ಖಾಸಗಿ ರಸ್ತೆಗಳನ್ನು ಸಾರ್ವಜನಿಕ ರಸ್ತೆಗಳಾಗಿ ಪರಿವರ್ತಿಸಲು ಬಿಬಿಎಂಪಿಗೆ ಅಧಿಕಾರ

Most read


ಬೆಂಗಳೂರು: ಬೆಂಗಳೂರು ಮಹಾನಗರದ ಖಾಸಗಿ ರಸ್ತೆಗಳನ್ನು ಸಾರ್ವಜನಿಕ ರಸ್ತೆಗಳು ಎಂದು ಘೋಷಣೆ ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ(ಬಿಬಿಎಂಪಿ) ಅಧಿಕಾರ ನೀಡುವ ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಿದ್ದುಪಡಿ ವಿಧೇಯಕ’ಕ್ಕೆ ವಿಧಾನಸಭೆಯಲ್ಲಿ
ಅಂಗೀಕಾರ ನೀಡಲಾಗಿದೆ. ಈ ಮೊದಲು ಖಾಸಗಿ ರಸ್ತೆಗಳನ್ನು ಸಾರ್ವಜನಿಕ ರಸ್ತೆಗಳನ್ನಾಗಿ ಪರಿವರ್ತಿಸಲು ಖಾಸಗಿ ಆಸ್ತಿಗಳ ಮಾಲೀಕರ ಒಪ್ಪಿಗೆ ಪಡೆಯಬೇಕಾಗಿತ್ತು. ಆದರೆ ಇನ್ನು ಮುಂದೆ ಹೊಸ ಕಾಯಿದೆ ಪ್ರಕಾರ ಬಿಬಿಎಂಪಿ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳಲು ಅಧಿಕಾರ ನೀಡಲಾಗಿದೆ.

ವಿಧೇಯಕದ ಪ್ರಕಾರ ವಲಯ ಆಯುಕ್ತರು ತಾವಾಗಿಯೇ ನಿರ್ಧಾರ ಕೈಗೊಳ್ಳಬಹುದು ಇಲ್ಲವೇ ಖಾಸಗಿ ಆಸ್ತಿಗಳ ಮಾಲೀಕರು ಮನವಿ ಸಲ್ಲಿಸಿದರೆ ಕ್ರಮ ಕೈಗೊಳ್ಳಬಹುದಾಗಿದೆ. ಖಾಸಗಿ ರಸ್ತೆಯನ್ನು ಸಾರ್ವಜನಿಕ ರಸ್ತೆ ಎಂದು ಘೋಷಿಸುವುದಕ್ಕೂ ಮುನ್ನ ಪಬ್ಲಿಕ್‌ ನೋಟಿಸ್‌ ಮತ್ತು ಖಾಸಗಿ ಆಸ್ತಿಗಳ ಮಾಲೀಕರಿಗೆ ನೋಟಿಸ್‌ ನೀಡಬೇಕಾಗಿರುತ್ತದೆ.

ಖಾಸಗಿ ರಸ್ತೆಯಲ್ಲಿ ರಸ್ತೆ ಬದಿಯ ಚರಂಡಿ ಸೇರಿ ಯಾವುದೇ ಸುಧಾರಣೆ, ಅಭಿವೃದ್ಧಿ ಅಥವಾ ನಿರ್ವಹಣೆಯಾಗಬೇಕಾದರೆ ಕಾಲಮಿತಿಯೊಳಗೆ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳುವಂತೆ ಖಾಸಗಿ ಆಸ್ತಿಗಳ ಮಾಲೀಕರಿಗೆ ವಲಯ ಆಯುಕ್ತರು ನಿರ್ದೇಶನ ನೀಡಬಹುದಾಗಿದೆ. ಒಂದು ಔಏಳೆ ಕಾಸಗಗಿ ಆಸ್ತಿಗಳ ಮಾಲೀಕರು ವಿಫಲವಾದರೆ ಕಾಮಗಾರಿಗಳನ್ನು ಬಿಬಿಎಂಪಿಯೇ ಕೈಗೊಳ್ಳಬೇಕಾಗಿರುತ್ತದೆ. ನಂತರ ಕಾಮಗಾರಿಯ ಮೊತ್ತವನು ಆಸ್ತಿ ತೆರಿಗೆಯ ಜತೆ ಸಂಗ್ರಹಿಸಬಹುದಾಗಿದೆ.

