ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಅಂಗವಾಗಿ ನಾಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ ಸಿ ಬಿ ಹಾಗೂ ಗುಜರಾತ್ ಟೈಟನ್ಸ್ ತಂಡಗಳ ಮಧ್ಯೆ ಪಂದ್ಯ ನಡೆಯಲಿದೆ. ಕ್ರಿಕೆಟ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಟೇಡಿಯಂನತ್ತ ಹರಿದು ಬರಲಿದ್ದಾರೆ. ಹಾಗಾಗಿ ಚಿನ್ನಸ್ವಾಮಿ ಸ್ಟೇಡಿಯಂನ ಸುತ್ತಮುತ್ತ ನಾಳೆ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಳ್ಳಲಿದೆ. ಸಂಚಾರಿ ಪೊಲೀಸರು ಸ್ಟೇಡಿಯಂ ಸುತ್ತಮುತ್ತ ಟ್ರಾಫಿಕ್ ನಿಯಂತ್ರಿಸಲು ಹಲವು ಕ್ರಮಗಳನ್ನು ತೆಗೆದುಕೊಂಡಿದ್ದು, ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಿದ್ದಾರೆ.
ನಾಳೆ ಬುಧವಾರ, ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 11 ಗಂಟೆವರೆಗೂ ಸ್ಟೇಡಿಯಂ ಸುತ್ತಮುತ್ತ ಪಾರ್ಕಿಂಗ್ ಗೆ ಅವಕಾಶ ಇರುವುದಿಲ್ಲ. ಪಂದ್ಯ ನೋಡಲು ಬರುವವರಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಕ್ರೀಡಾಂಗಣ ಸುತ್ತ ಮುತ್ತ ವಾಹನ ನಿಲುಗಡೆಗೆ ಸ್ಥಳದ ಅಭಾವ ಇರುವುದರಿಂದ ಆ ಭಾಗದಲ್ಲಿ ಓಡಾಡುವ ಸಾರ್ವಜನಿಕರು ಬಿಎಂಟಿಸಿ, ಮೆಟ್ರೋ ಬಳಸಲು ಮನವಿ ಮಾಡಲಾಗಿದೆ. ಇನ್ನು ಓಲಾ, ಉಬರ್, ಆಟೋ ಇತ್ಯಾದಿ ಕ್ಯಾಬ್ ಗಳು ಪಿಕ್ ಆಪ್ ಮತ್ತು ಟ್ರಾಪ್ ಮಾಡಲು ಸ್ಥಳ ನಿಗದಿ ಮಾಡಲಾಗಿದೆ.