ಮಂಗಳೂರಲ್ಲಿ ಮಳೆಯಾಯಿತು!

Most read

ನಾಟಕ ವೀಕ್ಷಣೆಗೆ ಬಂದಿದ್ದ ನೂರಾರು ಯುವಕ ಯುವತಿಯರು ಕ್ಯಾಂಪಸ್ ತುಂಬಾ ನಗು ನಗುತ್ತಾ ಉತ್ಸಾಹದಿಂದ ಓಡಾಡುವುದನ್ನು ಕಂಡಾಗ ಇಂತಹ ಆರೋಗ್ಯಪೂರ್ಣ ಪರಿಸರ ಸೃಷ್ಟಿಸಲು ಕನಸುಗಳಿರುವ ಶಿಕ್ಷಕರು, ಮಕ್ಕಳ ಕನಸಿಗೆ ರೆಕ್ಕೆ ಕಟ್ಟಬಲ್ಲ ಕಲಾವಿದರು, ಎಲ್ಲ ನೋವುಗಳಿಗೆ, ಅಸಹನೆ, ದುಮ್ಮಾನಗಳಿಗೆ ಕಿವಿಯಾಗಬಲ್ಲ ಆಡಳಿತ ಇವಿಷ್ಟೇ ಸಾಕಾಗುತ್ತದೆ. ಆದರೆ ನಾವು ಅದನ್ನು ಅರ್ಥಮಾಡಿಕೊಳ್ಳಬೇಕು, ವ್ಯವಧಾನ ಬೇಕು ಅಷ್ಟೇ- ಡಾ. ಉದಯಕುಮಾರ ಇರ್ವತ್ತೂರು.

ನನಗೆ ಕಂಡಂತೆ ನಮ್ಮ ಊರಿನಲ್ಲಿ ಕಳೆದ ಹಲವಾರು ವರ್ಷಗಳಿಂದ ಶಾಲಾ ಕಾಲೇಜುಗಳ ಕ್ಯಾಂಪಸ್‌ಗಳಂತೂ ಎಲ್ಲೋ ಇರುವ ಯಾರೋ ಆಡಿಸುವ ಸೂತ್ರದಾರರ ಸನ್ನೆಗೆ ಮನ್ನಣೆ ಕೊಡುವ, ಬಹುತೇಕ ಬೊಂಬೆಯಾಟದಂತಹ ಪರಿಸ್ಥಿತಿ. ಬಹುತೇಕ ಹೆಚ್ಚಿನ ಸಂದರ್ಭಗಳಲ್ಲಿ ಕಲಿಕೆಗೆ ಆಮ್ಲಜನಕವಾಗಿರುವ ಸ್ವಾಯತ್ತತೆ, ಮುಕ್ತತೆ ಮಾಯವಾಗಿ ಪರಸ್ಪರ ವಿಶ್ವಾಸದಿಂದ ಬೆರೆಯಲಾಗದ ಉಸಿರುಗಟ್ಟಿಸುವ ವಾತಾವರಣ. ಇಡೀ ಸಮೂಹದಲ್ಲಿ ಗುಪ್ತಗಾಮಿನಿಯಾಗಿಯೇ ಹರಿಯುವ ಅಸಹನೆ, ದುಗುಡ, ಅಸಹಾಯಕತೆ, ಪ್ರತಿಯೊಂದು ದಿನ ಕಳೆದು ಹೋದಾಗಲೂ ಉಸಿರುಬಿಟ್ಟು ನಿರಾಳವಾಗುವಂತಹ ರೀತಿಯದ್ದು. ಯಾರು ಯಾರ ಮಾಹಿತಿದಾರರು, ಯಾರು ಯಾವ ಹೂರಣ ಹೊತ್ತು ತಮ್ಮ ಸರದಿಗಾಗಿ ಕಾಯುತ್ತಿದ್ದಾರೆ ಎನ್ನುವುದೇ ದಿನ ನಿತ್ಯದ ಜೀವನವಾಗಿದ್ದಂತಹ ಕ್ಷಣಗಳು, ಮತ್ತು ದಿನಗಳು. ಇದೊಂತರಾ ಎಲ್ಲವೂ ಇದ್ದು ಏನೂ ಇಲ್ಲದಂತೆ ಇರುವ ಕಲಿಯುವಂತಹ ಅವಸ್ಥೆ ಯಾರಿಗೂ ಬೇಡ. ಹಿಜಾಬ್, ಸಮವಸ್ತ್ರ, ಚುನಾವಣೆಗಳು ಮತ್ತು ಇತ್ತೀಚೆಗೆ ನಡೆದ ಜೆರೋಸಾ ಶಾಲೆಯ ಪ್ರಕರಣವೂ ಸೇರಿದಂತೆ ಕಳೆದ ಹಲವಾರು ಸಮಯದಿಂದ ನಡೆದ ಈ ರೀತಿಯ ವಿದ್ಯಮಾನಗಳು ಇದಕ್ಕೆ ನಿದರ್ಶನವೆನ್ನಬಹುದು.

