ಎಂಎನ್‌ ಸಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ: ಕಾನೂನು ಮರುಪರಿಶೀಲನೆಗೆ ಕರವೇಗೆ ಸಿಎಂ ಸಿದ್ದರಾಮಯ್ಯ ಭರವಸೆ

Most read

ಬೆಂಗಳೂರು:  ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ಕರ್ನಾಟಕದ ಹಿತಾಸಕ್ತಿ ಹಾಗೂ ಕನ್ನಡಿಗರ ಹಕ್ಕುಗಳ ಕುರಿತಾದ ಸಮಗ್ರ ಮನವಿಯನ್ನು ಸಲ್ಲಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ನಾವು ಕನ್ನಡಿಗರ ಹಿತಕ್ಕಾಗಿ ಬದ್ಧರಾಗಿದ್ದೇವೆ. ಉದ್ಯೋಗ ಮೀಸಲಾತಿ ಕಾನೂನನ್ನು ಪುನರ್‌ಪರಿಶೀಲಿಸಿ ಸಚಿವ ಸಂಪುಟದ ಮುಂದೆ ಮಂಡಿಸುತ್ತೇವೆ. ಕನ್ನಡಪರ ಚಳುವಳಿಗಾರರ ವಿಷಯದಲ್ಲಿಯೂ ಸಹಾನುಭೂತಿಯಿಂದ ಕ್ರಮ ಕೈಗೊಳ್ಳುತ್ತೇವೆ. ಕನ್ನಡದ ಗೌರವ ಮತ್ತು ಹಕ್ಕುಗಳ ರಕ್ಷಣೆಗೆ ಸರ್ಕಾರ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತದೆ,” ಎಂದು ಭರವಸೆ ನೀಡಿದರು.

ನಾರಾಯಣಗೌಡರು ಅದರಲ್ಲಿ ಉಲ್ಲೇಖಿಸಿದ್ದ ಪ್ರಮುಖ ಅಂಶಗಳ ಕುರಿತು ಮುಖ್ಯಮಂತ್ರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದರು. ಕನ್ನಡ, ಕನ್ನಡಿಗ ಮತ್ತು ಕರ್ನಾಟಕಕ್ಕೆ ಇಂದಿನ ಸಂದರ್ಭದಲ್ಲಿ ಎದುರಾಗಿರುವ ಅನಿವಾರ್ಯ ಅವಶ್ಯಕತೆಗಳ ಕುರಿತು ಕಳಕಳಿಯಿಂದ ವಿವರಿಸಿ “ಕರ್ನಾಟಕದ ಗೌರವ, ಕನ್ನಡಿಗರ ಭವಿಷ್ಯ ಹಾಗೂ ಕನ್ನಡ ಭಾಷೆಯ ಸ್ಥಾನಮಾನ ಕಾಪಾಡುವುದು ಇಂದಿನ ತುರ್ತು ಅಗತ್ಯವಾಗಿದೆ. ಕನ್ನಡದ ಪರ ಹೋರಾಟ ಕೇವಲ ಭಾಷೆಯ ವಿಷಯವಲ್ಲ, ಅದು ನಾಡಿನ ಆತ್ಮದ ಪ್ರತಿಬಿಂಬ,” ಎಂದು ಅಭಿಪ್ರಾಯಪಟ್ಟರು.

ಅವರು ರಾಜ್ಯದ ಯುವಕರಿಗೆ ಉದ್ಯೋಗಾವಕಾಶಗಳಲ್ಲಿ ಪ್ರಾಮುಖ್ಯತೆ ನೀಡುವ ಅಗತ್ಯವನ್ನು ಪ್ರಸ್ತಾಪಿಸಿ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಹಾಗೂ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಕಡ್ಡಾಯವಾಗಿ ಉದ್ಯೋಗ ಮೀಸಲಾತಿ ನೀಡುವ ಕಾನೂನು ಶೀಘ್ರ ಜಾರಿಯಾಗಬೇಕೆಂದು ಒತ್ತಾಯಿಸಿದರು. “ಕರ್ನಾಟಕದ ಯುವಕರು ತಮ್ಮದೇ ನಾಡಿನಲ್ಲಿ ಉದ್ಯೋಗಕ್ಕಾಗಿ ಹೋರಾಡಬೇಕಾದ ಪರಿಸ್ಥಿತಿ ಉಂಟಾಗಬಾರದು. ರಾಜ್ಯದ ಸಂಪನ್ಮೂಲಗಳು, ಸಂಸ್ಥೆಗಳು ಮತ್ತು ಉದ್ಯೋಗಗಳು ಕನ್ನಡಿಗರ ಹಕ್ಕುಗಳಾಗಬೇಕು. ಈ ಕಾನೂನು ಜಾರಿಯಾಗುವುದು ಕನ್ನಡದ ಮಕ್ಕಳ ಭವಿಷ್ಯಕ್ಕೆ ಭದ್ರತೆಯ ಖಚಿತತೆ ನೀಡುತ್ತದೆ,” ಎಂದು ಹೇಳಿದರು.

 “ಕನ್ನಡಕ್ಕಾಗಿ ಹೋರಾಡಿದವರು ಅಪರಾಧಿಗಳು ಅಲ್ಲ. ಅವರು ನಾಡಿನ ಗೌರವವನ್ನು ಉಳಿಸಿದ ನಿಜವಾದ ಹೋರಾಟಗಾರರು. ಅವರ ಮೇಲಿನ ಪ್ರಕರಣಗಳನ್ನು ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಪಡಿಸಿದರು.

ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿಯೂ ಅಗತ್ಯ ಬದಲಾವಣೆಯ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಕನ್ನಡದ ಮಕ್ಕಳು ಉನ್ನತ ಹುದ್ದೆಗಳಲ್ಲಿ ಕಾಣಿಸಿಕೊಳ್ಳಬೇಕಾದರೆ ದ್ವಿಭಾಷಾ ಶಿಕ್ಷಣ ನೀತಿಯನ್ನು ಶಾಶ್ವತವಾಗಿ ಜಾರಿಗೆ ತರಬೇಕೆಂದು ಸಲಹೆ ನೀಡಿದರು. “ಕನ್ನಡದ ಜೊತೆಗೆ ಇಂಗ್ಲಿಷಿನ ಪಾಠ ಬೋಧನೆಯೂ ಸಮಾನವಾಗಿ ದೊರೆತರೆ, ವಿದ್ಯಾರ್ಥಿಗಳು ಜಾಗತಿಕ ಮಟ್ಟದ ಸ್ಪರ್ಧೆಗೆ ಸಿದ್ಧರಾಗಬಹುದು. ಇದು ಕನ್ನಡದ ವಿರುದ್ಧವಲ್ಲ, ಕನ್ನಡದ ಬಲವರ್ಧನೆಗೆ ಅಗತ್ಯವಾದ ಹೆಜ್ಜೆ,” ಎಂದು ಹೇಳಿದರು.

More articles

Latest article