ಅನಧಿಕೃತ ನಿರ್ಮಾಣಗಳನ್ನು ತಡೆಯುವುದೇ ಈ ಮಸೂದೆಯ ಉದ್ಧೇಶವಾಗಿದೆ. ಒಂದು ವೇಳೆ ಅನಧಿಕೃತ ನಿರ್ಮಾಣ ಕಂಡು ಬಂದರೆ ವಲಯ ಆಯುಕ್ತರು ತಡೆಯಲು ಅಧಿಕಾರ ನೀಡಲಾಗಿದೆ. ಮಾಲೀಕರು ಅನಧಿಕೃತ ಕಟ್ಟಡ ಅಥವಾ ಅದರ ಭಾಗವನ್ನು ಬಳಸದಂತೆ ನಿಯಂತ್ರಿಸುವ ಅಧಿಕಾರ ಬಿಬಿಎಂಪಿಗೆ ನೀಡಲಾಗಿದೆ. ಒಂದು ವೇಳೆ ಈ ವಿಧೇಯಕ ಕಾನೂನಾಗಿ ಜಾರಿಗೆ ಬಂದರೆ ನಗರ ಮೂಲಭೂತ ಸೌಕರ್ಯವನ್ನು ಮುಖ್ಯವಾಹಿನಿಗೆ ತರಲು ಅವಕಾಶವಾಗುತ್ತದೆ. ಜತೆಗೆ ಬೆಂಗಳೂರಿನ ರೆಸಿಡೆನ್ಷಿಯಲ್‌ ಲೇ ಔಟ್‌ ಗಳು ತೀವ್ರಗತಿಯಲ್ಲಿ ನಿರ್ಮಾಣವಾಗುತ್ತಿದ್ದು, ಬಿಬಿಎಂಪಿಗೆ ನಿರ್ವಹಿಸಲು ಸಾಧ್ಯವಾಗುತ್ತದೆ. ಸದನದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್‌ಕೆ ಪಾಟೀಲ್ ಅವರು, 2025ನೇ ಸಾಲಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ತಿದ್ದುಪಡಿ) ವಿಧೇಯಕವನ್ನು ಮಂಡಿಸಿ ವಿವರಣೆ ನೀಡಿದರು.

ಯಾವುದೇ ಖಾಸಗಿ ರಸ್ತೆಯನ್ನು ಸಾರ್ವಜನಿಕ ರಸ್ತೆ ಎಂದು ಘೋಷಣೆ ಮಾಡಲು ಸರ್ಕಾರ ಬಿಬಿಎಂಪಿಗೆ ಅಧಿಕಾರ ನೀಡಿದ್ದು, ಈ ಸಂಬಂಧ ಕಾಯ್ದೆಗೆ ತಿದ್ದುಪಡಿ ತಂದಿದೆ. ಈ ಕಾನೂನಿನಿಂದ ಬೆಂಗಳೂರು ನಗರದ ಖಾಸಗಿ ರಸ್ತೆ, ಬೀದಿಗಳು ಇನ್ನು ಮುಂದೆ ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಗೊಳ್ಳುತ್ತವೆ. ನಗರದ ಖಾಸಗಿ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಬಿಬಿಎಂಪಿಗೆ ಅವಕಾಶ ಇದೆ. ಅನಧಿಕೃತ ಕಟ್ಟಡ ಅಥವಾ ಅದರ ಭಾಗವನ್ನು ಬಳಸದಂತೆ ಮಾಲೀಕ ಅಥವಾ ಇತರೆ ವ್ಯಕ್ತಿಗಳನ್ನು ತಡೆಯಲು ವಿಧೇಯಕದಲ್ಲಿ ಅವಕಾಶ ನೀಡಲಾಗಿದೆ ಎಂದು ಸಚಿವರು ವಿವರಣೆ ನೀಡಿದರು.


More articles

Latest article