ಮೇಲೆ ಉಲ್ಲೇಖಿಸಿದ ಪರಿಸ್ಥಿತಿಗೆ ತೀರಾ ಭಿನ್ನವಾದ ಮತ್ತು ನಮ್ಮೆಲ್ಲರ ಕನಸೂ ಆಗಿರುವ ಸಂಗತಿಯೊಂದು ನಮ್ಮೂರಲ್ಲಿ ಕಂಡರೆ ಯಾರಿಗೆ ತಾನೇ ಖುಷಿಯಾಗಲಿಕ್ಕಿಲ್ಲ? ಹೌದು ಶಾಲಾ ಕಾಲೇಜು ಆವರಣಗಳಲ್ಲಿ ಹರೆಯದ ಯುವಕ ಯುವತಿಯರು ಲವಲವಿಕೆಯಿಂದ ಉತ್ಸಾಹ, ಧರ್ಮ, ಭಾಷೆ, ಅಂತಸ್ತು, ಆಸಕ್ತಿ ಮೀರಿ ಜೀವನೋತ್ಸಾಹದ ಕಾರಂಜಿಯಂತೆ ಇರುವ ಖುಷಿಯ ವಾತಾವರಣ, ನಾನಂತೂ ಇದನ್ನು ನೋಡದೆ ಅದರಲ್ಲಿಯೂ ಕಾಣದೆ ಬಹಳ ಸಮಯವೇ ಆಯ್ತು. ಇದು ಇರಬೇಕಾದ ನಿಜವಾದ ಸ್ಥಿತಿಯೇ ಆದರೂ ಅಪರೂಪವಾಗಿತ್ತು. ಅದೇನೇ ಇರಲಿ ಮಂಗಳೂರಿನಲ್ಲಿ ಮತ್ತೆ ಮಳೆಯಾಗಿದೆ, ಹೊಸತನದ ಒರತೆ, ಜೀವ ಪಡೆದಿರುವ ದೃಶ್ಯ ಕಂಡು ಮನಸ್ಸಿಗೆ ಮತ್ತೆ ವಸಂತ ಮರಳಿದೆ.

