ನಿನ್ನೆ ಆಕ್ರಮಣಕಾರಿಯಾಗಿ ಆಡಿದ ಯಶಸ್ವಿ ಜೈಸ್ವಾಲ್ ಇಂದು ಶತಕ ದಾಖಲಿಸಲು ಸಾಧ್ಯವಾಗದೇ ನಿರಾಶೆ ಅನುಭವಿಸಿದರು. ರನ್ ಗಳಿಸಲು ಪರದಾಡುತ್ತಿದ್ದ ಶುಭಮನ್ ಗಿಲ್ ರನ್ ಗತಿ ಏರಿಸುವ ಸಾಹಸಕ್ಕೆ ಹೋಗಿ ಔಟಾದರು. ಆದರೆ ಮಧ್ಯಮ ಕ್ರಮಾಂಕದ ಆಟಗಾರರಾದ ಕೆ.ಎಲ್.ರಾಹುಲ್ ಮತ್ತು ಶ್ರೇಯಸ್ ಐಯ್ಯರ್ ಭಾರತಕ್ಕೆ ಆಸರೆಯಾದರು.
ಹೈದರಾಬಾದ್ ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಣ ಐದು ಟೆಸ್ಟ್ ಗಳ ಸುದೀರ್ಘ ಸರಣಿಯ ಮೊದಲ ಟೆಸ್ಟ್ನ ಎರಡನೇ ದಿನವಾದ ಇಂದು ಭಾರತ ಭೋಜನ ವಿರಾಮದ ವೇಳೆಗೆ ಮೂರು ವಿಕೆಟ್ ನಷ್ಟಕ್ಕೆ 223 ರನ್ ಗಳಿಸಿದೆ
ತಮ್ಮ ಎಂದಿನ ಲಯದಲ್ಲಿ ಆಟವಾಡಿದ ಕೆ.ಎಲ್ ರಾಹುಲ್ ಆರು ಬೌಂಡರಿಗಳ ನೆರವಿನಿಂದ 55 ರನ್ ಗಳಿಸಿ ಆಡುತ್ತಿದ್ದಾರೆ. ಇನ್ನೊಂದೆಡೆ ಶ್ರೇಯಸ್ ಐಯ್ಯರ್ ಆರಂಭದಲ್ಲಿ ಪರದಾಡಿದರೂ ನಂತರ ತಮ್ಮ ಎಂದಿನ ಆಕ್ರಮಣಕಾರಿ ಶೈಲಿಗೆ ಮರಳಿ ರನ್ ಗತಿಯನ್ನು ಹೆಚ್ಚಿಸಿ ಅಜೇಯ 34 ರನ್ ಗಳಿಸಿ ಆಡುತ್ತಿದ್ದಾರೆ.
ಇದಕ್ಕೂ ಮುನ್ನ ಇಂದು ಬೆಳಿಗ್ಗೆ ಎರಡನೇ ದಿನದ ಆಟ ಆರಂಭವಾಗುತ್ತಿದ್ದಂತೆ, ಜೈಸ್ವಾಲ್ ವೈಯಕ್ತಿಕ ಮೊತ್ತ 80 ರನ್ ಆಗುತ್ತಿದ್ದಂತೆ ಜೋ ರೂಟ್ ಬೌಲಿಂಗ್ ನಲ್ಲಿ ಅವರಿಗೇ ಕ್ಯಾಚ್ ನೀಡಿ ಔಟಾದರು. 74 ಎಸೆತಗಳನ್ನು ಎದುರಿಸಿದ ಜೈಸ್ವಾಲ್ ಇನ್ನಿಂಗ್ಸ್ ನಲ್ಲಿ ಮೂರು ಭರ್ಜರಿ ಸಿಕ್ಸರ್ ಮತ್ತು ಹತ್ತು ಮನಮೋಹಕ ಬೌಂಡರಿಗಳು ಇದ್ದವು.
ಇನ್ನೊಂದೆಡೆ ನಿನ್ನೆಯಿಂದಲೂ ಮಂದಗತಿಯಲ್ಲೇ ಬ್ಯಾಟಿಂಗ್ ಮಾಡುತ್ತಿದ್ದ ಶುಭಮನ್ ಗಿಲ್ ಬ್ಯಾಟ್ ಹೆಚ್ಚು ಸದ್ದು ಮಾಡಲಿಲ್ಲ. ಇಂಗ್ಲೆಂಡ್ ಸ್ಪಿನರ್ ಗಳ ಎದುರು ತಿಣುಕಾಡುತ್ತಿದ್ದ ಗಿಲ್ 23 ರನ್ ಗಳಿಸಿದ್ದಾಗ ಟಾಮ್ ಹಾರ್ಟ್ಲೀ ಅವರ ಬೌಲಿಂಗ್ ನಲ್ಲಿ ಬೆನ್ ಡಕೆಟ್ ಅವರಿಗೆ ಕ್ಯಾಚ್ ನೀಡಿ ಔಟಾಗಿ ನಿರಾಶೆ ಮೂಡಿಸಿದರು.
ನಿನ್ನೆ ಭಾರತದ ಸ್ಪಿನ್ ತ್ರಿವಳಿಗಳ ಮಾರಕ ಬೌಲಿಂಗ್ ಗೆ ನಲುಗಿದ ಇಂಗ್ಲೆಂಡ್ ಬೆನ್ ಸ್ಟೋಕ್ಸ್ (70) ಹೋರಾಟದ ನಡುವೆಯೂ ಕೇವಲ 246 ರನ್ ಗಳಿಗೆ ಆಲ್ ಔಟ್ ಆಯಿತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಸ್ಪಿನ್ ಮೋಡಿಗೆ ಸಿಲುಕಿ ಆಲ್ ಔಟ್ ಆಯಿತು. ರವಿಚಂದ್ರನ್ ಅಶ್ವಿನ್ 3, ರವೀಂದ್ರ ಜಡೇಜಾ 3 ಹಾಗು ಅಕ್ಷರ್ ಪಟೇಲ್ ಮತ್ತು ಜಸ್ಪೀತ್ ಬುಮ್ರಾ 2 ವಿಕೆಟ್ ಪಡೆದುಕೊಂಡರು.ಇಂಗ್ಲೆಂಡ್ ಪರವಾಗಿ ನಾಯಕ ಬೆನ್ ಸ್ಟೋಕ್ಸ್ 70 ರನ್ ಗಳಿಸಿದರೆ, ಜಾನಿ ಬೇರ್ ಸ್ಟೋ 37, ಡಕ್ಕೆಟ್ 35 ರನ್ ಗಳಿಸಿದರು.
ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ಆಕ್ರಮಣಕಾರಿ ಆರಂಭ ಪಡೆದು, ನಿನ್ನ ದಿನದ ಆಟದ ಮುಕ್ತಾಯಕ್ಕೆ ಒಂದು ವಿಕೆಟ್ ನಷ್ಟಕ್ಕೆ 119 ರನ್ ಗಳಿಸಿತ್ತು.