ಭಗವಾ ಧ್ವಜ ಸಮಸ್ತ ಹಿಂದೂಗಳ ಧ್ವಜವೇ?

Most read

ಮಂಡ್ಯದ ಕೆರೆಗೋಡಿನ ಪ್ರಕರಣದ ನಂತರ ಹನುಮ ಧ್ವಜ ಎಂಬ ಹೆಸರು ಕರ್ನಾಟಕದಲ್ಲಿ ವ್ಯಾಪಕ ಬಳಕೆ ಆಗುತ್ತಿದೆ.  ಹಾಗಾಗಿ ಹಿಂದೂಗಳು ಬಳಸುವ ಕೇಸರಿ ಧ್ವಜ ಮತ್ತು ಹನುಮ ಧ್ವಜದ ಇತಿಹಾಸ ಕೆದಕುವ ಒಂದು ಪ್ರಯತ್ನವನ್ನು ಚಿಂತಕ ಪ್ರವೀಣ್‌ ಎಸ್‌ ಶೆಟ್ಟಿಯವರು ಮಾಡಿದ್ದಾರೆ. ಬಹಳ ಕುತೂಹಲಕಾರಿಯಾದ ಈ ಶೋಧನೆ ತುಸು ದೀರ್ಘವಾಗಿರುವುದರಿಂದ ಎರಡು ಭಾಗಗಳಲ್ಲಿ  ಬರಲಿದೆ.

ಮಂಡ್ಯದ ಕೆರೆಗೋಡಿನಲ್ಲಿ ಕೆಲವು ಬಲಪಂಥಿಯ ಸಂಘಟನೆಯವರು ಭಾರತದ ರಾಷ್ಟ್ರೀಯ ಧ್ವಜ ಹಾರಿಸುವುದಾಗಿ ವಾಗ್ದಾನ ಮಾಡಿ ಸ್ಥಳೀಯ ಆಡಳಿತದಿಂದ ಪರವಾನಿಗೆ ಪಡೆದು ಕೊನೆಗೆ ಅಲ್ಲಿ ತಮ್ಮ ಸಂಘಟನೆಯ ಹನುಮನ ಚಿತ್ರ ಇರುವ ಕೇಸರಿ ಧ್ವಜ  ಹಾರಿಸಿದರು.  ಪೊಲೀಸರು ಆ ಸಂಘಟನೆಯ ಧ್ವಜ ಇಳಿಸಿ ನಮ್ಮ ರಾಷ್ಟ್ರೀಯ ಧ್ವಜ ಹಾರಿಸಿದಾಗ  ಹೊರ ಜಿಲ್ಲೆಗಳಿಂದ ಕರೆಸಿದ ಪಡ್ಡೆಗಳಿಂದ ಗಲಾಟೆ ಮಾಡಿಸಲು ಬಲಪಂಥೀಯರು ಪ್ರಯತ್ನಿಸಿದರು ಎಂಬ ಆರೋಪ ಬಂದಾಗ ಕರ್ನಾಟಕದ ಪ್ರಜ್ಞಾವಂತರು ಆತಂಕಕ್ಕೆ ಈಡಾಗಿದ್ದರು.  ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಕರ್ನಾಟಕದ ಮತದಾರರನ್ನು ಕೋಮು ಆಧಾರದಲ್ಲಿ ವಿಭಾಗಿಸಲು ಮಾಡಿದ ತಂತ್ರವಿದು ಎಂದು ಜನರಿಗೆ ಬಹುಬೇಗ ಅರ್ಥವಾಯಿತು. ಹಾಗಾಗಿ ಪರಿಸ್ಥಿತಿ ಬಿಗಡಾಯಿಸಲಿಲ್ಲ.

