ಇಂಡಿಯನ್‌ ಸ್ಟೇಟ್‌ ಬಗ್ಗೆ ರಾಹುಲ್‌ ಗಾಂಧಿ ಹೇಳಿಕೆ ಸರಿಯೇ?

Most read

“ದಿ ಸ್ಟೇಟ್‌ ಎನ್ನುವುದರಲ್ಲಿ ಪೊಲೀಸ್‌, ಸಿಬಿಐ, ಆದಾಯ ತೆರಿಗೆ ಇಲಾಖೆ, ಈಡಿ, ಸಚಿವಾಲಯಗಳು, ಸರಕಾರಿ ಇಲಾಖೆಗಳು ಸೇರಿದಂತೆ ಅಕ್ಷರಶಃ ಪ್ರತಿಯೊಂದು ಸರಕಾರಿ ಸಂಸ್ಥೆಯೂ ಸೇರಿದೆ. ಸ್ಟೇಟ್‌ ಸಂವಿಧಾನ ಮೀರಿ ಸರ್ವಾಧಿಕಾರಿ ದಾರಿಯಲ್ಲಿ ನಡೆದು ಪ್ರಜೆಗಳಿಗೆ ಅನ್ಯಾಯ ಮಾಡಹೊರಟಾಗ ಅದನ್ನು ಪ್ರಶ್ನಿಸುವುದು, ಅದರ ವಿರುದ್ಧ ಹೋರಾಡಿ ಪ್ರಜಾತಂತ್ರವನ್ನು ಮರುಸ್ಥಾಪಿಸುವುದು ಜವಾಬ್ದಾರಿಯುತ ಮತ್ತು ಪ್ರಜ್ಞಾವಂತ ಪ್ರಜೆಗಳ ಕರ್ತವ್ಯವೇ ಅಲ್ಲವೇ? ಹಾಗೆ ಮಾಡಿ ದೇಶವನ್ನು ಉಳಿಸುವುದು ದೇಶ ಸೇವೆಯ ಭಾಗವೇ ಅಲ್ಲವೇ? – ಶ್ರೀನಿವಾಸ ಕಾರ್ಕಳ, ಸಾಮಾಜಿಕ ಚಿಂತಕರು.

ದೆಹಲಿಯಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದ ಹೊಸ ಆಡಳಿತ ಕಚೇರಿಯ ಉದ್ಘಾಟನೆ ಮಾಡುತ್ತಾ, ʼನಾವೀಗ ಬಿಜೆಪಿ, ಆರ್‌ ಎಸ್‌ ಎಸ್‌ ಮಾತ್ರವಲ್ಲ , ಇಂಡಿಯನ್‌ ಸ್ಟೇಟ್‌ ವಿರುದ್ಧ ಕೂಡಾ ಹೋರಾಡುವ ಪರಿಸ್ಥಿತಿ ಬಂದಿದೆʼ ಎಂದು ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿಯವರು ಆಡಿದ ಮಾತುಗಳ ಬಗ್ಗೆ ಬಿಜೆಪಿ ತನ್ನ ಗೋದಿ ಮೀಡಿಯಾ ಜತೆ ಸೇರಿಕೊಂಡು ನಿರೀಕ್ಷೆಯಂತೆಯೇ ಭಾರೀ ಕೋಲಾಹಲ ಎಬ್ಬಿಸಿದೆ. ಆದರೆ ಈ ಆಕ್ರೋಶ, ಕೋಲಾಹಲ ನಿಜಕ್ಕೂ ಅಗತ್ಯವೇ ಎನ್ನುವುದನ್ನು ಚರ್ಚಿಸುವ ಮೊದಲು ʼಇಂಡಿಯನ್‌ ಸ್ಟೇಟ್‌ʼ ಬಗ್ಗೆ ನಮ್ಮ  ಸಂವಿಧಾನ ಏನು ಹೇಳುತ್ತದೆ ಎಂದು ನೋಡೋಣ.

ಸಂವಿಧಾನ ಏನು ಹೇಳುತ್ತದೆ?

ಭಾರತ ಸಂವಿಧಾನದ ಭಾಗ 3, ಮೂಲಭೂತ ಹಕ್ಕುಗಳು, ಸಾಮಾನ್ಯ, ವಿಭಾಗದ ಕ್ರಮ ಸಂಖ್ಯೆ 12 ರಲ್ಲಿ ಹೀಗೆ ಹೇಳಲಾಗಿದೆ- “In this part, unless the context otherwise requires ̧ ʼthe State ́ includes the Government and Parliament of India and the Government and the Legislature of each of the State and all local or  other authorities within the territory of India or under the control of the Government of India” ಸಂಕ್ಷಿಪ್ತವಾಗಿ ಹೇಳುವುದಾದರೆ ʼಇಂಡಿಯನ್‌ ಸ್ಟೇಟ್‌ʼ ಅಂದರೆ ಭಾರತ ಸರಕಾರ, ಭಾರತ ಸಂಸತ್ತು, ರಾಜ್ಯ ಮತ್ತು ಭಾರತದ ಸರಹದ್ದಿನ ಒಳಗಡೆಯ ಅಥವಾ ಭಾರತ ಸರಕಾರದ ನಿಯಂತ್ರಣದಲ್ಲಿರುವ ಎಲ್ಲ ಸ್ಥಳೀಯ ಅಥವಾ ಇತರ ಪ್ರಾಧಿಕಾರಗಳು.

