ಅತ್ಯುತ್ತಮ ಸಂಸದೀಯ ಪಟು ಜಯಪ್ರಕಾಶ್ ಹೆಗ್ಡೆ

Most read

ಕೋಮು ಭಾವನೆ ಹೆಚ್ಚುತ್ತಿರುವ ಇಂದು ಉಡುಪಿ ಚಿಕ್ಕಮಗಳೂರಿನಲ್ಲಿ ದಕ್ಷತೆ ಒಳನೋಟವುಳ್ಳ ಜಾತ್ಯತೀತ ಮತ್ತು ಪುರೋಗಾಮಿ  ಮನೋಭಾವವುಳ್ಳ ಸಾಮರಸ್ಯದ ಮೇಲೆ ನಂಬಿಕೆ ಇರುವ ಜನಪ್ರತಿನಿಧಿಯ ಅಗತ್ಯವಿದೆ. ಈ ದೃಷ್ಟಿಯಿಂದ ಜಯಪ್ರಕಾಶ್ ಹೆಗ್ಡೆಯವರು ಖಂಡಿತಾ ಅತ್ಯುತ್ತಮ ಆಯ್ಕೆ –ಡಾ. ಗಣನಾಥ ಎಕ್ಕಾರು, ಜಾನಪದ ತಜ್ಞರು

ಇತ್ತೀಚಿನ ವರ್ಷಗಳ ವರೆಗೂ ಉಡುಪಿ ಜಿಲ್ಲೆ ಕೋಮು ಸಾಮರಸ್ಯಕ್ಕೆ ಹೆಸರಾಗಿತ್ತು. ದೇವಸ್ಥಾನಗಳ ಜಿಲ್ಲೆ ಮತ್ತು ನಗರವಾಗಿದ್ದರೂ ಕೋಮು ವೈಷಮ್ಯಗಳು ಇಲ್ಲಿ ಅತೀ ವಿರಳವಾಗಿತ್ತು. ಹತ್ತಿರದ ಮಂಗಳೂರಿನಲ್ಲಿ ಕೋಮು ಗಲಭೆಗಳು ನಡೆದ ಸಂದರ್ಭಗಳಲ್ಲೂ ಉಡುಪಿಯಲ್ಲಿ ಅದರ ಯಾವುದೇ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿರಲಿಲ್ಲ. ಜನಸಾಮಾನ್ಯರು ನೆಮ್ಮದಿಯ ಸಾಮರಸ್ಯದ ಬದುಕನ್ನು ಅನುಭವಿಸುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಸಂಘಪರಿವಾರದಿಂದ ಬಂದ ಕೆಲವು ಬಿಜೆಪಿ ರಾಜಕಾರಣಿಗಳು ಈ ಸಾಮರಸ್ಯವನ್ನು ಹದಗೆಡಿಸುವ ಪ್ರಜ್ಞಾಪೂರ್ವಕ ಪ್ರಯತ್ನ ಮಾಡಿ, ಯಶಸ್ಸನ್ನು ಗಳಿಸಿದ್ದಾರೆ. ಅದನ್ನು ಮೆಟ್ಟಿಲು ಮಾಡಿಕೊಂಡು ಅಧಿಕಾರದ ಸವಿಯನ್ನು ಅನುಭವಿಸುತ್ತಿದ್ದಾರೆ. ದನ ಮಾರಾಟ ಮಾಡುತ್ತಿದ್ದ ಮುಸ್ಲಿಂ ವ್ಯಾಪಾರಿಗಳ ಬೆತ್ತಲೆ ಪ್ರಕರಣದ ರೂವಾರಿಯಾಗಿದ್ದ ಪ್ರಮುಖ ವ್ಯಕ್ತಿ ಶಾಸಕರಾಗಿದ್ದಾರೆ. ಒಂದೆರಡು ವರ್ಷಗಳ ಹಿಂದೆ ಹಿಜಾಬ್ ಪ್ರಕರಣದಲ್ಲಿ ಸಾವಿರಾರು ಮುಸ್ಲಿಂ ವಿದ್ಯಾರ್ಥಿನಿಯರ ಶೈಕ್ಷಣಿಕ ಬದುಕಿಗೆ ಕೊಳ್ಳಿ ಇಡಲಾಯಿತು. ಉಡುಪಿಯ ಕೋಮು ಸೌಹಾರ್ದತೆಯನ್ನು ಕಾಪಾಡುವ ದೃಷ್ಟಿಯಿಂದ ಲೋಕಸಭೆಯಲ್ಲಿ ಉತ್ತಮ ಜನಪ್ರತಿನಿಧಿಯನ್ನು ಆಯ್ಕೆ ಮಾಡುವುದು ನಾಗರಿಕರ ಹೊಣೆಗಾರಿಕೆಯಾಗಿದೆ.

