ಕಾಲ್ತುಳಿತ ಪ್ರಕರಣ: ಮೃತ 11 ಮಂದಿ ಕುಟುಂಬಗಳಿಗೆಲಾ ರೂ. 25 ಲಕ್ಷ ಪರಿಹಾರ ಘೋಷಿಸಿದ ಆರ್‌ ಸಿಬಿ

Most read

ಬೆಂಗಳೂರು: ಐಪಿಎಲ್‌ ಸಂಭ್ರಮಾಚರಣೆ ವೇಳೆ ಚಿನ್ನಸ್ಡಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಸಂಭವಿಸಿ ಮೃತಪಟ್ಟ 11 ಮಂದಿ ಕುಟುಂಬಗಳಿಗೆ ಆರ್‌ ಸಿಬಿ ‘ಆರ್‌ಸಿಬಿ ಕೇರ್ಸ್’ ಮೂಲಕ ತಲಾ ರೂ. 25 ಲಕ್ಷ ಪರಿಹಾರ ನೀಡುವುದಾಗಿ ಪ್ರಕಟಿಸಿದೆ.

ಪ್ರಕಟಣೆಯಲ್ಲಿ ಆರ್‌ ಸಿಬಿ ʼಜೂನ್ 4, 2025 – ಈ ದಿನ ನಮ್ಮ ಹೃದಯದಲ್ಲಿ ಶಾಶ್ವತವಾಗಿ ಉಳಿಯಲಿದೆ. ನಾವು ಕಳೆದುಕೊಂಡಿದ್ದು 11 ಅಭಿಮಾನಿಗಳನ್ನಷ್ಟೇ ಅಲ್ಲ… ಅವರು ನಮ್ಮ ಕುಟುಂಬದ ಸದಸ್ಯರಾಗಿದ್ದರು, ನಮ್ಮ ಹೃದಯದ ಭಾಗವಾಗಿದ್ದರು. ಅವರ ಉತ್ಸಾಹವೇ ನಮ್ಮ ಊರು, ಸಮುದಾಯ ಮತ್ತು ತಂಡಕ್ಕೆ ಜೀವ ತುಂಬುವ ಬೆಳಕಾಗಿತ್ತು. ನಮ್ಮ ನೆನಪುಗಳಲ್ಲಿ ಅವರು ಸದಾ ಜೀವಂತವಾಗಿರುತ್ತಾರೆ.

ಅವರ ಜಾಗವನ್ನು ಯಾವ ಸಹಾಯವೂ ತುಂಬಲಾರದು. ಆದರೆ ಮೊದಲನೇ ಮತ್ತು ಗೌರವದ ಸಂಕೇತವಾಗಿ, ಆರ್‌ಸಿಬಿ ಪ್ರತಿ ಕುಟುಂಬಕ್ಕೆ ತಲಾ ರೂ.25 ಲಕ್ಷ ನೆರವನ್ನು ನೀಡಿದೆ. ಇದು ಕೇವಲ ಆರ್ಥಿಕ ಸಹಾಯವಲ್ಲ; ಕರುಣೆ, ಒಗ್ಗಟ್ಟು ಮತ್ತು ನಿರಂತರ ಕಾಳಜಿಯ ಭರವಸೆ.

ಇದು ಆರ್‌ಸಿಬಿ ಕೇರ್ಸ್‌ನ ಆರಂಭವೂ ಹೌದು. ಅವರ ನೆನಪನ್ನು ಗೌರವಿಸುವ ಮೂಲಕ ಶುರುವಾದ ಈ ಪ್ರಯತ್ನ, ಅಭಿಮಾನಿಗಳ ಭಾವನೆ, ನಂಬಿಕೆ ಮತ್ತು ಸುರಕ್ಷತೆ ಪ್ರತಿಬಿಂಬಿಸುವ ದೀರ್ಘಕಾಲದ ಬದ್ಧತೆ ಎಂದು ತಿಳಿಸಿದೆʼʼ

ಜೂನ್ 3ರಂದು ನಡೆದ ಫೈನಲ್‌ ಪಂದ್ಯನಲ್ಲಿ ಪಂಜಾಬ್‌ ಕಿಂಗ್ಸ್ ತಂಡವನ್ನು 6 ರನ್ ಅಂತರದಿಂದ ಮಣಿಸುವ ಮೂಲಕ ಆರ್‌ ಸಿಬಿ ಚೊಚ್ಚಲ ಪ್ರಶಸ್ತಿ ಪಡೆದುಕೊಂಡಿತ್ತು.

ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತಲ್ಲಿ 11 ಮಂದಿ ಮೃತಪಟ್ಟು ಅನೇಕ ಮಂದಿ ಗಾಯಗೊಂಡಿದ್ದರು. ಆ ಸಂದರ್ಭದಲ್ಲಿ ಆರ್‌ ಸಿಬಿ ಮೃತರ ಕುಟುಂಬಗಳಿಗೆ ತಲಾ ರೂ.10 ಲಕ್ಷ ಪರಿಹಾರ ಘೋಷಿಸಿತ್ತು. ಆ ದುರಂತ ಸಂಭವಿಸಿದ ಮೂರು ತಿಂಗಳಿನಿಂದ ಆರ್‌ ಸಿಬಿ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಪೋಸ್ಟ್ ಹಂಚಿಕೊಂಡಿರಲಿಲ್ಲ. ಇದೀಗ ಈ ಪೋಸ್ಟ್‌ ಹಂಚಿಕೊಂಡಿದ್ದು, ಪರಿಹಾರ ಘೋಷಿಸಿದೆ.

More articles

Latest article