ಅಪ್ಪ ಅರಣ್ಯ ಇಲಾಖೆ ಸೇರಿದರು
ಅಪ್ಪ ವೃತ್ತಿ ಮೇಳ ಸೇರಿ ಅದಾಗಲೇ ಮೂರು ವರ್ಷ ಕಳೆದಿತ್ತು. ಈ ಅವಧಿಯಲ್ಲಿ ಅವರು ಸುಮಾರು ಮೂರು ಯಕ್ಷಗಾನ ಮೇಳಗಳಲ್ಲಿ, ವಿವಿಧ ರೀತಿಯ ಪಾತ್ರಗಳನ್ನು ಮಾಡುತ್ತ ಒಬ್ಬ ಯಶಸ್ವಿ ಕಲಾವಿದನಾಗಿ ರೂಪುಗೊಂಡರು, ಯಕ್ಷಗಾನ ಅಭಿಮಾನಿಗಳಿಗೆ ಅವರು ಸುಪರಿಚಿತರಾದರು.
ಕಾಲ ಸರಿಯಿತು, ಅಪ್ಪನಿಗೆ ವಯಸ್ಸು 24 ದಾಟಿತು, ಅದು ಆಗ ಮದುವೆಯ ವಯಸು. ಈ ಕಾಲಕ್ಕೆ ಭಿನ್ನವಾಗಿ, 1950 ರ ಆ ಕಾಲದಲ್ಲಿ ಎಲ್ಲ ವೃತ್ತಿಗಳವರೂ ಬಡವರೇ ಆಗಿದ್ದರು. ʼಬಡ ಮೇಷ್ಟ್ರುʼ, ʼಬಡ ಕಲಾವಿದʼ ಹೀಗೆ. ಹಾಗಾಗಿ ಮೇಳದಲ್ಲಿ ಬಣ್ಣ ಹಾಕುವ ಈ ʼಬಡ ಕಲಾವಿದʼನಿಗೆ ಯಾರು ಹೆಣ್ಣು ಕೊಡುತ್ತಾರೆ? ಕೊಟ್ಟರೂ ತಮ್ಮ ಮಗಳನ್ನು ಸಾಕುವ ಆರ್ಥಿಕ ಸಾಮರ್ಥ್ಯ ಆತನಿಗೆ ಇರುತ್ತದೋ ಎಂಬ ಅನುಮಾನ, ಚಿಂತೆ ಅವರಲ್ಲಿ ಇರುವುದು ಸಹಜವೇ ಅಲ್ಲವೇ?
ದೇವರಗುಂಡ ಕುಟುಂಬದವರಿಗೂ ಇದೇ ಚಿಂತೆ ಇದ್ದಿರಬಹುದು. ಜತೆಗೆ ಆ ಸಮಸ್ಯೆಯನ್ನು ಪರಿಹರಿಸುವ ವಿಷಯದಲ್ಲಿ ಅವರದೇ ಆದ ಒಂದು ಯೋಜನೆಯೂ ಅವರಲ್ಲಿ ಇದ್ದಿರಬಹುದೋ ಏನೋ. ಹಾಗಾಗಿ ಅವರು ಹೆಣ್ಣು ಕೊಡಲು ಮುಂದೆ ಬಂದರು. ಕೊನೆಗೂ 1951 ರಲ್ಲಿ ಮುದಿಯಾರು ರಾಮಪ್ಪ ಗೌಡರಿಗೂ ದೇವರಗುಂಡ ವೆಂಕಮ್ಮ ಅವರಿಗೂ ಮದುವೆಯಾಯಿತು.
ಮದುವೆಯ ಮಾರನೇ ವರ್ಷವೇ ಅಪ್ಪನಿಗೆ ಅರಣ್ಯ ಇಲಾಖೆಯಲ್ಲಿ ಉದ್ಯೋಗ ದೊರೆಯಿತು! ಆರನೇ ಕ್ಲಾಸಿನ ಶಿಕ್ಷಣವನ್ನಷ್ಟೇ ಪಡೆದಿದ್ದ ಮತ್ತು ಯಕ್ಷಗಾನ ಕಲಾವಿದನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಅರಣ್ಯ ಇಲಾಖೆಯಲ್ಲಿ ಅಷ್ಟು ಸುಲಭದಲ್ಲಿ ಉದ್ಯೋಗ ಲಭಿಸಿದ್ದು ಹೇಗೆ? ಈ ಬಗ್ಗೆ ಎರಡು ಸ್ವಾರಸ್ಯಕರ ಕತೆಗಳಿವೆ.
