ಸದನದ ಹಲ್ವಾ ಪ್ರಸಂಗದಲ್ಲಿ ನಿಜಾಂಶ ಇದೆ ಅಲ್ವಾ?

Most read

‘ಎಲ್ಲ ಜಾತಿ ಸಮುದಾಯಗಳ ಪ್ರಾತಿನಿಧ್ಯ ಇರುವ ಬಜೆಟ್ ತಯಾರಿ ತಂಡವನ್ನು ರಚಿಸಬೇಕು ಹಾಗೂ ಬಜೆಟ್ ಹಲ್ವಾದ ಪಾಲು ಎಲ್ಲಾ ಜಾತಿ ಸಮುದಾಯಗಳಿಗೂ ಹಂಚಿಕೆಯಾಗಬೇಕು’ ಎನ್ನುವುದೇ ಪ್ರತಿಪಕ್ಷ ನಾಯಕನ  ಹಲ್ವಾ ಪ್ರಸ್ತಾವನೆಯ ಹಿಂದಿರುವ ಉದ್ದೇಶವಾಗಿದೆ- ಶಶಿಕಾಂತ ಯಡಹಳ್ಳಿ, ಪತ್ರಕರ್ತರು.

ಆ ಒಂದು ಹಲ್ವಾ ಹಂಚಿ ತಿನ್ನುವ ಫೋಟೋ ಜುಲೈ 29 ರಂದು ಲೋಕಸಭೆಯ ಅಧಿವೇಶನದಲ್ಲಿ ಸಂಚಲನ ಮೂಡಿಸಿತು. ಫೋಟೋ ಒಂದನ್ನು ಪ್ರದರ್ಶಿಸಿ ದೇಶದ ಆಡಳಿತದ ಮೇಲೆ ಪ್ರಬಲ ಜಾತಿಯವರ ಪ್ರಭಾವ ಹೇಗಿದೆ ಎಂಬುದರ ಪ್ರಾತ್ಯಕ್ಷಿಕೆ ಡೆಮೊ ಒಂದನ್ನು ಪ್ರತಿಪಕ್ಷದ ನಾಯಕರಾದ ರಾಹುಲ್ ಗಾಂಧಿ  ತೋರಿಸಿದರು. ಸಭಾಧ್ಯಕ್ಷರು  ಅಡೆತಡೆ ಒಡ್ಡುತ್ತಲೇ ಇದ್ದರು. ವಿತ್ತ ಸಚಿವೆ ತಲೆ ಚಚ್ಚಿಕೊಂಡು ಸಿನಿಕತನದ ನಗೆ ಬೀರುತ್ತಿದ್ದರು. ಬಿಜೆಪಿ ಸಂಸದರು ಆಗಾಗ ಕೋರಸ್ಸಲ್ಲಿ ಸದ್ದು ಮಾಡುತ್ತಿದ್ದರು. ಆದರೂ ವಿಚಲಿತರಾಗದ ರಾಹುಲ್ ಗಾಂಧಿ ಈ ಎಲ್ಲರ ಕಾಲೆಳೆಯುತ್ತಲೇ ತಾವು ಏನನ್ನು ಹೇಳಬೇಕಾಗಿತ್ತೋ ಅದನ್ನು ಹೇಳಿ ಮುಗಿಸಿದರು. ದೇಶದ ಬಹುಸಂಖ್ಯಾತ ಜನರಿಗೆ ಯಾವ ಸಂದೇಶ ಕೊಡಬೇಕಾಗಿತ್ತೋ ಅದನ್ನು ಕೊಡುತ್ತಲೇ ಇದ್ದರು.

ಆಗಿದ್ದಿಷ್ಟೇ, ಬಜೆಟ್ ತಯಾರಿಯ ಹಿಂದೆ ಕೆಲಸ ಮಾಡಿದ ತಂಡವು ಬಜೆಟ್ ತಯಾರಿ ಮುಗಿದ ನಂತರ ಹಲ್ವಾ ಮಾಡಿ ಹಂಚಿ ತಿಂದು ಸಂಭ್ರಮಿಸುವುದು ಸಂಪ್ರದಾಯ. ಆ ಫೋಟೋವನ್ನೇ ರಾಹುಲ್ ರವರು ನಿಯಮ ಮೀರಿ ಸದನದ ಒಳಗೆ ತಂದು ಪ್ರದರ್ಶಿಸಿ ಫೋಟೋದ ಹಿಂದಿರುವ ಮೇಲ್ಜಾತಿ ಹುನ್ನಾರವನ್ನು ಅನಾವರಣ ಗೊಳಿಸಿದರು. 