ಹೌದು ನಾನು ಹೇಳ್ತಾ ಇರೋದು ಮಂಗಳೂರಿನಲ್ಲಿ ನಡೆದ “ನೇಹದ ನೇಯ್ಗೆ – ರಂಗೋತ್ಸವದ ಬಗ್ಗೆ. ಪ್ರಕಾಶ್‌ರಾಜ್ ಅವರ ನಿರ್ದಿಗಂತ ಮತ್ತು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಮಾರ್ಚ್ 20-25 ರ ತನಕ ನಡೆಯುತ್ತಿರುವ ಈ ರಂಗೋತ್ಸವದಲ್ಲಿ ಪೂರ್ಣವಾಗಿ ಪಾಲುಗೊಳ್ಳಬೇಕೆನ್ನುವ ಆಸೆ ಕೆಲವು ಅನಿವಾರ್ಯ ಕಾರಣಗಳಿಂದಾಗಿ ಕೈಗೂಡಲಿಲ್ಲ. ಅದರಲ್ಲೂ ಮೊದಲ ದಿನ ನೆಚ್ಚಿನ ನಟ ನಾನಾ ಪಾಟೇಕರ್ ಅವರ ಮಾತು ಕೇಳಬೇಕೆನ್ನುವ ಆಸೆ ಪೂರೈಸಲಿಲ್ಲ. ಪತ್ರಿಕಾ ವರದಿಗಳು ಸಾಮಾಜಿಕ ಜಾಲತಾಣದ ವಿವರಗಳು ನಾನೇನು ಕಳಕೊಂಡೆ ಎನ್ನುವುದನ್ನು ನೆನಪಿಸಿ ಇನ್ನಷ್ಟು ಹೊಟ್ಟೆ ಉರಿಸಿದುವು. ಕೊನೆಗೂ 23 ರ ಸಂಜೆ ಮುಕ್ತಾಯದ ಪ್ರದರ್ಶನದ ಹೊತ್ತಿಗೆ ಹಾಜರಾಗಿ ಇಡೀ ನಾಟಕವನ್ನು ಒಂಚೂರು ಬಿಡದ ಹಾಗೆ ಕಣ್ತುಂಬಿಕೊಂಡೆ. ಬರೀ ಬತ್ತಲೆ ಇಟ್ಟಿಗೆ, ಬೆಳಕು, ಸರಳ ರಂಗ ವಿನ್ಯಾಸ, ಸಂಗೀತದ ಮೂಲಕ ಸೃಷ್ಟಿಯಾದ ಪರಿಸರ, ಆಸೆ, ದುರಾಸೆ, ಸಹನೆ, ಅಸಹನೆ, ಕೊಡುವ, ಕೊಳ್ಳುವ ದುಃಖ, ದುಮ್ಮಾನಗಳ ನಡುವೆ ‘ನಾವು’ ಕಳೆದು ಹೋಗದಂತೆ ಬದುಕು ಕಟ್ಟಿಕೊಳ್ಳುವ ‘ವಿವೇಕವನ್ನು’ ಕಳೆದುಕೊಂಡರೆ ಮಿಕ್ಕುಳಿಯುವುದು ‘ಶೂನ್ಯವೆನ್ನುವ’ ಸಂದೇಶವನ್ನು ನಮ್ಮೆದೆಗೆ ಹೊಡೆದ ‘ವಿವೇಕದ’ ಸಿಡಿಗುಂಡಿನಂತೆ ಬಹಳ ಪರಿಣಾಮಕಾರಿಯಾಗಿ ಬಿತ್ತರಿಸಿದ ನಾಟಕ. ಮರುದಿನ ನಾಟಕದ ಕುರಿತು ಅರ್ಥಪೂರ್ಣ ವಿಮರ್ಶೆ ಮಾಡುವ ಪ್ರಯತ್ನ. ರಂಗ ಪ್ರಯೋಗದ ಸಾಮರ್ಥ್ಯ ಮತ್ತು ಸಾಧ್ಯತೆಗಳ ಬಗ್ಗೆ ಉತ್ತಮ ಸಂದೇಶ ನೀಡಿದ ನಾಟಕ ಇದು ಎನ್ನುವುದರ ಬಗ್ಗೆ ಎರಡು ಮಾತಿಲ್ಲ.