ನನ್ನ ಅಮ್ಮನ ಮೂರನೇ ಅಣ್ಣ ದೇವರಗುಂಡ ಐತಪ್ಪ ಗೌಡರು ಆ ಕಾಲಕ್ಕೇ ಸಮಾಜದಲ್ಲಿ ಒಬ್ಬ ಪ್ರತಿಷ್ಠಿತ ವ್ಯಕ್ತಿ ಎನಿಸಿಕೊಂಡಿದ್ದರು. ಪಂಜಿಕಲ್ಲಿನ ಶಾಲಾ ಮ್ಯಾನೇಜರ್ ಬೇರೆ. ಅವರಿಗೆ ಸರಕಾರಿ ಅಧಿಕಾರಿಗಳೊಂದಿಗೆ ಒಳ್ಳೆಯ ಒಡನಾಟ ಇತ್ತು. ಹಾಗಾಗಿ ಐತಪ್ಪ ಗೌಡರು ಒಂದು ಗೊನೆ ಬಾಳೆಹಣ್ಣು ಮತ್ತು ಒಂದು ಬಾಟಲಿ ತುಪ್ಪ ಹಿಡಿದುಕೊಂಡು ಅರಣ್ಯ ಅಧಿಕಾರಿ ಬಳಿ ಹೋಗಿ ಅದನ್ನು ಅವರ ಟೇಬಲ್ ಮೇಲೆ ಇಟ್ಟು ತನ್ನ ತಂಗಿಯ ಗಂಡನಿಗೆ ಕೆಲಸ ಕೊಡಿಸಬೇಕು ಎಂದು ಕೋರಿಕೊಂಡರು. ಆ ಪ್ರಕಾರ ಅಪ್ಪನಿಗೆ ಕೆಲಸ ದೊರೆಯಿತು ಎಂದು ಅಮ್ಮ ಹೇಳುತ್ತಾರೆ.
ಹಿರಿಯ ಅಣ್ಣ ಸುಬ್ರಹ್ಮಣ್ಯ ಗೌಡನಲ್ಲಿ ಕೇಳಿದರೆ ಆತನದು ಬೇರೆಯೇ ವರ್ಷನ್. ಆ ಕಾಲಕ್ಕೆ ಉದ್ಯೋಗ ನೇಮಕಾತಿಗಾಗಿ ಅಧಿಕಾರಿಗಳು ಬೇರೆ ಬೇರೆ ಊರುಗಳಲ್ಲಿ ಕ್ಯಾಂಪ್ ನಡೆಸಿ ಅಭ್ಯರ್ಥಿಗಳ ಆಯ್ಕೆ ಮಾಡುತ್ತಿದ್ದರು. ಹಾಗೆಯೇ ಪರಪ್ಪೆಯ ಬಳಿಗೆ ಅಂತಹ ಕ್ಯಾಂಪ್ ಉದ್ದೇಶದಿಂದ ಬಂದ ಅಧಿಕಾರಿಗಳು ಊರಿನ ಪ್ರತಿಷ್ಠಿತ ವ್ಯಕ್ತಿ ಐತಪ್ಪ ಗೌಡರ ಮನೆಗೂ ಬಂದರು. ಅಲ್ಲಿ ವಿಷಯ ಪ್ರಸ್ತಾಪವಾಗಿ ಯಕ್ಷಗಾನದ ಕುಣಿತದ ಕಸರತ್ತಿನಿಂದ ಅದಾಗಲೇ ಒಳ್ಳೆಯ ಅಂಗಸೌಷ್ಟವ ಹೊಂದಿದ್ದ ಅಪ್ಪ ಸುಲಭದಲ್ಲಿ ಅರಣ್ಯ ಇಲಾಖೆಯ ಉದ್ಯೋಗಕ್ಕೆ ಅಯ್ಕೆಯಾದರು ಎಂದು ಆತ ಹೇಳುತ್ತಾನೆ.
