ಚೆನ್ನೈ: IPL ಇತಿಹಾಸದ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ (CSK), 2025ರ ಆವೃತ್ತಿಯಲ್ಲಿ ತನ್ನ ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿದೆ. 14 ಪಂದ್ಯಗಳಲ್ಲಿ ಕೇವಲ 4 ಗೆಲುವು ಸಾಧಿಸಿದ ಋತುರಾಜ್ ಗಾಯಕ್ವಾಡ್ ಪಡೆ, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆಯುವ ಮೂಲಕ ಮೊದಲ ಬಾರಿಗೆ ಅವಮಾನಕ್ಕೆ ಒಳಗಾಗಿದೆ. ಅಷ್ಟೇ ಅಲ್ಲದೆ, ಸತತ ಎರಡು ಸೀಸನ್‌ಗಳಲ್ಲಿ ಪ್ಲೇಆಫ್ ತಲುಪಲು ವಿಫಲವಾಗಿರುವುದು ತಂಡದ ಇತಿಹಾಸದಲ್ಲೇ ಇದು ಮೊದಲು.
ಶಿವಂದುಬೆ ‘ಸ್ಪಿನ್’ ಅಸ್ತ್ರಮಂಕಾಯಿತೇ?
CSK ತಂಡದ ಈ ಪತನಕ್ಕೆ ಪ್ರಮುಖ ಕಾರಣವೆಂದರೆ ಮಧ್ಯಮ ಕ್ರಮಾಂಕದ ಬ್ಯಾಟರ್ ಶಿವಂ ದುಬೆ ಅವರ ಫಾರ್ಮ್ ಕುಸಿತ. 2023ರ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ದುಬೆ, ಆಗ ಸ್ಪಿನ್ನರ್‌ಗಳ ವಿರುದ್ಧ 176.47 ಸ್ಟ್ರೈಕ್-ರೇಟ್‌ನಲ್ಲಿ ಅಬ್ಬರಿಸಿದ್ದರು. ಆದರೆ, 2025ರಲ್ಲಿ ಈ ವೇಗ 118.8 ಕ್ಕೆ ಕುಸಿದಿದೆ. 2023ರಲ್ಲಿ ಪ್ರತಿ 5 ಎಸೆತಕ್ಕೊಂದು ಬೌಂಡರಿ ಬಾರಿಸುತ್ತಿದ್ದ ದುಬೆ, ಕಳೆದ ಸೀಸನ್‌ನಲ್ಲಿ 8 ಎಸೆತಕ್ಕೆ ಒಂದು ಬೌಂಡರಿ ಹೊಡೆಯಲು ಪರದಾಡಿದ್ದಾರೆ. ಇದು ತಂಡದ ರನ್ ವೇಗಕ್ಕೆ ದೊಡ್ಡ ಬ್ರೇಕ್ ಹಾಕಿತು.
ಮಧ್ಯಮ ಕ್ರಮಾಂಕದ ಆಟಗಾರರ ನಿಧಾನಗತಿ
CSK ತಂಡದ ಬ್ಯಾಟಿಂಗ್ ಸಮಸ್ಯೆ ಕೇವಲ ಒಬ್ಬ ಆಟಗಾರನಿಗೆ ಸೀಮಿತವಾಗಿಲ್ಲ. 4 ರಿಂದ 8ನೇ ಕ್ರಮಾಂಕದ ಆಟಗಾರರು ಕ್ರೀಸ್‌ಗೆ ಬಂದ ತಕ್ಷಣ ಅಬ್ಬರಿಸಲು ವಿಫಲವಾಗುತ್ತಿದ್ದಾರೆ. ಮೊದಲ 10 ಎಸೆತಗಳಲ್ಲಿ ಇವರ ಸ್ಟ್ರೈಕ್-ರೇಟ್ ಕೇವಲ 123.15 ರಷ್ಟಿದ್ದು, ಇದು ಟೂರ್ನಿಯಲ್ಲೇ ಅತಿ ಕಡಿಮೆ. ಮತ್ತೊಂದೆಡೆ, ಅನುಭವಿ ಎಂ.ಎಸ್. ಧೋನಿ ಅವರು ವೇಗಿಗಳ ವಿರುದ್ಧ ಮಿಂಚುತ್ತಿದ್ದರೂ, ಸ್ಪಿನ್ನರ್‌ಗಳ ವಿರುದ್ಧ ಕೇವಲ 95.88 ಸ್ಟ್ರೈಕ್-ರೇಟ್ ಹೊಂದಿರುವುದು ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿದೆ.
ಹೊಸ ಭರವಸೆ ಮತ್ತು ಸವಾಲು
ಭಾರೀ ಮೊತ್ತಕ್ಕೆ (ತಲಾ 14.2 ಕೋಟಿ ರೂ.) ಖರೀದಿಯಾದ ಯುವ ಆಟಗಾರರಾದ ಕಾರ್ತಿಕ್ ಶರ್ಮಾ ಮತ್ತು ಪ್ರಶಾಂತ್ ವೀರ್ ಅವರ ಮೇಲೆ ಈಗ ಹೆಚ್ಚಿನ ಜವಾಬ್ದಾರಿ ಇದೆ. ಅಗ್ರ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್ ಮತ್ತು ಋತುರಾಜ್ ಗಾಯಕ್ವಾಡ್ ಜೋಡಿ ಭರವಸೆ ಮೂಡಿಸುತ್ತಿದ್ದರೂ, ಮಧ್ಯಮ ಕ್ರಮಾಂಕದಲ್ಲಿ ‘ಫಿನಿಶಿಂಗ್’ ಕೊರತೆ ಎದ್ದು ಕಾಣುತ್ತಿದೆ. ಮುಂದಿನ ಸೀಸನ್‌ನಲ್ಲಿ CSK ಪುಟಿದೇಳಬೇಕಾದರೆ, ಶಿವಂ ದುಬೆ ತಮ್ಮ ಹಳೆಯ ಸ್ಪಿನ್-ಹಿಟ್ಟಿಂಗ್ ಶೈಲಿಗೆ ಮರಳಲೇಬೇಕಿದೆ.