ಹನುಮಧ್ವಜ

ಕೇಸರಿ ಉಡುಪನ್ನು ಮೊತ್ತ ಮೊದಲು ಬಳಸಿದ್ದು ಗೌತಮ ಬುದ್ಧ

ಕೇಸರಿ ಉಡುಪನ್ನು ತ್ಯಾಗದ ಪ್ರತೀಕವಾಗಿ ಮೊತ್ತಮೊದಲು ಬಳಸಿದ್ದು ಗೌತಮ ಬುದ್ಧ. ಆಗ ಪ್ರಚಲಿತವಿದ್ದ  ಜೈನ, ವೈದಿಕ, ಆಜೀವಿಕಾ, ಚಾರ್ವಕಾ  ಮುಂತಾದ ಧರ್ಮಗಳ  ಸಂತರು, ಮುನಿಗಳು, ಸನ್ಯಾಸಿಗಳು  ಕೇವಲ ಬಿಳಿ ಬಣ್ಣದ ಹತ್ತಿ ಬಟ್ಟೆ ಮಾತ್ರ ಬಳಸುತ್ತಿದ್ದರು (ರೇಷ್ಮೆ ಬಟ್ಟೆ ಭಾರತದಲ್ಲಿ ಆಗ ಇರಲಿಲ್ಲ).  ಹಾಗೆ ನೋಡಿದರೆ  ಮುಸ್ಲಿಂ, ಕ್ರೈಸ್ತ ಮತ್ತು ಯಹೂದೀ  ಸಹಿತ ಜಗತ್ತಿನ ಎಲ್ಲಾ ಧರ್ಮಗಳ ಧಾರ್ಮಿಕ ನೇತಾರರು, ಸಂತರು ಬಳಸಿದ್ದು ಕೇವಲ ಬಿಳಿ ಹತ್ತಿ ಬಟ್ಟೆ ಮಾತ್ರ. ಯಾಕೆಂದರೆ ಬಿಳಿ ಬಟ್ಟೆ ಮತ್ತು ಬಿಳಿ ಪತಾಕೆ ಶಾಂತಿ, ಅಹಿಂಸೆ, ಸೌಹಾರ್ದತೆ, ಸಹಬಾಳ್ವೆಯ ಪ್ರತೀಕವಾಗಿತ್ತು.  ಬೌದ್ಧ ಧರ್ಮೀಯರೇ ಮೊದಲಿಗೆ ಕಾವಿ-ಕೇಸರಿ ಬಟ್ಟೆ ಧರಿಸಲು ಶುರು ಮಾಡಿದ್ದು. ಅವರು ಯಾವುದೇ ಧ್ವಜ ಬಳಸಿರಲಿಲ್ಲ.  ಚಂದ್ರಗುಪ್ತ ಮೌರ್ಯ, ಸಾಮ್ರಾಟ ಅಶೋಕ ಇವರುಗಳು ಯಾವ ಬಣ್ಣದ ಧ್ವಜ ಯಾವ ಲಾಂಛನ ಬಳಸುತ್ತಿದ್ದರು ಎಂಬ ಕುರಿತು ಮಾಹಿತಿ ಲಭ್ಯವಿಲ್ಲ, ಆದರೆ ಅಶೋಕನ ಕಾಲದ ಹಲವು ಸ್ತೂಪ ಮತ್ತು ಸ್ತಂಭಗಳಲ್ಲಿ ನವಿಲಿನ ಚಿತ್ರಗಳು ಇದ್ದುದರಿಂದ ಮೌರ್ಯ ವಂಶದ ಲಾಂಛನ ನವಿಲು ಇದ್ದಿರಬಹುದು ಎಂಬುದು ವಿದ್ವಾಂಸರ ಊಹೆ.  ಇಪ್ಪತ್ತನಾಲ್ಕು ಪಟ್ಟಿಗಳಿರುವ ಅಶೋಕನ ಧಮ್ಮ ಚಕ್ರ ಮಾತ್ರ ಇಂದು ನಮ್ಮ ರಾಷ್ಟ್ರೀಯ ಧ್ವಜದ ನಡುವೆ ಇದೆ. 

ಆದಿ ಶಂಕರರ ಕಾಲದಲ್ಲಿ ಯಾವುದೇ ಧಾರ್ಮಿಕ ಧ್ವಜ-ಬಾವುಟಗಳ ಬಳಕೆ ಇರಲಿಲ್ಲವೆನ್ನಲಾಗುತ್ತದೆ..

ಬುದ್ಧ

ಬಸವಣ್ಣನವರು ಎಂದೂ ಕಾವಿ-ಕೇಸರಿ ಬಟ್ಟೆ ಧರಿಸುತ್ತಿರಲಿಲ್ಲ..

ನಮ್ಮ ಲಿಂಗಾಯತ ಧರ್ಮ ಸ್ಥಾಪಿಸಿದ ಜಗದ್ಗುರು ಬಸವಣ್ಣನವರು ಎಂದೂ ಕಾವಿ-ಕೇಸರಿ ಬಟ್ಟೆ ಧರಿಸುತ್ತಿರಲಿಲ್ಲ, ಅಥವಾ ಕಾವಿ ಧ್ವಜವನ್ನೂ ಅವರು ಹಿಡಿಯುತ್ತಿರಲಿಲ್ಲ. ಆದರೆ ಈಗ ಹೆಚ್ಚಿನ ಲಿಂಗಾಯತ-ವೀರಶೈವ ಮಠಾಧೀಶರು ಮಾತ್ರ ಕಾವಿ ಬಟ್ಟೆ ಧರಿಸುತ್ತಾರೆ ಹಾಗೂ ಕೆಲವರು ನಂದಿಯ ಲಾಂಛನವಿರುವ ಕಾವಿ ಧ್ವಜ ಹಿಡಿಯುತ್ತಾರೆ. ಕಳೆದ ಶತಮಾನದ ಕೇರಳದ ಕ್ರಾಂತಿಕಾರಿ ಸಂತ ಬ್ರಹ್ಮರ್ಷಿ ನಾರಾಯಣ ಗುರುಗಳೂ ಹಳದಿ ಅಥವಾ ಬಿಳಿ ಬಟ್ಟೆ ಮಾತ್ರ ಧರಿಸುತ್ತಿದ್ದರು. ಅವರು ಕಾವಿ ಬಟ್ಟೆ ಎಂದೂ ಧರಿಸಿರಲಿಲ್ಲ.

ಪ್ರತಿಯೊಬ್ಬ ಹಿಂದೂ ರಾಜನೂ ತನ್ನದೇ ಆದ ಲಾಂಛನವುಳ್ಳ  ಧ್ವಜ ಹೊಂದಿದ್ದರು.   

