ಕೊಳೆತ ದೇಹವನ್ನು ಕುಕ್ಕಿ ತಿಂದಿದ್ದು ಯಾವ ಸಂಸ್ಕೃತಿ ಮಿಸ್ಟರ್‌ ಜಗ್ಗೇಶ್

Most read

ಪ್ರಿಯ ಜಗ್ಗೇಶ್,

ನಿನ್ನೆ ನಿರ್ದೇಶಕ ಗುರುಪ್ರಸಾದ್ ಸಾವಿನ ಸುದ್ದಿ ಕೇಳುತ್ತಿದ್ದಂತೆ ಟಿವಿ ಆನ್ ಮಾಡಿದಾಗ ನೀವು ಫೋನೋದಲ್ಲಿ ಮಾತಾಡುವುದನ್ನು ಕೇಳಿಸಿಕೊಂಡೆ. ಬಹುಶಃ ಅದು ನಿಮ್ಮ ಮೊದಲ ರಿಯಾಕ್ಷನ್. ಅದಾದ ಮೇಲೆ ಹಲವು ಟಿವಿಗಳ ಜೊತೆ ಮಾತಾಡಿದ್ರಿ. ನೇರವಾಗಿ ಹಲವು ಟಿವಿಗಳಿಗೆ ಬೈಟ್‌ ಕೂಡ ಕೊಟ್ಟಿರಿ. ಎಲ್ಲದರ ಸಾರಾಂಶ ಒಂದೇ ಆಗಿತ್ತು.

ಆತ ಅತ್ಯಂತ ದಾರುಣವಾದ ಸಾವನ್ನು ತಂದುಕೊಂಡರು. ಮೂರು ನಾಲ್ಕು ದಿನ ದೇಹ ನೇತುಬಿದ್ದು ಕೊಳೆತು ನಾರಿತು. ಒಬ್ಬ ಮನುಷ್ಯ ಅಷ್ಟು ಹೀನಾಯವಾಗಿ ಸತ್ತ ನಂತರವೂ ಆತನ ಮೇಲೆ ವಿಷ ಕಾರುವುದು, ಇನ್ನಷ್ಟು ದಾಳಿ ಮಾಡುವುದರಲ್ಲಿ ಏನಾದರೂ ಅರ್ಥವಿದೆಯಾ? ಆತ ಆತ್ಯಹತ್ಯೆ ಮಾಡಿಕೊಂಡು ಹೊರಟುಹೋದ. ನೀವು ಸತ್ತವನನ್ನು ಮತ್ತೆ ಮತ್ತೆ ಇರಿದು ಕೊಂದಿರಿ. ನಿಮ್ಮ ಮಾತುಗಳನ್ನು ಕೇಳಿದವರಿಗೆ ಗುರುಪ್ರಸಾದ್ ಕುರಿತು ಯಾರಿಗೂ ಸಣ್ಣ ಗೌರವವೂ ಹುಟ್ಟಲು ಸಾಧ್ಯವಿಲ್ಲ. ಅಷ್ಟು ನಿಷ್ಕರುಣೆಯಿಂದ ಪೋಸ್ಟ್ ಮಾರ್ಟಂ ಮಾಡಿಬಿಟ್ಟಿರಿ. ಇದೆಲ್ಲ ಬೇಕು ಅಂತಲೇ ನೀವು ಮಾಡಿದಿರಿ. ನಿಮ್ಮೆಲ್ಲ ಸೇಡನ್ನು ಕೊಳೆತು ನಾರುತ್ತಿದ್ದ ಹೆಣದ ಮೇಲೆ ತೀರಿಸಿಕೊಂಡಿರಿ. ಇದೆಲ್ಲ ಬೇಕಿತ್ತಾ ಜಗ್ಗೇಶ್?

