ಪ್ರಾದೇಶಿಕ ಮಾಧ್ಯಮವನ್ನು ಬೆಳೆಸಿದ ಧೀಮಂತ ಪತ್ರಕರ್ತ ʼಕಲ್ಲೆ ಶಿವೋತ್ತಮ ರಾವ್‌ʼ – ಪುರುಷೋತ್ತಮ ಬಿಳಿಮಲೆ

Most read

ಮಂಗಳೂರು, ಮಾರ್ಚ್‌ 9, 2024: “ಕಲ್ಲೆ ಶಿವೋತ್ತಮರಾವ್‌ ಅವರ ತಂದೆ ಕಲ್ಲೆ ನಾರಾಯಣ್ ರಾವ್‌ ಪ್ರಸಿದ್ಧ ಪತ್ರಕರ್ತರು. ಕಾರ್ಕಳದ ಕಲ್ಯದಲ್ಲಿ ಹುಟ್ಟಿದ ಅವರು ಮುಂದೆ ಮಂಗಳೂರು ಮದರಾಸು ಕಲ್ಕತ್ತದವರೆಗೆ ಸಾಗಿ ಮತ್ತೆ ಮಂಗಳೂರಿನ ನವಭಾರತದಲ್ಲಿ ಕೆಲಸ ಮಾಡಿ ನಿವೃತ್ತರಾದವರು. 1941-44 ರವರೆಗೆ ಕಲ್ಲೆ ನಾರಾಯಣ ರಾಯರ ಎರಡನೇ ಮಹಾಯುದ್ಧದ ವರದಿಗಳು ಚಾರಿತ್ರಿಕ ಮಹತ್ತ್ವಉಳ್ಳದ್ದು. ಇದೇ ಅವಧಿಯಲ್ಲಿ ಉಡುಪಿ ಸಮೀಪದ ಕೊಡವೂರಿನಿಂದ ಜರ್ಮನ್‌ ವರೆಗೆ ಸಾಗಿದ ಅನಂತ ಪದ್ಮನಾಭ ಉಡುಪ ಎಂಬವರು ಹಿಟ್ಲರನ ನಾಜೀ ಪತ್ರಿಕೆಯ ಸಂಪಾದಕರಾಗಿ ಕೆಲಸ ಮಾಡುತ್ತಿದ್ದರು. ಹೀಗೆ ಕರಾವಳಿಯ ಜನ ಕರಾವಳಿಯನ್ನು ಬಿಟ್ಟು ಬೇರೆ ಕಡೆ ಹೋಗಿ ಮಾಡಿದ ಸಾಧನೆಗಳ ಬಗ್ಗೆ ಕರಾವಳಿಯ ಇವತ್ತಿನ ತಲೆಮಾರು ತಿಳಿದುಕೊಳ್ಳುವುದು ಬಹಳ ಮುಖ್ಯ. ನಾರಾಯಣ ರಾಯರ ಮಗನಾದ ಶಿವೋತ್ತಮ ರಾವ್‌ ಅವರು ಬಿ ಎನ್‌ ಗುಪ್ತರ ಜನಪ್ರಗತಿ ಪತ್ರಿಕೆಯನ್ನು ಸೇರಿ ಆ ಪತ್ರಿಕೆಯನ್ನು ಉದಾರವಾದಿ ಮಾನವತಾವಾದದಿಂದ ಪ್ರಗತಿಪರ ವಿಚಾರವಾದದ ಕಡೆಗೆ ತಿರುಗಿಸಿದರು. 1970 ರ ದಶಕದಲ್ಲಿ ಕರ್ನಾಟಕದಲ್ಲಿ ನಡೆದ ಹಿಂದುಳಿದ ವರ್ಗಗಳ ಸಮಾವೇಶ, ಲೇಖಕ ಕಲಾವಿದರ ಸಮ್ಮೇಳನ, ಬೂಸಾ ಪ್ರಕರಣ, ಭೂ ಮಸೂದೆ ಇತ್ಯಾದಿ ಘಟನೆಗಳ ಸಂದರ್ಭದಲ್ಲಿ ಅವುಗಳಿಗೆಲ್ಲ ಶಿವೋತ್ತಮ ರಾಯರು ಬೆನ್ನೆಲುಬಾಗಿ ನಿಂತರು. ಕುವೆಂಪು ಅವರ ವಿಚಾರವಾದವನ್ನು ರಾಜ್ಯದಾದ್ಯಂತ ಪಸರಿಸಿದರು. ಕನ್ನಡಕ್ಕೆ ಪೆರಿಯಾರ್‌ ಚಿಂತನೆಯನ್ನು ತಂದರು. ನೆಹರೂ ಅವರ ಅಲಿಪ್ತ ನೀತಿಯನ್ನು ಪತ್ರಿಕೆಯಲ್ಲಿ  ಪ್ರಸಾರ ಮಾಡಿದರು. ಹಿಂದುಳಿದ ವರ್ಗಗಳಿಂದ ಬಂದ ಯುವ ಲೇಖಕರಿಗೆ ಅವರು ಅವಕಾಶವನ್ನು ಕೊಟ್ಟರು. ಹೀಗೆ ಕಲ್ಲೆಯವರು ಪ್ರಾದೇಶಿಕ ಭಾಷಾ ಮಾಧ್ಯಮಕ್ಕೆ ಒಂದು ಒಳ್ಳೆಯ ಮಾದರಿಯನ್ನು ಹಾಕಿ ಕೊಟ್ಟರು. ಆದರೆ ಈ ಮಾದರಿಯು 90 ರ ಆನಂತರ ಕಾಣಿಸಿಕೊಂಡ ಜಾಗತೀಕರಣ ಮತ್ತು ಕೋಮುವಾದದ ಬೆಳವಣಿಗೆಯ ಎದುರು ಗಟ್ಟಿಯಾಗಿ ನಿಲ್ಲಲಿಲ್ಲ. ಈ ಮಾತು ಕಲ್ಲೆಯವರ ಚಾರಿತ್ರಿಕ ಮಹತ್ವವನ್ನು ಕಡಿಮೆ ಮಾಡುವುದಿಲ್ಲ ಎಂದು ವಿದ್ವಾಂಸ ಪುರುಷೋತ್ತಮ ಬಿಳಿಮಲೆ ಅಭಿಪ್ರಾಯ ಪಟ್ಟರು.