ನಾಟಕ ಮುಗಿಸಿ ಹೊರಟಾಗ ಚಿಗರೆಯಂತೆ ಓಡಿ ಬಂದ ಹುಡುಗಿ, ಸಾರ್, ಮೇಡಮ್ ನನ್ನ ಗುರುತು ಸಿಕ್ಕಿತಾ? ನಾನು ನಿಮ್ಮ ವಿದ್ಯಾರ್ಥಿನಿ ಬಿ.ಎಸ್.ಸಿ ಮಾಡಿದ ನಂತರ ಒಂದು ವರ್ಷ ಟೀಚರ್ ಕೆಲಸ ಮಾಡಿದೆ ನನಗೇನೂ ಖುಷಿ ನೀಡಲಿಲ್ಲ, ಅದನ್ನು ಬಿಟ್ಟು  ನನ್ನ ಆಸಕ್ತಿಯ ‘ದೃಶ್ಯ ಮಾಧ್ಯಮ’ ದಲ್ಲಿ ಪರಿಣತಿ ಗಳಿಸಿ ಕಲಾ ರಂಗದಲ್ಲಿ ‘ನಾವಿಕ’ಳಾಗಿದ್ದೇನೆ ಎನ್ನುತ್ತಾ ಕೆಲವೇ ನಿಮಿಷಗಳಲ್ಲಿ ಬಾಯಿ ಆರುವವರೆಗೆ ಪಟಪಟನೇ ಅನೇಕ ಸಂಗತಿಗಳನ್ನು ಒಪ್ಪಿಸಿದಳು ಈ ಬಾಯಾರಿನ ಹುಡುಗಿ. ಶಿಕ್ಷಣದ ಮೂಲಕ ತಮಗಿಷ್ಟದ ಇಂತಹ ಸೃಜನಶೀಲ, ಪ್ರೀತಿಯ ಸೂಸುವ, ಕೆಲಸ ಆಯ್ದುಕೊಂಡು ತಾವು ನಗುತ್ತಾ ಸಮಾಜವನ್ನೂ ನೆಮ್ಮದಿಯಿಂದ ಇರುವಂತೆ ಮಾಡುವ ಕಾಲೇಜುಗಳು ಸೃಷ್ಟಿಸುವ ಈ “ನೆಮ್ಮದಿಯ ಬಾಂಡ್” ಗಳನ್ನು ಸಮಾಜ ಸದಾ ನಗದೀಕರಿಸುವಂತೆ ಮಾಡುವುದೇ ನಿಜವಾದ ಶಿಕ್ಷಣ. ನನ್ನ ಕಲಾಕೃತಿಗಳ ಎಕ್ಸಿಬಿಷನ್ ಇದೆ, ಆಮಂತ್ರಣ ಕಳಿಸ್ತೇನೆ ಬನ್ನಿ ಎಂದಾಗ, ನಾವು ಅಧ್ಯಾಪನ ವೃತ್ತಿಯಲ್ಲಿದ್ದದ್ದು ಸಾರ್ಥಕ ಎನ್ನುವ ಭಾವ ಮೂಡಿಸಿದಳು.

ಮಾರನೆಯ ದಿನದ ‘ಬೇಲಿಯಾಚೆಗಿನ ಗೆಳೆಯ’ ಉತ್ತಮ ರಂಗ ಪ್ರಯೋಗ, ಮನುಷ್ಯನ ಕ್ರೌರ್ಯದ ಕುರುಡು ತನ್ನ ಕನಸುಗಳನ್ನೇ ಸುಟ್ಟು ಬಿಡುವ ಸಂದೇಶ ನೀಡಿದ ಈ ನಾಟಕ ನಾವು ನಮ್ಮೊಳಗಿನ ಬರ್ಬರತೆಯನ್ನು ಕೊನೆಗೊಳಿಸಬೇಕಿದ್ದರೆ ದ್ವೇಷದ ಗಡಿಯನ್ನು ದಾಟಲೇ ಬೇಕಾದ ಅನಿವಾರ್ಯತೆಯನ್ನು ಕುರಿತ ಸಂದೇಶವನ್ನು ನಾಟಕ ಪರಿಣಾಮಕಾರಿಯಾಗಿ ತಿಳಿಸಿತು.

