ಅಪ್ರಾಪ್ತ ಹುಡುಗಿಯ ಮೇಲೆ ಮುಖ್ಯಮಂತ್ರಿಯಾಗಿದ್ದ ಪ್ರಭಾವಿ ವ್ಯಕ್ತಿ ಲೈಂಗಿಕ ದೌರ್ಜನ್ಯ ಮಾಡಿದ ಆರೋಪಕ್ಕೆ ಒಳಗಾದಾಗ, ಅದಕ್ಕೆ ಪೂರಕವಾದ ಸಾಕ್ಷಿಗಳನ್ನೂ ಒದಗಿಸಿದಾಗ ಕೂಡಲೇ ಪೋಕ್ಸೋ ಪ್ರಕರಣ ದಾಖಲಿಸಿ ಬಂಧಿಸಿ ನ್ಯಾಯಾಂಗ ವಿಚಾರಣೆಗೆ ಒಳಪಡಿಸುವುದು ಕಾನೂನಾತ್ಮಕ ಪ್ರಕ್ರಿಯೆ. ಆದರೆ ಆರೋಪಿ ಅತ್ಯಂತ ಹೆಚ್ಚು ಪ್ರಭಾವಿಯಾದರೆ ಕಾನೂನೂ ಸಹ ತನ್ನ ಮೊನಚನ್ನು ಕಳೆದುಕೊಂಡು ಮೊಂಡಾಗುತ್ತದೆ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು
ಈ ನಮ್ಮ ದೇಶದಲ್ಲಿ ಎಲ್ಲರಿಗೂ ಒಂದೇ ಕಾನೂನು ಎಂದು ಸಂವಿಧಾನ ಹೇಳುತ್ತದೆ. ಆದರೆ ವಾಸ್ತವದಲ್ಲಿ ಎರಡು ರೀತಿಯ ಕಾನೂನುಗಳು ಜಾರಿಯಲ್ಲಿವೆ. ಒಂದು ಬಹುಸಂಖ್ಯಾತ ಜನಸಾಮಾನ್ಯ ಪ್ರಜೆಗಳಿಗೆ. ಇನ್ನೊಂದು ಅಧಿಕಾರ ಅಂತಸ್ತು ಪ್ರಭಾವಗಳುಳ್ಳ ಆಳುವ ವರ್ಗದ ಪ್ರಭುಗಳಿಗೆ. ಪ್ರಜಾ-ಪ್ರಭುತ್ವ ಅಂದ್ರೆ ಇದೇನಾ? ಕಾನೂನಿನ ಮುಂದೆ ಎಲ್ಲರೂ ಸಮಾನರು ಎನ್ನುವುದು ಕೇವಲ ಪುಸ್ತಕದ ಬದನೇಕಾಯಿನಾ?
ಇದಕ್ಕೆ ಬೇಕಾದಷ್ಟು ದೃಷ್ಟಾಂತಗಳನ್ನು ಕೊಡಬಹುದಾಗಿದೆ. ಅದಕ್ಕೊಂದು ಲೇಟೆಸ್ಟ್ ಉದಾಹರಣೆ ಮಾನ್ಯ ಯಡಿಯೂರಪ್ಪನವರ ಪ್ರಕರಣ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮಾಡಿದವರಿಗೆ ಶಿಕ್ಷಿಸಲು ಪೋಕ್ಸೋ (Protection Of Children from Sexual Offences Act (POCSO) ಎನ್ನುವ ಕಠಿಣ ಕಾನೂನು ಜಾರಿಯಲ್ಲಿದೆ. ಮಕ್ಕಳ ಮೇಲೆ ಯಾರೇ ಲೈಂಗಿಕ ದೌರ್ಜನ್ಯ ಮಾಡಿದ ದೂರು ದಾಖಲಾದರೆ ಕೂಡಲೇ ಬಂಧಿಸಿ ವಿಚಾರಣೆಗೆ ಒಳಪಡಿಸುವ ಕಾನೂನು ಇದಾಗಿದೆ. ಕಾಮಾಂಧರಿಂದ ಅಸಹಾಯಕ ಮಕ್ಕಳನ್ನು ರಕ್ಷಿಸುವ ಹಾಗೂ ಲೈಂಗಿಕವಾಗಿ ಮಕ್ಕಳ ಮೇಲೆ ದೌರ್ಜನ್ಯ ಎಸಗುವವರಿಗೆ ಕಾನೂನಿನ ಭಯವನ್ನು ಹುಟ್ಟಿಸುವ ಉದ್ದೇಶದಿಂದ ಈ ಪೋಕ್ಸೋ ಕಾನೂನು ಜಾರಿಯಾಗಿದೆ.