ಜಯಪ್ರಕಾಶ್ ಹೆಗ್ಡೆ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳಲ್ಲಿ ಜಯಪ್ರಕಾಶ ಹೆಗ್ಡೆಯವರು ಸಮರ್ಥರು ಎಂಬುದನ್ನು ಹೆಚ್ಚಿನ ಜನರು ಒಪ್ಪಿಕೊಳ್ಳುತ್ತಾರೆ. ಜಯಪ್ರಕಾಶ್ ನಾರಾಯಣರ ಚಳವಳಿಯಿಂದ ನಾಯಕರಾಗಿ ರೂಪುಗೊಂಡ ಹೆಗ್ಡೆಯವರು ಇದುವರೆಗೂ ಶುದ್ಧ ಚಾರಿತ್ರ್ಯವನ್ನು ನಿರೂಪಿಸಿದವರು. ಬ್ರಹ್ಮಾವರ ಕ್ಷೇತ್ರದಲ್ಲಿ ಮೊದಲ ಬಾರಿ ಗೆದ್ದು ದೇವೇಗೌಡರ ಸಂಪುಟದಲ್ಲಿ ಮೀನುಗಾರಿಕೆ ಮತ್ತು ಬಂದರು ಸಚಿವರಾಗಿ ಅತಿ ಚಿಕ್ಕ ಖಾತೆಯಲ್ಲಿ ಜನೋಪಯೋಗಿ ಕಾರ್ಯ ಮಾಡಿ ಸೈ ಎನಿಸಿಕೊಂಡವರು. ದಕ್ಷತೆ ಮತ್ತು ಒಳನೋಟ ಉಳ್ಳವರಿಗೆ ಖಾತೆ ಮುಖ್ಯವಲ್ಲ ಎಂಬುದನ್ನು ಸಾಧಿಸಿ ತೋರಿಸಿದವರು. ಬಂದರಿನ ಜಟ್ಟಿಗಳಿಗೆ ಕಾಯಕಲ್ಪ, ಡೀಸೆಲ್ ಸಬ್ಸಿಡಿ ಪರಿಕಲ್ಪನೆ, ಮತ್ಸ್ಯಾಲಯ ಮನೆ ನಿರ್ಮಾಣ ಇತ್ಯಾದಿ ಹೊಸ ಯೋಜನೆ, ಯೋಚನೆಗಳ ಮೂಲಕ ಮೀನುಗಾರರ ಬದುಕಿಗೆ ಬೆಳಕು ನೀಡಿದವರು. ಅವರು ಬ್ರಹ್ಮಾವರ ಕ್ಷೇತ್ರದಲ್ಲಿ ಪಕ್ಷೇತರರಾಗಿ ಗೆದ್ದಿದ್ದು, ಅಭಿವೃದ್ಧಿಶೀಲ ರಾಜಕಾರಣಿಯನ್ನು ಜನ ಒಪ್ಪಿಕೊಳ್ಳುತ್ತಾರೆ ಎಂಬುದಕ್ಕೆ ಒಳ್ಳೆಯ ಉದಾಹರಣೆ. ಅಧಿಕಾರದಲ್ಲಿದ್ದರೂ ಇದುವರೆಗೂ ಯಾವುದೇ ಆರೋಪ ಅಥವಾ ಭ್ರಷ್ಟಾಚಾರದ ಕಳಂಕ ಅವರಿಗಿಲ್ಲ.

