ಬಂಗಾರದ ಪ್ರಮಾಣದ ಮೇಲೆ ವಿಧಿಸಿದ ಮಿತಿ.

ತಮಿಳು ನಾಡಿನ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್

ಆಭರಣ ಬಂಗಾರದ ಒಂದು ಕೆಜಿ. ನಾಣ್ಯವಾದರೆ ಐವತ್ತು ಗ್ರಾಂ  ಮಾತ್ರ. ಇದಕ್ಕೆ ತಮಿಳು ನಾಡಿನ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಕೇಂದ್ರ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ಗೆ ಪತ್ರ ಬರೆದು ಈ ಹೊಸ ನಿರ್ದೇಶನ ತಮಿಳರ ಆರ್ಥಿಕ ಚಟುವಟಿಕೆಯ ಸಂಸ್ಕೃತಿಯ ಮೇಲೆ ಪ್ರತಿಕೂಲ ಪರಿಣಾಮ ಉಂಟುಮಾಡುತ್ತದೆ. ಅವರು ಖಾಸಗಿ ಲೇವಾದೇವಿಗಳ ಮೇಲೆ ಅವಲಂಬಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ರಾಜ್ಯ ಹಣಕಾಸು ಮಂತ್ರಿ ತಂಗಂ ತಿಮ್ಮರಸು ಈ ಹೊಸ ನಿರ್ದೇಶನಗಳು ಅಸಂವೇದಿ, ಅಸೂಕ್ಷ್ಮದವು, ಆರ್ ಬಿ ಐ ಬಡವರ ಮೇಲೆ ನಡೆಸುವ ವ್ಯವಸ್ಥಿತ ಅನ್ಯಾಯ ಎಂದು ಜರೆದರು. ಬಿಜೆಪಿಯ ಬೆಂಬಲಿಗ ಪಕ್ಷಗಳೇ ಆದ ಏಐಎಡಿಎಂಕೆ, ಪಟ್ಟಾಳಿ ಮಕ್ಕಳ್ ಕಚ್ಚಿ, ತಮಿಳ್ ಮನಿಲಾ ಕಾಂಗ್ರೆಸ್, ಅಮ್ಮಾ ಮಕ್ಕಳ್ ಮುನ್ನೇತ್ರ ಕಝಗಂ ಗಳೂ ಕೂಡಾ ಆರ್‌ಬಿಐ ಯ ಈ ನಡೆಯನ್ನು ವಿರೋಧಿಸಿದವು. ಏಐಎಡಿಎಂಕೆಯ ಜನರಲ್ ಸೆಕ್ರೆಟರಿ ಎಡಪ್ಪಾಡಿ ಕೆ. ಪಲನಿಸ್ವಾಮಿ ಈ ಹೊಸ ನಿಯಮಗಳು ಬಡ ಮತ್ತು ಮಧ್ಯಮವರ್ಗದವರ ಮೇಲೆ ಬಹಳ  ಕೆಟ್ಟ ಪರಿಣಾಮ  ಬೀರುತ್ತವೆ  ಮತ್ತು ಆ ವರ್ಗದವರೇ ಭಾರತದ ಜನಸಂಖ್ಯೆಯಲ್ಲಿ ಹೆಚ್ಚಿನವರು ಎಂದು ವಾದಿಸಿದರು. ರಾಜಕೀಯ ಪರಿಣಾಮವನ್ನು ಗುರುತಿಸಿ ಕೇಂದ್ರ ಅರ್ಥ ಸಚಿವಾಲಯ ಮಧ್ಯಪ್ರವೇಶಿಸಿ ಎರಡು ಲಕ್ಷಕ್ಕಿಂತ ಕಡಿಮೆ ಸಾಲ ಪಡೆಯುವವರಿಗೆ ಈ ನಿಯಮಗಳಿಂದ ವಿನಾಯಿತಿ ಘೋಷಿಸಿತು.

ಆದರೆ  ಬಂದ ಭಾಗ್ಯ ಏನು?

ಈಗಿನ ಬಂಗಾರದ ಬೆಲೆಯಲ್ಲಿ ಎರಡು ಲಕ್ಷ ರೂಪಾಯಿಗೆ ಇಪ್ಪತ್ತು ಗ್ರಾಂ ಬಂಗಾರವೂ ಬರುವುದಿಲ್ಲ. ಹಾಗಿದ್ದಮೇಲೆ ನಿಯಮ ಸಡಿಲಿಕೆಯ ಪ್ರಯೋಜನವೇನು? ಪ್ರಾದೇಶಿಕ ಪಕ್ಷವಿರುವ ರಾಜ್ಯಗಳು, ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳ ಮೇಲೆ ಇಂಥಹಾ ತೆರೆಮರೆಯಲ್ಲಿ ನಡೆಸುವ ದೊಡ್ಡಾಟ ಯಾರಿಗೂ ಕಾಣಿಸುವುದೇ ಇಲ್ಲ. ಮಾರಿಕೊಂಡ ಮಾಧ್ಯಮಗಳಂತೂ ತೋರಿಸುವುದೇ ಇಲ್ಲ. ಹಾಗಾಗಿ ಎಲ್ಲಾ ದುಷ್ಪರಿಣಾಮಗಳಿಗೆ ಜನಸಾಮಾನ್ಯರು ರಾಜ್ಯ ಸರ್ಕಾರಗಳನ್ನು ದೂರುತ್ತಾ ಇರುತ್ತಾರೆ. ಅದರಿಂದ ತೆರೆಮರೆಯಲ್ಲಿ ನಡೆಸುವ ಹುನ್ನಾರದವರಿಗೆ ಬಹಳಷ್ಟು ಲಾಭ.

ವೃಂದಾ ಹೆಗಡೆ, ಅತಿಥಿ ಉಪನ್ಯಾಸಕರು.

ಇದನ್ನೂ ಓದಿ-ಕನ್ನಡಮ್ಮನಿಗೆ ಯಾರೂ ಅಮ್ಮ ಮಗಳಿಲ್ಲ

More articles

Latest article