ಈ ಜಗತ್ತು ನಾದಮಯವಾಗಿದೆ. ಸಂಗೀತಕ್ಕೆ ಲೋಕದ ಕಾಳಜಿಯಿದೆ. ಅದು ಮನುಷ್ಯರೂ, ಪ್ರಾಣಿಗಳೂ ತಲೆದೂಗುವಂತೆ, ಹಾಡಿ ಕುಣಿವಂತೆ ಮಾಡಿದೆ. ಕೇಳುವ, ಹಾಡುವ ಜೊತೆಗೆ ಮಾನಸಿಕ ನೆಮ್ಮದಿಯನ್ನು ಅದು ಸಲುಹಿದೆ. ಜೀವಿಯೆದೆಯು ಬಡಿದುಕೊಳ್ಳುವಿಕೆಯಿಂದ ಹಿಡಿದು ಬ್ರಹ್ಮಾಂಡದ ಧ್ವನಿಯವರೆಗೂ ಇದಕ್ಕೆ ಅಸ್ತಿತ್ವವಿದೆ. ಈ ಸೂಕ್ಷ್ಮತೆಯನ್ನು ಅರಿತವರು ಸಂತ ಕಬೀರರು. ಕಣ್ಣಿಗೆ ಕಾಣದ, ಬರಿಯ ಮಾತಲ್ಲಿ ಹೇಳದ್ದನ್ನು ಸಂಗೀತದ ಮೂಲಕ ಹೇಳಿ ಜನಮಾನ್ಯರಾದರವರು. ಸಂಗೀತವೆಂದರೆ ಸಪ್ತಸ್ವರಗಳ ನಾದವಷ್ಟೇ ಅಲ್ಲ; ಪದ ಪ್ರಯೋಗವಷ್ಟೇ ಅಲ್ಲ; ಅದು ತಾನು ಆಲಿಸಿಕೊಂಡ ಅಂತರ್ದನಿಯೊಳಗಿನ ಭಾವಸತ್ಯ. ಅದನ್ನು ಕೇಳುವಂತ ಜಾಣ್ಮೆಯಿರಬೇಕು. ಅದೇ ರೀತಿ ಕೇಳಿಸಿಕೊಂಡವರು, ಕಬೀರರನ್ನು ಅರ್ಥೈಸಿಕೊಂಡವರು ಪಂಡಿತ್ ಕುಮಾರ ಗಂಧರ್ವರು.
ʻಸುನ್ತಾ ಹೇ ಗುರು ಗ್ಯಾನಿ’ ಝೇಂಕರಿಸುವ ನಾದಬಿಂದುವಿನಲ್ಲಿ, ಯಾರು ಗುರುವಿನ (ಬ್ರಹ್ಮಾಂಡದ) ಸಪ್ಪಳವನ್ನು ಸೂಕ್ಷ್ಮವಾಗಿ ಕೇಳುವರೋ ಅವರು ಜ್ಞಾನವಂತರಾಗುವರು ಎನ್ನುವ ಹಾಡನ್ನು ಅವರ ಕಂಠಸಿರಿಯಲ್ಲಿ ಕೇಳುತ್ತಿದ್ದರೆ ಕೇಳುತ್ತಲೇ ಇರೋಣ ಎನಿಸುತ್ತದೆ. `ಉಡ್ ಜಾಯೆಗಾ…. ಹಂಸ್ ಅಖೇಲಾ…. ಜಗ್ ದರ್ಶನ್ ಕಾ ಮೇಲಾ…ʼ ಹಾಡಲ್ಲಿರುವ ಅನಂತತೆ, ಅಗಾಧತೆಯನ್ನು ಜೀವನದ ಅಮೋಘತೆಯನ್ನು ಸರಳವಾಗಿ ಅರ್ಥೈಸಿರುವ ಬಗೆ ಪ್ರೇರಣೀಯ. ಸಂತ ಕಬೀರ ಮತ್ತು ಕುಮಾರ ಗಂಧರ್ವ ಇಬ್ಬರೂ ಇಲ್ಲದ ಕಾಲದಲ್ಲಿ ಅವರ ಆಶಯಗಳನ್ನು ಸ್ಮರಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಬೇಕಿದೆ. “ಅವಧೂತ ಗಗನ ಘಟಾ”, “ನೈನಾ ನ ಮಾನೆ ಮೋರಾ”, “ರಂಗ ನಾ ದಾರೋ ಶ್ಯಾಮ್‌ಜೀ” ಹೀಗೆ ಸಾಲು ಸಾಲು ಸುಪ್ರಸಿದ್ಧ ನಿರ್ಗುಣಿ ಭಜನೆಗಳನ್ನು ಅದ್ಭುತವಾಗಿ ಹಾಡಿ ದಿಗ್ಗಜರೆನಿಸಿಕೊಂಡಿರುವವರು ಕುಮಾರ ಗಂಧರ್ವರು.
