ಮನೆಯೊಂದರಲ್ಲಿ ಬೆಂಕಿ(Fire) ಕಾಣಿಸಿಕೊಂಡು ಬೆಂಕಿ ನಂದಿಸಲು ತೆರಳಿದ್ದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿಯಲ್ಲಿ ಬೆಂದು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಬಿಹಾರದ ಸಿವಾನ್ನಲ್ಲಿ ನಡೆದಿದೆ.
ಮನೆಯಲ್ಲಿದ್ದ ಯಂತ್ರಕ್ಕೆ ಬೆಂಕಿ ಹೊತ್ತಿಕೊಂಡು, ಸ್ವಲ್ಪ ಸಮಯದಲ್ಲೇ ಬೆಂಕಿ ಮನೆಯೆಲ್ಲ ವ್ಯಾಪಿಸಿದ ತಕ್ಷಣ ಅಗ್ನಿ ಶಾಮಕದಳಕ್ಕೆ ಕರೆ ಮಾಡಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಸಿಬ್ಬಂದಿಗಳು ಕಾರ್ಯಚರಣೆಯಲ್ಲಿ ತೊಡಗಿದ್ದಾರೆ. ಅಷ್ಟರಲ್ಲಿ ಸಿಬ್ಬಂದಿ ಹವಾಲ್ದಾರ್ ರವಿಕಾಂತ್ ಮಂಡಲ್ (40) ಮನೆಯ ಮೇಲ್ಛಾವಣಿಯ ಮೇಲೆ ಹತ್ತಿ ಬೆಂಕಿ ನಂದಿಸಲು ಆರಂಭಿಸಿದ್ದರು. ಭಾರೀ ಬೆಂಕಿಯಿಂದಾಗಿ ಛಾವಣಿ ಕುಸಿದಿದೆ.
ಬಿದ್ದ ರಬಸಕ್ಕೆ ರವಿಕಾಂತನಿಗೆ ಪ್ರಜ್ಞೆ ತಪ್ಪದೆ ಅವರಿಗೆ ಮತ್ತೆ ಪ್ರಜ್ಞೆ ಬರುವಷ್ಟರಲ್ಲಿ ಅವರೂ ಉರಿಯುವ ಬೆಂಕಿಗೆ ಬಿದ್ದು, ರವಿಕಾಂತ್ ತೀವ್ರವಾಗಿ ಸುಟ್ಟುಹೋಗಿದ್ದರು. ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತರುವಷ್ಟರಲ್ಲಿ ರವಿಕಾಂತ್ ಸಾವನ್ನಪ್ಪಿದ್ದಾರೆ.
ಈ ವೇಳೆ ಅಗ್ನಿಶಾಮಕ ದಳ ಬೆಂಕಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವಾಗ ಇದ್ದಕ್ಕಿದ್ದಂತೆ ಅಗ್ನಿಶಾಮಕ ವಾಹನದಲ್ಲಿ ನೀರು ಖಾಲಿಯಾಗಿದೆ. ಇದರಿಂದಾಗಿಯೂ ರವಿಕಾಂತರನ್ನು ಕಾಪಾಡಲು ಸಾಧ್ಯವಾಗದಂತಾಗಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಶ್ರಮವಹಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಮೃತ ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಭಾಗಲ್ಪುರ ನಿವಾಸಿ ರವಿಕಾಂತ್ ಮಂಡಲ್ ಎಂದು ಗುರುತಿಸಲಾಗಿದೆ.