ನೀವೇ ಹೇಳಿಕೊಳ್ಳುವಂತೆ ಮಹಾ ಧರ್ಮಭೀರು ನೀವು. ರಾಘವೇಂದ್ರ ಸ್ವಾಮಿಗಳ ಪರಮಭಕ್ತ. ಸನಾತನ ಸಂಸ್ಕೃತಿಯ ರಕ್ಷಕ. ನಿಮಗೊಂದು ಸಣ್ಣ ಕಥೆ ಹೇಳುತ್ತೇನೆ. ರಾಮಾಯಣದಲ್ಲಿ ರಾವಣ ಸತ್ತು‌ನೆಲಕ್ಕೆ ಬಿದ್ದಮೇಲೆ, ರಾಮ ಮಾಡುವ ಮೊದಲ ಕೆಲಸ ಏನು ಗೊತ್ತೆ? ರಾಮ ಸೀದಾ ರಾವಣನ ಮೃತದೇಹಕ್ಕೆ ನಮಸ್ಕಾರ ಮಾಡುತ್ತಾನೆ. ಇವನು ಪರಮನೀಚ, ಇವನ ಅಂತ್ಯಸಂಸ್ಕಾರ ನಾನು ಮಾಡುವುದಿಲ್ಲ ಎಂದು ರಾವಣನ ತಮ್ಮ ವಿಭೀಷಣ ಹೇಳುತ್ತಾನೆ. ಸತ್ತವರ ಬಗ್ಗೆ ನಾವು ಕ್ರೂರವಾಗಬಾರದು, ನಿನ್ನ ನಿಲುವು ತಪ್ಪು ಎಂದು ರಾಮ ವಿಭೀಷಣನನ್ನು ಮನ ಒಲಿಸುತ್ತಾನೆ. ರಾಮನೇ ಜೊತೆಗೆ ನಿಂತು ವಿಭೀಷಣನಿಂದಲೇ ರಾವಣನ ಅಂತ್ಯಸಂಸ್ಕಾರ ನೆರವೇರುವಂತೆ ಮಾಡುತ್ತಾನೆ. ಇದ್ದಾಗಷ್ಟೇ ಹಗೆತನ, ಸತ್ತಮೇಲೆ ಯಾವ ವೈಷಮ್ಯ ಎಂದು ರಾಮ ಸಾರಿ ಹೇಳಿದ್ದನು.

ಪ್ರಿಯ ಜಗ್ಗೇಶ್, ನೀವು ರಾಮಾಯಣವನ್ನೂ ಸರಿಯಾಗಿ ಓದಿಕೊಂಡಿಲ್ಲ ಅನಿಸುತ್ತೆ, ಇರಲಿಬಿಡಿ. ನಿಮ್ಮ ಸಂದರ್ಶನಗಳಲ್ಲಿ ನೀವು ಕೆಲಸ ಮಾಡಿದ ಸಿನಿಮಾಗಳ ನಿರ್ದೇಶಕರ ಬಗ್ಗೆ ಮಾತನಾಡಿದಿರಿ. ಅವರು ಕಲಿಸಿಕೊಟ್ಟ ಪಾಠಗಳ ಕುರಿತು ಮಾತನಾಡಿದಿರಿ. ಆಹಾ, ಕೇಳುವುದಕ್ಕೆ ಎಷ್ಟು ಚಂದ? ಇಷ್ಟೆಲ್ಲ ಬದುಕಿನ ಪಾಠ ಹೇಳಿಕೊಟ್ಟ ನಿರ್ದೇಶಕರುಗಳು ಇದೊಂದು ಪಾಠ ಯಾಕೆ ಹೇಳಿಕೊಡಲಿಲ್ಲ? ಶತ್ರುಗಳೇ ಆದರೂ ಸತ್ತವರ ಹೆಣಗಳ ಮೇಲೆ ಹದ್ದುಗಳ ಹಾಗೆ ಎರಗಬಾರದು ಅಂತ ಒಂದೇಒಂದು ಸಾಲು ಅವರು ನಿಮಗೆ ಹೇಳಿಕೊಡಬೇಕಿತ್ತು.

ಸತ್ತವರ ಬಗ್ಗೆ ಕ್ರೂರವಾಗಿರಬಾರದು ಎಂಬುದು ಆಡುಮಾತು. ನಿಮ್ಮಂಥವರೇ ಅದನ್ನು ನಮ್ಮ ಸಂಸ್ಕೃತಿ ಎನ್ನುತ್ತೀರಿ. ಸತ್ತವರ ಬಗ್ಗೆ ಕೇವಲ ಒಳ್ಳೆಯದನ್ನೇ ಮಾತಾಡಬೇಕು ಎಂದು ಹಲವರು ಹೇಳುತ್ತಾರೆ. ಆದರೆ ಅದನ್ನು ನಾನು ಒಪ್ಪುವುದಿಲ್ಲ. ಮನುಷ್ಯ ಕ್ರೂರಿಯಾಗಿದ್ದಾಗ, ಹಂತಕನಾಗಿದ್ದಾಗ, ಲಂಪಟನಾಗಿದ್ದಾಗ ಅವನ ಬಗ್ಗೆ ಕೇವಲ‌ ಒಳ್ಳೆಯದನ್ನು ಮಾತನಾಡಲು ಸಾಧ್ಯವಿಲ್ಲ. ಆದರೆ ನೀವು ಎಲ್ಲ ಎಲ್ಲೆಯನ್ನೂ ಮೀರಿದಿರಿ.