ಕಳೆದ ವಾರ ದೇವಸ್ಥಾನಕ್ಕೆ ಬಂದಿದ್ದ ಎಂಟು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಎನ್ನುವ ದೂರು ದಾಖಲಾದ ತಕ್ಷಣ ದೇವಸ್ಥಾನದ ಪೂಜಾರಿಯನ್ನು ಪೊಕ್ಸೋ ಕಾಯ್ದೆಯಡಿ ಬಂಧಿಸಲಾಯ್ತು. ಯಾರೇ ಈ ರೀತಿಯ ನೀಚ ಕೃತ್ಯಕ್ಕೆ ಪ್ರಯತ್ನಿಸಿದರೂ ಅಂತವರನ್ನು ಬಂಧಿಸಿ ವಿಚಾರಣೆಗೊಳಿಸಲೇಬೇಕು.
ಆದರೆ.. ಇದೇ ರೀತಿ ಅಪ್ರಾಪ್ತ ಹುಡುಗಿಯ ಮೇಲೆ ಮುಖ್ಯಮಂತ್ರಿಯಾಗಿದ್ದ ಪ್ರಭಾವಿ ವ್ಯಕ್ತಿ ಲೈಂಗಿಕ ದೌರ್ಜನ್ಯ ಮಾಡಿದ ಆರೋಪಕ್ಕೆ ಒಳಗಾದಾಗ, ಅದಕ್ಕೆ ಪೂರಕವಾದ ಸಾಕ್ಷಿಗಳನ್ನೂ ಒದಗಿಸಿದಾಗ ಕೂಡಲೇ ಪೋಕ್ಸೋ ಪ್ರಕರಣ ದಾಖಲಿಸಿ ಬಂಧಿಸಿ ನ್ಯಾಯಾಂಗ ವಿಚಾರಣೆಗೆ ಒಳಪಡಿಸುವುದು ಕಾನೂನಾತ್ಮಕ ಪ್ರಕ್ರಿಯೆ. ಆದರೆ ಆರೋಪಿ ಅತ್ಯಂತ ಹೆಚ್ಚು ಪ್ರಭಾವಿಯಾದರೆ ಕಾನೂನೂ ಸಹ ತನ್ನ ಮೊನಚನ್ನು ಕಳೆದುಕೊಂಡು ಮೊಂಡಾಗುತ್ತದೆ. ಉಳ್ಳವರ ರಕ್ಷಣೆಯನ್ನೂ ಮಾಡುತ್ತದೆ ಎನ್ನುವುದಕ್ಕೆ ದೊಡ್ಡ ಉದಾಹರಣೆ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪನವರ ಲೈಂಗಿಕ ಹಗರಣದ ಪ್ರಕರಣ.
ಯಡಿಯೂರಪ್ಪನವರ ಮೇಲೆ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಕೊಟ್ಟ ಆರೋಪವಿದೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆಗೆ ಇರುವ ಪೋಕ್ಸೋ ಕಾನೂನಿನ ಅನ್ವಯ ದೂರನ್ನೂ ದಾಖಲಿಸಿಕೊಳ್ಳಲಾಗಿದೆ. ಈ ಪ್ರಕರಣವನ್ನು ಕರ್ನಾಟಕ ಸರಕಾರ ಸಿಐಡಿ ತನಿಖೆಗೆ ಒಪ್ಪಿಸಿದೆ. ಪ್ರಕರಣದ ತನಿಖೆ ನಡೆಸಿದ ಸಿಐಡಿ 750 ಪುಟಗಳ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿಯಾಗಿದೆ. ಪ್ರಕರಣ ದಾಖಲಾದಾಗಲೇ ಆರೋಪಿಯನ್ನು ಬಂಧಿಸಬೇಕಿತ್ತು, ಆ ಪ್ರಯತ್ನವನ್ನೂ ಮಾಡಲಾಗಲಿಲ್ಲ. ಹೋಗಲಿ ಚಾರ್ಜ್ ಶೀಟ್ ಸಲ್ಲಿಕೆಯಾದ ಮೇಲೆಯಾದರೂ ಬಂಧನದ ಪ್ರಕ್ರಿಯೆ ಜಾರಿಯಾಗಬೇಕಿತ್ತು, ಅದೂ ಆಗಲಿಲ್ಲ. ಯಾಕೆಂದರೆ ಪ್ರಭಾವಿಯಾದ ಅಪರಾಧಿಗೆ ಪರೋಕ್ಷವಾಗಿ ನ್ಯಾಯಾಂಗವೇ ರಕ್ಷಣೆ ಒದಗಿಸಿತು.
