ಬೆಂಗಳೂರು: ಬೆಂಗಳೂರಿನಲ್ಲಿ ಟಾಟಾ ಐ.ಪಿ.ಎಲ್ ಟಿ-20 ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದ್ದ ಸಂದರ್ಭದಲ್ಲಿ ಮೇ 3 ರಂದು ನಡೆಯುತ್ತಿದ್ದ ಆರ್.ಸಿ.ಬಿ. ಮತ್ತು ಸಿಎಸ್ ಕೆ ನಡುವಿನ ಪಂದ್ಯದ ಟಿಕೆಟ್‌ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿರುವ ಪೊಲೀಸರು ಅವರಿಂದ 13 ಟಿಕೆಟ್ ಗಳು, 3 ಮೊಬೈಲ್ ಮತ್ತು ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
ಮೊದಲ ಪ್ರಕರಣದಲ್ಲಿ ಕಬ್ಬನ್‌ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯ ಚಿನ್ನಸ್ವಾಮಿ ಕ್ರೀಡಾಂಗಣದ ಸಮೀಪದಲ್ಲಿ ಓರ್ವ ವ್ಯಕ್ತಿ ಬ್ಲಾಕ್ ನಲ್ಲಿ ಐಪಿಎಲ್ ಟಿಕೆಟ್ ಮಾರಾಟ ಮಾಡುತ್ತಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು.
ಈ ಮಾಹಿತಿಯನ್ನಾದರಿಸಿ ಸಿಸಿಬಿ ಯ ವಿಶೇಷ ವಿಚಾರಣಾ ದಳದ ಅಧಿಕಾರಿ ಮತ್ತು ಸಿಬ್ಬಂದಿ ದಾಳಿ ನಡೆಸಿ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು ಆತನ ಬಳಿಯಿದ್ದ 2,300 ಮುಖಬೆಲೆಯ 4 ಟಿಕೆಟ್, 1 ಮೊಬೈಲ್ ಮತ್ತು ರೂ.1,100 ನಗದು ಹಣವನ್ನು ಜಪ್ತಿ ಮಾಡಿದ್ದಾರೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ವಿಚಾರಣೆ ನಡೆಯುತ್ತಿದೆ.
ಮತ್ತೊಂದು ಪ್ರಕರಣದಲ್ಲಿ ಇದೇ ಪಂದ್ಯಕ್ಕೆ ಸಂಬಂಧಪಟ್ಟಂತೆ ಕಾಳಸಂತೆಯಲ್ಲಿ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ. ಇವರಿಂದ 9 ಐಪಿಎಲ್ ಟಿಕೆಟ್, 2 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಿಲ್ಸನ್ ಗಾರ್ಡನ್ ಪೊಲೀಸ್ ರಾಣಾ ವ್ಯಾಪ್ತಿಯಲ್ಲಿರುವ ಎ2ಬಿ ಹೋಟೆಲ್ ಮುಂಭಾಗದಲ್ಲಿ ಟಿಕೆಟ್ ಮಾರಾಟ ಮಾಡುತ್ತಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಮಾಹಿತಿಯನ್ನಾದರಿಸಿ ಸಿಸಿಬಿ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳ ಬಳಿಯಿದ್ದ ರೂ. 1,200 ಮುಖಬೆಲೆಯ 7 ಟಿಕೆಟ್, ಮತ್ತು ರೂ.1,500 ಮುಖಬೆಲೆಯ 2 ಟಿಕೆಟ್ ಮತ್ತು 2 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.