ಭಗವಾ ಧ್ವಜವನ್ನು ಮೊತ್ತಮೊದಲು ಬಳಸಿದ್ದು ಛತ್ರಪತಿ ಶಿವಾಜಿ

ಶಿವಾಜಿಯ ಭಗವಾ ಧ್ವಜದಲ್ಲಿ ಓಂ ಅಥವಾ ಸ್ವಸ್ತಿಕ” ಚಿನ್ಹೆ ಇರಲಿಲ್ಲ

ಭಗವಾ ಧ್ವಜವನ್ನು ಮೊತ್ತಮೊದಲು ಬಳಸಿದ್ದು ಛತ್ರಪತಿ ಶಿವಾಜಿ (ಇಸವಿ-1630-1680). ಕೇಸರಿ ಧ್ವಜವನ್ನು ಶಿವಾಜಿಯ ಅಧ್ಯಾತ್ಮಿಕ  ಗುರು ಸಮರ್ಥ ರಾಮದಾಸ್  ತನ್ನ ಅಂಗ ವಸ್ತ್ರದಿಂದ ಹರಿದು ಕೊಟ್ಟಿದ್ದರಿಂದಾಗಿ ಅದು ತ್ರಿಕೋನ ಆಕಾರದಲ್ಲಿ ಇತ್ತು ಎಂದು ಕೆಲವು ಬ್ರಾಹ್ಮಣ ಇತಿಹಾಸಕಾರರು ಹೇಳುತ್ತಿದ್ದರು. ಆದರೆ ಶಿವಾಜಿಯ ಇತಿಹಾಸವನ್ನು ಆಳವಾಗಿ ಸಂಶೋಧಿಸಿರುವ  ಇತಿಹಾಸಕಾರರು ಈ ಸಮರ್ಥ ರಾಮದಾಸರ ಐತಿಹ್ಯವನ್ನು ನಿರಾಕರಿಸುತ್ತಾರೆ.  ನಿಜವಾಗಿ ಈ ಭಗವಾ ಧ್ವಜವನ್ನು ಶಿವಾಜಿಗೆ ಕೊಟ್ಟಿದ್ದು ಅವನ ತಾಯಿ ಜಿಜಾಬಾಯಿ ಎಂದು ಹೇಳಲಾಗುತ್ತದೆ.  ಬ್ರಾಹ್ಮಣರ ಮಾರ್ಗದರ್ಶನವಿಲ್ಲದೆ ಯಾವುದೇ ಶೂದ್ರ ರಾಜ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಸಾಧಿಸಲು ಈ ಬ್ರಾಹ್ಮಣ ಗುರು ಸಮರ್ಥ ರಾಮದಾಸರ ಕಥೆಯನ್ನು ಶಿವಾಜಿಯ ಇತಿಹಾಸದಲ್ಲಿ ಸೇರಿಸಲಾಯಿತು ಎಂದು ಮಹಾರಾಷ್ಟ್ರದ ಹೆಚ್ಚಿನ ಇತಿಹಾಸಕಾರರ ಅಭಿಪ್ರಾಯ. ಸ್ವಾಮಿ ರಾಮದಾಸರು ಕೇವಲ ದಾನ ದಕ್ಷಿಣೆ ಬೇಡಲು ಕೆಲವೊಮ್ಮೆ ಶಿವಾಜಿಯ ಆಸ್ಥಾನಕ್ಕೆ ಬರುತ್ತಿದ್ದರು ಅಷ್ಟೇ.  (ಇದೆ ತರಹದ ಕುತಂತ್ರವನ್ನು ವೈದಿಕರು ಚಂದ್ರಗುಪ್ತ ಮೌರ್ಯನ ಚರಿತ್ರೆಯಲ್ಲಿಯೂ ಮಾಡಿದ್ದಾರೆ. ಅಂದರೆ ಚಂದ್ರಗುಪ್ತ ಮೌರ್ಯ ತನ್ನ ಸ್ವಂತ ಬುದ್ಧಿ ಹಾಗೂ ಶೌರ್ಯದಿಂದಲೇ ನಂದ ವಂಶದವರಿಂದ ರಾಜ್ಯವನ್ನು ಗೆದ್ದುಕೊಂಡು ತದನಂತರ ರಾಜ್ಯ ವಿಸ್ತರಿಸಿ ಅವನು ಸಾಮ್ರಾಟನಾಗಿದ್ದು.  ಗ್ರೀಕ್ ಇತಿಹಾಸಕಾರ ಮೆಗಾಸ್ತಾನಿಸ್ ಬರೆದ ‘ಇಂಡಿಕಾ’ ಕೃತಿಯಲ್ಲಿ ಎಲ್ಲಿಯೂ ಚಾಣಕ್ಯನ ಹೆಸರಿಲ್ಲ. ಆದರೆ ಚಂದ್ರಗುಪ್ತನ ಇತರ ಮಂತ್ರಿಗಳ ಹೆಸರು ಇವೆಯಂತೆ.  ಆದರೂ ಬ್ರಾಹ್ಮಣ ಚರಿತ್ರೆಕಾರರು ಕಾಲ್ಪನಿಕ ಚಾಣಕ್ಯ/ ಕೌಟಿಲ್ಯನ  ಉಪಕಥೆಯನ್ನು ಚಂದ್ರಗುಪ್ತನ ಇತಿಹಾಸದಲ್ಲಿ ತುರುಕಿ, ಕೇವಲ ಬ್ರಾಹ್ಮಣನ ಸಹಾಯ ಇದ್ದರೆ ಮಾತ್ರ ಶೂದ್ರನೊಬ್ಬ ಸಾಮ್ರಾಟನಾಗಲು ಸಾಧ್ಯ ಎಂದು ಬಿಂಬಿಸಲು ಪ್ರಯತ್ನಿಸಿದ್ದಾರೆ.  ಈಗ ಸಿನೆಮಾ ಟಿ‌ವಿಯ ಎಲ್ಲ ಕತೆಗಳಲ್ಲಿಯೂ – ಚಾಣಕ್ಯನಿಗೆ ಚಂದ್ರಗುಪ್ತನಿಗಿಂತ ಹೆಚ್ಚು ಮಹತ್ವವಿತ್ತು ಎಂಬ ನರೇಟಿವ್ ಸೆಟ್ ಮಾಡಿದ್ದಾರೆ ಕೆಲ ವೈದಿಕ ಕುತಂತ್ರಿಗಳು).