ವಿಧಾನಸಭೆಯನ್ನು ಹಲವಾರು ಬಾರಿ ಪ್ರತಿನಿಧಿಸಿದ್ದ ಹೆಗ್ಡೆಯವರು ಅತ್ಯುತ್ತಮ ಸಂಸದೀಯ ಪಟು ಎಂಬ ಹೆಸರು ಗಳಿಸಿದವರು. ಕರಾವಳಿಯ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪ್ರತಿನಿಧಿಸಿ, ಹಲವು ಸಮಸ್ಯೆಗಳ ಪರಿಹಾರಕ್ಕೆ ಕಾರಣರಾದವರು. ಲೋಕಸಭಾ ಉಪಚುನಾವಣೆಯಲ್ಲಿ ಗೆದ್ದು 2 ವರ್ಷ ಸಂಸದರಾಗಿ ತನ್ನ ವ್ಯಕ್ತಿತ್ವದ ಛಾಪು ಮೂಡಿಸಿದವರು. ಅಲ್ಲೂ ಅತಿ ಕಡಿಮೆ ಅವಧಿಯಲ್ಲಿ ಒಳ್ಳೆಯ ಸಂಸದೀಯ ಪಟು ಎಂಬ ಹೆಗ್ಗಳಿಕೆ ಗಳಿಸಿಕೊಂಡವರು. ಕರಾವಳಿಯ ಅಡಿಕೆ ಬೆಳೆಗಾರರ ಸಮಸ್ಯೆಯನ್ನು ಲೋಕಸಭೆಯಲ್ಲಿ ಸಮರ್ಥವಾಗಿ ಮಂಡಿಸಿ, ಸರಕಾರದ ಗಮನ ಸೆಳೆದವರು. ತುಳುಭಾಷೆ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸ್ಥಾನ ಕಲ್ಪಿಸಬೇಕೆಂಬ ಹಕ್ಕೊತ್ತಾಯವನ್ನು ಮಾಡಿದವರು. ಈಗ ಜನಪ್ರಿಯವಾಗಿರುವ ಜನೌಷಧಿ ಕೇಂದ್ರಗಳ ಕುರಿತಾದ ಸಂಸತ್ತಿನ ಸಮಿತಿಯಲ್ಲಿ ಸದಸ್ಯರಾಗಿ ಅದರ ಅಗತ್ಯವನ್ನು ಸರಕಾರಕ್ಕೆ ಮನಗಾಣಿಸಿದವರು. ಅತ್ಯುತ್ತಮ ಸಂಸದರಾಗುವ ಎಲ್ಲಾ ಗುಣಗಳನ್ನು ಕೇವಲ ಎರಡು ವರ್ಷಗಳಲ್ಲಿ ಅವರು ಸಾಬೀತುಪಡಿಸಿದ್ದಾರೆ.

