ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೆನ್‌ ಆಪ್ತರ ಮನೆ ಮೇಲೆ IT ದಾಳಿ

Most read

ರಾಂಚಿ : ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶನಿವಾರ ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್ ಸೊರೆನ್‌ ಅವರ ಆಪ್ತ ಸುನೀಲ್‌ ಶ್ರೀವಾಸ್ತವ ಸೇರಿದಂತೆ ಒಟ್ಟು ಒಂಬತ್ತು ಮಂದಿ ಮನೆಗಳ ಮೇಲೆ ಇಂದು ದಾಳಿ ನಡೆಸಿದ್ದಾರೆ.

ಇಂದು (ಶನಿವಾರ) ಬೆಳಗ್ಗೆ ಆರಂಭವಾದ ಕಾರ್ಯಾಚರಣೆಯಲ್ಲಿ ರಾಜ್ಯದ ರಾಜಧಾನಿ ರಾಂಚಿ ಮತ್ತು ಜೆಮ್‌ಶೆಡ್‌ಪುರದಲ್ಲಿನ ಜೆಎಂಎಂ (ಜಾರ್ಖಂಡ್‌ ಮುಕ್ತಿ ಮೋರ್ಚಾ) ಪಕ್ಷದ ಒಟ್ಟು ಒಂಬತ್ತು ಆವರಣಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಸಿಆರ್‌ಪಿಎಫ್‌ನ ಭದ್ರತಾ ತಂಡವೊಂದು ಐಟಿ ದಾಳಿಗೆ ನೆರವು ನೀಡುತ್ತಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ವ್ಯಾಪಾರ ಮತ್ತು ಗಣಿಗಾರಿಕೆ ಕುರಿತು ಜಾರಿ ನಿರ್ದೇಶನಾಲಯ (ಇಡಿ) ಮತ್ತು ಕೇಂದ್ರೀಯ ತನಿಖಾ ದಳ (ಸಿಬಿಐ) ನಡೆಸಿದ ಇತ್ತೀಚಿನ ತನಿಖೆಗಳಿಗೆ ಸಂಬಂಧಿಸಿ ಈ ದಾಳಿಯು ನಡೆಸಲಾಗುತ್ತಿದೆ ಎಂದು ಪಿಟಿಐ ವರದಿ ಮಾಡಿದೆ.

ಜಾರ್ಖಂಡ್‌ ವಿಧಾನಸಭೆ ಚುನಾವಣೆ ಕೆಲವೇ ದಿನಗಳು ಬಾಕಿ ಇರುವಂತೆ ಜೆಎಂಎಂ ಪಕ್ಷದ ನಾಯಕರ ಮನೆ ಮೇಲೆ ದಾಳಿ ನಡೆದಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ನವೆಂಬರ್ 13 ಮತ್ತು 20 ರಂದು ಜಾರ್ಖಂಡ್‌ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ.

More articles

Latest article