ಅಂತಾರಾಜ್ಯ ಹೆದ್ದಾರಿ ದರೋಡೆಕೋರ ಬಾಂಬೆ ಸಲೀಂ ಮತ್ತು 8 ಮಂದಿ ಬಂಧನ

Most read



ಬಾಗೇಪಲ್ಲಿ: ರಾಜ್ಯದ ವಿವಿಧ ಭಾಗಗಳಲ್ಲಿ ಕೊಲೆ, ದರೋಡೆ, ಸುಲಿಗೆ ಕಳ್ಳತನದ ಪ್ರಕರಣಗಳಲ್ಲಿ ನ್ಯಾಯಾಲಯಗಳಿಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಕುಖ್ಯಾತ ದರೋಡೆಕೋರ ಮಹಮ್ಮದ್‌ ಖಲೀಲ್‌ ವುಲ್ಲಾ ಆಲಿಯಾಸ್‌ ಬಾಂಬೆ ಸಲೀಂ ಸೇರಿದಂತೆ 8 ಮಂದಿಯನ್ನು ಬಾಗೇಪಲ್ಲಿ ಪೊಲೀಸರು ಬಂಧಿಸಿದ್ದಾರೆ.

ಈತನ ವಿರುದ್ಧ ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಕೊಲೆ,
ಸುಲಿಗೆ, ಡಕಾಯಿತಿ, ಕಳವು, ಅಪಹರಣ ಪ್ರಕರಣಗಳು ದಾಖಲಾಗಿವೆ. ವಿವಿಧ ಪೊಲೀಸ್ಠಾ ಣೆಗಳಲ್ಲಿ 5 ಕೊಲೆ ಪ್ರಕರಣಗಳು, 4 ಡಕಾಯಿತಿ, 2 ಸುಲಿಗೆ ಪ್ರಕರಣಗಳು, 2 ಅಪಹರಣ ಸೇರಿದಂತೆ 20ಕ್ಕೂ ಹೆಚ್ಚು ಪ್ರಕರಣಗಳು ಬಾಂಬೆ ಸಲೀಂ ವಿರುದ್ಧ ದಾಖಲಾಗಿವೆ.

ಆರೋಪಿಗಳು ಬಳಸುತ್ತಿದ್ದ ರೂ.30 ಲಕ್ಷ ಬೆಲೆ ಬಾಳುವ ಕಾರು, 5.15 ಲಕ್ಷ ರೂ. ನಗದು, ಒಂದು ಲಕ್ಷ ಬೆಲೆ ಬಾಳುವ ದ್ವಿಚಕ್ರ ವಾಹನ, ಡಕಾಯಿತಿಗೆ ಬಳಸುತ್ತಿದ್ದ ದ್ವಿಚಕ್ರ ವಾಹನ, ಚಾಕು, ಮಚ್ಚು, ಕಬ್ಬಿಣದ ಸಲಾಕೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಗುಡಿಬಂಡೆ ತಾಲ್ಲೂಕಿನ ಗಂಗಾನಹಳ್ಳಿ ಗ್ರಾಮದ ಅಶ್ವತ್ಥನಾರಾಯಣಸ್ವಾಮಿ ಎಂಬುವರು ತಮ್ಮ ಜಮೀನು ಮಾರಿ ಬಂದಿದ್ದ ಹಣವನ್ನು ತಮ್ಮ ಸ್ನೇಹಿತರಿಗೆ ನೀಡಲು 2024ರ ಡಿಸೆಂಬರ್ 20ರಂದು ಮಾರುತಿ ಸುಜುಕಿ ಸ್ವಿಫ್ಟ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಅದೇ ಸಮಯಕ್ಕೆ ಆದಿಗಾನಹಳ್ಳಿ ಕ್ರಾಸ್ ಸಮೀಪ ಪೆಟ್ರೋಲ್ ಬಂಕ್ ಹತ್ತಿರ ಕಾರಿನಲ್ಲಿ ಬಂದ ಬಾಂಬೆ ಸಲೀಂ ಹಾಗೂ ಆತನ ಸಹಚರರು ಅಡ್ಡಗಟ್ಟಿ ಸ್ವಾಮಿ ಅವರನ್ನು ಅಪಹರಿಸಿ, ರೂ. 16 ಲಕ್ಷ ದರೋಡೆ ಮಾಡಿ, ಅವರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಅವರನ್ನು ಬಿಡುಗಡೆ ಮಾಡಲು ಹೆಚ್ಚುವರಿಯಾಗಿ ರೂ. 50 ಲಕ್ಷ ಹಣ ನೀಡಬೇಕು ಎಂದು ಅವರ
ಪತ್ನಿಗೆ ಫೋನ್ ಮಾಡಿ ಬೆದರಿಸಿದ್ದರು. ಈ ಸಂಬಂಧ ಅಶ್ವತ್ಥನಾರಾಯಣಸ್ವಾಮಿ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಸಂಬಂಧ ಕಾರ್ಯಾಚರಣೆಗಾಗಿ ಪೊಲೀಸ್ ಇನ್‌ಸ್ಪೆಕ್ಟರ್ ಪ್ರಶಾಂತ್ ವರ್ಣಿ
ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಕೊನೆಗೂ ಪೊಲೀಸರಿಗೆ ತಲೆನೋವಾಗಿದ್ದ ಕುಖ್ಯಾತ ಹೆದ್ದಾರಿ ಡಕಾಯಿತರನ್ನು ಬಂದಿಸುವಲ್ಲಿ ಬಾಗೇಪಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

More articles

Latest article