ಇಸ್ರೊ ನೂತನ ಅಧ್ಯಕ್ಷರಾಗಿ ಹಿರಿಯ ವಿಜ್ಞಾನಿ ಡಾ. ವಿ. ನಾರಾಯಣನ್ ನೇಮಕ

Most read

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಹೊಸ ಅಧ್ಯಕ್ಷರನ್ನಾಗಿ ತಮಿಳುನಾಡು ಮೂಲದ ವಿಜ್ಞಾನಿ ಡಾ. ವಿ. ನಾರಾಯಣನ್ ಅವರನ್ನು ನೇಮಕ ಮಾಡಲಾಗಿದೆ.

ಇಸ್ರೊದ ಈಗಿನ ಅಧ್ಯಕ್ಷ ವಿ. ಸೋಮನಾಥ್ ಅವರ ಅಧಿಕಾರಾವಧಿ ಜನವರಿ 14ರಂದು ಕೊನೆಗೊಳ್ಳಲಿದೆ. ರಾಕೆಟ್ ಮತ್ತು ಬಾಹ್ಯಾಕಾಶ ನೌಕೆಗಳ ಸಂಚಾಲನೆಯ ವಿಷಯ ಪರಿಣಿತರಾಗಿರುವ ನಾರಾಯಣನ್ ಅವರು ಸದ್ಯ ಕೇರಳದ ತಿರುವನಂತಪುರದಲ್ಲಿ ಕೇಂದ್ರ ಕಚೇರಿ ಹೊಂದಿರುವ ಇಸ್ರೊದ ‘ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್‌’ನ  (LPSC) ನಿರ್ದೇಶಕರಾಗಿ 2018ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

ನಾರಾಯಣನ್ ಅವರು ಐಐಟಿ ಖರಗ್‌ಪುರದಲ್ಲಿ ಎಂಜಿನಿಯರ್ ಪದವಿ ಮುಗಿಸಿ 1984 ರಲ್ಲಿ ಇಸ್ರೊ ಸೇರಿದ್ದರು. ಆರಂಭದಲ್ಲಿ ವಿಕ್ರಮ್ ಸಾರಾಬಾಯ್ ಬಾಹ್ಯಾಕಾಶ ಕೇಂದ್ರದಲ್ಲಿಯೂ ಕೆಲಸ ಮಾಡಿದ್ದರು. ನಂತರ 1989 ರಲ್ಲಿ ಕ್ರಯೋಜಿನಿಕ್ ಎಂಜಿನಿಯರಿಂಗ್ ವಿಷಯದಲ್ಲಿ ಐಐಟಿ ಖರಗ್‌ಪುರದಿಂದ ಎಂ.ಟೆಕ್ ಪದವಿಯನ್ನು ಮೊದಲ ಶ್ರೇಣಿಯೊಂದಿಗೆ ಉತ್ತೀರ್ಣಗೊಂಡ ನಂತರ  2001 ರಲ್ಲಿ ಅದೇ ಸಂಸ್ಥೆಯಿಂದ ಏರೋಸ್ಪೇಸ್ ಎಂಜಿನಿಯರಿಂಗ್ ವಿಷಯದಲ್ಲಿ ಪಿ. ಎಚ್‌ಡಿ ಪಡೆದುಕೊಂಡರು. 2001 ರಿಂದ ಇಸ್ರೊದ ರಾಕೆಟ್‌ಗಳಿಗೆ ಮತ್ತು ಬಾಹ್ಯಾಕಾಶ ನೌಕೆಗಳಿಗೆ ಅವಶ್ಯಕತೆ ಇರುವ ಸಂಚಾಲನೆಯ ಸಾಧನ ಸಲಕರಣೆಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಹೊರದೇಶಗಳ ಮೇಲಿನ ಅವಲಂಬನೆಯನ್ನು ತಗ್ಗಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಮಹತ್ವದ ಚಂದ್ರಯಾನದ ಪ್ರೊಪಲ್ಷನ್ ಸಿಸ್ಟಮ್‌ಗೆ ಕೆಲಸ ಮಾಡಿದ್ದ ನಾರಾಯಣನ್ ಅವರು ಸದ್ಯ ಇಸ್ರೊದ ಮಹತ್ವಾಕಾಂಕ್ಷೆಯ ಗಗನಯಾನ, ಚಂದ್ರಯಾನ–4 ಮತ್ತು ಸ್ಪೇಸ್ ಡಾಕಿಂಗ್ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಚೆನ್ನೈನ ಸತ್ಯಭಾಮ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ. ಬಾಹ್ಯಾಕಾಶಕ್ಕೆ ಸಂಬಂಧಿಸಿದ ದೇಶ, ವಿದೇಶದ ಅನೇಕ ಪ್ರತಿಷ್ಠಿತ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ. ಅಂತರರಾಷ್ಟ್ರೀಯ ಗಗನಯಾನಿಗಳ ಅಕಾಡೆಮಿಯ ಸದಸ್ತ್ವ ಪಡೆದುಕೊಂಡಿದ್ದಾರೆ. ಇಸ್ರೊದೊಂದಿಗೆ ನಾಲ್ಕು ದಶಕಗಳ ಅನುಭವ ಹೊಂದಿರುವ ಅವರು ಜನವರಿ 14 ರಿಂದ ಎರಡು ವರ್ಷಗಳ ಅವಧಿಗೆ ಇಸ್ರೊವನ್ನು ಮುನ್ನಡೆಸಲಿದ್ದಾರೆ.

More articles

Latest article