ಸಾಂವಿಧಾನಿಕ ಆಶಯಕ್ಕೆ ಬದ್ಧತೆಯುಳ್ಳ ರಾಜಕಾರಣಿ ಜಯಪ್ರಕಾಶ ಹೆಗ್ಡೆ

Most read

ಹೆಗ್ಡೆಯವರ ರಾಜಕಾರಣದಲ್ಲಿ ಮೆಚ್ಚುಗೆಯಾಗುವ ಅಂಶವೆಂದರೆ ಸಾಂವಿಧಾನಿಕ ಆಶಯವನ್ನು ಕಾರ್ಯಗತಗೊಳಿಸುವ ದರ್ಶಕತ್ವ. ರಾಜಕಾರಣದಲ್ಲಿ ಈ ಗುಣವಿರದೆ ಸಾಂವಿಧಾನಿಕ ಪ್ರಜಾಪ್ರಭುತ್ವವು ಅರ್ಥಹೀನವಾಗುತ್ತದೆಪ್ರೊ. ಫಣಿರಾಜ್‌, ಚಿಂತಕರು.

ಒಬ್ಬ ರಾಜಕಾರಣಿಯ ಹೆಗ್ಗಳಿಕೆಯನ್ನು ‘ಇವರು ಸರಳ, ಸಜ್ಜನ, ಸಚ್ಚಾರಿತ್ರ್ಯ ವುಳ್ಳ ಮನುಷ್ಯ’ ಎಂದು ಪ್ರಾರಂಭಿಸುವುದು ಅರ್ಥಹೀನ ವಾಡಿಕೆಯಾಗಿ ಹೋಗಿದೆ. ರಾಜಕಾರಣದಲ್ಲಿರುವ ಮಂದಿಯ ಸರಳತೆ-ಸಜ್ಜನಿಕೆಗಳು ಅವರನ್ನು ಸ್ವಹಿತದ ಭ್ರಷ್ಟಚಾರದಿಂದ ಕಾಪಾಡುತ್ತವೆ, ಜನರು ನಿರಾತಂಕವಾಗಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಅವಕಾಶ ಮಾಡಿಕೊಡುತ್ತವೆ ಎನ್ನುವುದೇನೋ ಸರಿ. ಆದರೆ, ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ರಾಜಕಾರಣಿಯ ಉತ್ತರದಾಯಿತ್ವ ಇರಬೇಕಾದ್ದು ಸಂವಿಧಾನದ ಆಶಯಗಳನ್ನು ಜನರ ಬದುಕಿನ ಕಲ್ಯಾಣಕ್ಕಾಗಿ ಕಾರ್ಯಾನುಷ್ಠಾನ ಮಾಡುವಲ್ಲಿ; ಅದಕ್ಕೆ ಅಗತ್ಯವಾದ ಬದ್ಧತೆ, ಮುತ್ಸದ್ಧಿತನ ಹಾಗು ಚುರುಕಾದ ಮುಂಗಾಣ್ಕೆಯ ಗುಣಗಳು ಪ್ರಜಾಪ್ರತಿನಿಧಿಯಲ್ಲಿ ಇರದೇ ಇದ್ದರೆ, ರಾಜಕಾಣಿಯ ಸರಳ-ಸಜ್ಜನಿಕೆಗಳು ಪ್ರಜೆಗಳ ಮಟ್ಟಿಗೆ ಬೊಚ್ಚು ಬಾಯಿ ಇದ್ದಂತೆ. 

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಯವರ  ಪ್ರಜಾಪ್ರಾತಿನಿಧ್ಯ ಸಾಮರ್ಥ್ಯವನ್ನು ಅಳಿಯಲು ಈ ಸ್ಪಷ್ಟತೆ ಖಂಡಿತ ಅಗತ್ಯವಿದೆ. ಹೆಗ್ಡೆಯವರು ವಾಡಿಕೆಯ ಅರ್ಥದ ‘ಸರಳ ಸಜ್ಜನ’ ರು ಖಂಡಿತ ಹೌದು- ಆ ಗುಣಗಳಿಂದಾಗಿ ಅವರಿಗೆ ಮಧ್ಯವರ್ತಿಗಳ ಅವಶ್ಯಕತೆ ಇಲ್ಲದೆ, ತನ್ನ ಕ್ಷೇತ್ರದ ಸಾಮಾನ್ಯ ಪ್ರಜೆಗಳ ಅಹವಾಲು ಆಲಿಸುವ ಪ್ರಾಮಾಣಿಕತೆ ದಕ್ಕಿದೆ; ಅದರಿಂದ ಅವರಿಗೆ ಜನರ ನೈಜ ಕಷ್ಟಗಳ ಅರಿವು ಎಷ್ಟಾಗಿದೆಯೋ ಅಷ್ಟೇ ಕಿರಿ ಕಿರಿಯಾಗುವಷ್ಟು ಸಾಮಾಜಿಕ ಭ್ರಷ್ಟತೆಯ ಕಂಡು ಬೆಚ್ಚುವ ಅನುಭವವೂ ಆಗಿಹೋಗಿದೆ. ಈ ಅರ್ಥದಲ್ಲಿ ವಾಡಿಕೆಯ ಗುಣವು ಅವರಿಗೆ ಜನಪ್ರತಿನಿಧಿಯೊಬ್ಬನ ಆದ್ಯತೆಗಳು ಏನು ಎನ್ನುವ ಪಾಠಗಳನ್ನು ಕಲಿಸಿದೆ. ಇಂಥ ಪಾಠ ಕಲಿತ ಅನುಭವಿ ರಾಜಕಾರಣಿಗಳು ಸಧ್ಯದ ಪರಿಸರದಲ್ಲಿ ಅಪರೂಪ.