15 ನೇ ಶತಮಾನದಲ್ಲಿ ಕಬೀರರು ಭಕ್ತಿ ಮತ್ತು ಏಕತೆಯನ್ನು ತಮ್ಮ ದೋಹೆಗಳು ಮತ್ತು ಕೀರ್ತನೆಗಳ ಮುಖೇನ ಸಂಪ್ರದಾಯನಿಷ್ಠ ಮೂಢನಂಬಿಕೆಯ ಆಚರಣೆಗಳನ್ನು ವಿರೋಧಿಸಿದರು. ದೇವರನ್ನು ಎಲ್ಲರಲ್ಲೂ ಕಾಣುವ ಸತ್ಯ ಮಾರ್ಗವನ್ನು ಬಾಯಿ ಮಾತಿನಿಂದಲೇ ಸಾರಿದರು. ಇರುವ ಅನಿಶ್ಚಿತ ಬದುಕಿನಲ್ಲಿ ಮಾನವಿಕ ಗುಣಗಳಾದ ಕರುಣೆ, ಪ್ರೀತಿ, ಸಹಬಾಳ್ವೆ, ಸಾಮಾಜಿಕ ಸಮಾನತೆಯಂತಹ ಮೌಲ್ಯಗಳ ಆಳವಾದ ಅರ್ಥ ಮತ್ತು ವಿವರಣಾತ್ಮಕ ಅಂಶಗಳನ್ನು ಮತ ಪಂಥ, ಧರ್ಮಗಳ ಭೇದವಿಲ್ಲದೆ ನೀಡಿದರು. ಇದಕ್ಕೆ ಮುಖ್ಯವಾದ ನಿದರ್ಶನವೆಂದರೆ ʻರಾಮ, ರಹೀಮ ಕರೀಮʼ ಎಲ್ಲರೂ ಒಂದೇ, ದೇವನೊಬ್ಬ ನಾಮ ಹಲವು ಎಂಬ ರೂಪಕದ ಗೀತೆಗಳು. ಇಂತಹ ಮತ್ತಷ್ಟು ಹಾಡುಗಳನ್ನು ಜನಪ್ರಿಯಗೊಳಿಸಿದವರು, ಕಬೀರರ ತಾತ್ವಿಕ ಹಾಗೂ ದಾರ್ಶನಿಕ ನಂಬಿಕೆಯನ್ನು ತಮ್ಮ ಶಿಷ್ಯರಿಗೂ ಪಸರಿಸುವಲ್ಲಿ ಗಾನಗಾರುಡಿಗ ಶ್ರೀಯುತ ಕುಮಾರ ಗಂಧರ್ವರು ಸಫಲರಾದರು.