ಪ್ರಿಯ ಜಗ್ಗೇಶ್, ನಿಮ್ಮ ಹೆಚ್ಚು ಸಿನಿಮಾಗಳನ್ನು ನೋಡಿದವನಲ್ಲ ನಾನು. ತಮಾಶೆ ಏನು ಗೊತ್ತೆ, ನೀವು ತುಂಬ ಇಷ್ಟವಾಗಿದ್ದು ಮಠ ಮತ್ತು ಎದ್ದೇಳು ಮಂಜುನಾಥ ಸಿನಿಮಾಗಳಿಂದ! ಆ ಎರಡೂ ಸಿನಿಮಾಗಳನ್ನು ನಿರ್ದೇಶಿಸಿದ್ದು ಇದೇ ಗುರುಪ್ರಸಾದ್. ನಾನು ಏನನ್ನು ಹೇಳಲುಹೊರಟೆ ಎಂಬುದು ನಿಮಗೆ ಅರ್ಥವಾಗಿರಬಹುದು. ಅದೇ ಚರ್ವಿತ ಚರ್ವಣ ಡಬ್ಬಲ್ ಮೀನಿಂಗ್ ಸಿನಿಮಾಗಳಿಂದ ನಿಮ್ಮನ್ನು ಹೊರಗೆ ತಂದು, ನಿಮ್ಮೊಳಗಿನ ಒಬ್ಬ ಉತ್ತಮ ನಟನನ್ನು ನಮ್ಮೆದುರು ನಿಲ್ಲಿಸಿದ್ದು ಇದೇ ಗುರುಪ್ರಸಾದ್. ಆ ಕೃತಜ್ಞತೆಯೂ ನಿಮಗೆ ಇಲ್ಲವಾಯಿತಾ ಜಗ್ಗೇಶ್? ಇದೇನಾ ಸಂಸ್ಕೃತಿ? ಗುರು ರಾಘವೇಂದ್ರಸ್ವಾಮಿಯಾದರೂ ಇದನ್ನು ಒಪ್ಪುತ್ತಾರೆಯೇ?

ಗುರುಪ್ರಸಾದ್ ಕುರಿತು ನಿನ್ನೆ ನೀವು ಟೀವಿಗಳಲ್ಲಿ ಹೇಳಿದ ವಿಷಯಗಳೆಲ್ಲ ನಿಜವೇ ಆಗಿರಬಹುದು. ಆದರೆ ಅದನ್ನೆಲ್ಲ ಹೇಳಲು ನಿಮಗೆ ಆತ ಸತ್ತ ಎಂದು ಅನೌನ್ಸ್ ಆದ ಮರುಕ್ಷಣವೇ ಬೇಕಾಗಿತ್ತಾ? ಆತ ಜೀವಂತ ಇದ್ದಾಗ ಇದೆಲ್ಲ ನೀವು ಮಾತಾಡಬಹುದಿತ್ತಲ್ಲ, ಯಾಕೆ ಮಾತಾಡಲಿಲ್ಲ? ಆಗ ಮೌನವಾಗಿ ಸಹಿಸಿಕೊಂಡವರು ಈಗಲೂ ಮೌನವಾಗಿ ಇದ್ದುಬಿಡಬಹುದಿತ್ತಲ್ಲ? ಈಗ ನೀವು ಏನೇನನ್ನು ಹೇಳುತ್ತಿದ್ದೀರೋ ಅದಕ್ಕೆ ಒಂದು ಸಣ್ಣ ಸ್ಪಷ್ಟನೆ ಕೊಡಲೂ ಆ ಜೀವ ಬದುಕಿಲ್ಲವಲ್ಲ? ತೀರಾ ಮುಂದುವರೆದು ಹೇಳುವುದಾದರೆ ಇದೆಲ್ಲ ಮಾತನಾಡಲೆಂದೇ ನೀವು ಆತನ ಸಾವಿಗೆ ಕಾದು ಕುಳಿತಿದ್ದಿರಾ?

ಪ್ರಿಯ ಜಗ್ಗೇಶ್, ನೀವು, ನಾನು ಎಲ್ಲರೂ ಸಾಯ್ತೀವಿ. ಜಗತ್ತಿನ ಎಲ್ಲ ಜೀವಿಗಳಿಗೂ ಸಾವಿದೆ. ಯಾರೇ ಸತ್ತರೂ ಅವರಿಗೊಂದು ಘನತೆಯ ವಿದಾಯ ಬೇಕು. ಒಬ್ಬ ಮನುಷ್ಯ ಪೂರ್ತಿ ಕೆಟ್ಟವ, ಪೂರ್ತಿ ಒಳ್ಳೆಯವನಾಗಿರಲು ಸಾಧ್ಯವಿಲ್ಲ. ಎಲ್ಲರೂ ಒಳಿತು, ಕೆಡುಕು ಎರಡರ ಮಿಕ್ಸ್ಚರ್ ಗಳೇ. ಯಾವುದರ ಪ್ರಮಾಣ ಎಷ್ಟು ಎಂಬುದಷ್ಟೇ ನಮ್ಮ ನಡುವಿನ ವ್ಯತ್ಯಾಸಗಳು. ನಮ್ಮಲ್ಲಿ ಯಾರೂ ದೈವಾಂಶಸಂಭೂತರಿಲ್ಲ. ಎಲ್ಲರೂ ಮನುಷ್ಯರೇ, ಮನುಷ್ಯರಾಗಿಯೇ ಬದುಕಬೇಕು, ಮನುಷ್ಯರಾಗಿಯೇ ಸಾಯಬೇಕು. ಇದೆಲ್ಲ ನಿಮಗೆ ಯಾವಾಗ ಅರ್ಥವಾಗೋದು?

