ಬ್ರಿಡ್ಜ್ ಟೌನ್ (ಬಾರ್ಬಡಸ್): ಕ್ರಿಕೆಟ್ ಜಗತ್ತು ಕುತೂಹಲದಿಂದ ನಿರೀಕ್ಷಿಸುತ್ತಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ T-20 ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ.
1991ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಹಿಂದಿರುಗಿದ ನಂತರ ದಕ್ಷಿಣ ಆಫ್ರಿಕಾ ಎಲ್ಲ ಮಾದರಿ ಕ್ರಿಕೆಟ್ ನಲ್ಲೂ ಉತ್ತಮ ಪ್ರದರ್ಶನ ನೀಡಿ ಬಲಾಢ್ಯ ತಂಡವಾಗಿದ್ದರೂ ಒಂದೇ ಒಂದು ವಿಶ್ವಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಲೀಗ್ ಹಂತದಲ್ಲಿ ಚೆನ್ನಾಗಿ ಆಡಿ ಸೆಮಿಫೈನಲ್‌ನಲ್ಲಿ ಸೋಲುತ್ತ ಬಂದಿದ್ದ ದಕ್ಷಿಣ ಆಫ್ರಿಕಾಗೆ ‘ಚೋಕರ್ಸ್’ ಎಂಬ ಹಣೆಪಟ್ಟಿ ಅಂಟಿಸಿಕೊಂಡಿತ್ತು. ಈ ಬಾರಿ ಸೆಮಿಫೈನಲ್ ನಲ್ಲಿ ಅಫಘಾನಿಸ್ತಾನವನ್ನು ಮಣಿಸುವ ಮೂಲಕ ಮೊದಲ ಬಾರಿ ಫೈನಲ್ ತಲುಪಿದೆ.
ಇನ್ನೊಂದೆಡೆ ಭಾರತ ಒಂದು ವರ್ಷದ ಅವಧಿಯಲ್ಲಿ ಮೂರನೇ ಐಸಿಸಿ ಟೂರ್ನಿಯ ಫೈನಲ್ ನಲ್ಲಿ ಆಡುತ್ತಿದೆ. ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ತಲುಪಿದ್ದ ಭಾರತ ODI ಫೈನಲ್ ನಲ್ಲೂ ಫೈನಲ್ ತಲುಪಿತ್ತು. ಆದರೆ ಎರಡೂ ಫೈನಲ್ ಗಳಲ್ಲಿ ಸೋಲನ್ನು ಅನುಭವಿಸಿ ನಿರಾಶೆ ಅನುಭವಿಸಿ ಈ ಬಾರಿ ಗೆಲ್ಲಲೇಬೇಕೆಂದು ಪಣ ತೊಟ್ಟಂತೆ ಆಡುತ್ತಿದೆ.
ಪಂದ್ಯ ಭಾರತೀಯ ಕಾಲಮಾನ 8 ಗಂಟೆಗೆ ಆರಂಭವಾಗಬೇಕಿದ್ದು, ಬಾರ್ಬಡಸ್ ನಲ್ಲಿ ಆಗ ಬೆಳಗು ಹರಿದಿರುತ್ತದೆ. ಈ ನಡುವೆ ಸಂಭವನೀಯ ಮಳೆಯ ಕಾರಣದಿಂದ ಇವತ್ತು ಪಂದ್ಯ ನಡೆಯುತ್ತದೋ ಇಲ್ಲವೋ ಎಂಬ ಅನುಮಾನ ಸೃಷ್ಟಿಯಾಗಿದೆ.
ಕೆರೇಬಿಯನ್ ದ್ವೀಪ ಸಮೂಹದಲ್ಲಿ ಮುಂಗಾರು ಕಾಲಿಟ್ಟಿದೆ. ಹೀಗಾಗಿ ಎಲ್ಲಡೆ ಮಳೆಯ ವಾತಾವರಣವಿದೆ. ಪಂದ್ಯ ನಡೆಯಬೇಕಿರುವ ಸಮಯದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಸ್ಥಳೀಯ ಹವಾಮಾನ ಇಲಾಖೆ ಹೇಳುತ್ತಿದೆ. ಬ್ರಿಡ್ಜ್ ಟೌನ್ ನಲ್ಲಿ ಇಂದು ಮಳೆ ಬೀಳುವ ಸಾಧ್ಯತೆ ಶೇ. 78ರಷ್ಟು ಇದೆ ಎಂದು ವರದಿ ಹೇಳುತ್ತಿದೆ. ಅದರ ಜೊತೆಯಲ್ಲಿ ಚಂಡಮಾರುತದ ಪ್ರಭಾವವೂ ಮಳೆ ಬರುವ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ.
ಬ್ರಿಡ್ಜ್ ಟೌನ್ ನ ಇಂದಿನ ಹವಾಮಾನದ ನಿರೀಕ್ಷೆ ಹೀಗಿದೆ:
ತಾಪಮಾನ: 31°C (ರಿಯಲ್ ಫೀಲ್ 35°C)
ಗಾಳಿ: E 35 km/h,
ಆರ್ದ್ರತೆ: 78%
ಡ್ಯೂ ಪಾಯಿಂಟ್: 26°C
ಮಳೆ: 78% ಸಂಭವನೀಯತೆ
ಮೋಡ ಆವರಿಸುವಿಕೆ: 99%
ಗೋಚರತೆ: 5 ಕಿ.ಮೀ
ಇಂದು ಒಂದು ವೇಳೆ ಮಳೆಯಿಂದಾಗಿ ಪಂದ್ಯ ರದ್ದಾದರೆ ಕ್ರಿಕೆಟ್ ಅಭಿಮಾನಿಗಳು ನಿರಾಶೆಪಡಬೇಕಾಗಿಲ್ಲ. ಯಾಕೆಂದರೆ ಫೈನಲ್ ಪಂದ್ಯಕ್ಕೆ ಹೆಚ್ಚುವರಿ ದಿನವನ್ನು ಕಾಯ್ದಿರಿಸಲಾಗಿದೆ. ಇಂದು ಪಂದ್ಯ ರದ್ದಾದರೆ ನಾಳೆ (ಭಾನುವಾರ) ನಡೆಯಲಿದೆ.