ಈ ʼಸ್ಟೇಟ್‌ʼ ಬಗ್ಗೆ ದೇಶದ ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ಪದಗಳು ಚಾಲ್ತಿಯಲ್ಲಿವೆ. ಅದು ನಮ್ಮ ಮಾಮೂಲಿ ಅರ್ಥದ ರಾಜ್ಯವಲ್ಲ (ಕರ್ನಾಟಕ, ಕೇರಳ ರಾಜ್ಯ ಎಂಬ ಹಾಗೆ). ದೇಶ ಎಂಬುದಕ್ಕೆ ಹತ್ತಿರದ ಅರ್ಥ ಅದಕ್ಕಿದೆ. ವಾಡಿಕೆಯಲ್ಲಿ ಸ್ಟೇಟ್‌ ಎಂಬುದಕ್ಕೆ ಕನ್ನಡದಲ್ಲಿ ರಾಜ್ಯವ್ಯವಸ್ಥೆ, ಪ್ರಭುತ್ವ ಎಂಬ ಪದ ಪ್ರಯೋಗಗಳೂ ಇವೆ. ಈ ಅರ್ಥದಲ್ಲಿ ವ್ಯವಸ್ಥೆಯ ವಿರುದ್ಧ, ಪ್ರಭುತ್ವದ ವಿರುದ್ಧ ದನಿ ಎತ್ತವುದು, ಹೋರಾಡುವುದು ಪ್ರಜಾತಂತ್ರ ವ್ಯವಸ್ಥೆಯೊಂದರಲ್ಲಿ ಅಪರಾಧವೇ? ಅಪರಾಧ ಎನ್ನುವುದಾದರೆ ಅದು ಪ್ರಜಾತಂತ್ರ ಆಗುವುದು ಹೇಗೆ?

ಹೋರಾಡುವುದು ಎಂದರೆ ಏನು?

ಅಲ್ಲದೆ ಹೋರಾಡುವುದು ಎಂದರೆ ಏನು? ಶಸ್ತ್ರ ಹಿಡಿದು ಹೋರಾಡುವುದು ಎಲ್ಲ ರೀತಿಯಲ್ಲಿಯೂ ಅಪರಾಧ. ಆದರೆ ಸಂವಿಧಾನ ನೀಡಿದ ಹಕ್ಕುಗಳ ಮೂಲಕ, ಶಾಂತಿಯುತವಾಗಿ ಹೋರಾಡುವುದೂ ʼಹೋರಾಟʼವೇ ಅಲ್ಲವೇ? ಹಾಗಾಗಿ ಇಲ್ಲಿ ಸಮಸ್ಯೆ ಏನು? ನಮ್ಮಲ್ಲಿ ವ್ಯವಸ್ಥೆಯ ವಿರುದ್ಧ, ಪ್ರಭುತ್ವದ ವಿರುದ್ಧ  ನಿತ್ಯವೂ ಹೋರಾಟ ನಡೆಯುತ್ತಲೇ ಇಲ್ಲವೇ? ನೆನಪಿರಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರು ʼಭಾರತ ಗಣರಾಜ್ಯದ ವಿರುದ್ಧ ಹೋರಾಡಬೇಕಾಗಿದೆʼ ಎಂದಿಲ್ಲ. ಹಾಗೆ ಹೇಳಿದ್ದರೆ ಅದು ದೇಶದ್ರೋಹವಾಗುತ್ತಿತ್ತು. ಆದರೆ ಅಪಹರಣಗೊಂಡಿರುವ ಇಂಡಿಯನ್‌ ಸ್ಟೇಟ್‌ ವಿರುದ್ಧ ಎಂಬ ಅರ್ಥದಲ್ಲಿ ಅವರು ಹೇಳಿದ್ದು.

ಅಪಹರಣಗೊಂಡಿರುವ ಇಂಡಿಯನ್‌ ಸ್ಟೇಟ್‌ ಎಂದರೆ ಏನು?