ಮಹಾನ್ ಸಂತ ಕಬೀರರ ಪದ್ಯಗಳ ತೂಕ ಹೆಚ್ಚುವಂತೆ ಮಾಡಿದ ಕುಮಾರ ಗಂಧರ್ವರು, ಕರ್ನಾಟಕದ ಬೆಳಗಾವಿ ಜಿಲ್ಲೆಯ, ಸುಳೇಭಾವಿಯಲ್ಲಿ ಲಿಂಗಾಯತ ಧರ್ಮಕ್ಕೆ ಸೇರಿದ ಕುಟುಂಬದಲ್ಲಿ ಜನಿಸಿದರು. ಇವರ ಮೂಲ ಹೆಸರು ಶಿವಪುತ್ರ ಸಿದ್ಧರಾಮಯ್ಯ ಕೊಂಕಲಿಮಠ. 10 ನೇ ವಯಸ್ಸಿಗೆ ʻಗೋವರ್ಧನ ಗಿರಿಧಾರಿʼ ಎಂಬ ಹಾಡು ಹಾಡಿ, ತಮ್ಮ ಸಂಗೀತ ಪರಿಣತಿಯನ್ನು ಹಲವಾರು ವೇದಿಕೆಗಳಲ್ಲಿ ಪ್ರದರ್ಶಿಸಿದ ಅವರು ಜನರ ಪ್ರೀತಿ ಗಳಿಸಿಕೊಂಡರು. ತಮ್ಮ ಅಸಾಧಾರಣ ಪ್ರತಿಭೆಯಿಂದ ಗುರುತಿಸಿಕೊಂಡು, ಸಂಗೀತಲೋಕದಲ್ಲಿ ಭಾವನೆಗಳ ತೀವ್ರತೆ, ಲಯದ ವೈವಿಧ್ಯತೆ ಮತ್ತು ಮಧುರತೆಯ ಆಳವನ್ನು ಅರಿತು, ಮಹತ್ವದ ಸಾಧನೆ ತೋರಿ, ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸುವ ತಮ್ಮ ಹಾಡುಗಾರಿಕೆಯಿಂದ ಇತರ ಗಾಯಕ-ಗಾಯಕಿಯರಿಗೂ ಅವರು ಸ್ಪೂರ್ತಿಯಾಗಿದ್ದರು. ಇಂದಿಗೂ ಭಾರತದ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಪ್ರಸಿದ್ಧ ಹಾಗೂ ವಿಶಿಷ್ಟ ಗಾಯಕರೆನಿಸಿ ಜನಮನದಲ್ಲಿರುವರು.
ಇಂತಹ ಕುಮಾರ ಗಂಧರ್ವರ ಬದುಕೇ ಒಂದು ವಿಸ್ಮಯವೆನಿಸುವುದು. ತಮ್ಮ ಗಾಯನದ ಪಯಣದಲ್ಲಿ ಅನಾರೋಗ್ಯ ಅವರನ್ನು ಸತತ 20 ವರ್ಷಗಳ ಕಾಲ ಹಾಡಲಾಗದಂತೆ ಮಾಡಿತ್ತು. ಕ್ಷಯರೋಗ ಹಾಗೂ ಶ್ವಾಸಕೋಶ ಕಾಯಿಲೆಗಳು ಅವರ ಕಂಠವನ್ನು ಕಸಿದುಕೊಂಡವು. ಹಾಡುವುದು ಇನ್ನು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ತಲುಪಿದರು. ಗಾಯನವನ್ನೇ ಉಸಿರಾಗಿಸಿಕೊಂಡಿದ್ದ ಅವರು ಜರ್ಜರಿತರಾದರು. ಒಂದು ಬಗೆಯ ಅಜ್ಞಾತವಾಸವೆಂಬಂತೆ ಮಧ್ಯಪ್ರದೇಶದ ದೇವಾಸ್ ಗೆ ಚಿಕಿತ್ಸೆಗೆ ತೆರಳಿದ್ದರು. ಅಲ್ಲಿ ಚಿಕಿತ್ಸೆಯ ಹೊತ್ತಲ್ಲಿ ತಮ್ಮ ಸುತ್ತಲಿನ ಪ್ರಾಕೃತಿಕ ಶಬ್ದಗಳನ್ನು ಆಲಿಸಿಕೊಳ್ಳುತ್ತಿದ್ದರು. ಸ್ಥಳೀಯ ಜನಪದರ ಬಾಯಲ್ಲಿ ಕೇಳಿಬರುತ್ತಿದ್ದ ಕಥೆಗಳು, ಕಬೀರರ ದೋಹೆಗಳನ್ನು ಕೇಳಿಸಿಕೊಂಡವರೇ ಅಲ್ಲಿ ಸಿಕ್ಕಿದ ಕಬೀರನನ್ನು ಹಿಂಬಾಲಿಸಿದರು. ಮುಂದೆ ಇದೇ ಕುಮಾರ ಗಂಧರ್ವರ ಬದುಕಿನಲ್ಲಿ ದೊಡ್ಡ ಜಿಗಿತವೂ ಆಯಿತು. ಕುಮಾರ ಗಂಧರ್ವರು ದಾರಿಹೋಕರು ಹಾಡುತ್ತಿದ್ದ; ಜನಪದರುಗಳ ಪದಗಳನ್ನು ತಾವಿದ್ದಲ್ಲೇ ಗುನುಗುನುತ್ತಿದ್ದರು.