ಯಡಿಯೂರಪ್ಪನವರು ತಮ್ಮ ಮೇಲಿರುವ ಪ್ರಕರಣ ರದ್ದು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಪೋಕ್ಸೊ ಪ್ರಕರಣಗಳ ವಿಚಾರಣೆ ನಡೆಸುವ ತ್ವರಿತಗತಿಯ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಎನ್.ಎಂ.ರಮೇಶರವರು ವಿಚಾರಣೆ ನಡೆಸಿ ಆರೋಪಿಗೆ ಹಾಗೂ ಸಾಕ್ಷನಾಶ ಮತ್ತು ಆಮಿಷ ಒಡ್ಡಿದ ಆರೋಪಿತರಾದ ಇನ್ನೂ ಮೂವರಿಗೆ ಸಮನ್ಸ್ ಜಾರಿಗೊಳಿಸಲು ಆದೇಶಿಸಿದರು. ಯಡಿಯೂರಪ್ಪನವರು ತಮ್ಮ ಮೇಲಿರುವ ಪ್ರಕರಣ ರದ್ದುಗೊಳಿಸಬೇಕೆಂದು ಹೈಕೋರ್ಟ್ ಮೆಟ್ಟಲೇರಿದರು.
ಉಚ್ಚ ನ್ಯಾಯಾಲಯವು ಪೋಕ್ಸೋ ಆರೋಪಿಯ ಬಂಧನಕ್ಕೆ ಆದೇಶಿಸಿ, ಸಂತ್ರಸ್ತೆಯ ಪರ ರಕ್ಷಣೆಗೆ ನಿಲ್ಲುತ್ತದೆ ಎನ್ನುವ ನಿರೀಕ್ಷೆ ಇತ್ತು. ಆದರೆ ಶಾಸಕರು ಮತ್ತು ಸಂಸದರ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ಹೈಕೋರ್ಟ್ ನ್ಯಾಯಪೀಠದ ನ್ಯಾಯಾಧೀಶರಾದ ಮಾನ್ಯ ದೀಕ್ಷಿತ್ ರವರು ನಿರೀಕ್ಷೆಗೆ ವಿರುದ್ಧವಾಗಿ ತೀರ್ಪು ನೀಡಿ ಗುರುತರ ಪ್ರಕರಣದ ಆರೋಪಿಗೆ ಬಂಧನದಿಂದ ರಕ್ಷಣೆ ಒದಗಿಸಿದರು. ಇದಕ್ಕಿಂತಾ ಸೋಜಿಗದ ಸಂಗತಿ ಏನೆಂದರೆ ಆರೋಪಿಯನ್ನು ಬಂಧಿಸುವುದಿರಲಿ ನ್ಯಾಯಪೀಠವು ಕೊಟ್ಟ ಕಾರಣಗಳು ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂದು ನಂಬಿಸಲಾದ ಮಾತಿಗೆ ವಿರುದ್ಧವಾಗಿದ್ದವು.