ಇಷ್ಟಕ್ಕೂ ಆ ಹಲ್ವಾ ಹಂಚಿಕೆ ಫೋಟೋ ಯಾರೂ ನೋಡದ್ದೇನೂ ಅಲ್ಲ. ಈಗಾಗಲೇ ಕೆಲವಾರು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ಆದರೆ ಯಾರ ಅರಿವಿಗೂ ಬರದ, ಫೋಟೋದೊಳಗಿನ ಹಿಡನ್ ಸತ್ಯದ ಸಮರ್ಥನೆಗೆ  ಸದನವು ಸಾಕ್ಷಿಯಾಯಿತು. ಅದೇನೆಂದರೆ.. ರಾಹುಲ್ ಗಾಂಧಿಯವರೇ ಹೇಳಿದಂತೆ “ಈ ವರ್ಷದ, ಈ ದೇಶದ ಬಜೆಟ್ ತಯಾರಿಸಿದವರು 20 ಜನ ಅಧಿಕಾರಿಗಳು. ಅದರಲ್ಲಿ ಒಬ್ಬ ಮುಸ್ಲಿಂ ಹಾಗೂ ಇನ್ನೊಬ್ಬ ಹಿಂದುಳಿದ ವರ್ಗದವರನ್ನು ಹೊರತು ಪಡಿಸಿದರೆ ಉಳಿದವರೆಲ್ಲರೂ ಪ್ರಬಲ ಜಾತಿ ಅಧಿಕಾರಿಗಳು. ಇರುವ ಈ ಇಬ್ಬರನ್ನೂ ಸಹ ಫೋಟೋದಲ್ಲಿ ತೋರಿಸದೆ ಮರೆಮಾಚಲಾಗಿದೆ. ದಲಿತರು, ಆದಿವಾಸಿಗಳಿಗೆ ಅಲ್ಲಿ ಪ್ರಾತಿನಿಧ್ಯವೇ ಇಲ್ಲ. ಹೀಗಾಗಿ ಪ್ರಬಲ ವರ್ಗದವರೇ ಬಜೆಟ್ ಎನ್ನುವ ಹಲ್ವಾ ತಯಾರಿಸಿ, ಪ್ರಬಲ ಜಾತಿಯವರಿಗೆ ಹಂಚಿಕೆ ಮಾಡಿದ್ದಾರೆ. ಒಂದೆರಡು ಪರ್ಸೆಂಟ್ ಇರುವ ಪ್ರಬಲ ವರ್ಗದ ಸಮುದಾಯದ ಅಧಿಕಾರಿಗಳು ಅದೇ ಪರ್ಸೆಂಟೇಜ್ ಜನರ ಅನುಕೂಲಕ್ಕಾಗಿ ಬಜೆಟ್ ಹಂಚಿಕೆ ಮಾಡಿದ್ದಾರೆ, ಇದರಿಂದಾಗಿ 95% ಗಿಂತಲೂ ಹೆಚ್ಚಿರುವ ಇತರೆ ಜಾತಿ ಸಮುದಾಯಗಳಿಗೆ ಬಜೆಟ್‌ ನಲ್ಲಿ ಅನ್ಯಾಯವಾಗಿದೆ” ಎಂಬುದು ರಾಹುಲ್ ಗಾಂಧಿಯವರ ವಾದ. ಅದಕ್ಕೆ ರೂಪಕವಾಗಿ ಹಲ್ವಾ ಪ್ರಕರಣವನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಈ ದೇಶದ ನೀತಿ ನಿರೂಪಣೆ ರಚನೆ ಮಾಡುತ್ತಿರುವ ಪ್ರಬಲ ಜಾತಿಯವರ ಮೇಲಾಟವನ್ನೇ ಪ್ರಶ್ನಿಸಿದ್ದಾರೆ.

ಸತ್ಯವನ್ನು ಯಾರು ಹೇಳಿದರೇನು? ಅವರನ್ನು ಮೆಚ್ಚದೇ ಇರಲು ಸಾಧ್ಯವೇನು?  ರಾಹುಲ್ ಗಾಂಧಿಯವರು ಸದನದಲ್ಲಿ ನಿಜವನ್ನೇ ನುಡಿದಿದ್ದಾರೆ. ಇಡೀ ದೇಶದ ಆಡಳಿತದಲ್ಲಿ ಇರುವ ಪ್ರಬಲ ಜಾತಿಗಳ  ಪ್ರಭಾವ ಹಾಗೂ ಅನ್ಯ ಜಾತಿ ಸಮುದಾಯಗಳ ನಿರ್ಲಕ್ಷ್ಯವನ್ನೇ ತೆರೆದು ತೋರಿಸಿದ್ದಾರೆ. ಹಲವಾರು ವರ್ಷಗಳಿಂದ ಜಾರಿಯಲ್ಲಿರುವ ಜಾತಿ ವ್ಯವಸ್ಥೆಯ ತಾರತಮ್ಯವನ್ನು ಬಯಲು ಮಾಡಿದ್ದಾರೆ.