ತಮ್ಮ ಆರೋಗ್ಯ ಸ್ವಲ್ಪ ಸುಧಾರಿಸಿದ ಕೂಡಲೇ ತಮ್ಮ ಸಂಗೀತ ಶೈಲಿಯಲ್ಲಿ ದೈವತ್ವದ ನಿರ್ಗುಣ ಭಕ್ತಿ ಸಾರವನ್ನು ಅದರೊಳಗೆ ಕೂಡಿಸಿ ಹಾಡಲಾರಂಭಿಸಿದರು. ಒಬ್ಬ ಹಿಂದೂಸ್ತಾನಿ ಗಾಯಕನಾಗಿ ಬೀದಿ ಅಲೆಯುವ ಫಕೀರರ ಹಾಡನ್ನು ಹಾಡುತ್ತಿದ್ದೀಯಲ್ಲ? ಎಂದವರ ಕೊಂಕುಮಾತಿಗೆ ಕಿವಿಗೊಡದೆ, ಎಲ್ಲರ ಅಸಮಾಧಾನದ, ವಿರೋಧದ ನಡುವೆಯೇ ಅವರು ಕಬೀರರ ಸಾಹಿತ್ಯವನ್ನು ತಮ್ಮದೇ ಶೈಲಿಯ ಗಾಯನದಲ್ಲಿ ಪ್ರಸ್ತುತ ಪಡಿಸಿದರು. ತಾವು ಬೆಳೆದುಕೊಂಡು ಬಂದ ಸಮುದಾಯದ ಸಂಪ್ರದಾಯ ಪ್ರಕಾರವನ್ನು ಮೀರಿ, ಕಾಲಮಾನಗಳು ಉರುಳಿದರೂ, ಸಂಗೀತದ ರೂಪುರೇಷೆಗಳಿರುವ ಜಾಯಮಾನದಲ್ಲಿ, ಶಾಸ್ತ್ರೀಯ ಸಂಗೀತದಲ್ಲಿ ಜನಪದ ಗೀತೆಗಳು, ನಿರ್ಗುಣಿ ಭಜನೆಗಳು, ಹೊಸ ರಾಗಗಳನ್ನು ಸಂಯೋಜಿಸಿ ಮುಕ್ತಕಂಠದಿಂದ ಹಾಡಿದರು. ಬಹುಮುಖ್ಯವಾಗಿ ಸಂಗೀತ ಕಲಿಕೆಯಲ್ಲಿ ಪಾಲಿಸಬೇಕಾದ ‘ಘರಾನಾ’ ಪದ್ಧತಿಯನ್ನು ನಿರಾಕರಿಸಿದರು. ಶಾಸ್ತ್ರೀಯ ಸಂಗೀತದ ಮೇರುತನದೊಳಗೆ ಕಬೀರರ ಸಾಹಿತ್ಯದ ಬೇರು ಬೆಸೆದು ಹಾಡುತ್ತಲೇ ಅವರು ಅಮರರಾದರು.