ಪಾರ್ವತೀಶ ಬಿಳಿದಾಳೆಯವರು ಸಂಪಾದಿಸಿದ ʼಕಲ್ಲೆ ಶಿವೋತ್ತಮ ರಾವ್‌ _ ಜನಪ್ರಗತಿಯ ಪಂಜುʼ ಎಂಬ ಹೆಸರಿನ ಪುಸ್ತಕವನ್ನು ಮಂಗಳೂರಿನ ಸಹೋದಯ ಸಭಾಂಗಣದಲ್ಲಿ ಶನಿವಾರ ಬಿಡುಗಡೆ ಮಾಡಿ ಕಲ್ಲೆಯವರ ಬದುಕು ಮತ್ತು ಕೊಡುಗೆಯ ಹಿನ್ನೆಲೆಯಲ್ಲಿ  ಅವರು ಮಾತಾಡುತ್ತಿದ್ದರು. ಕರ್ನಾಟಕ ಅಧ್ಯಯನ ಕೇಂದ್ರ ಹಾಗು ಸುಳ್ಯದ ಗುತ್ತಿಗಾರಿನ ಬಂಟಮಲೆ ಅಕಾಡೆಮಿ ಜಂಟಿಯಾಗಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದವು.

ಬಿಳಿಮಲೆಯವರು ಮುಂದುವರಿದು “ಕಲ್ಲೆಯವರು ಓರ್ವ ಪ್ರಾದೇಶಿಕ ಪತ್ರಕರ್ತರಾಗಿ ಸರಕಾರ ಮತ್ತು ಸಮಾಜದ ನಡುವಣ ಸೇತುವೆಯಂತೆ ಕೆಲಸ ಮಾಡಿದರು. ಜನರ ಪರವಾಗಿ ಸರಕಾರಕ್ಕೆ ತಿಳಿ ಹೇಳುವ ಪ್ರಯತ್ನವನ್ನು ತಮ್ಮ ಜೀವನದುದ್ದಕ್ಕೂ ಮಾಡಿದವರು ಅವರು. ಆದರೆ, ಇವತ್ತಿನ ಪತ್ರಿಕೋದ್ಯಮ ಈ ಹಾದಿಯನ್ನು ಬಿಟ್ಟು ಆಳುವವರ ಪರವಾಗಿ ಕೆಲಸಮಾಡಲು ಹೊರಟಿದೆ. ಪತ್ರಕರ್ತರ ಮತ್ತು ರಾಜಕಾರಣಿಗಳ ಸಂಬಂಧ ನಿಗೂಢವಾಗಿದೆ. ಇದರಿಂದಾಗಿ ಪ್ರಾದೇಶಿಕ ಭಾಷಾ ಮಾಧ್ಯಮ ಸೊರಗಿದೆ. ಈ ಕೊರತೆಗಳನ್ನು ಪರ್ಯಾಯ ಮಾಧ್ಯಮಗಳು ತುಂಬುತ್ತಿರುವುದು ಸಂತಸದಾಯಕವಾಗಿದೆ. ಇದು ಬಹುಷ: ಕಲ್ಲೆಯವರಿಗೆ ನಾವು ಕೊಡಬಹುದಾದ ಗೌರವವೂ ಹೌದು ಎಂದರು.