ಮತ್ತೆ ಈ ಪಯಣ ಮುಂದುವರಿದಿದೆ. ಇಡೀ ಕಾರ್ಯಕ್ರಮದ ಅನುಭವ ನಮಗಂತೂ ಹೊಸ ಹುರುಪು ನೀಡಿದೆ. ಇಂತಹ ಅನುಭವಗಳಿಂದ ಮಂಗಳೂರು ಬಹಳ ದಿನಗಳಿಂದ ವಂಚಿತವಾಗಿತ್ತು ಎನ್ನುವುದು ನನ್ನ ಅನಿಸಿಕೆ. ಇಂತಹ ಪ್ರಯೋಗಗಳು, ಶಾಲಾ ಕಾಲೇಜುಗಳಲ್ಲಿ ನಿರಂತರ ಆಗುತ್ತಲೇ ಇರಬೇಕು. ಶಿಕ್ಷಣ, ಸೃಜನಶೀಲತೆಗಳು ನಾಳಿನ ಕನಸು ನಾಟಿ ಮಾಡುವ ಗದ್ದೆಗಳು. ಇಂತಹ ಹದವಾದ ಗದ್ದೆಗಳಲ್ಲಿ ಬಿತ್ತುವ ಕನಸುಗಳು ಮುಂಗಾರಿನ ಮಳೆಗೆ ಮೊಳೆಯದಿರಲು ಸಾಧ್ಯವೇ ಇಲ್ಲ.

ಇದನ್ನೆಲ್ಲಾ ತಿಳಿದು ಅರಿತು ನಡೆಯ ಬೇಕಾದ ಶಿಕ್ಷಣ ಯಂತ್ರ ಕನಸುಗಳೇ ಇಲ್ಲದ, ಕೇವಲ ಕುರ್ಚಿಯ ಹಪಾಹಪಿಗೆ ಬಡಿಗೆ ಹಿಡಿದು ಓಡಾಡುವ, ಬೀಜದ ಚೀಲ ಬರಿದಾಗಿರುವ ಮಂದಿಯ ಹಿಂದೆ ದುರಾಸೆಗೆ ಬಲಿಯಾಗಿಯೋ, ಹೆದರಿಯೋ ಇದ್ದು ಬಿಟ್ಟರೆ ನಾಡಿಗೆ ತಟ್ಟಬಹುದಾದ ಬರಗಾಲದ ಭೀತಿಯಿಂದ ಯಾರೂ ತಪ್ಪಿಸಿಕೊಳ್ಳಲಾಗದು.

ಪ್ರಕಾಶ್‌ರಾಜ್ ಅವರ ನುಡಿಗಳನ್ನು ಬಹಳ ದಿನಗಳಿಂದ ಕೇಳುತ್ತಾ ಬಂದಿದ್ದೇನೆ. ಆದರೆ ಮೊದಲ ಬಾರಿಗೆ ನಿರ್ದಿಗಂತದ ಮೂಲಕ ಬರಗಾಲದ ಭೀತಿ ತಪ್ಪಿಸುವ ಸಾಧ್ಯತೆಯತ್ತ ಅವರ ನಡೆಯನ್ನು ಕಂಡಾಗ ಮಂಗಳೂರಿನಲ್ಲಿ ಮತ್ತೆ ಮಳೆಯಾಯಿತು.  ಬೇರೆಲ್ಲ ಕಡೆಯೂ ಕವಿದಿರುವ ಕಪ್ಪು ಮೋಡಗಳು ಕರಗಿ ಜೂನ್ ತಿಂಗಳ ಮೊದಲೇ ಮಳೆಯಾಗಿ ಸುರಿಯಲಿ. ನಮ್ಮ ಮಕ್ಕಳ ನಾಳೆಗಾಗಿ ಬಿತ್ತಿರುವ ಪ್ರೀತಿ, ವಿಶ್ವಾಸ, ಭರವಸೆಯ ಕನಸಿನ ಎಲ್ಲ ಬೀಜಗಳೂ ಮೊಳೆಯಲಿ.

ಡಾ. ಉದಯಕುಮಾರ ಇರ್ವತ್ತೂರು

ವಿಶ್ರಾಂತ ಪ್ರಾಂಶುಪಾಲರು

More articles

Latest article