ಶಿವಾಜಿಗಿಂತ ಮೊದಲಿನ ಇವರಾರೂ ಕೇಸರಿ ಧ್ವಜಗಳನ್ನು ಹೊಂದಿರಲಿಲ್ಲ…

ವಿಜಯನಗರದ ಅರಸರ ಲಾಂಛನ
ಮೈಸೂರು ಒಡೆಯರ್‌ ವಂಶಸ್ಥರ ಪತಾಕೆ

ತಮಿಳುನಾಡಿನ ಪಾಂಡ್ಯ ಮತ್ತು ನಮ್ಮ ತುಳುನಾಡಿನ ಪಾಂಡ್ಯ (ಅಳೂಪ) ಈ ಎರಡೂ ವಂಶದ ಅರಸರ ಪತಾಕೆಯು ಹಳದಿ ಹಿನ್ನೆಲೆಯಲ್ಲಿ ಜೋಡಿ ಮೀನಿನ ಲಾಂಛನ ಇತ್ತು.  ತಮಿಳು ಮತ್ತು ತುಳು ಪಾಂಡ್ಯರು ಒಂದೇ ಮೂಲದವರು ಎಂಬುದಕ್ಕೆ ಈ ಲಾಂಛನ ಸಾಕ್ಷಿ. ಪಲ್ಲವ ಚೋಳ ಚೇರ ಪಾಂಡ್ಯ ಈ ತಮಿಳು ಅರಸರಲ್ಲಿ ಯಾರೂ ಕೇಸರಿ ಪತಾಕೆ ಹೊಂದಿರಲಿಲ್ಲ. ನಮ್ಮ ಮೈಸೂರು ಒಡೆಯರ್ ವಂಶದ ದೊರೆಗಳದ್ದು ಕೂಡಾ ಅರ್ಧ ಭಾಗ ಕಡು ಕೆಂಪು ಅರ್ಧ ಭಾಗ ಕಾಫಿ ಬಣ್ಣದ ಪತಾಕೆಯ ನಡುವೆ ಗಂಡಭೇರುಂಡ ಪಕ್ಷಿ ಮತ್ತು ಆಚೀಚೆ ಸೊಂಡಿಲು ಎತ್ತಿ ನಿಂತ ಎರಡು ಆನೆಗಳುಳ್ಳ ಲಾಂಛನವಿತ್ತು.

1857 ರಲ್ಲಿ ಬ್ರಿಟಿಷರ ವಿರುದ್ಧ ಬಂಡಾಯ ಸಾರಿದ ಝಾನ್ಸಿ ರಾಣಿ ಲಕ್ಷ್ಮೀಬಾಯಿಯ ಪತಾಕೆಯಲ್ಲಿ ಮಾತ್ರ ಮೇಲಿನ ತ್ರಿಕೋನ ಕಡು ಕೆಂಪು ಬಣ್ಣದ್ದಿದ್ದರೆ ಕೆಳಗಿನ ತ್ರಿಕೋನ ಕೇಸರಿ ಬಣ್ಣದಿದ್ದು ಅದರ ನಡುವೆ ಗುಡ್ಡ ಎತ್ತಿಕೊಂಡು ಹೋಗುವ ಹನುಮಂತನ ಚಿತ್ರವಿದ್ದದ್ದು ನಿಜ. ಆದರೆ ಈ ಪತಾಕೆಗೆ ಹಸಿರು ಬಾರ್ಡರ್ ಇತ್ತು.

ಈಗಿನ ಹಿಂದುತ್ವ ಸಂಘಟನೆಗಳು ಈಕೆಗೆ ಕೊಡಬೇಕಾದ ಗೌರವ ಕೊಡುತ್ತಿಲ್ಲ…

ಶಿವಾಜಿಯ ಭಗವಾ ಧ್ವಜವು ಹಿಂದೂ ಧರ್ಮ ಸೂಚಕವಾಗಿರಲಿಲ್ಲ!