ಇದೇ ಸಂದರ್ಭದಲ್ಲಿ ಶಿವೋತ್ತಮ ರಾಯರಿಗೆ ಬಂಟಮಲೆ ಅಕಾಡೆಮಿಯ ʼಕುವೆಂಪು ಬಂಟಮಲೆʼ ಪ್ರಶಸ್ತಿಯನ್ನು ಪ್ರಖ್ಯಾತ ಭಾಷಾ ಶಾಸ್ತ್ರಜ್ಞ ಡಾ. ಸುಕುಮಾರ ಗೌಡರು ಪ್ರದಾನ ಮಾಡಿದರು. ಅವರ ಅನುಪಸ್ಥಿತಿಯಲ್ಲಿ ಅವರ ಮಕ್ಕಳಾದ ಅಜಿತ್‌ ಅಶುತೋಶ್‌ ಕಲ್ಲೆ ಮತ್ತವರ ಸಹೋದರಿ ಪ್ರಶಸ್ತಿ ಸ್ವೀಕರಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್‌ ಸದಸ್ಯ ಬಿ ಕೆ ಹರಿಪ್ರಸಾದ್‌ ಅವರು ಮಾತಾಡಿ “ರಾಯರಿಂದ ಹೊಸ ತಲೆಮಾರು ಕಲಿಯುವುದು ಬಹಳವಿದೆ. ಇತ್ತೀಚಿನ ದಿನಗಳಲ್ಲಿ ಉತ್ತರ ಭಾರತದ ರಾಜ್ಯಗಳನ್ನು ಅದರಲ್ಲೂ ವಿಶೇಷವಾಗಿ  ಗುಜರಾತನ್ನು ಒಂದು ಮಾದರಿಯಾಗಿ ನಮ್ಮ ಮುಂದೆ ಇಡುತ್ತಿರುವುದನ್ನು ಕಾಣುತ್ತಿದ್ದೇವೆ. ಆದರೆ ಕರ್ನಾಟಕದಂತಹ ರಾಜ್ಯವು ಗುಜರಾತಿಗಿಂತ ಸಾಮಾಜಿಕವಾಗಿ ಸಾಂಸ್ಕೃತಿಕವಾಗಿ ಮತ್ತು ರಾಜಕೀಯವಾಗಿ ಕನಿಷ್ಟ200 ವರ್ಷಗಳಷ್ಟು ಮುಂದಿದೆ ಎಂದರು. ಭಾರತದಂತಹ ದೇಶ ಜಗತ್ತಿನಲ್ಲಿ ಎಲ್ಲಿಯೂ ಇರಲು ಸಾಧ್ಯವಿಲ್ಲ ಇದನ್ನು ಉಳಿಸಿ ಕೊಳ್ಳಬೇಕಾದದ್ದು ಬಹಳ ಅಗತ್ಯ ಎಂದೂ ಹೇಳಿದರು.

ಕೃತಿ ಸಂಪಾದಕ ಪಾರ್ವತೀಶ್‌ ಬಿಳಿದಾಳೆ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಂಟಮಲೆ ಅಕಾಡೆಮಿಯ ಎ. ಕೆ. ಹಿಮಕರ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

More articles

Latest article