ಇದನ್ನು ರಾಜಕೀಯ ಚಿಂತಕ ರಾಜು ಪರುಳೇಕರ್‌ ಬಹಳ ಸರಳವಾಗಿ ಹೀಗೆ ವಿವರಿಸುತ್ತಾರೆ- “ದಿ ಸ್ಟೇಟ್‌ ಎನ್ನುವುದರಲ್ಲಿ ಪೊಲೀಸ್‌, ಸಿಬಿಐ, ಆದಾಯ ತೆರಿಗೆ ಇಲಾಖೆ, ಈಡಿ, ಸಚಿವಾಲಯಗಳು, ಸರಕಾರಿ ಇಲಾಖೆಗಳು ಸೇರಿದಂತೆ ಅಕ್ಷರಶಃ ಪ್ರತಿಯೊಂದು ಸರಕಾರಿ ಸಂಸ್ಥೆಯೂ ಸೇರಿದೆ. ರಾಹುಲ್‌ ಗಾಂಧಿಯ ಮೈಕ್‌ ಅನ್ನು ಸ್ವಿಚ್‌ ಆಫ್‌ ಮಾಡಲಾಗುತ್ತದೆ, ಸಂಸತ್‌ ಚರ್ಚೆಗಳ ಸಮಯದಲ್ಲಿ ಸಂಸತ್‌ ಟಿವಿ ವಿಪಕ್ಷ ಸದಸ್ಯರನ್ನು ತೋರಿಸುವುದಿಲ್ಲ, ಲೋಕಸಭೆಯು ತಡಮಾಡದೆ ರಾಹುಲ್‌ ರ ಸದಸ್ಯತ್ವವನ್ನು ರದ್ದುಗೊಳಿಸುತ್ತದೆ, ಕಾಂಗ್ರೆಸ್‌ ನ ಕಳವಳಗಳಿಗೆ ಚುನಾವಣಾ ಆಯೋಗ ಸ್ಪಂದಿಸುವುದಿಲ್ಲ, ಕಾಂಗ್ರೆಸ್‌ ಪಕ್ಷದ ಬ್ಯಾಂಕ್‌ ಖಾತೆಯನ್ನು ಸ್ತಂಭನಗೊಳಿಸಲಾಗುತ್ತದೆ, ಪೊಲೀಸರು ಕಾಂಗ್ರೆಸ್‌ ನಾಯಕರ ಮೇಲೆ ಗೂಢಚಾರಿಕೆ ನಡೆಸುತ್ತಾರೆ, ಸಿಬಿಐ, ಐಟಿ ಮತ್ತು ಈಡಿ ತಮ್ಮ ಗಡಿ ದಾಟಿ ವಿಪಕ್ಷದ ನಾಯಕರು ಬಿಜೆಪಿ ಸೇರುವಂತೆ ಮಾಡುತ್ತವೆ, ಸಂಸತ್‌ ಸದಸ್ಯರ ದನಿಯನ್ನು ಹತ್ತಿಕ್ಕಲಾಗುತ್ತದೆ, ಮೈಕ್‌ ಬಂದ್‌ ಮಾಡಿ ಅವರನ್ನು ಮೌನಗೊಳಿಸಲಾಗುತ್ತದೆ.. ಇವೆಲ್ಲ ಆಗಿಲ್ಲವೇ?  ರಾಹುಲ್‌ ಗಾಂಧಿಯವರು ವಾಸ್ತವ ಸತ್ಯವನ್ನೇ ಹೇಳಿದ್ದಾರೆ. ಕಾಂಗ್ರೆಸ್‌, ಇತರ ವಿಪಕ್ಷಗಳು ಮಾತ್ರವಲ್ಲ ಬಿಜೆಪಿ ಸಂಸದರು ಕೂಡಾ ತಮ್ಮ ನ್ಯಾಯಬದ್ಧ ಸ್ಥಾನವನ್ನು ಮರಳಿ ಪಡೆಯಲು, ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಪ್ರಯೋಗಿಸಲು ದಿ ಸ್ಟೇಟ್‌ ನ ವಿರುದ್ಧ ಹೋರಾಡುತ್ತಲೇ ಇದ್ದಾರೆ”.

ಸ್ಟೇಟ್‌ ಪ್ರಜೆಗಳ ವಿರುದ್ಧ ಅನ್ಯಾಯ ಮಾಡಬಾರದು

ಅಂದ ಮೇಲೆ ರಾಹುಲ್‌ ಗಾಂಧಿಯವರ ಹೇಳಿಕೆಯ ಬಗ್ಗೆ ಆಕ್ರೋಶ ಯಾಕೆ? ಇಲ್ಲಿ ಬೇಕಿರುವುದು ಆಕ್ರೋಶ ಅಲ್ಲ, ಆತ್ಮಾವಲೋಕನ. ದೇಶದ ಪ್ರತಿಯೊಂದು ಸಂಸ್ಥೆಯೂ ತಾನು ಸಂವಿಧಾನಕ್ಕೆ ಬದ್ಧವಾಗಿ ಮತ್ತು ಆಳುವವರ ಒತ್ತಡಕ್ಕೆ ಬಲಿಯಾಗದೆ ಕೆಲಸ ಮಾಡುತ್ತಿದ್ದೇನೆಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು.

ಶ್ರೀನಿವಾಸ ಕಾರ್ಕಳ

ಸಾಮಾಜಿಕ ಚಿಂತಕರು  

ಇದನ್ನೂ ಓದಿ- ಮೋಹನ್‌ ಭಾಗವತ್‌ ಹೇಳಿಕೆಗೆ ಮಮತಾ ಬ್ಯಾನರ್ಜಿ ಆಕ್ಷೇಪ

         

More articles

Latest article