ಹೇಗೆ ಆಯ್ಕೆಯಾದರು ಎಂಬ ಬಗೆಗಿನ ಕತೆಗಳು ಏನೇ ಇರಲಿ. ಅಪ್ಪನಿಗೆ ಅರಣ್ಯ ಇಲಾಖೆಯಲ್ಲಿ ಉದ್ಯೋಗ ದೊರೆತು ಜೀವನ ಭದ್ರತೆ ದೊರೆಯಿತು. ಹುಟ್ಟೂರು ಬಿಟ್ಟರು ಕೂಡ ಅವರಿಗೆ ಯಕ್ಷಗಾನದಲ್ಲಿ ಅಪಾರ ಆಸಕ್ತಿ ಇದ್ದಿರಬಹುದು, ಅದರಲ್ಲೇ ಮುಂದುವರಿಯಬೇಕು ಎಂಬ ಬಯಕೆಯೂ ಇದ್ದಿರಬಹುದು. ಆದರೆ ಹೊಟ್ಟೆಪಾಡು ಬೇರೆಯೇ ದಿಕ್ಕಿನತ್ತ ಎಳೆದುಕೊಂಡು ಹೋಯಿತು. ಜೊತೆಗೆ ಈಗ ಸಂಸಾರಿ ಬೇರೆ.
12.6.1952 ನೇ ಇಸವಿಯಲ್ಲಿ ಅಪ್ಪನಿಗೆ ಉದ್ಯೋಗ ನೇಮಕಾತಿ ಪತ್ರ ದೊರೆಯಿತು. ಪುತ್ತೂರು ವಲಯದ ಪಂಜ ಬೀಟ್ ನಲ್ಲಿ ಕೆಲಸಕ್ಕೆ ಹಾಜರಾಗಬೇಕು ಎಂದು ಆದೇಶವಾಗಿತ್ತು. ಸರಿ ಯಕ್ಷಯಾನದಿಂದ ಈಗ ಫಾರೆಸ್ಟ್ ಗಾರ್ಡನಾಗಿ ಅರಣ್ಯಯಾನ ಆರಂಭವಾಯಿತು.
ಅಪ್ಪ ಯಕ್ಷಗಾನ ಬಿಟ್ಟರೂ ಯಕ್ಷಗಾನ ಅಪ್ಪನನ್ನು ಬಿಡಲಿಲ್ಲ. ಉದ್ಯೋಗ ನಿಮಿತ್ತ ಅಪ್ಪ ಯಾವುದೇ ಊರಿಗೇ ವರ್ಗಾವಣೆಯಾಗಿ ಹೋಗಲಿ, ಅಲ್ಲಿ ಅವರು ಯಕ್ಷಗಾನ ಕೂಟಗಳಲ್ಲಿ ಭಾಗವಹಿಸುವುದನ್ನು ನಿಲ್ಲಿಸಲಿಲ್ಲ. ಅದಾಗಲೇ ವೃತ್ತಿ ಮೇಳದಲ್ಲಿ ಹೆಸರು ಮಾಡಿದ್ದರಿಂದ ಅಲ್ಲಿನವರಿಗೆ ಅಪ್ಪನ ಯಕ್ಷಗಾನ ಹಿನ್ನೆಲೆಯ ಬಗ್ಗೆ ಮೊದಲೇ ತಿಳಿದಿರುತ್ತಿತ್ತು. ಆದ್ದರಿಂದ ಅವರಿಗೆ ವಿಶೇಷ ಗೌರವವೂ ಸಿಗುತ್ತಿತ್ತು ಮತ್ತು ಯಕ್ಷಕೂಟಗಳಲ್ಲಿ ಭಾಗವಹಿಸುವಂತೆ ಆಮಂತ್ರಣ ಮತ್ತು ಒತ್ತಾಯವೂ ಬರುತ್ತಿತ್ತು. ಅಪ್ಪನ ಯಕ್ಷಗಾನ ನಂಟಿನ ಕಾರಣವಾಗಿಯೇ ಅವರಿಗೆ ಹೋದಲೆಲ್ಲ ಹೊಸ ಸ್ನೇಹಿತರೂ ಆಗುತ್ತಿದ್ದರು.