ಶಿವಾಜಿಯ ಧ್ವಜವು ಕೇಸರಿ- ಭಗವಾ ಬಣ್ಣದಲ್ಲಿ ಇದ್ದಿದ್ದು ನಿಜ, ಆದರೆ ಅದರ ನಡುವೆ  “ಓಂ ಅಥವಾ ಸ್ವಸ್ತಿಕ” ಚಿನ್ಹೆ ಇರಲಿಲ್ಲ. ಯಾಕೆಂದರೆ ಶಿವಾಜಿಯ ಭೂಸೈನ್ಯದಲ್ಲಿ 35% ಮುಸ್ಲಿಮರಿದ್ದರು. ಹಾಗೂ ಅವನ ಜಲಸೈನ್ಯದಲ್ಲಿ ಆಫ್ರಿಕಾ ಮೂಲದ ಸಿದ್ಧಿ ಮುಸ್ಲಿಮರೇ 60% ಇದ್ದರೆ,  ಹಿಂದೂಗಳು ಕೇವಲ 40% ಮಾತ್ರ ಇದ್ದರು. ಶಿವಾಜಿಯ 18 ಅಂಗರಕ್ಷಕರಲ್ಲಿ 11 ಜನ ಅಂಗರಕ್ಷಕರು ಮುಸ್ಲಿಮರಾಗಿದ್ದರು ಹಾಗೂ ಶಿವಾಜಿಗೆ ಅಫ್ಜಲ್ ಖಾನ್ ನಂತಹಾ ದೈತ್ಯನನ್ನು ಒಬ್ಬಂಟಿಯಾಗಿ ಬರಿಗೈಯಲ್ಲಿ ಹೇಗೆ ಎದುರಿಸಬೇಕು ಎಂದು ವಿವರಿಸಿ ಹುಲಿ ಉಗುರಿನ ಭರ್ಚಿ ಮಾಡಿಕೊಟ್ಟಿದ್ದು ಅವನ ಒಬ್ಬ ಮುಸ್ಲಿಂ ಅಂಗರಕ್ಷಕ ಎಂದು ಮುಂಬೈಯ ಹಿರಿಯ ಇತಿಹಾಸ ಸಂಶೋಧಕ ಪ್ರೊ. ರಾಮ್ ಪುನಿಯಾನಿಯವರು ತಮ್ಮ ಕೃತಿಯೊಂದರಲ್ಲಿ ವಿವರಿಸಿದ್ದಾರೆ.  ಶಿವಾಜಿಯ ಸೈನ್ಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ಮಹಾರ್-ದಲಿತ ಸೈನಿಕರಿದ್ದರು, ಆದರೆ ನಂತರ ಬ್ರಾಹ್ಮಣ ಪೇಶ್ವೆಗಳು ಮರಾಠಾ ರಾಜ್ಯದ ಅಧಿಕಾರವನ್ನು ಹಿಂಬಾಗಿಲಿನಿಂದ ಹಿಡಿದ ಮೇಲೆ ಎಲ್ಲಾ ಮಹಾರ್-ದಲಿತ ಸೈನಿಕರನ್ನು ಪೇಶ್ವೆಗಳು ಸೈನ್ಯದಿಂದ ತೆಗೆದು ಹಾಕಿದರು, ಆದರೆ ಮುಸ್ಲಿಂ ಸೈನಿಕರನ್ನು ಇಟ್ಟುಕೊಂಡರು. ಹಾಗಾಗಿ ಪೇಶ್ವೆಗಳೂ ಶಿವಾಜಿಯ ಭಗವಾ ಧ್ವಜವನ್ನೇ  ಮುಂದುವರಿಸಿದರೂ ಅದು ಹಿಂದೂ ಧರ್ಮ ಸೂಚಕವಾಗಿರಲಿಲ್ಲ ಎಂಬುದಕ್ಕೆ ಸಾಕ್ಷಿಯೆಂದರೆ ಪೇಶ್ವೆಗಳು ಮುಸ್ಲಿಂ ಸೈನಿಕರನ್ನು ತಮ್ಮ ಸೈನ್ಯದಲ್ಲಿ ಮುಂದುವರಿಸಿ ಅವರ ಕೈಯಲ್ಲೂ ಈ ಮರಾಠಾ ಭಗವಾ ಧ್ವಜವನ್ನೇ ಮೆರೆಸಿದ್ದು.

“ನಿಶಾನೆ ಸಾಹಿಬ್” ಧ್ವಜ 

ಪಂಜಾಬಿನ ಸಿಖ್ಖರೂ ಯೋಧ ಜನಾಂಗದವರು. ಅವರ ಆರನೆಯ ಧರ್ಮ ಗುರು ಹರಿಗೋಬಿಂದ್ ಸಿಂಗ್ ಇವರು 1606 ರಲ್ಲಿ ಬಳಸಲು ಶುರು ಮಾಡಿದ ಪವಿತ್ರ  “ನಿಶಾನೆ ಸಾಹಿಬ್” ಧ್ವಜವು  ಕಿತ್ತಳೆ ಬಣ್ಣದ ತ್ರಿಕೋನ ಆಕಾರದ ಪತಾಕೆಯಾಗಿದ್ದು ಅದರ ನಡುವೆ ಒಂದು ಗುರಾಣಿ, ಆಚೀಚೆ ಎರಡು ಖಡ್ಗ ಮತ್ತು ನಡುವೆ ಒಂದು ಭರ್ಚಿಯ ಲಾಂಛನ ಹೊಂದಿತ್ತು.  ಈಗಲೂ ಎಲ್ಲಾ ಪಂಜಾಬಿ ಸರ್ದಾರ್ಜಿಗಳ ಲಾರಿಗಳ ಮೇಲೆ ಇದೇ ಕಿತ್ತಳೆ ಬಣ್ಣದ ನಿಶಾನೆ ಸಾಹಿಬ್ ಸ್ಟಿಕ್ಕರ್ ಇರುತ್ತದೆ.