ಜಯಪ್ರಕಾಶ್‌ ಹೆಗ್ದೆ

ಆ ಕಾರಣದಿಂದಾಗಿಯೇ ಹೆಗ್ಡೆಯವರು ಜನರನ್ನು ಪ್ರತಿನಿಧಿಸುವ ಅವಕಾಶ ಗಳಿಸಿದಾಗಲೆಲ್ಲಾ, ದೂರದರ್ಶಿ ಯೋಜನೆಗಳನ್ನು ಕಾರ್ಯಗತಗೊಳಿಸಲು ದುಡಿದಿದ್ದಾರೆ. ಎರಡು ದಶಕಗಳ ಕಾಲ ಶಾಸಕರಾಗಿ, ನಾಲ್ಕು ವರ್ಷ ರಾಜ್ಯ ಸರಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿ ಮತ್ತೂ ಎರಡು ವರ್ಷ ಲೋಕಸಭಾ ಸದಸ್ಯರಾಗಿ ಅವರು ಕಾರ್ಯಾನುಷ್ಠಾನಗೊಳಿಸಿರುವ ಜನಕಲ್ಯಾಣ ಯೋಜನೆಗಳು ಇದಕ್ಕೆ ಪುರಾವೆ ಒದಗಿಸುತ್ತವೆ. ಜನರ ದೈನಂದಿನ ರಾಜ್ಯ ಸಂಬಂಧಿ ಕೆಲಸಗಳಿಗೆ ಅನುಕೂಲವಾಗಲು ಚಿಕ್ಕ ಜಿಲ್ಲೆಗಳ ಅವಶ್ಯಕತೆಯನ್ನು ಮನಗಂಡು ಉಡುಪಿ ಜಿಲ್ಲೆಯ ನಿರ್ಮಾಣಕ್ಕೆ ಮುಂದಾಳತ್ವ ವಹಿಸಿದ್ದು, ಬ್ರಹ್ಮಾವರದಂತಹ ಕೈಗಾರಿಕೆಗಳಿಲ್ಲದ ಪ್ರದೇಶದಲ್ಲಿ ಸಕ್ಕರೆ ಕಾರ್ಖಾನೆಯನ್ನು ಕಾರ್ಯತತ್ಪರತೆಯಿಂದ ಜನೋಪಯೋಗಿಯಾಗುವ ಹಾಗೆ ಮುನ್ನಡೆಸಿದ್ದು, ಮೀನುಗಾರಿಕೆ ಸಚಿವರಾಗಿ ಕರಾವಳಿಯ ಮೀನುಗಾರರಿಗೆ ಬಹುಕಾಲ ಆಸರೆಯಾಗುವ ಯೋಜನೆಗಳನ್ನು ಕಾರ್ಯಗತಗೊಳಿಸಿದ್ದು, ಸಣ್ಣ ರೈತರ ಕೃಷಿಗೆ ಬಹುಕಾಲೀನ ಆಸರೆಯಾಗುವಂತೆ ಕಿರು ಕಿಂಡಿ ಆಣೆಕಟ್ಟುಗಳನ್ನು ನಿರ್ಮಿಸುವ ದರ್ಶಿತ್ವ ತೋರಿದ್ದು, ಸಂಸದರಾಗಿದ್ದ ಕಿರು ಅವಧಿಯಲ್ಲಿ ಕ್ಷೇತ್ರಕ್ಕೆ ಲಭ್ಯವಿದ್ದ ಎಲ್ಲಾ ಯೋಜನಾ ಅನುದಾನಗಳನ್ನು ಸಕ್ಷಮವಾಗಿ ತಂದು ಜನಪಯೋಗಿ ಕೆಲಸಗಳನ್ನು ಮಾಡಿದ್ದು- ಇತ್ಯಾದಿ ಸಾಧನೆಗಳ ಪಟ್ಟಿಯನ್ನು ಅವರ ಎದೆಗೆ ಪದಕವಾಗಿ ಹಾಕಬಹುದು. ಅದಕ್ಕಿಂತ ಮುಖ್ಯವಾದದ್ದು, ಈ ಕಾರ್ಯಯೋಜನೆಗಳ ಹಿಂದಿದ್ದ ಉದ್ದೇಶ: ಅಧಿಕಾರಹೀನರಾದ ಬಹುಜನರಿಗೆ ಸಮಾನ ಅವಕಾಶ ಹಾಗು ಸ್ಥಾನಮಾನಗಳು ದಕ್ಕುವಂತೆ ಮಾಡುವ ಸಾಮಾಜಿಕ ನ್ಯಾಯದ ಪರಿಕಲ್ಪನೆ. ಹೆಗ್ಡೆಯವರ ರಾಜಕಾರಣದಲ್ಲಿ ಮೆಚ್ಚುಗೆಯಾಗುವ ಅಂಶವೆಂದರೆ ಈ ಸಾಂವಿಧಾನಿಕ ಆಶಯವನ್ನು ಕಾರ್ಯಗತಗೊಳಿಸುವ ದರ್ಶಕತ್ವ. ರಾಜಕಾರಣದಲ್ಲಿ ಈ ಗುಣವಿರದೆ ಸಾಂವಿಧಾನಿಕ ಪ್ರಜಾಪ್ರಭುತ್ವವು ಅರ್ಥಹೀನವಾಗುತ್ತದೆ.

ಪ್ರೊ. ಫಣಿರಾಜ್‌

ಚಿಂತಕರು

ಇದನ್ನೂ ಓದಿ- http://“ದೇಶ ನಮ್ಮಆಯ್ಕೆ -ದ್ವೇಷವಲ್ಲ” https://kannadaplanet.com/country-is-our-choice-not-hatred/

More articles

Latest article