ಬ್ರಹ್ಮಾವರ : ವಿಶ್ವಮಾನವ ಹಕ್ಕುಗಳ ಪಕ್ಷಾಚರಣೆ ಅಂಗವಾಗಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ (ರಿ) ಕರ್ನಾಟಕ – ಕೇರಳ ಮಹಿಳೆಯರು ಹಾಗೂ ಹೆಣ್ಣು ಮಕ್ಕಳ ಮೇಲಿನ ಹಿಂಸೆ ಹಾಗೂ ದೌರ್ಜನ್ಯದ ವಿರುದ್ಧ ಆಂದೋಲನದ ಸಮಾರೋಪ ಸಮಾರಂಭ ಬ್ರಹ್ಮಾವರ ತಾಲೂಕಿನ ಹಂದಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನೆರವೇರಿತು. ಸಮಾರಂಭದ ಅಂಗವಾಗಿ ಬ್ರಹ್ಮಾವರ ಬಸ್ ನಿಲ್ದಾಣದಿಂದ ಹಂದಾಡಿ ಗ್ರಾಮ ಪಂಚಾಯತ್ ವರೆಗೆ ಹಮ್ಮಿಕೊಳ್ಳಲಾಗಿದ್ದ ಜಾಥಾಗೆ ಹಂದಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶೋಭಾ ಪೂಜಾರಿ ಚಾಲನೆ ನೀಡಿದರು.
ಹಂದಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಮಾರಂಭವನ್ನು ಹಂದಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶೋಭಾ ಪೂಜಾರಿ ಉದ್ಘಾಟಿಸಿದರು. ಸಭೆಯಲ್ಲಿ ಮಾತನಾಡಿದ ಉಪ ತಹಶೀಲ್ದಾರ್ ರಾಮಚಂದ್ರ ಅವರು ಸಂಘಟನೆಯ ಮುಖಾಂತರ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ಸುಶೀಲ ನಾಡ ಮಾತನಾಡಿ ವಿಶ್ವಮಾನವ ಹಕ್ಕುಗಳು ಹಾಗೂ ಮಹಿಳೆಯರು ಮತ್ತು ಮಕ್ಕಳ ಸಾಮಾಜಿಕ ಸಮಸ್ಯೆ,ಆರೋಗ್ಯ, ದೌರ್ಜನ್ಯಗಳ ಇತಿಹಾಸವನ್ನು ಪರಿಚಯಿಸಿದರು. 1949 ರ ಡಿಸೆಂಬರ್ 10 ರಿಂದ ಮಾನವ ಹಕ್ಕುಗಳ ದಿನಾಚರಣೆಯನ್ನು ಆಚರಿಸುತ್ತಾ ಬರಲಾಗಿದೆ. ಮೂಲಭೂತ ಹಕ್ಕುಗಳಿಗೆ ಚ್ಯುತಿ ಬಂದಲ್ಲಿ ಅವುಗಳನ್ನು ರಕ್ಷಿಸುವ ಸಲುವಾಗಿ ಕಾನೂನುಗಳನ್ನು ರೂಪಿಸಲಾಗಿದೆ ಜಾತಿ, ಲಿಂಗ, ಧರ್ಮದ ಆಧಾರದಲ್ಲಿ ಯಾವುದೇ ರೀತಿಯ ಶೋಷಣೆಗಳನ್ನು ಮಾಡುವಂತಿಲ್ಲ. ಒಂದು ವೇಳೆ ಅವುಗಳ ಚ್ಯುತಿಯಾದಲ್ಲಿ ಕಾನೂನುಗಳ ರಕ್ಷಣೆ ಪಡೆಯಬಹುದಾಗಿದೆ ಎಂದರು.
ಮಾನವ ಹಕ್ಕುಗಳನ್ನು ರಕ್ಷಿಸುವ ಸಲುವಾಗಿ ರಕ್ಷಿಸುವ ನಿಟ್ಟಿನಲ್ಲಿ ವಿಶ್ವಮಾನವ ಹಕ್ಕುಗಳ ಪಕ್ಷಾಚರಣೆ ಆಚರಿಸಲಾಗುತ್ತದೆ. ಸಾಮಾಜಿಕ ಸ್ಥರದಲ್ಲಿ ಅತ್ಯಂತ ಕೆಳ ಸಮುದಾಯವಾದ ಕೊರಗ ಸಮುದಾಯವು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಡಲು ಮುಂದಾಗಿರುವುದು ಹೆಮ್ಮೆಯ ಸಂಗತಿ. ಆದರೂ ಮಹಿಳೆಯರ ಮೇಲಿನ ಶೋಷಣೆ ನಿಂತಿಲ್ಲಎಂದು ವಿಷಾದಿಸಿದರು.
ಸಾಮಾಜಿಕ ಪಿಡುಗುಗಳನ್ನು ಹೋರಾಟಗಳ ಮೂಲಕ ಹಾಗೂ ಪ್ರತಿಭಟನೆಗಳ ಮೂಲಕ ಹೋಗಲಾಡಿಸಬೇಕು.ಇಂತಹ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವುದರ ಮೂಲಕ ಸಾಮಾಜಿಕ ಪಿಡುಗುಗಳನ್ನು ತೊಡೆದು ಹಾಕುವಲ್ಲಿ ನಿರತರಾಗಬೇಕು.ಅಧಿಕಾರಿಗಳ ಇಚ್ಛಾ ಶಕ್ತಿಯೊಂದಿಗೆ ಇಂತಹ ಅನೇಕ ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸಬಹುದಾಗಿದೆ ಎಂದರು. ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಒಕ್ಕೂಟದ ಖಜಾಂಚಿ ವಿನಯ ಅಡ್ವೆ ಮಾತನಾಡಿ ದೌರ್ಜನ್ಯ ಹಾಗೂ ಶೋಷಣೆ ಅನುಭವಿಸುತ್ತಿದ್ದರೂ ಹೇಳಿಕೊಳ್ಲೂವ ಪರಿಸ್ಥಿತಿಯಲ್ಲಿ ಅವರಿಲ್ಲ. ಅವರಲ್ಲಿ ಅರಿವು ಮೂಡಿಸಿದರೆ ಜಾಗೃತಿ ಉಂಟಗಬಹುದು ಎಂದರು.