ಸಕಲೇಶಪುರ : ಸರ್ವಧರ್ಮದವರು ಅವರವರ ನಂಬಿಕೆ, ಭಕ್ತಿಗನುಗುಣವಾಗಿ ಭಗವದ್ಗೀತಾ, ಕುರಾನ್, ಬೈಬಲ್ ಇತರೆ ಧರ್ಮಗ್ರಂಥಗಳನ್ನು ಅನುಸರಿಸುತ್ತಾರೆ, ಇವರೆಲ್ಲರನ್ನು ಸಂವಿಧಾನ ಎಂಬ ಗ್ರಂಥ ಒಂದುಗೂಡಿಸುತ್ತದೆ. ಇದು ವಿವಿಧತೆಯಲ್ಲಿ ಕಂಡುಬರುವ ಐಕ್ಯತೆ ಎಂದು ಖ್ಯಾತ ವಿಚಾರವಾದಿ ಸುಧೀರ್ ಕುಮಾರ್ ಮುರೊಳ್ಳಿ ಹೇಳಿದರು.
ಪಟ್ಟಣದ ಪುರಭವನದಲ್ಲಿ ಎಸ್ ಕೆ ಎಸ್ ಎಸ್ ಎಫ್ ಸಂಘಟನೆ ಗಣರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಮಾನವ ಸರಪಳಿ ಕಾರ್ಯಕ್ರಮದ ಸಭಾ ವೇದಿಕೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಒಂದು ವರ್ಗ ಮನುಷ್ಯರನ್ನು ಬೇರ್ಪಡಿಸಲು ಯತ್ನಿಸಲು ಕೂಗುತ್ತಿರುವಾಗ ನಾವುಗಳು ಎಷ್ಟೇ ಕಠಿಣವಾದರೂ ಸೇರ್ಪಡಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದು ಹೇಳಿದರು,
ಸ್ವತಂತ್ರ ಸಂದರ್ಭದಲ್ಲಿ ಸ್ವತಂತ್ರ ಸೇನಾನಿಗಳು ಧರ್ಮ ಆಧಾರಿತ ದೇಶವಾಗಬೇಕು ಎಂದು ಕೇಳಿರಲಿಲ್ಲ ಆದರೆ ಎರಡು ತಂಡಗಳು ನಮಗೆ ಧರ್ಮ ಆಧಾರಿತ ದೇಶ ಬೇಕು ಎಂದು ಹೇಳಿದಾಗ ಗಾಂಧೀಜಿ, ಅಜಾದ್ ಇದನ್ನು ತಳ್ಳಿಹಾಕಿದ್ದರು. ಎಲ್ಲರೂ ಕೂಡಿ ಬಾಳುವಂತಹ ದೇಶ ಬೇಕು ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನವನ್ನು ನಮ್ಮ ಮುಂದಿಟ್ಟರು ಎಂದು ಹೇಳಿದರು.
ಸಂವಿಧಾನದ ನಮ್ಮೆಲ್ಲರನ್ನು ಜೋಡಿಸುವ ವಿಷಯವನ್ನು ಹೇಳಿದರೆ, ಕೆಲವರು ನಮ್ಮನ್ನೆಲ್ಲರನ್ನು ಹೊಡೆಯುವ ಕಾರ್ಯದಲ್ಲಿ ತೊಡಗಿದ್ದಾರೆ,
ಪ್ರಸ್ತುತ ಕಾಲಘಟ್ಟದಲ್ಲಿ ನಾವು ಹೇಳಬೇಕಾಗಿರುವುದು ನೀವು ಎಷ್ಟೇ ಹೊಡೆಯುವ ಮಾತನಾಡಿದರೂ ನಾವು ಕೂಡಿಸುವ ಮೂಲಕ ಈ ಭಾರತೀಯತೆ ಉಳಿಸುತ್ತೇವೆ ಎಂಬುವುದಾಗಿರಬೇಕು ಎಂದು ಹೇಳಿದರು.
