ಕೋಲಾರ: ಜಿಲ್ಲೆಯ ಕಾಂಗ್ರೆಸ್ ಶಾಸಕರ ವಿರೋಧದ ನಡುವೆಯೂ ತಮ್ಮ ಕುಟುಂಬದವರಿಗೆ ಟಿಕೆಟ್ ನೀಡಬೇಕು ಎಂಬ ಸಚಿವ ಕೆ.ಎಚ್.ಮುನಿಯಪ್ಪನವರ ಹಠ ಇನ್ನೂ ಮುಂದುವರೆದಿದ್ದು, ನಾನು ಹೇಳಿದವರಿಗೆ ಟಿಕೆಟ್ ಕೊಟ್ಟರೆ ಗೆಲ್ಲಿಸಿಕೊಂಡು ಬರುವುದಾಗಿ ಹೇಳಿದ್ದಾರೆ.
ನಿನ್ನೆ ನಡೆದ ಸಭೆಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಂದಿರಲಿಲ್ಲ. ನಾವು ಒಟ್ಟಿಗೆ ಸೇರಿದ್ದಾಗ ಭಿನ್ನಾಭಿಪ್ರಾಯ ಬಿಟ್ಟು ಒಟ್ಟಿಗೆ ಕೆಲಸ ಮಾಡೋಣ ಎಂದು ಅವರೇ ಹೇಳಿದ್ದರು. ಈಗಲೂ ನಾನು ಹೇಳಿದ ಅಭ್ಯರ್ಥಿಗೆ ಟಿಕೆಟ್ ಕೊಟ್ಟರೆ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನನ್ನದು ಎಂದು ಮಾಧ್ಯಮ ವರದಿಗಾರರೊಂದಿಗೆ ಹೇಳಿದ್ದಾರೆ.
ನಾನು ಹೇಳುವ ಅಭ್ಯರ್ಥಿ ಬಿಟ್ಟು ಬೇರೆ ಅಭ್ಯರ್ಥಿಗೆ ಟಿಕೆಟ್ ಕೊಡುವುದು ಸರಿಯಲ್ಲ. ಬೇರೆ ಅಭ್ಯರ್ಥಿ ಬಂದರೆ ಕಷ್ಟಕ್ಕೆ ಸಿಕ್ಕಿಹಾಕಿಕೊಳ್ಳುತ್ತಾರೆ. ನನ್ನ ಮನಸ್ಸಿಗೆ ಆಘಾತವಾಗಿದೆ, ನೋವಾಗುತ್ತಿದೆ. ನಾವೆಲ್ಲರೂ ಸ್ವಪ್ರತಿಷ್ಠೆ ಬಿಟ್ಟು ಕೆಲಸ ಮಾಡೋಣ. ನಾನು ಬಹಳ ನೋವಲ್ಲಿದ್ದೇನೆ, ನನ್ನ ನೋವು ದೊಡ್ಡದಲ್ಲ, ಕಾಂಗ್ರೆಸ್ ದೊಡ್ಡದು ಎಂದು ಅವರು ಭಾವುಕವಾಗಿ ನುಡಿದಿದ್ದಾರೆ.
ನಾನು ರಮೇಶ್ ಕುಮಾರ್ ಮನೆಗೆ ಹೋಗಿದ್ದೆ, ಅವರೇ ಸಿಗಲಿಲ್ಲ. ಕಾಂಗ್ರೆಸ್ ಉಳಿಬೇಕು ಎಂದೇ ಅವರ ಮನೆಗೆ ಹೋದೆ. ನಂತರ ಕಾಂಗ್ರೆಸ್ ಕಚೇರಿಯಲ್ಲಿ ಅವರೊಂದಿಗೆ ಮಾತಾಡಿದೆ ಅವರೇ ಎಲ್ಲವನ್ನೂ ಬಿಟ್ಟುಬಿಡೋಣ ಅಂತ ಮಾತನಾಡಿದರು. ರಮೇಶ್ ಕುಮಾರ್ ಅವರನ್ನು ಕೂರಿಸಿಕೊಂಡು ಮುಖ್ಯಮಂತ್ರಿಗಳೇ ಮಾತನಾಡಲಿ. ನಾನು ಚಿಕ್ಕಪೆದ್ದಣ್ಣ ಗೆ ಟಿಕೇಟ್ ಕೊಡಿ ಅಂತಲೇ ಕೇಳಿದ್ದೇನೆ. ಬೇರೆ ಅಭ್ಯರ್ಥಿ ಬಗ್ಗೆ ಯೋಚನೆ ನಾನು ಮಾಡಿಯೇ ಇಲ್ಲ. ನಾನು ಯಾರಿಗೂ ಪ್ರಪೋಸ್ ಮಾಡಿಲ್ಲ. ನಾನು ಎಡಗೈ ಬಲಗೈ ವಿಷಯ ಮಾತ್ರ ಹೇಳ್ತಿಲ್ಲ. ನಾನು ಅದಕ್ಕಿಂತ ಮೇಲಿದ್ದೇನೆ ಎಂದು ಅವರು ಹೇಳಿದ್ದಾರೆ.
ಬೇರೆ ಕಡೆಯ ಎಲ್ಲ ಸಮಸ್ಯೆ ಬಗೆಹರಿಯುತ್ತದೆ, ಕೋಲಾರದ್ದು ಮಾತ್ರ ಯಾಕೆ ಬಗೆಹರಿಯುತ್ತಿಲ್ಲ?. ಸಿಎಂ ಡಿಸಿಎಂ ಗೆ ಕೋಲಾರದ ಸಮಸ್ಯೆ ಬಗೆಹರಿಸಬೇಕಾದ ದೊಡ್ಡ ಜವಾಬ್ದಾರಿ ಇದೆ. ಯಾರು ಸಮಸ್ಯೆ ಬಗೆಹರಿಸಬೇಕಿತ್ತೋ ಅವರ ಮನಸ್ಸು ಸ್ವಲ್ಪ ದೊಡ್ಡದಾದರೆ ಸಮಸ್ಯೆ ಬಗೆಹರಿಯುತ್ತದೆ. ಎಲ್ಲ ಕಡೆಯದ್ದೂ ಸಂಧಾನ ಆಗುತ್ತದೆ, ಕೋಲಾರದ್ದು ಮಾತ್ರ ಯಾಕೆ ಸಂಧಾನ ಆಗ್ತಿಲ್ಲ? ಎಂದು ಅವರು ನೋವು ಹೊರಹಾಕಿದ್ದಾರೆ.