ರಾಮಾಯಣದ ವಿಷಯಕ್ಕೆ ಬಂದರೆ…

ಇನ್ನು ಕಾಲ್ಪನಿಕ ವೈದಿಕ ಪುರಾಣಕ್ಕೆ ಬಂದರೆ, ರಾಮ ಲಕ್ಷ್ಮಣ ಸೀತೆ ವನವಾಸಕ್ಕೆ ಹೋಗುವಾಗ ನಾರಿನ ಬಟ್ಟೆ ಉಟ್ಟು ಹೋಗಿದ್ದು. ಈ ನಾರು ಬಟ್ಟೆ ಮಾಸಿದ ಬಿಳಿ ಬಣ್ಣದ ದೊರಗು ಬಟ್ಟೆಯಾಗಿತ್ತಂತೆ. ರಾಮ-ಲಕ್ಷ್ಮಣ ಯಾವುದೇ ಧ್ವಜ ಹಿಡಿದುಕೊಂಡು ವನವಾಸಕ್ಕೆ ಹೋಗಿರಲಿಲ್ಲ. ಸುಗ್ರೀವನ ವಾನರ ಸೇನೆಯ ಸೈನಿಕರು ಸಾಧಾರಣ ದ್ರಾವಿಡ ಮನುಷ್ಯರೇ ಆಗಿದ್ದರೂ ಅವರು ಮಂಗನ ಲಾಂಛನವಿದ್ದ ಪತಾಕೆ ಹಿಡಿದು ಕೊಂಡಿದ್ದರಿಂದ ಅವರಿಗೆ ವಾನರರು- ಕಪಿಗಳು ಎಂಬ ಹಣೆಪಟ್ಟಿ ಹತ್ತಿಕೊಂಡಿತು ಎನ್ನುತ್ತಾರೆ ಕೆಲವು ಪುರಾಣ ಕಥೆಗಳ ವಿಶ್ಲೇಷಕರು. (ಕನ್ನಡದಂತೆ ಸಂಸ್ಕೃತದಲ್ಲೂ ಕಪಿ ಎಂದರೆ ಮಂಗ-ಕೋತಿ).

ಮಹಾಭಾರತದ ವಿಷಯಕ್ಕೆ ಬಂದರೆ ಅದರಲ್ಲಿ ‘ಕಪಿಧ್ವಜ’ ಎಂಬ ಉಲ್ಲೇಖ ಇದೆ. ಕುರುಕ್ಷೇತ್ರ ಯುದ್ಧದಲ್ಲಿ 100 ಜನ ಕೌರವರಿಗೂ, ಐದು ಜನ ಪಾಂಡವರಿಗೂ 105 ಬೇರೆ ಬೇರೆ ಲಾಂಛನವುಳ್ಳ ಪತಾಕೆಯನ್ನು ಕೊಡಲಾಗಿತ್ತಂತೆ. ಅದರಲ್ಲಿ ಅರ್ಜುನನಿಗೆ ಕೊಟ್ಟ ರಥದ ಮೇಲೆ ಹನುಮಂತನ ಲಾಂಛನವಿದ್ದ ಹಳದಿ ಪತಾಕೆ ಇತ್ತಂತೆ. ಅದಕ್ಕೆ “ಕಪಿ ಧ್ವಜ” ಎಂದು ಕೃಷ್ಣನು ಕರೆದ. ಯಾಕೆಂದರೆ ಕೃಷ್ಣನು ತ್ರೇತಾಯುಗದಲ್ಲಿ ಇದ್ದ ಹನುಮಂತನನ್ನು ದ್ವಾಪರ ಯುಗಕ್ಕೂ ಕರೆದು ಅವನು ಅರ್ಜುನನ ರಥದ ಮೇಲುಗಡೆ ಸ್ಥಾಪಿತಗೊಳ್ಳಬೇಕು ಹಾಗೂ ಕರ್ಣನ ಬಾಣದಿಂದ ಅರ್ಜುನನ ರಥ ನಾಶವಾಗದಂತೆ ಕಾಪಾಡಬೇಕು ಎಂದು ಹನುಮಂತನಲ್ಲಿ ಕೃಷ್ಣ ಕೇಳಿಕೊಂಡಿದ್ದನಂತೆ.  ಹನುಮಂತ ಅರ್ಜುನನ ರಥದ ಮೇಲ್ಗಡೆ ಸ್ಥಾಪನೆಗೊಂಡಿದ್ದರಿಂದ ಅವನ ಧ್ವಜಕ್ಕೆ ಕಪಿಧ್ವಜ ಎಂದು ಕರೆಯಲಾಯಿತು, ಸ್ವತಃ ಅರ್ಜುನನಿಗೂ ಕಪಿಧ್ವಜಾ ಎಂಬ ಹೆಸರು ಬಿತ್ತಂತೆ. ಕುರುಕ್ಷೇತ್ರ ಯುದ್ಧ ಮುಗಿದ ಮೇಲೆ ಕೃಷ್ಣನ ಆದೇಶದಂತೆ ಹನುಮಂತ ರಥ ಬಿಟ್ಟು ದೂರ ಹೋದ ಮೇಲೆ ಅರ್ಜುನನ ರಥ ಸುಟ್ಟು ಭಸ್ಮವಾಯಿತು.  ಇದಕ್ಕೆ ಕಾರಣ ಕುರುಕ್ಷೇತ್ರ ಯುದ್ಧದ 18 ದಿನದ ಅವಧಿಯಲ್ಲಿ ಕರ್ಣನ ಭೀಕರ ಅಸ್ತ್ರಗಳ ವಿನಾಶಕಾರಿ ಶಕ್ತಿಯನ್ನು ಹನುಮಂತ ತನ್ನೊಳಗೆ ಸೆಳೆದುಕೊಂಡು ಅರ್ಜುನನ ರಥವನ್ನು ರಕ್ಷಿಸಿದ್ದನಂತೆ. ಹಾಗಾಗಿ ಅವನು ರಥ ಬಿಟ್ಟು ಇಳಿದ ಕೂಡಲೇ ಕರ್ಣನ ಹಳೆಯ ಬಾಣಗಳು ತಮ್ಮ ವಿನಾಶಕಾರಿ ಪರಿಣಾಮವನ್ನು ತೋರಿಸಿದವಂತೆ.