ಉದ್ಯೋಗದ ಕಾರಣ ಅಪ್ಪ ಅಮ್ಮ ವಿಟ್ಲದ ಕನ್ಯಾನದಲ್ಲಿ ಇದ್ದಾಗ ಅವರಿಗೆ ಮೊದಲ ಮಗು ಹುಟ್ಟಿತು. ಅಮ್ಮ ಹೇಳುವ ಪ್ರಕಾರ, ಆ ಗಂಡುಮಗು ಸುಮಾರು ಎಂಟೋ ಒಂಭತ್ತೋ ತಿಂಗಳ ಕಾಲ ಬದುಕಿ ಒಂದು ದಿನ ಜೋರಾಗಿ ಅಳುತ್ತಾ ಸತ್ತೇ ಹೋಯಿತು. ಮುಂದೆ ನನ್ನ ಈಗಿನ ಹಿರಿಯ ಅಣ್ಣ ಸುಬ್ರಹ್ಮಣ್ಯ ಗೌಡ ಹುಟ್ಟಿದ್ದು ಮುದಿಯಾರಿನಲ್ಲಿ, 1955 ರಲ್ಲಿ. ಕಿರಿಯ ಅಣ್ಣ ಉಮೇಶ ಹುಟ್ಟಿದ್ದು ಕುಕ್ಕೆ ಸುಬ್ರಹ್ಮಣ್ಯದಲ್ಲಿ, 1957 ರಲ್ಲಿ.
ಅಪ್ಪ ಎಲ್ಲೇ ಹೋಗಲಿ ಯಕ್ಷಗಾನವನ್ನು ತನ್ನೊಂದಿಗೇ ಒಯ್ಯುತ್ತಿದ್ದರು ಎಂದೆನಲ್ಲ, ಪಂಜ ಮತ್ತು ಕುಕ್ಕೆ ಸುಬ್ರಹ್ಮಣ್ಯದ ನಡುವೆ ಸಿಗುವ ಬಳ್ಪ ಎಂಬಲ್ಲಿ 1958-59 ರ ಸುಮಾರಿಗೆ ಕೆಲಸ ಮಾಡುತ್ತಿದ್ದಾಗಲೂ ಅವರು ಯಕ್ಷಗಾನ ತಾಳಮದ್ದಲೆಗಳಲ್ಲಿ ಭಾಗವಹಿಸಿ ಅರ್ಥ ಹೇಳುತ್ತಿದ್ದರು. ಇಂತಹ ಕೂಟಗಳಲ್ಲಿ ಭಾಗವಹಿಸುತ್ತಿದ್ದಾಗ ಅಲ್ಲಿ ಕಲಾವಿದನಾಗಿ ಭಾಗವಹಿಸುತ್ತಿದ್ದ ಯುವ ಹರೆಯದ ಒಬ್ಬ ವಿಶೇಷ ವ್ಯಕ್ತಿಯ ಪರಿಚಯವಾಯಿತು. ಆ ವಿಶೇಷ ವ್ಯಕ್ತಿ ಇನ್ಯಾರೂ ಅಲ್ಲ ಬಿಳಿಮಲೆ ಶೇಷಪ್ಪ ಗೌಡರು. ಪರಿಚಯವು ಸ್ನೇಹಕ್ಕೆ ತಿರುಗಿ ಬಳಿಕ ಅವರು ಪರಸ್ಪರರ ಅಭಿಮಾನಿಗಳೂ ಆಗುತ್ತಾರೆ. ಶೇಷಪ್ಪ ಗೌಡರಿಗೆ ತನ್ನಲ್ಲಿದ್ದ ಒಂದು ಪುರಾಣ ಪುಸ್ತಕವನ್ನೂ ಕೊಡುತ್ತಾರೆ ಅಪ್ಪ.