ದೇಶಕ್ಕೆ ಬ್ರಿಟಿಷರು ಬರುವ ಮೊದಲು ನಾವು ರಾಜ್ಯಕ್ಕಾಗಿ ಹೊಡೆದಾಡಿ ಗುಂಪು ಗುಂಪುಗಳಾಗಿ ಬೇರೆ ಬೇರೆಯಾಗಿದ್ದವು. ಆದರೆ ಬ್ರಿಟಿಷರ ವಿರುದ್ಧ ಈ ದೇಶದ ಎಲ್ಲಾ ವರ್ಗದ ರಾಜರುಗಳು ಜನರು ಒಗ್ಗೂಡಿ ಬ್ರಿಟಿಷರ ವಿರುದ್ಧ ಸ್ವತಂತ್ರ ಹೋರಾಟಕ್ಕೆ ಧುಮುಕಿದಾಗ ಬ್ರಿಟೀಷರು ಆಹಾರದ ಹಾಗೂ ನಂಬಿಕೆಯ ವಿಷಯವನ್ನು ಇಟ್ಟುಕೊಂಡು ಮತ್ತೆ ಬೇರ್ಪಡಿಸಲು ಪ್ರಯತ್ನಿಸಿದರು. ಆ ಬ್ರಿಟಿಷರ ಸಂತತಿಯು ಈಗಲೂ ಸಹ ನಮ್ಮನ್ನು ಒಡೆದಾಡಲು ಹಾತೊರೆಯುತ್ತಿದೆ ಎಂದು ಹೇಳಿದರು.
ವಿಚಾರವಾದಿ ಎಡೆಹಳ್ಳಿ ಮಂಜುನಾಥ ಮಾತನಾಡಿ, ಎಸ್ ಕೆ ಎಸ್ ಎಸ್ ಎಫ್ ಎಂದರೆ ಸಮಸ್ತ ಕರ್ನಾಟಕ ಸುನ್ನಿ ಸ್ಟೂಡೆಂಟ್ ಫೆಡರೇಶನ್ ಅಲ್ಲ, ಅದು ಎಲ್ಲರೂ ಒಗ್ಗೂಡಬೇಕೆಂದು ಮಾನವ ಸರಪಳಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸೌಹಾರ್ದ ಕರ್ನಾಟಕ ಸುನ್ನಿ ಸ್ಟೂಡೆಂಟ್ ಫೆಡರೇಶನ್ ಆಗಿದೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಮನುಷ್ಯ ಮನುಷ್ಯರ ನಡುವೆ ಭಿನ್ನಾಭಿಪ್ರಾಯಗಳು ವಿಚಾರಗಳಿಂದ ಮನಸ್ಥಿತಿ ವಿಕಾರಗೊಳ್ಳುತ್ತಿರುವ ಸಂದರ್ಭದಲ್ಲಿ ನಾವೆಲ್ಲರೂ ಒಗ್ಗೂಡಿ ಕೈಗೆ ಕೈ ಮಿಲಾಯಿಸಿ ನಡೆಯಬೇಕೆಂಬ ಎಸ್ ಕೆ ಎಸ್ ಎಸ್ ಎಫ್ ಕಾರ್ಯವು ಶ್ಲಾಘನೀಯವಾಗಿದೆ.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಎಲ್ಲರಿಗೂ ಅನುಗುಣ ವಾಗುವಂತಹ ಸಂವಿಧಾನ ನೀಡದಿದ್ದರೆ ಇದು ನಮ್ಮ ಬದುಕು ಕಷ್ಟಕರವಾಗುತ್ತಿತ್ತು, ದೇಶದಲ್ಲಿ ತಮ್ಮಿಚ್ಛೆಯಂತೆ ಇರಬೇಕು ಎಂಬ ಮನಸ್ಥಿತಿ ಕೆಲವರಲ್ಲಿದೆ. ಆದರೆ, ನಾವು ನಮ್ಮ ಸ್ವಯಿಚ್ಛೆಯಿಂದ ಬದುಕುವಂತಾಗಲು ಬಾಬಾ ಸಾಹೇಬ್ ರವರ ಸಂವಿಧಾನ ಕಾರಣವಾಗಿದೆ. ಇಂತಹ ಮಹಾನ್ ನಾಯಕರಿಂದಾಗಿ ಇಂದು ಭಾರತ ಭಾರತವಾಗಿ ಉಳಿದಿದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಮೊದಲು ಪುರಭವನದ ಮುಂಭಾಗ ನೂರಾರು ಜನರು ಕೈ ಕೈ ಮಿಲಾಯಿಸಿ ಮಾನವ ಸರಪಳಿ ನಿರ್ಮಿಸಿದರು.
ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡ ಮುರಳಿ ಮೋಹನ್, ಯಾದ್ ಗಾರ್ ಜಾಕೀರ್, ಇಬ್ರಾಹಿಂ ಮುಸ್ಲಿಯರ್, ಹಾಜಿ ಅಹಮದ್ ಬಾವ, ಹೆತ್ತೂರು ಅಣ್ಣಯ್ಯ, ಕೊಲ್ಲಹಳ್ಳಿ ಸಲೀಂ ಹಮೀದ್ ಶಾಮಿಯಾನ ಮತ್ತು ಬಿಇ ಯೂಸುಫ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.