ನವದೆಹಲಿ: ದೇಶದ ಪ್ರತಿಷ್ಠಿತ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ವಿದ್ಯಾರ್ಥಿ ಒಕ್ಕೂಟದ (JNUSU) ಚುನಾವಣೆಯಲ್ಲಿ ಎಡ ಪಂಥೀಯ ವಿದ್ಯಾರ್ಥಿಗಳ ಸಂಘಟನೆಗಳ ಮೈತ್ರಿಕೂಟ ನಾಲ್ಕು ಉನ್ನತ ಹುದ್ದೆಗಳಲ್ಲಿ ಮೂರನ್ನು ಗೆಲ್ಲುವ ಮೂಲಕ ತನ್ನ ನೆಲೆಯನ್ನು ಭದ್ರಪಡಿಸಿಕೊಂಡಿದೆ.
ಬಲಪಂಥೀಯ ಸಂಘಟನೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಒಂದು ಸ್ಥಾನದಲ್ಲಿ ಗೆದ್ದಿದೆ. ನಿತೀಶ್ ಕುಮಾರ್ (AISA) ನೂತನ ಅಧ್ಯಕ್ಷರಾಗಿ ಮನೀಷಾ (DSF) ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಮಂತೆಹಾ ಫಾತಿಮಾ (DSF) ಪ್ರಧಾನ ಕಾರ್ಯದರ್ಶಿ ಸ್ಥಾನದಲ್ಲಿ ಗೆದ್ದಿದ್ದಾರೆ. ದಶಕಗಳ ಬಳಿಕ ಎಬಿವಿಪಿ ಜಂಟಿ ಕಾರ್ಯದರ್ಶಿ ಹುದ್ದೆಯನ್ನು ಗೆದ್ದುಕೊಂಡಿದ್ದು, ವೈಭವ್ ಮೀನಾ ವಿಜಯಶಾಲಿಯಾಗಿ ಹೊರಹೊಮ್ಮಿದ್ದಾರೆ.
ಮತಗಳ ಎಣಿಕೆ ವೇಳೆ ನಾಲ್ಕೂ ಸ್ಥಾನಗಳಲ್ಲಿ ಎಬಿವಿಪಿ ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡಿದ್ದರು. ಇದು ಎಡ ವಿದ್ಯಾರ್ಥಿ ಒಕ್ಕೂಟಗಳ ಆತಂಕಕ್ಕೆ ಕಾರಣವಾಗಿತ್ತು. ಅಂತಿಮವಾಗಿ ಎಬಿವಿಪಿ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಹುದ್ದೆಗಳ ಸ್ಪರ್ಧೆಯಲ್ಲಿ ಎಬಿವಿಪಿ ಸೋತರೂ ಸೋಲಿನ ಅಂತರ ಕಡಿಮೆಯಾಗಿರುವುದು ಬಲಪಂಥೀಯ ಸಂಘಟನೆಗಳ ಪ್ರಭಾವ ಹೆಚ್ಚುತ್ತಿರುವುದನ್ನು ಸೂಚಿಸುತ್ತದೆ. ಕ್ಯಾಂಪಸ್ ಹಿಂಸಾಚಾರದಿಂದಾಗಿ ಚುನಾವಣೆ ವಿಳಂಬಗೊಂಡಿತ್ತು. ಚುನಾವಣೆ, ಏಪ್ರಿಲ್ 25 ರಂದು ನಡೆದಿತ್ತು. ಸುಮಾರು ಶೇ. 70 ರಷ್ಟು ವಿದ್ಯಾರ್ಥಿಗಳು ಮತ ಚಲಾಯಿಸಿದ್ದರು.