1959ರ ಸುಮಾರಿಗೆ ಅಪ್ಪ ಬಳ್ಪಕ್ಕೆ ವಿದಾಯ ಹೇಳಬೇಕಾಯಿತು. ಆದರೆ ಮುಂದೆ ಮೂರು ದಶಕಗಳ ಬಳಿಕ ತಾವು ವಿಶೇಷ ಸಂದರ್ಭವೊಂದರಲ್ಲಿ ಭೇಟಿಯಾಗುತ್ತೇವೆ, ಮದುವೆಯ ಮೂಲಕ ಹತ್ತಿರದ ಸಂಬಂಧಿಯೂ ಅಗುತ್ತೇವೆ ಎಂಬುದು ಅವರಿಬ್ಬರಿಗೂ ಗೊತ್ತಿರಲಿಲ್ಲ. ಅದೊಂದು ರೋಮಾಂಚಕ ಸಂದರ್ಭ. ಅದರ ಬಗ್ಗೆ ಮುಂದೆ ಹೇಳುತ್ತೇನೆ.
ನಾನು ಹುಟ್ಟಿದೆ
ಅಪ್ಪನಿಗೆ 1960 ರಲ್ಲಿ ಬಳ್ಪದಿಂದ ತುಂಬಾ ದೂರದ ಮೂಡಬಿದಿರೆ ಬಳಿಯ ತೋಡಾರಿಗೆ ವರ್ಗಾವಣೆಯಾಯಿತು. ಇಬ್ಬರು ಚಿಕ್ಕ ಮಕ್ಕಳೊಂದಿಗೆ ಅಪ್ಪ ಅಮ್ಮ ತೋಡಾರು ಸೇರಿಕೊಂಡರು. ಅಲ್ಲಿನ ಅರಣ್ಯ ಇಲಾಖೆಯ ಸಿಬ್ಬಂದಿ ವಸತಿಗೃಹದಲ್ಲಿ ನಮ್ಮ ವಾಸ. ಹಿರಿಯ ಅಣ್ಣ ಮೊದಲ ತರಗತಿಗೆ ಶಾಲೆ ಸೇರಿಕೊಂಡ. ಇದೇ ತೋಡಾರಿನಲ್ಲಿ 1961 ರಲ್ಲಿ ನಾನು ಹುಟ್ಟಿದೆ. ತೋಡಾರಿನಲ್ಲಿ ನಾವಿದ್ದುದು ಕೇವಲ ಒಂದು ವರ್ಷ ಎಂದು ಕಾಣುತ್ತದೆ. ಅಲ್ಲಿಂದ ಅಪ್ಪನಿಗೆ ವೇಣೂರಿಗೆ ವರ್ಗವಾಯಿತು.
ವೇಣೂರಿನ ಬದುಕು ಹೇಗಿತ್ತು? ಇದನ್ನು ಗ್ರಹಿಸಲು ನಾನು ಆಗ ತೀರಾ ಎಳೆಯ ಹರೆಯದವನು. ತೋಡಾರಿನಿಂದ ವೇಣೂರು ಸೇರುವಾಗ ನಾನು ಕೇವಲ ಒಂದು ವರ್ಷದ ಮಗು. ಹಾಗಾಗಿ ವೇಣೂರಿನಲ್ಲಿ ನಾವು ಕಳೆದ ವರ್ಷಗಳ ನೆನಪುಗಳು ನನ್ನಲ್ಲಿರುವುದು ಅಷ್ಟಕ್ಕಷ್ಟೇ.
ಆದರೆ ನನ್ನ ಕಿರಿಯ ಅಣ್ಣ ಉಮೇಶನಲ್ಲಿ ವೇಣೂರಿನ ಬಗ್ಗೆ ಸುಂದರ ನೆನಪುಗಳಿವೆ. ಅವನ್ನು ಅವನು ಬರೆಹ ರೂಪಕ್ಕೂ ಇಳಿಸಿದ್ದಾನೆ. ಅನುಭವವನ್ನು ಅಕ್ಷರಗಳಲ್ಲಿ ಕಟ್ಟಿಕೊಡುವುದರಲ್ಲಿ ಆತ ಪ್ರತಿಭಾವಂತ. ಆದರೆ ತುಸು ಸೋಮಾರಿ ಅಷ್ಟೇ.