ಕೊನೆಗೊಂದು ಮಾತು: ಆಪರೇಷನ್ ಕಮಲ ಎಂಬ ಪರಮಭ್ರಷ್ಟ ಕೊಳಕು ಸಂಪ್ರದಾಯ ಆರಂಭಗೊಂಡಾಗ, ನೀವು ಗೆದ್ದ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ನಿಮ್ಮ ಎಂಎಲ್ ಎ ಸ್ಥಾನವನ್ನು ಮಾರಿಕೊಂಡಿರಿ. ನೀವು ಮಾರಿದ್ದು ಕೇವಲ ನಿಮ್ಮ ಶಾಸಕ ಸ್ಥಾನವನ್ನಲ್ಲ, ನಿಮ್ಮನ್ನು ಚುನಾಯಿಸಿದ ಜನರ ಮತಗಳನ್ನೂ ಕೂಡ! ಇದಕ್ಕಿಂತ ರಾಜಕೀಯ ಹಾದರ ಇನ್ನೊಂದಿರಲು ಸಾಧ್ಯವಿಲ್ಲ. ಮತ್ತೆ ಚುನಾವಣೆಗೆ ನಿಂತಾಗ ನಿಮ್ಮ ಕ್ಷೇತ್ರದ ಜನರು ಭರ್ಜರಿ ಸೋಲಿನ ಗಿಫ್ಟ್ ಕೊಟ್ಟರು, ಅದು ಬೇರೆ ವಿಷಯ. ಗುರುಪ್ರಸಾದ್ ಮಾಡಿದ ಒಂದೆರಡು ಕೋಟಿ ರುಪಾಯಿಗಳ ಸಾಲ, ಮೋಸಕ್ಕೆ ಹೋಲಿಸಿದರೆ ನೀವು ಮಾಡಿದ್ದು ಅದಕ್ಕೆ ನೂರಾರುಪಟ್ಟು ದೊಡ್ಡ ಮಹಾವಂಚನೆ. ಒಮ್ಮೆ ಎದೆಮುಟ್ಟಿಕೊಂಡು ರಾಘವೇಂದ್ರ ಸ್ವಾಮಿ ಮೇಲೆ ಆಣೆ ಮಾಡಿಹೇಳಿ, ನಿಮ್ಮ ಎಂಎಲ್ಎ ಸ್ಥಾನ ಮಾರಿಕೊಳ್ಳಲು ಎಷ್ಟು ದುಡ್ಡು ತಗೊಂಡಿರಿ? ಪುಗಸಟ್ಟೆ ಶಾಸಕ ಸ್ಥಾನ ಯಾರೂ ಕಳೆದುಕೊಳ್ಳುವುದಿಲ್ಲ. ನಿಮ್ಮನ್ನು ನೀವು ಮಾರಿಕೊಳ್ಳಲು ಎಷ್ಟು ದುಡ್ಡು ಪಡೆದಿರಿ? ಯಾವಾತ್ತಾದ್ರೂ ಉತ್ತರ‌ ಕೊಡ್ತೀರಾ?

ಸೋಷಿಯಲ್ ಮೀಡಿಯಾದಲ್ಲಿ ನಿನ್ನೆಯ ನಿಮ್ಮ ಮಾತುಗಳಿಗೆ ಏನೇನು ಕಮೆಂಟುಗಳು ಬರ್ತಾ ಇವೆ, ಒಂದು ಸಾರಿ ಗಮನಿಸಿನೋಡಿ.

ನಿಮಗೆ ಆ ಗುರುರಾಘವೇಂದ್ರ ಸ್ವಾಮಿ ಒಳ್ಳೆಯ ಬುದ್ಧಿ ಕೊಟ್ಟು ಕರುಣಿಸಲಿ.

ನಮಸ್ಕಾರಗಳು

-ದಿನೇಶ್ ಕುಮಾರ್ ಎಸ್.ಸಿ.

More articles

Latest article