ಜಾತ್ಯತೀತ ಮನೋಭಾವದ ಜಯಪ್ರಕಾಶ ಹೆಗ್ಡೆಯವರು ಕಾಂಗ್ರೆಸಿನ ಒಳ ರಾಜಕೀಯದ ಕಾರಣದಿಂದ ಬಿಜೆಪಿ ಸೇರಿದಾಗ ಅವರ ಜಾತ್ಯತೀತ ಮತ್ತು ಸಾಮರಸ್ಯದ ಮನೋಭಾವವನ್ನು ಅರಿತವರು ದಿಗ್ಭ್ರಮೆಗೆ ಒಳಗಾದುದು ನಿಜ. ಬಿಜೆಪಿ ಅವರ ಮನೋಭಾವನೆಗೆ ಒಗ್ಗುವ ಪಕ್ಷವಲ್ಲ. ಇದರಿಂದಲೇ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಸ್ಥಾನ ದೊರೆತಾಗ ಪಕ್ಷ ಚಟುವಟಿಕೆಗಳಿಂದ ದೂರವಾಗಿ ತನ್ನನ್ನು ಪೂರ್ಣವಾಗಿ ಆಯೋಗದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಉತ್ತಮ ವರದಿಯನ್ನು ಸರಕಾರಕ್ಕೆ ನೀಡಿದ್ದಾರೆ ಎನ್ನಲಾಗಿದೆ. ಅನಾಥ ಮಕ್ಕಳಿಗೆ ಶೇಕಡಾ 1ರ ಮೀಸಲಾತಿ, ಕೆಲವು ನಿರ್ಲಕ್ಷಿಸಲ್ಪಟ್ಟ ಚಿಕ್ಕ ಜಾತಿಗಳಿಗೆ ಮೀಸಲಾತಿಯ ಪ್ರಸ್ತಾಪ ಇತ್ಯಾದಿಗಳು ಅವರು ವರದಿಯಲ್ಲಿ ಸೂಚಿಸಿರುವ ಪ್ರಮುಖ ಅಂಶಗಳೆಂದು ತಿಳಿದುಬಂದಿದೆ. 1997ರಲ್ಲಿ ದ.ಕ. ದಿಂದ ಬೇರ್ಪಟ್ಟು ಉಡುಪಿ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬರಲು ಆಗ ಸಚಿವರಾಗಿದ್ದ ಜಯಪ್ರಕಾಶ ಹೆಗ್ಡೆಯವರೇ ಕಾರಣರೆಂಬುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ.

ಕೋಟ ಶ್ರೀನಿವಾಸ ಪೂಜಾರಿ- ಬಿಜೆಪಿ ಅಭ್ಯರ್ಥಿ

ಹಿಂದೆ ಸಚಿವರಾಗಿದ್ದಾಗ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾಗಿದ್ದು, ತನ್ನ ಮನೆಯನ್ನೇ ಅಡವಿಟ್ಟು ಸಕ್ಕರೆ ಕಾರ್ಖಾನೆಯ ಹಿತವನ್ನು ಕಾಪಾಡಿದವರು. ಹೆಗ್ಡೆಯವರು ಕೋವಿಡ್ ಸಮಯದಲ್ಲಿ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಕೇಳಿಕೆಯ ಮೇರೆಗೆ ತನ್ನ ಸಂಪರ್ಕದಿಂದ  ಆಕ್ಸಿಜನ್ ಸಿಲಿಂಡರ್‌ ಗಳನ್ನು ಒದಗಿಸಿದ್ದನ್ನು ನೆನಪಿಸಿ ಕೊಳ್ಳಬಹುದು.