ಅವರ ಹುಟ್ಟೂರಾದ ಸುಳೇಭಾವಿಯಲ್ಲಿ ಮಾರ್ಚ್ 31 ರಂದು ಅವರ ಶತಮಾನೋತ್ಸವದ ಸ್ಮರಣಾರ್ಥ ನಿರ್ಮಿಸಲಾದ ಸಂಗೀತ ಶಾಲೆಯಾದ ಕುಮಾರ ಗಂಧರ್ವ ಸಂಗೀತ ವಿದ್ಯಾಲಯದ ಉದ್ಘಾಟನೆ ಜರುಗಿತು. ಹಲವಾರು ಪ್ರತಿಭಾನ್ವಿತ ಯುವ ಕಲಾವಿದರನ್ನು ರೂಪಿಸುವ ಆಶಯದೊಂದಿಗೆ, ಕುಮಾರ ಗಂಧರ್ವರ ಜೀವನ ಮತ್ತು ಕೊಡುಗೆ ಇದಕ್ಕೆ ಪ್ರೇರಕವಾಗಿದೆ. ಈ ಶಾಲೆಯು ಕಲ್ಮೇಶ್ವರ ನಗರದ ಸರ್ಕಾರಿ ಪ್ರೌಢಶಾಲಾ ಕಟ್ಟಡದ ವಿಸ್ತರಣೆಯಾಗಿದ್ದು, ಬೆಳಗಾವಿ ಮೂಲದ ಮಾರ್ಕುಂಬಿ ಇತಿಹಾಸ ಉಪಕ್ರಮ ಪ್ರತಿಷ್ಠಾನದಿಂದ ಹಣಕಾಸು ನೆರವು ಪಡೆದಿದೆ. ವಸತಿ ರಹಿತ ಸೌಲಭ್ಯವು ಸುತ್ತಮುತ್ತಲಿನ ಹಳ್ಳಿಗಳ ಮಕ್ಕಳಿಗೆ ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ತರಗತಿಗಳನ್ನು ಒದಗಿಸುತ್ತದೆ. ಏಕಕಾಲದಲ್ಲಿ ಸುಮಾರು 50 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವ ಸ್ಥಳಾವಕಾಶ ಹೊಂದಿರುವ ಈ ಶಾಲೆಯು ಹಲವಾರು ಸಂಗೀತ ವಾದ್ಯಗಳನ್ನು ಹೊಂದಿದೆ. ಇಲ್ಲಿ ಸಂಗೀತ ಕಚೇರಿಗಳನ್ನು ಆಯೋಜಿಸಲಾಗುವುದು.
ಪಂಡಿತ ಕುಮಾರ ಗಂಧರ್ವರು ಕಬೀರರ ಸಂಗೀತವನ್ನು ತಮ್ಮ ವಿಶಿಷ್ಟ ಗಾಯನದ ಮೂಲಕ ಅಸಂಖ್ಯಾತ ಜನರಿಗೆ ತಲಪಿಸಿದ್ದಾರೆ. ಇವತ್ತಿಗೂ ಅದರ ಸ್ವಾದ ಸಂಗೀತಪ್ರಿಯರಿಗೆ ಮೆಚ್ಚುಗೆಯಾಗಿದೆ. ಗಾಯನದ ಮೂಲಕ ಸಂಘಟಿಸಿದ ಕುಮಾರ ಗಂಧರ್ವರ ಕೊಡುಗೆ ಅನನ್ಯ ಮತ್ತು ಅಮೂಲ್ಯವಾದದ್ದು. ಅವರ ನೆನಪಿನ ಸಂಗೀತ ವಿದ್ಯಾಲಯವು ಒಂದು ಮಾದರಿಯಾಗಿ, ಸಮಾಜದಲ್ಲಿನ ಭಕ್ತಿ, ಆಧ್ಯಾತ್ಮಿಕತೆಗೆ ಲೌಕಿಕ ನಿರ್ಬಂಧಗಳ ಹೇರಿರುವುದನ್ನು ಹೋಗಲಾಡಿಸಿ; ಸದ್ಗುಣ, ನಿರಾಕಾರ ನಿರ್ಗುಣವೇ ನಿಜವಾದ ಧ್ಯಾನಿಕ ಪೂಜೆ ಎಂದ ಕಬೀರರ ಸಂದೇಶವನ್ನು, ಆಧ್ಯಾತ್ಮಿಕ ಅರಿವನ್ನು, ಪಂಡಿತರ ಆದರ್ಶ ತತ್ವಗಳನ್ನು ಸಂಗೀತದ ಮೂಲಕ ಜನಸಾಮಾನ್ಯರಿಗೆ ತಲುಪಿಸುವಲ್ಲಿ ಯಶಸ್ವಿಯಾಗಲಿ.
ಶ್ರವಂತಿ ಆರ್, ಆನೇಕಲ್
ಪತ್ರಕಿೋದ್ಯಮ ವಿದ್ಯಾರ್ಥಿನಿ
ಇದನ್ನೂ ಓದಿ- ಕರಾವಳಿ: ಕೋಮು ಹಿಂಸೆ ನಿಯಂತ್ರಣದಲ್ಲಿ ಕಾಂಗ್ರೆಸ್ ಮತ್ತೆ ಸೋತಿತೇ?