ಈ ದೇಶದ ಶೇಕಡಾ 95 ರಷ್ಟು ಜನತೆ ಜಾತಿ ಗಣತಿಯನ್ನು ಅಪೇಕ್ಷಿಸುತ್ತಿದ್ದಾರೆ.  ಇಡೀ ವ್ಯವಸ್ಥೆಯಲ್ಲಿ ನಮ್ಮ ಭಾಗವಹಿಸುವಿಕೆ ಎಷ್ಟಿದೆ ಹಾಗೂ ತಮ್ಮ ಪಾಲು ಎಷ್ಟಿದೆ ಎಂಬುದನ್ನು ತಿಳಿದು ಕೊಳ್ಳಬೇಕಿದೆ. ಆದರೆ ಬಜೆಟ್ ಹಲ್ವಾವನ್ನು ಹಂಚುವವರು ಹಾಗೂ ಫಲಾನುಭವಿಗಳು ಅದೇ ಎರಡು ಮೂರು ಪರ್ಸೆಂಟ್ ಜನರೇ. 

ಹೌದಲ್ವಾ.. ಪ್ರಜೆಗಳಿಗಾಗಿ, ಪ್ರಜೆಗಳಿಂದ, ಪ್ರಜೆಗಳಿಗೋಸ್ಕರ ಪ್ರಜಾಪ್ರಭುತ್ವ ವ್ಯವಸ್ಥೆ ಇರೋದು ಎಂದು ಸಂವಿಧಾನ ಹೇಳುತ್ತದೆ. ಆದರೆ, ಉಳ್ಳವರಿಂದ, ಉಳ್ಳವರಿಗಾಗಿ, ಉಳ್ಳವರಿಗೋಸ್ಕರ, ಉಳ್ಳವರ ಪರವಾಗಿ ಈ ದೇಶದ ನೀತಿ ನಿರೂಪಣಾ ಆಳುವ ವ್ಯವಸ್ಥೆ ಇರುತ್ತದೆ ಎಂಬುದು ಮನದಟ್ಟಾಗಿದೆ. ಯಾರು ಒಪ್ಪಲಿ ಬಿಡಲಿ ಮನುವಾದಿ ಜಾತಿ ವ್ಯವಸ್ಥೆಯೇ ಈಗಲೂ ಪರೋಕ್ಷವಾಗಿ ಇಡೀ ದೇಶವನ್ನು ನಿಯಂತ್ರಿಸುತ್ತಿದೆ. ದೇಶದ ಜನರ ಶ್ರಮ ಹಾಗೂ ಸಂಪನ್ಮೂಲಗಳ ಹೆಚ್ಚಿನ ಫಲಾನುಭವಿಗಳೂ ಸಹ ಮೇಲ್ವರ್ಗದವರೇ ಆಗಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳೇ ಕಳೆದಿದ್ದರೂ ಪ್ರಬಲ ವರ್ಗದವರು ಮೇಲಕ್ಕೆ ಏರುತ್ತಲೇ ಇರುವುದಕ್ಕೆ, ಇತರೆ ವರ್ಗದವರು ಇದ್ದಲ್ಲೇ ಇರುವುದಕ್ಕೆ ಕಾರಣವೇ ಈ ತಾರತಮ್ಯ ವ್ಯವಸ್ಥೆ. 