ಒಬ್ಬ ದಕ್ಷ ಸಂಸದ್ ಸದಸ್ಯನು ಲೋಕಸಭೆಯಲ್ಲಿ ತನ್ನ ಕ್ಷೇತ್ರ ಮತ್ತು ರಾಜ್ಯದ ಹಿತಾಸಕ್ತಿಯನ್ನು ಪ್ರತಿನಿಧಿಸಬಲ್ಲನು. ನಮ್ಮ ಹಿಂದಿನ ಸಂಸತ್ ಸದಸ್ಯರು ಲೋಕಸಭೆಯಲ್ಲಿ ಮಾತ್ರ ಮೌನವಾಗಿದ್ದುದರ ಫಲವನ್ನು ರಾಜ್ಯವು ಅನುಭವಿಸಿದೆ. ರಾಜ್ಯಕ್ಕೆ ಬರಬೇಕಾಗಿದ್ದ ಅರ್ಹ ತೆರಿಗೆಯ ಪಾಲು, ಬರ ಪರಿಹಾರದ ಹಕ್ಕಿನ ಅನುದಾನವು ಸಿಗದಾಗಲೂ ಮೌನವಾಗಿದ್ದುದು ಅಕ್ಷಮ್ಯ. ಆದರೆ ಹೆಗ್ಡೆಯವರಂತಹವರು ಜನಪ್ರತಿನಿಧಿಗಳಾದರೆ ಖಂಡಿತವಾಗಿಯೂ ಈ ರೀತಿಯ ಅಚಾತುರ್ಯಗಳು ನಡೆಯಲಾರವು. ಪಕ್ಷಕ್ಕಿಂತಲೂ ನಮ್ಮ ಪ್ರತಿನಿಧಿಸುವ ವ್ಯಕ್ತಿಯ ಚಾರಿತ್ರ್ಯ, ಸಂವಹನ ಕೌಶಲ್ಯ, ಅನುಭವ ಮುಖ್ಯವಾಗುತ್ತದೆ. ಈ ದೃಷ್ಟಿಯಿಂದ ಕಳೆದ ನಾಲ್ಕು ದಶಕಗಳಿಂದ ರಾಜಕೀಯ ಕ್ಷೇತ್ರದಲ್ಲಿ ಗಳಿಸಿದ ಹೆಗ್ಡೆಯವರ ಅನುಭವ ಖಂಡಿತಾ ಉಪಯುಕ್ತವಾಗುತ್ತದೆ. ಕ್ಷೇತ್ರದ ಅಭಿವೃದ್ಧಿಗೆ ಜನಪ್ರತಿನಿಧಿಯ ಒಳನೋಟಗಳು, ದಕ್ಷತೆ, ಚಾರಿತ್ರ್ಯಗಳು ಬಹು ಮುಖ್ಯವಾಗುತ್ತವೆ. ಮತದಾರರು ಇದನ್ನು ಗಮನಿಸದಿದ್ದರೆ ಮತ್ತೆ ಐದು ವರ್ಷ ಕ್ಷೇತ್ರವು ಹಿಂದುಳಿಯುತ್ತದೆ. ಮಾತಿನಲ್ಲೆ ಮನೆಕಟ್ಟುವ ರಾಜಕಾರಣಿಗಳಿಗಿಂತ ಯೋಜನೆಗಳನ್ನು ಪರಿಣಾಮಕಾರಿಯಾಗಿ ಸಮಯ ಬದ್ಧತೆಯಿಂದ ಅನುಷ್ಠಾನ ಮಾಡುವವರು ನಮಗೆ ಬೇಕು.

ಎಲ್ಲಕ್ಕಿಂತಲೂ ಮುಖ್ಯವಾಗಿ ಕೋಮು ಭಾವನೆ ಹೆಚ್ಚುತ್ತಿರುವ ಇಂದು ಉಡುಪಿ ಚಿಕ್ಕಮಗಳೂರಿನಲ್ಲಿ ದಕ್ಷತೆ ಒಳನೋಟವುಳ್ಳ ಜಾತ್ಯತೀತ ಮತ್ತು ಪುರೋಗಾಮಿ  ಮನೋಭಾವವುಳ್ಳ ಸಾಮರಸ್ಯದ ಮೇಲೆ ನಂಬಿಕೆ ಇರುವ ಜನಪ್ರತಿನಿಧಿಯ ಅಗತ್ಯವಿದೆ. ಈ ದೃಷ್ಟಿಯಿಂದ ಜಯಪ್ರಕಾಶ್ ಹೆಗ್ಡೆಯವರು ಖಂಡಿತಾ ಅತ್ಯುತ್ತಮ ಆಯ್ಕೆ.

ಡಾ.ಗಣನಾಥ ಎಕ್ಕಾರು

ಜಾನಪದ ವಿದ್ವಾಂಸರು

ಇದನ್ನೂ ಓದಿ- ಮೋದಿಯವರೇ, ನಾಲಿಗೆ ಬಿಗಿಹಿಡಿದು ಮಾತನಾಡಿ

More articles

Latest article