ದ್ವೇಷಪೂರ್ಣ ಕಾರ್ಯಕ್ಕೆ  ಹನುಮನನ್ನು ಬಳಸುವಂತಿಲ್ಲ…

ಆನಂತರ ಕೃಷ್ಣ ಹನುಮಂತನಿಗೆ ಚಿರಂಜೀವಿ ಆಗು ಎಂದು ವರಕೊಟ್ಟು ಇನ್ನು ಮುಂದೆ ಇಂತಹಾ ಯಾವುದೇ ದ್ವೇಷಪೂರ್ಣ ವಿನಾಶಕಾರಿ ಯುದ್ಧದಲ್ಲಿ ಪಾಲುಗೊಳ್ಳಬಾರದು ಎಂದು ಹನುಮನಿಗೆ ಉಪದೇಶಿಸಿ ಹಿಮಾಲಯಕ್ಕೆ ತಪಸ್ಸಿಗೆ ಹೋಗಲು ಹೇಳಿದನಂತೆ.  ಹಾಗಾಗಿ ಈ ಕಲಿಯುಗದಲ್ಲಿಯೂ ಹನುಮಂತನ ಚಿತ್ರವನ್ನು, ಪ್ರತಿಮೆಯನ್ನು ಅಥವಾ ಪವಿತ್ರ ನಾಮವನ್ನು ಯಾವುದೇ ದ್ವೇಷಪೂರ್ಣ ಕಾರ್ಯಕ್ಕೆ  ಬಳಸಿದರೆ, ಹಾಗೆ ಬಳಸುವವರಿಗೆ ಅದರಿಂದ ತೀವ್ರ ಅಶುಭ ಪರಿಣಾಮ ಉಂಟಾಗುತ್ತದೆ ಎಂದು ಕೃಷ್ಣ ಹೇಳಿದ್ದನಂತೆ.  ಈ ಕಾಲ್ಪನಿಕ ಕತೆಯಲ್ಲಿಯೂ ಒಂದು ಆಳವಾದ ಸುಸಂದೇಶ ಇರುವುದು ಸತ್ಯ. ಮಂಡ್ಯದಲ್ಲಿ ಹನುಮ ಧ್ವಜವನ್ನು ದುರ್ಬಳಕೆ ಮಾಡಿದ ಬಲಪಂಥಿಯರಿಗೆ ಕೃಷ್ಣನ ಈ ಎಚ್ಚರಿಕೆ ಅನ್ವಯ ಆಗಬಹುದೇನೋ.

ಓಂಕಾರವನ್ನು ಮೊತ್ತಮೊದಲು ಬಳಸಿದ್ದು ಬೌದ್ಧ ಭಿಕ್ಷುಗಳು..