ಆತನ ಬರೆಹದ ಕೆಲ ಸಾಲುಗಳು ಹೀಗಿವೆ. (ನೆನಪಿರಲಿ ಇದು ದೇಶದಲ್ಲಿ ನೆಹರೂ ಆಳ್ವಿಕೆ ಕೊನೆಗೊಂಡು ಲಾಲ್ ಬಹಾದ್ದೂರ್ ಶಾಸ್ತ್ರಿ ಪ್ರಧಾನಿಯಾಗಿ ಕೊನೆಗೆ ಅವರೂ ತೀರಿಕೊಂಡ ಕಾಲಘಟ್ಟದ್ದು).
“ಅದು 1962 ರ ದಿನಗಳು. ನಮಗೆ ಸ್ವಂತ ಮನೆ ಇರಲಿಲ್ಲ. ವೇಣೂರಿನ ಕುಲಾಲರಾದ ದೂಜ ಎಂಬವರ ಮುಳಿಹುಲ್ಲ ಮನೆಯ ಒಂದು ಭಾಗದಲ್ಲಿ ನಮ್ಮ ವಾಸ. ಅಂದಿನ ದಿನಗಳಲ್ಲಿ ಊರಿನಲ್ಲಿ ಬಾಡಿಗೆಗೆಂದು ಯಾರೂ ಮನೆ ಕಟ್ಟುತ್ತಿರಲಿಲ್ಲ. ಪಕ್ಕದ ಸುದೇರ್ದು ವೆಂಕಪ್ಪ ಮೂಲ್ಯರದ್ದು ಹುಲ್ಲು ಛಾವಣಿಯ ತೆಂಗಿನ ಮಡಲನ್ನು ಹಜಾರಕ್ಕೆ ನೈದ ಮನೆ, ಸುತ್ತಲೂ ಗದ್ದೆ.
ಸುದೇರ್ದು ವಿನ ನಮ್ಮ ಮನೆ ಪರ್ಣಕುಟೀರಕ್ಕೆ ಆಗ ಕೇವಲ 8 ರೂ. ಬಾಡಿಗೆ. ಸ್ವದೇಶಿ ಚಾಕಲೆಟ್ 10 ಪೈಸೆಗೆ 4 ಸಿಕ್ಕರೆ, ಮಿಲ್ಕ್ ಪ್ಯಾರಿಸ್ ಚಾಕಲೇಟ್ 2 ಸಿಗುತ್ತಿತ್ತು. ಅಂದು ಸೀಮೆಎಣ್ಣೆಯ ಬರದಿಂದಾಗಿ (ಇದು ಭಾರತ ಪಾಕಿಸ್ತಾನ್ ಯುದ್ದ ಕಾರಣದಿಂದ ಇರಬಹುದೇನೋ) ಜನ ಬೇಗನೆ ನಿದ್ದೆಗೆ ಜಾರುತಿದ್ದರು. ವೆಂಕಪ್ಪ ಮೂಲ್ಯರು ಹೊನ್ನೆಕಾಯಿಯಿಂದ ಎಣ್ಣೆ ತೆಗೆಯುತ್ತಿದ್ದರು. ಅದರಲ್ಲಿ ಉಳಿದ ಜಿಡ್ಡನ್ನು ಮುಳಿಹುಲ್ಲಿಗೆ ಲೇಪಿಸಿ ಒಣಗಿಸುತಿದ್ದರು. ರಾತ್ರಿ ಹೊತ್ತಿನಲ್ಲಿ ಒಂದೊಂದೆ ಮಕ್ಕಿನ ಓಡಿನಲ್ಲಿಟ್ಟು ಉರಿಸಿ ಕತ್ತಲೆ ಓಡಿಸುತಿದ್ದರು. ಆಗಾಗ ಪಟ ಪಟ ಎಂದು ಉರಿಯುತಿತ್ತು.
ಒಂದು ಮತ್ತು ಎರಡನೆಯ ತರಗತಿಯನ್ನು ನಾನು ಓದಿದ್ದು ವೇಣೂರಿನಲ್ಲಿ. ಅಂದಿನ ದಿನ ಊರಲ್ಲಿ ಹೊಸ ಸೇತುವೆ ನಿರ್ಮಾಣವಾಗುತಿತ್ತು. ಸೇತುವೆ ಸಮೀಪ ಹೋಗುವಾಗ, ʼಎಚ್ಚರ, ಮಕ್ಕಳನ್ನು ಬಲಿ ಕೊಡುತ್ತಾರೆʼ ಎಂದೆಲ್ಲ ದೊಡ್ಡವರು ಆಡಿಕೊಳ್ಳುತ್ತಿದ್ದರು.
ಒಂದು ದಿನ ಸೇತುವೆಯ ಸಮೀಪ ಬಂದಾಗ ಶಾಲೆಗೆ ರಜೆ ಘೋಷಣೆಯಾಗಿ ಹಿಂತಿರುಗಿ ಮನೆಕಡೆ ಹೊರಟೆವು. ಮಕ್ಕಳಾಡಿಕೊಳ್ಳುತ್ತಿದ್ದರು – “ಶಾಸ್ತ್ರಿಲು ಪೋಯೆರುಗೆ” (ಶಾಸ್ತ್ರಿಗಳು ಹೋದರಂತೆ) ಎಂದು. ನನಗೆ ಯಾವ ಶಾಸ್ತ್ರಿ? ಅವರ ಕೊಡುಗೆ ಏನೆಂದು ಪೂರ್ಣ ಅರ್ಥವಾಗಲು ತುಂಬಾ ಸಮಯ ಬೇಕಾಯಿತು. ಅಂತು ತಾಷ್ಕೆಂಟ್ ನ ಹೆಸರು ಅಂದೇ ಕೇಳಿದ್ದೆ.
ಸೇತುವೆಯ ಸಮೀಪದಲ್ಲಿಯ ಬೆಟ್ಟದಲ್ಲಿ ಸಮಾಜ ಮಂದಿರವಿತ್ತು. ಅಲ್ಲಿಯ ಅಷ್ಟಭುಜಾಕೃತಿಯ ಕಿರಿದಾದ ಕಟ್ಟಡದಲ್ಲಿ ಸಂಜೆಯ ಹೊತ್ತು ಪ್ರತಿದಿನ ರೇಡಿಯೋ ಕೇಳಿಬರುತಿತ್ತು, ಬಹುಶ: ಆಕಾಶವಾಣಿ ಭದ್ರಾವತಿ ಇರಬೇಕು. ಅದು ಬಿಟ್ಟರೆ ಯಾರ ಮನೆಯಲ್ಲೂ ರೇಡಿಯೋ ಇರಲಿಲ್ಲ.
ತಂದೆ ಫಾರೆಸ್ಟ್ ಗಾರ್ಡ್ ಮತ್ತು ಯಕ್ಷಗಾನ ಕಲಾವಿದರಾದುದರಿಂದ ಸಮಾಜದಲ್ಲಿ ಒಳ್ಳೆಯ ಗೌರವವಿದ್ದ ದಿನಗಳು. ತಂದೆ ಯಕ್ಷಗಾನ ತಾಳಮದ್ದಳೆಗೆ ಹೋಗುತ್ತಿದ್ದುದರಿಂದ ಇನ್ನಷ್ಟು ಅಭಿಮಾನಿಗಳು (ʼಮರೆಯದಿರಿ ಮರೆತು ನಿರಾಶರಾಗದಿರಿ… ಈವತ್ತಿನ ಆಟದಲ್ಲಿ ಮುದಿಯಾರು ರಾಮಪ್ಪ ಗೌಡರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆʼ ಎಂದು ಗಾಡಿಯಲ್ಲಿ ಮೇಳದ ಸಾಮಗ್ರಿ ಸಾಗಿಸುತ್ತಿದ್ದ ʼದೇಲಂಪುರಿ ಕೃಷ್ಣಭಟ್ಟರ ಮೇಳʼದವರು ವೇಣೂರಿನಲ್ಲಿ ಮೈಕ್ ನಲ್ಲಿ ಘೋಷಿಸುತ್ತಿದ್ದರು ಎಂದು ಹಿರಿಯಣ್ಣ ನೆನಪಿಸಿಕೊಳ್ಳುತ್ತಾನೆ. ಹಗಲು ಗಾರ್ಡ್ ರು ರಾತ್ರಿ ವೇಷಧಾರಿ). ತಂದೆ ಊರಿಗೆ ಬಂದ ಯಕ್ಷಗಾನ ಮೇಳಗಳಲ್ಲಿ ಪಾತ್ರ ವಹಿಸುತ್ತಿದ್ದರು. ಅಂದು ವೆಂಕಪ್ಪ ಮೂಲ್ಯ ಮತ್ತು ದೂಜ ಪೂಜಾರಿಯ ಪಟಾಲಂಗೆ ಉಚಿತ ಸೀಟು. ಪ್ರವೇಶ ದ್ವಾರದಲ್ಲಿಯೇ ನೀವು ಗಾರ್ಡರ ಮನೆಯವರ ಎಂದುಕೇಳಿ ಒಳಗೆ ಬಿಟ್ಟಿದ್ದು ನೆನಪಿದೆ.