“ಆರೋಪಿ ಮಾಜಿ ಮುಖ್ಯಮಂತ್ರಿಯಾಗಿದ್ದು ಇಂತವರ ಬಗ್ಗೆ ತನಿಖೆ ನಡೆಸುವಾಗ ಪೊಲೀಸರ ನಡೆ ಕೋರ್ಟಿಗೆ ಸಂದೇಹ ಬಾರದಂತೆ ಇರಬೇಕು. ಆರೋಪಿಯನ್ನು ವಶದಲ್ಲಿ ಇರಿಸಿಕೊಂಡೇ ವಿಚಾರಣೆ ನಡೆಸಬೇಕೆಂಬ ಹಠ ಪ್ರಾಮಾಣಿಕವಾಗಿಲ್ಲ” ಎಂದು ನ್ಯಾಯಾಧೀಶರು ತನಿಖಾ ಸಂಸ್ಥೆಗಳಿಗೆ ಎಚ್ಚರಿಕೆ ಕೊಟ್ಟು ಆರೋಪಿ ಯಡಿಯೂರಪ್ಪನವರನ್ನು ಬಂಧನದ ಭೀತಿಯಿಂದ ಪಾರುಮಾಡಿದರು. ಹಾಗಾದರೆ ಮಾಜಿ ಮುಖ್ಯಮಂತ್ರಿಯಾದವರು ಏನು ಬೇಕಾದರೂ ಮಾಡಬಹುದಾ? ಅಂತವರು ಕಾನೂನಿಗೆ ಅತೀತರಾ? ತನಿಖಾ ಸಂಸ್ಥೆಗಳ ಮೇಲೆ ನ್ಯಾಯಪೀಠಕ್ಕೆ ಅಪನಂಬಿಕೆ ಇದೆಯಾ? ಹಾಗಾದರೆ ಆರೋಪಿಯನ್ನು ಬಂಧಿಸಿ ವಿಚಾರಣೆ ಮಾಡುವುದು ಬೇಕಿಲ್ಲವಾದರೆ ಪೋಕ್ಸೋ ಕಾನೂನಿನಡಿ ಬಂಧಿತರಾದ ಯಾರನ್ನೂ ಬಂಧಿಸದೇ ವಿಚಾರಣೆ ಮುಂದುವರೆಸುವ ಮಾನದಂಡ ಬಳಸಲಾಗುತ್ತದಾ?
ಇನ್ನೂ ಮುಂದುವರೆದ ನ್ಯಾಯಪೀಠವು “ಯಡಿಯೂರಪ್ಪ ಯಾರೋ ವೆಂಕ ನಾಣಿ ಸೀನನಂತಹ ಸಾಮಾನ್ಯ ವ್ಯಕ್ತಿಯಲ್ಲ, ಅವರು ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. ತಮ್ಮ ಬದುಕಿನ ಸಂಧ್ಯಾಕಾಲದಲ್ಲಿದ್ದಾರೆ. ಸ್ವಾಭಾವಿಕವಾಗಿಯೇ ದೇಹದ ಅಡಚಣೆಗಳಿರುತ್ತವೆ” ಎಂದೂ ಮಾನ್ಯ ನ್ಯಾಯಮೂರ್ತಿಗಳು ಪ್ರಾಸಿಕ್ಯೂಶನ್ ರವರಿಗೆ ಹೇಳಿದ್ದಾರೆಂದು ವರದಿಯಾಗಿದೆ. ಅವರ ಮಾತುಗಳಿಂದಲೇ ಅನುಮಾನ ಬಾರದೇ ಇರದು, ವೆಂಕ, ನಾಣಿ, ಸೀನನಂತಹ ಜನಸಾಮಾನ್ಯರಿಗೆ ಒಂದು ಕಾನೂನು ಹಾಗೂ ಅಧಿಕಾರಸ್ಥರಾಗಿದ್ದವರಿಗೆ ಇನ್ನೊಂದು ರೀತಿಯ ಕಾನೂನು ಎಂದು. ಬದುಕಿನ ಸಂಧ್ಯಾಕಾಲದಲ್ಲಿದ್ದವರು ಅಂದರೆ ವಯೋವೃದ್ಧರಾದವರು ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಕೊಟ್ಟ ಪ್ರಕರಣದ ಆರೋಪಿಗಳಾಗಿದ್ದರೆ ಅವರು ಪೋಕ್ಸೊ ಕಾಯ್ದೆ ಪ್ರಕಾರ ಬಂಧನದಿಂದ ರಕ್ಷಣೆ ಪಡೆಯಬಹುದು ಎಂದು ಪೋಕ್ಸೊ ಕಾಯ್ದೆಯಲ್ಲಿ ಇದೆಯಾ? ಹಾಗಾದರೆ ಈ ಕಾನೂನು ವಯೋವೃದ್ಧರಿಗೆ ಒಂದು ರೀತಿ ಹಾಗೂ ಬೇರೆಯವರಿಗೆ ಇನ್ನೊಂದು ರೀತಿಯಲ್ಲಿ ಅಪ್ಲೈ ಆಗುತ್ತದಾ? ಮುಂದೆ ಇದೇ ಆದೇಶವನ್ನು ರೆಫರ್ ಮಾಡಿ ಪೋಕ್ಸೋ ಕಾಯ್ದೆಯಲ್ಲಿ ಬಂಧಿತರಾಗುವ ವಯಸ್ಸಾದವರೆಲ್ಲರೂ ಬಂಧನದಿಂದ ರಕ್ಷಣೆ ಪಡೆಯುವ ಅವಕಾಶವೂ ಇದೆಯಲ್ಲವೇ?. ದೇಹದ ಬಯಕೆ, ತನುವಿನ ಅಡಚಣೆಗಳು ವಯೋವೃದ್ಧರಲ್ಲಿ ಸಹಜವಾಗಿ ಇರುವುದಾದರೆ ಅವರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಾಲಕಿಯರನ್ನು ರಕ್ಷಿಸುವವರು ಯಾರು?
ಅರ್ಜಿದಾರರು ತಪ್ಪಿಸಿಕೊಂಡು ಹೋಗುವ ವ್ಯಕ್ತಿಯಲ್ಲ,. ಅಷ್ಟಕ್ಕೂ ವಶದಲ್ಲಿ ಇರಿಸಿಕೊಂಡೇ ವಿಚಾರಣೆ ನಡೆಸಬೇಕಾದ ಅನಿವಾರ್ಯತೆ ಆರೋಪದಲ್ಲಿ ಇದೆಯಾ? ಒಬ್ಬ ಮಾಜಿ ಮುಖ್ಯಮಂತ್ರಿಗೆ ಈ ರೀತಿಯ ಭೀತಿ ಸುತ್ತಿಕೊಂಡರೆ, ಜನಸಾಮಾನ್ಯರ ಗತಿ ಏನು? ದೂರುದಾರ ಮಹಿಳೆಯ ನಡೆಯ ಬಗ್ಗೆ ಸಮಗ್ರ ವಿವರ ಕೊಡಿ” ಎಂದು ನ್ಯಾಯಮೂರ್ತಿಗಳು ಪ್ರಾಸಿಕ್ಯೂಶನ್ನಿಗೆ ಕೇಳಿದ್ದಾರೆ. ಅರ್ಜಿದಾರರು ತಪ್ಪಿಸಿಕೊಳ್ಳುವ ವ್ಯಕ್ತಿಯಲ್ಲಾ ಎನ್ನುವುದೇ ನಿಜವಾಗಿದ್ದಲ್ಲಿ ಪೊಲೀಸರು ಬಂಧಿಸುವ ಭೀತಿಯಿಂದ ಜಾಮೀನು ಸಿಗುವವರೆಗೂ ನಾಪತ್ತೆಯಾಗಿ ಅಡಗಿಕೊಂಡಿದ್ದು ಯಾಕೆ? ‘ವಶದಲ್ಲಿಟ್ಟುಕೊಂಡು ವಿಚಾರಣೆ ನಡೆಸುವ ಆರೋಪ ಇದೆಯಾ?’ ಎನ್ನುವ ನ್ಯಾಯಪೀಠದ ಮಾತುಗಳು ಎಲ್ಲಾ ಪೋಕ್ಸೋ ಪ್ರಕರಣಗಳ ಆರೋಪಿಗಳಿಗೂ ಅನ್ವಯವಾಗುತ್ತದಾ? ಜನಗಳದ್ದೂ ಅದೇ ಪ್ರಶ್ನೆ- ಪ್ರಭುಗಳಿಗೆ ಹೀಗೆ ಕಾನೂನಿನ ರಿಯಾಯತಿ ಕೊಡುವುದಾದರೆ ಜನಸಾಮಾನ್ಯ ಆರೋಪಿಗಳಿಗೂ ಬಂಧನದಿಂದ ರಿಯಾಯತಿ ಸಿಗುತ್ತದಾ? ಮಾಜಿ ಮಂತ್ರಿಗಳನ್ನು ಬಂಧನದ ಭೀತಿಯಿಂದ ಬಿಡುಗಡೆ ಮಾಡಿದಾಗ ಬೇರೆ ಪೋಕ್ಸೊ ಪ್ರಕರಣದ ಆರೋಪಿಗಳಿಗೂ ಇದೇ ರೀತಿಯ ಅಭಯ ದೊರೆಯುತ್ತದಾ? ಈಗ ವಿಚಾರಣೆ ಆಗಬೇಕಾದದ್ದು ನಡೆದಿದೆ ಎನ್ನಲಾದ ಅಪರಾಧ ಹಾಗೂ ಅದಕ್ಕೆ ಕಾರಣವಾದ ಅಪರಾಧಿಯ ಬಗ್ಗೆ. ಆರೋಪಿಯನ್ನು ಬಂಧನದ ಭೀತಿಯಿಂದ ಮುಕ್ತಗೊಳಿಸಿ ದೂರುದಾರರ ಹಿನ್ನೆಲೆಯ ಸಮಗ್ರ ವರದಿಯ ಅಗತ್ಯವೇನಿದೆ? ಈಗಾಗಲೇ ದೂರುದಾರೆಯಾಗಿದ್ದ ಸಂತ್ರಸ್ತೆಯ ತಾಯಿ ಮೃತಪಟ್ಟಿದ್ದಾರೆ. ಅವರ ಅಕಾಲಿಕ ಸಾವೂ ಅನುಮಾನಕ್ಕೆ ಕಾರಣವಾಗಿದೆ. ದೂರುದಾರರ ಹಿನ್ನೆಲೆಗಿಂತಲೂ ಈಗ ಅಗತ್ಯವಾಗಿರುವುದು ಅಪರಾಧ ನಡೆದಿದೆಯೋ ಇಲ್ಲವೋ ಎನ್ನುವ ಕುರಿತ ವಿಚಾರಣೆ.
ಮಾಜಿ ಮಂತ್ರಿಗಳು ಸಹಾಯ ಕೇಳಿಕೊಂಡು ಬಂದ ಮಹಿಳೆಯ ಮಗಳಿಗೆ ಲೈಂಗಿಕ ಕಿರುಕುಳ ಕೊಟ್ಟಿಲ್ಲ ಎನ್ನುವುದೇ ನಿಜವಾದರೆ ತಮ್ಮ ಅನುಯಾಯಿಗಳಿಂದ ದೂರುದಾರರ ಬಾಯಿಮುಚ್ಚಿಸಲು ಪ್ರಯತ್ನಿಸಿದ್ದು ಯಾಕೆ? ಆಮಿಷ ಒಡ್ಡಿ ಸಾಕ್ಷಿ ನಾಶಕ್ಕೆ ಪ್ರಯತ್ನಿಸಿದ್ದು ಯಾಕೆ? ಹಾಗೆ ಮಾಡಿದ ಮೂವರ ಮೇಲೆಯೂ ಮೊಕದ್ದಮೆ ದಾಖಲಿಸಲಾಗಿರುವುದರಿಂದ ಮೊದಲು ಆ ಮೂವರನ್ನು ಬಂಧಿಸಿ ತೀವ್ರವಾಗಿ ವಿಚಾರಣೆ ನಡೆಸಿ ಸತ್ಯವನ್ನು ಕಂಡುಕೊಳ್ಳಲು ಆದೇಶಿಸ ಬೇಕಾದದ್ದು ನ್ಯಾಯಪೀಠದ ಹೊಣೆಗಾರಿಕೆಯಲ್ಲವೇ? ಪ್ರಭಾವಿಯ ಪೋಕ್ಸೊ ಪ್ರಕರಣ ಮುಂದೆ ನಕಾರಾತ್ಮಕ ಮಾದರಿಯಾಗಬಾರದು. ಇದೇ ಪ್ರಕರಣವನ್ನು ಉಲ್ಲೇಖಿಸಿ ಕಾನೂನಿನ ಬಲೆಯಿಂದ ನುಣುಚಿಕೊಳ್ಳಲು ಬೇರೆ ಆರೋಪಿಗಳ ಸಮರ್ಥನೆಗೆ ಕಾರಣವಾಗಬಾರದು. ತಪ್ಪು ಮಾಡಿದವರು ಸಾಮಾನ್ಯ ಪ್ರಜೆಯೋ ಇಲ್ಲ ಅಸಾಮಾನ್ಯ ಪ್ರಭುವೊ, ಎಲ್ಲರೂ ಕಾನೂನಾತ್ಮಕ ಪ್ರಕ್ರಿಯೆಗೆ ಒಳಗಾಗಲೇಬೇಕು. ಆಗಲೇ ನ್ಯಾಯಾಂಗದ ಮೇಲೆ ಜನರ ವಿಶ್ವಾಸಾರ್ಹತೆ ಹೆಚ್ಚಲು ಸಾಧ್ಯ. ಕಾನೂನಿನ ಅಡಿಯಲ್ಲಿ ಪ್ರಜೆಗಳು ಪ್ರಭಾವಿಗಳು ವೃದ್ಧರು ಯಾರೇ ಇರಲಿ ಎಲ್ಲರೂ ಸಮಾನರು ಎನ್ನುವುದನ್ನು ನ್ಯಾಯಪೀಠಗಳು ತಮ್ಮ ನಿಷ್ಪಕ್ಷಪಾತ ತೀರ್ಮಾನಗಳಿಂದ ಮನವರಿಕೆ ಮಾಡಿಕೊಡಬೇಕು.
ಆದರೆ.. ನಮ್ಮ ದೇಶದ ಕಾನೂನಿನ ಬಲೆ ಇರೋದೇ ಹೀಗೆ, ಇಲ್ಲಿ ಚಿಕ್ಕಪುಟ್ಟ ಮೀನುಗಳು ಬಲೆಗೆ ಸಿಕ್ಕಾಕಿಕೊಳ್ಳುತ್ತವೆ, ಹಾಗೂ ತಿಮಿಂಗಿಲಗಳು ಬಲೆಯನ್ನೇ ಛಿದ್ರಗೊಳಿಸಿ ಪಾರಾಗುತ್ತವೆ. ಅಪರಾಧಿಗಳಿಗೆ ಕಾನೂನಿನ ಬಲೆಯಲ್ಲಿ ಬಂಧಿಸಿ ಶಿಕ್ಷಿಸಬೇಕಾದ ಮೀನುಗಾರರ ಸಾಮರ್ಥ್ಯವನ್ನೂ ಮೀರಿ ತಿಮಿಂಗಿಲಗಳು ತಮ್ಮ ಶಕ್ತಿ ಸಾಮರ್ಥ್ಯ ಬಳಸಿ ಪಾರಾಗುತ್ತವೆ. ಹೀಗಿರುವಾಗ ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂದು ನಂಬುವುದಾದರೂ ಹೇಗೆ? ಅಪರಾಧವೆಸಗಿದ ಪ್ರಜೆಗಳಿಗೆ ಶಿಕ್ಷೆ ಪ್ರಭುಗಳಿಗೆ ರಕ್ಷೆ ಎನ್ನುವುದಾದರೆ ಜನರಲ್ಲಿ ಕಾನೂನಿನ ಮೇಲೆ ನಂಬಿಕೆ ಹೇಗೆ ಬರುತ್ತದೆ? ಹೀಗೆ ಅನೇಕ ಪ್ರಶ್ನೆಗಳಿವೆ. ಉತ್ತರಿಸುವವರು ಯಾರು?
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು, ಪತ್ರಕರ್ತರು
ಇದನ್ನೂ ಓದಿ- ಮೋಹನದಾಸ ಪೈಯೂ, ಆಧುನಿಕ ಶಿಕ್ಷಣವೂ, ವಿವೇಕವೂ…