ವೈದಿಕರ ಪವಿತ್ರ ‘ಓಂಕಾರ’ ಚಿನ್ಹೆಯೂ ಮೂಲತಃ  ಬ್ರಾಹ್ಮಿ ಲಿಪಿ (ಧಮ್ಮ ಲಿಪಿ)ಯ ಒಂದು ಅಕ್ಷರ.  ಅದು ದೇವನಾಗರಿ ಲಿಪಿಯ ಅಕ್ಷರವಲ್ಲ. ಈ ಪವಿತ್ರ ಓಂಕಾರವನ್ನೂ ಮೊತ್ತಮೊದಲು ಬಳಸಿದ್ದು ಬೌದ್ಧ ಭಿಕ್ಷುಗಳು ಎನ್ನಲಾಗುತ್ತದೆ.  ಹಿಂದೂಗಳ ಇನ್ನೊಂದು ಪವಿತ್ರ ಚಿನ್ಹೆಯಾದ ಸ್ವಸ್ತಿಕಾ ಕೂಡಾ ಜೈನ ಧರ್ಮದ ಮೂಲಕ ಹಿಂದೂ ಧರ್ಮಕ್ಕೆ ಬಂದಿದ್ದು.  3,000 ವರ್ಷಗಳ ಹಿಂದೆ ವೈದಿಕರು ಮೂರ್ತಿ ಪೂಜೆ ಮಾಡುತ್ತಲೇ ಇರಲಿಲ್ಲ.  ಅವರು ಕೇವಲ ಯಜ್ಞಯಾಗಗಳ ಮೂಲಕ ಇಂದ್ರನ ಪೂಜೆ, ಪ್ರಕೃತಿ ಪೂಜೆ ಮತ್ತು ಸೂರ್ಯ-ಚಂದ್ರರ ಪೂಜೆ ಮಾತ್ರ ಮಾಡುತ್ತಿದ್ದರಂತೆ.  ಜೈನ ಮತ್ತು ಬೌದ್ಧರ ಯಕ್ಷ-ಯಕ್ಷಿಣಿ ಪೂಜೆಯೇ ಮುಂದೆ ವೈದಿಕರಲ್ಲಿ ಮೂರ್ತಿ ಪೂಜೆಗೆ ನಾಂದಿಯಾಯಿತು ಎನ್ನಲಾಗುತ್ತದೆ.  ಮೂಲ ಬೌದ್ಧ ಧರ್ಮವು ಮಹಾಯಾನ ಮತ್ತು ಹೀನಾಯಾನವಾಗಿ ಪರಿವರ್ತನೆಗೊಂಡು ಕೊನೆಗೆ ತಂತ್ರಯಾನದೊಂದಿಗೆ ಸೇರಿ ಕುಲಗೆಟ್ಟು ವಜ್ರಾಯಾನವಾಯಿತು. ಈ Degrade ಆದ ವಜ್ರಯಾನ ಮತ್ತು ತಂತ್ರಯಾನಕ್ಕೇನೆ  ಪರ್ಷಿಯನ್ನರು ಹಿಂದೂ ಧರ್ಮ ಎಂದು ಕರೆದಿರಬಹುದು.  ಆದಿ ಶಂಕರಾಚಾರ್ಯರಿಗೆ “ಪ್ರಚನ್ನ ಬುದ್ಧ” ಎಂಬ ಹೆಸರು ಕೂಡಾ ಇತ್ತು. ಕಾರಣ ಅವರು ಬೋಧಿಸುತ್ತಿದ್ದ ಶೈವ ತತ್ವಗಳು ಬೌದ್ಧ ಧರ್ಮದಿಂದಲೇ ಎರವಲು ಪಡೆದಿದ್ದರಿಂದಾಗಿ ವೈಷ್ಣವರು ಶಂಕರರನ್ನು ಪ್ರಚನ್ನ ಬುದ್ಧ ಅರ್ಥಾತ್  ಗುಪ್ತ ಬೌದ್ಧ  ಎಂದು ಕರೆದಿರಬಹುದು.

ಬೌದ್ಧರ ಸ್ತೂಪ ಪೂಜೆಯೇ ಹಿಂದೂಗಳಲ್ಲಿ ಲಿಂಗ ಪೂಜೆಯಾಗಿ ಬದಲಾಯಿತು.  ಜೈನರ ನಾಗರೂಪಿ ಯಕ್ಷರಾದ ಧರಣೇಂದ್ರ ಮತ್ತು ಪದ್ಮಾವತಿಯ ಪೂಜೆಯೇ ಹಿಂದೂಗಳಲ್ಲಿ ನಾಗ ಪೂಜೆಯ ಸ್ವರೂಪ ಪಡೆಯಿತು. ರಂಗೋಲಿ ಹಾಕಿ ಅದನ್ನು ಮಂಡಲ ಎಂದು ಕರೆದು ಪೂಜೆ ಮಾಡುವ ಪದ್ಧತಿ ಜೈನರಿಂದಲೇ ವೈದಿಕರಿಗೆ ಬಂದಿದ್ದು.  ವೈದಿಕರ ಸಸ್ಯಾಹಾರ ಕೂಡಾ ಜೈನ ಧರ್ಮದ ಕೊಡುಗೆ.  ಒಟ್ಟಾರೆಯಾಗಿ ಸಂಕೇತಗಳು, ಮಂಡಲ-ಪೂಜೆ, ಕಲಶ ಪೂಜೆ, ಬ್ರಾಹ್ಮಿ-ನಾಗರಿ ಲಿಪಿ, ಪಾಣಿನಿಯ ಸಂಸ್ಕೃತ ವ್ಯಾಕರಣ, ಇವೆಲ್ಲಾ ಇತರ ಹೇಳುವುದೆಂದರೆ  ಈಗಿನ ಹಿಂದೂ ಧರ್ಮದ ಧ್ವಜಗಳು, ಲಾಂಛನಗಳು, ಚಿನ್ಹೆ-ಪ್ರಾಚೀನ ಭಾರತೀಯ ಧರ್ಮಗಳ ಮತ್ತು ಪುರಾತನ ಪಾಲಿ-ಪ್ರಾಕೃತ ಭಾಷೆಗಳ ಕೊಡುಗೆ ಎಂಬುದು ನಿಜ

ಹಾಗಾದರೆ ಮೂಲ ವೈದಿಕ ಧರ್ಮದ ಸ್ವಂತ ಆಚರಣೆ ಅನ್ನುವುದು ಯಾವುದಾದರೂ ಇದೆಯೇ?

(ಮುಂದುವರಿದ ಭಾಗವನ್ನು ನಾಳೆ ಕನ್ನಡ ಪ್ಲಾನೆಟ್‌ ನಲ್ಲಿ ಓದಿ)

ಪ್ರವೀಣ್‌ ಎಸ್‌ ಶೆಟ್ಟಿ

ಚಿಂತಕರು, ನಿವೃತ್ತ ಬ್ಯಾಂಕ್‌ ಅಧಿಕಾರಿ

ಇದನ್ನೂ ಓದಿ-“ಬಿಲ್ಲವರು ಕೊಲ್ಲುವವರೂ, ಕೊಲ್ಲಲ್ಪಡುವವರೂ ಅಲ್ಲ. ಈ ನೆಲವನ್ನು ಆಳುವವರು”

More articles

Latest article