ಕಲಬುರಗಿ : ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆಯ ವಿರುದ್ಧ ಸಂವಿಧಾನ ರಕ್ಷಣಾ ಸಮಿತಿ, ದಲಿತ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ನೀಡಿರುವ ಕಲಬುರಗಿ ಬಂದ್ ಯಶಸ್ವಿಯಾಗಿದೆ.
ಇಂದು(ಮಂಗಳವಾರ) ಬಂದ್ ಆಚರಿಸಲಾಗುವುದು ಎಂದು ಕರೆ ನೀಡಿದ್ದರು. ಇದರ ಹಿನ್ನೆಲೆಯಲ್ಲಿ ಸಂಪೂರ್ಣ ನಗರ ಸ್ತಬ್ಧಗೊಂಡಿತ್ತು. ಬೆಳಗ್ಗೆ 7 ಗಂಟೆಗೂ ಮುಂಚೆಯೇ ರಸ್ತೆಗಿಳಿದ ರಸ್ತೆಗಿಳಿದ ಪ್ರತಿಭಟನಾಕಾರರು ಮುಖ್ಯವಾಗಿ ನಗರ ಪ್ರವೇಶಿಸುವ ಹಾಗೂ ನಗರದಿಂದ ನಿರ್ಗಮಿಸುವ ವಾಹನಗಳ ಸಂಚಾರಕ್ಕೆ ತಡೆಯೊಡ್ಡಲು ಹೊರವಲಯದ ವರ್ತುಲ ರಸ್ತೆಗಳಲ್ಲಿ ಟೈರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿದರು.
ಬಂದ್ಗೆ ಸಂಪೂರ್ಣ ಕಲಬುರಗಿ ನಗರವೇ ಸಹಕರಿಸಿತ್ತು. ಪ್ರತಿಭಟನಕಾರರು ನಗರದ ನಗರೇಶ್ವರ ಶಾಲೆಯಿಂದ ಜಿಲ್ಲಾಧಿಕಾರಿಯ ಕಛೇರಿಯವರೆಗೆ ಅಮಿತ್ ಶಾ ಅವರ ಅಣಕು ಶವ ಯಾತ್ರೆಯನ್ನು ಮಾಡಿದರು. ಜೊತೆಗೆ ಶಾ ಅವರ ಭಾವಚಿತ್ರ ಹಾಗೂ ಪ್ರತಿಕೃತಿಗಳಿಗೆ ನಗರದ ಮುಖ್ಯ ವೃತ್ತಗಳಲ್ಲಿ ಬೆಂಕಿ ಹಚ್ಚಿದರು. ಈ ವೇಳೆ ಅಮಿತ್ ಶಾ, ನರೇಂದ್ರ ಮೋದಿ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ನೀಲಿಬಾವುಟಗಳನ್ನು ಹಿಡಿದು ಘೋಷಣೆ ಕೂಗಿದರು.
ಈ ಮಧ್ಯೆ, ನಗರದ ಪ್ರಮುಖ ವಾಣಿಜ್ಯ ಕೇಂದ್ರ ಸೂಪರ್ ಮಾರ್ಕೆಟ್ ಹಾಗೂ ನೆಹರೂ ಗಂಜ್, ಸಂಗತ್ರಾಸವಾಡಿ, ಪುಟಾಣಿ ಗಲ್ಲಿ, ಸ್ಟೇಷನ್ ಬಜಾರ್ ಒಳಗೊಂಡಂತೆ ಬಹುತೇಕ ಎಲ್ಲ ಪ್ರಮುಖ ಬಡಾವಣೆಗಳಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ರಸ್ತೆಗಳು ವಾಹನ ಸಂಚಾರವಿಲ್ಲದೆ ಬರಡಾಗಿದ್ದವು. ಮತ್ತೊಂದೆಡೆ, ಸೂಪರ್ ಮಾರ್ಕೆಟ್ ಪ್ರದೇಶದ ಸರಾಫ್ ಬಜಾರಿನಲ್ಲಿ ಚಿನ್ನಾಭರಣ ಅಂಗಡಿಗಳು ವ್ಯಾಪಾರ-ವಹಿವಾಟು ನಡೆಸುವ ಗೋಜಿಗೆ ಹೋಗದೆ ಬಂದ್ ಗೆ ಬೆಂಬಲ ಸೂಚಿಸಿದವು.
ಮುಖ್ಯ ರಸ್ತೆಗಳು ಹಾಗೂ ಈ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳ ಬದಿಯ ಹೋಟೆಲ್ಗಳು ಮುಚ್ಚಿದ್ದವು.