ಆಡಳಿತಾಂಗದ ಆಯಕಟ್ಟಿನಲ್ಲಿ ಪ್ರಬಲ ವರ್ಗದವರೇ ಇದ್ದಾರೆ, ನೀತಿ ನಿರೂಪಣೆ ಹಾಗೂ ಯೋಜನೆಗಳ ಅನುಷ್ಟಾನದ ಹೊಣೆ ಅವರ ನಿಯಂತ್ರಣದಲ್ಲಿದೆ.  ಹೀಗಿರುವಾಗ ಜನರ ಭರವಸೆ ಖಾಯಂಗೊಳಿಸಲು ಯೋಜನೆಗಳೆಂಬ ಭ್ರಮೆಗಳನ್ನು ಕಾಲಕಾಲಕ್ಕೆ ಪ್ರಭುತ್ವ ಪ್ರಾಯೋಜಿಸಿದರೂ ಆ ಯೋಜನೆಗಳ ಬಹುತೇಕ ಫಲಾನುಭವಿಗಳೂ ಸಹ ಇದೇ ಪ್ರಬಲ ವರ್ಗದವರಾಗಿರುತ್ತಾರೆ. ಹಾಗಿಲ್ಲದೆ ಹೋದರೆ ಇಷ್ಟು ವರ್ಷಗಳಲ್ಲಿ ಈ ದೇಶದ ಚಿತ್ರಣವೇ ಬದಲಾಗುತ್ತಿತ್ತು. ವರ್ಗ ತಾರತಮ್ಯವಿಲ್ಲದ, ಜಾತಿ ಅಸಮಾನತೆ ಇಲ್ಲದ, ಸಮಸಮಾಜವನ್ನು ನಿರ್ಮಿಸಬಹುದಾಗಿತ್ತು, ಸಂವಿಧಾನದಲ್ಲಿರುವ ಸಮಾನತೆಯ ಆಶಯಗಳು ಜಾರಿಯಾಗಬಹುದಾಗಿತ್ತು.

ಆದರೆ ಮೇಲ್ವರ್ಗದವರಿಗೆ ಹಾಗೂ ಗೋದಿ ಮೀಡಿಯಾದವರಿಗೆ ರಾಹುಲ್ ಗಾಂಧಿಯವರ ಮಾತುಗಳು ಅಪಥ್ಯವಾಗಿವೆ. ‘ರಾಹುಲ್ ರವರು ಜಾತಿ ವಿಭಜನೆ ಮಾಡುತ್ತಿದ್ದಾರೆ, ಎಲ್ಲದರಲ್ಲೂ ಜಾತಿಯನ್ನು ಹುಡುಕುತ್ತಿದ್ದಾರೆ, ಜಾತಿ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಮೋದಿ ಮಡಿಲ ಮಾಧ್ಯಮಗಳು ಭೋರ್ಗರೆಯುತ್ತಿವೆ. ಆಳುವ ಪಕ್ಷದ ಬಿಜೆಪಿಗರು ರಾಹುಲ್ ರವರ ಮಾತುಗಳಿಗೆ ಜಾತಿಬಣ್ಣ ಬಳಿದು ವ್ಯಂಗ್ಯವಾಡುತ್ತಿದ್ದಾರೆ.

ಆದರೆ ಜಾತಿ ಎನ್ನುವುದು ಈ ದೇಶದ ವಾಸ್ತವ. ಜಾತಿ ವ್ಯವಸ್ಥೆಯನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ. ಕೆಳ ಜಾತಿ ಸಮುದಾಯಗಳಿಗೆ ಅಧಿಕಾರ ಹಾಗೂ ಸಂಪನ್ಮೂಲಗಳನ್ನು ಹೇಗೆ ಜನಸಂಖ್ಯೆ ಆಧಾರದಲ್ಲಿ ಹಂಚಿಕೆ ಮಾಡಬೇಕು, ಪ್ರಬಲ ವರ್ಗದವರ ನಿಯಂತ್ರಣದಿಂದ ಆಡಳಿತಾಂಗವನ್ನು ಹೇಗೆ ಮುಕ್ತಮಾಡಬೇಕು ಎನ್ನುವುದೇ ದೇಶವಾಳುವವರ ಆದ್ಯತೆಯಾಗ ಬೇಕಾಗಿದೆ. ಈ ಆಶಯವನ್ನು ಸಾಕಾರ ಮಾಡಲು ರಾಹುಲ್ ಗಾಂಧಿಯವರು ಪ್ರಯತ್ನಿಸುವುದೇ ಆದರೆ ಅವರಿಗೂ ಒಂದು ಅವಕಾಶ ಕೊಟ್ಟು ನೋಡಬೇಕಿದೆ. ಈ ದೇಶವನ್ನು ಯಾರು ಆಳಿದರೇನು? ಎಲ್ಲರಿಗೂ ಸಮಪಾಲು ಹಾಗೂ ಸಮಬಾಳು ದೊರೆತರೆ ಸಾಕು.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

ಇದನ್ನೂ ಓದಿ-ಮಾತೆಂಬುದು ಜ್ಯೋತಿರ್ಲಿಂಗ

More articles

Latest article