ನ್ಯಾ. ಶೇಖರ್ ಕುಮಾರ್ ಯಾದವ್ ವಿರುದ್ಧ ‘ಇಂಡಿಯಾ’ ಮೈತ್ರಿಕೂಟ ಮಹಾಭಿಯೋಗ ಆರಂಭ

Most read

ನವದೆಹಲಿ: ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರು ದ್ವೇಷ ಮತ್ತು ರಾಜಕೀಯ ಭಾಷಣಗಳನ್ನು ಮಾಡಿದ್ದಾರೆ ಎಂದು ಆರೋಪಿಸಿ ರಾಜ್ಯಸಭೆಯಲ್ಲಿ ‘ಇಂಡಿಯಾ’ ಮೈತ್ರಿಕೂಟದ ಸಂಸದರು ಮಹಾಭಿಯೋಗ ಅಥವಾ ದೋಷಾರೋಪಣೆ ಪ್ರಕ್ರಿಯೆ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯಸಭೆಯಲ್ಲಿ ಶೀಘ್ರವೇ ದೋಷಾರೋಪಣೆ ನಿರ್ಣಯವನ್ನು ಮಂಡಿಸುವ ಸಲುವಾಗಿ ‘ಇಂಡಿಯಾ’ ಬಣದ ಸಂಸದರು ಸಹಿ ಸಂಗ್ರಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ರಾಜ್ಯಸಭೆಯಲ್ಲಿ ದೋಷಾರೋಪಣೆ ನಿರ್ಣಯವನ್ನು ಅಂಗೀಕರಿಸಲು ಕನಿಷ್ಠ 50 ಸಂಸದರ ಸಹಿ ಅಗತ್ಯವಿದೆ. ಕಾಂಗ್ರೆಸ್‌ನ ಹಿರಿಯ ಸಂಸದರಾದ ಕಪಿಲ್ ಸಿಬಲ್, ವಿವೇಕ್ ಟಂಖಾ ಮತ್ತು ರೇಣುಕಾ ಚೌಧರಿ, ಆರ್‌ಜೆಡಿಯ ಮನೋಜ್ ಕೆ., ಜಾನ್‌ ಬ್ರಿಟ್ಟಾಸ್, ವಿ.ಶಿವದಾಸನ್, ಸಿಪಿಎಂನ ಎ.ಎ. ರಹೀಮ್, ಪಿ. ಸಂದೋಷ್ ಕುಮಾರ್, ಸಿಪಿಐನ ಪಿ.ಪಿ. ಸುನೀರ್, ತೃಣಮೂಲ ಕಾಂಗ್ರೆಸ್ನ ಸಾಕೇತ್ ಗೋಖಲೆ, ಕೇರಳದ ಕಾಂಗ್ರೆಸ್ ಸಂಸದ ಜೋಸ್ ಕೆ. ಮಣಿ ಸೇರಿದಂತೆ ಅನೇಕ ಸದಸ್ಯರು ನೋಟಿಸ್‌ಗೆ ಸಹಿ ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಹೈಕೋರ್ಟ್ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರು ವಿಶ್ವ ಹಿಂದೂ ಪರಿಷತ್ತಿನ (ವಿಎಚ್‌ಪಿ) ಕಾರ್ಯಕ್ರಮವೊಂದರಲ್ಲಿ ಆಡಿದ ಮಾತುಗಳ ಕುರಿತ ಮಾಧ್ಯಮ ವರದಿಗಳನ್ನು ಗಮನಿಸಿರುವ ಸುಪ್ರೀಂ ಕೋರ್ಟ್, ವಿವರ ನೀಡುವಂತೆ ಅಲಹಾಬಾದ್ ಹೈಕೋರ್ಟ್‌ಗೆ ಮಂಗಳವಾರ ಸೂಚನೆ ನೀಡಿದೆ. ಏಕರೂಪ ನಾಗರಿಕ ಸಂಹಿತೆಯ ಮುಖ್ಯ ಉದ್ದೇಶ ಸಾಮಾಜಿಕ ಸೌಹಾರ್ದ, ಲಿಂಗ ಸಮಾನತೆ ಮತ್ತು ಧರ್ಮನಿರಪೇಕ್ಷತೆಯನ್ನು ಉತ್ತೇಜಿಸುವುದು ಎಂದು ನ್ಯಾಯಮೂರ್ತಿ ಯಾದವ್ ಅವರು, ವಿಎಚ್‌ಪಿಯ ಕಾನೂನು ವಿಭಾಗದ ಪ್ರಾಂತೀಯ ಸಮಾವೇಶದಲ್ಲಿ ಹೇಳಿದ್ದರು. ಕಾರ್ಯಕ್ರಮ ನಡೆದ ಒಂದು ನಂತರ ಬಹು ಸಂಖ್ಯಾತರಿಗೆ ಅನುಗುಣವಾಗಿ ಕಾನೂನು ಕೆಲಸ ಮಾಡಬೇಕು ಎನ್ನುವುದೂ ಸೇರಿದಂತೆ ಇವರು ಕೆಲವು ಪ್ರಚೋದನಾಕಾರಿ ವಿಷಯಗಳನ್ನು ಕುರಿತು ಮಾತನಾಡಿದ್ದಾರೆ ಎನ್ನಲಾದ ವಿಡಿಯೋಗಳು ವ್ಯಾಪಕವಾಗಿ ಹಂಚಿಕೆಯಾಗಿದ್ದು. ವಿರೋಧ ಪಕ್ಷಗಳು ಇವರನ್ನು ಕಟುವಾಗಿ ಟೀಕಿಸಿದ್ದವು.

More articles

Latest article