ಸುದೇರ್ದು, ಹಳ್ಳಿ ಬದುಕಿನ ಒಂದು ನಿಜ ದರ್ಶನ. ವೇಣೂರಿನಲ್ಲಿ ನಮ್ಮ ಕುಟಂಬ ಎರಡು ವರ್ಷದಲ್ಲಿ ಮೂರು ಮನೆ ಬದಲಾಯಿಸಿತು. ಮೊದಲಿಗೆ ಸರಕಾರಿ ಆಸ್ಪತ್ರೆಯ ಸಮೀಪ ವಾಮದ ಪದವು ರಸ್ತೆಯ ಬದಿಯ ಪ್ರದೇಶ. ಒಂದೇ ಕೊಠಡಿಯಲ್ಲಿ ವಾಸ, ಪಕ್ಕದ ಮನೆ ಕಲ್ಯಾಣಿ ತುಂಡು ಪಂಚೆಯ ಮಲೆಯಾಳಿ ಹೆಂಗಸಿನದ್ದು. ಕಲ್ಯಾಣಿ ನಮ್ಮ ತಾಯಿಯನ್ನು ʼಅಕ್ಕʼ ಎಂದೇ ಕರೆಯುತ್ತಿದ್ದುದು ನಮಗೂ ಅಭ್ಯಾಸವಾಗಿ ಅಮ್ಮನನ್ನು ನಾವೂ ʼಅಕ್ಕʼ ಎಂದೇ ಕರೆಯುತ್ತಿದ್ದೆವು. ಕೊನೆಗೆ ಊರಿನ ಸಂಪರ್ಕ ಬೆಳೆದಾಗ ತಪ್ಪಿನ ಅರಿವಾಗಿ ತಿದ್ದಿಕೊಂಡೆವು.
ಸುದೇರ್ದು ವೆಂಕಪ್ಪರ ಮನೆಯಿಂದ ಸ್ವಲ್ಪದರಲ್ಲೇ ನಮ್ಮ ಬದುಕಿನಲ್ಲಿ ಪ್ರಥಮ ಹೆಂಚಿನ ಬಾಡಿಗೆ ಮನೆ ಸಮೀಪದ ಜೈನರ ಮನೆಯಾಗಿತ್ತು. ಇದು ಸುದೇರ್ದು ಮತ್ತು ದೂಜ ಪೂಜಾರಿಯ ಮನೆಯ ನಡುವಿತ್ತು.
1960 ರಲ್ಲಿ ವರ್ಗಾವಣೆ ಹೊಂದಿ ದೂಜಪೂಜಾರಿಯ ನೇತೃತ್ವದಲ್ಲಿ ಮನೆಯ ಗಂಟು ಮೂಟೆ ಹೊಳೆಯಾಚೆ ಸಾಗಿಸಿ ರಾತ್ರಿಯ ಸಮಯದಲ್ಲಿ ಲಾರಿಯ ಮೂಲಕ ವೇಣೂರು ಬಿಟ್ಟೆವು”.
(ಮುಂದುವರಿಯುವುದು..)
ಶ್ರೀನಿವಾಸ ಕಾರ್ಕಳ
ಚಿಂತಕರು
ಇವುಗಳನ್ನೂ ಓದಿ-
ಅದೊಂದ್ ದೊಡ್ಡ ಕಥೆ- ಆತ್ಮಕಥನ ಸರಣಿ ಭಾಗ-1
ಅದೊಂದು ದೊಡ್ಡ ಕತೆ-ಆತ್ಮಕಥನ ಸರಣಿ – 2