ಬೆಂಗಳೂರು: ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಕಲ್ಪಿಸುವ ಕುರಿತು ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಅವರು ಮಧ್ಯಂತರ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗುರುವಾರ ಸಲ್ಲಿಸಿದ್ದಾರೆ.
ಮಧ್ಯಂತರ ವರದಿಯ ಶಿಫಾರಸುಗಳು ಹೀಗಿವೆ:
ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಯಲ್ಲಿರುವ ಉಪಜಾತಿಗಳ ವೈಜ್ಞಾನಿಕ ವರ್ಗೀಕರಣ ಮಾಡಲು ಹೊಸದಾಗಿ ಸಮೀಕ್ಷೆ ನಡೆಸಿ ದತ್ತಾಂಶವನ್ನು ಸಂಗ್ರಹಿಸಬೇಕು. ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಸಾಧನಗಳನ್ನು ಬಳಸಿ 30 ರಿಂದ 40 ದಿನಗಳೊಳಗೆ ಹೊಸದಾಗಿ ಸಮೀಕ್ಷೆಯನ್ನು ನಡೆಸಬಹುದೆಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಹೊಸದಾದ ಸಮೀಕ್ಷೆ ನಡೆಸಲು ಅಗತ್ಯವಿರುವ ಪ್ರಶ್ನಾವಳಿಯನ್ನು ಸಿದ್ಧಪಡಿಸಬೇಕು, ಯಾವ ಸಂಸ್ಥೆಯಿಂದ ಸಮೀಕ್ಷೆ ನಡೆಸಬೇಕು, ಸಮೀಕ್ಷೆ ಮಾಡುವ ಸಿಬ್ಬಂದಿಗೆ ತರಬೇತಿ, ಅಗತ್ಯವಿರುವ ಸಂಪನ್ಮೂಲಗಳ ಕ್ರೋಢೀಕರಣ ಇತ್ಯಾದಿಗಳ ಉಸ್ತುವಾರಿ ನೋಡಿಕೊಳ್ಳಲು ಉನ್ನತಮಟ್ಟದ ಸಮಿತಿಯೊಂದನ್ನು ರಚಿಸುವುದು ಸೂಕ್ತವೆಂದು ಆಯೋಗವು ಅಭಿಪ್ರಾಯಪಟ್ಟಿದೆ. ಹೊಸ ಸಮೀಕ್ಷೆಯಿಂದ ಸಂಗ್ರಹಿಸಿದ ದತ್ತಾಂಶದ ಆಧಾರದ ಮೇಲೆ ಈ ವರದಿಯಲ್ಲಿ ತಿಳಿಯಪಡಿಸಿರುವ ಮಾನದಂಡಗಳಂತೆ ಪರಿಶಿಷ್ಟ ಜಾತಿಯ ಉಪಜಾತಿಗಳ ವರ್ಗೀಕರಣ ಮಾಡಿ ಲಭ್ಯವಿರುವ ಮೀಸಲಾತಿ ಪ್ರಮಾಣವನ್ನು ಆದ್ಯತೆಯ ಮೇಲೆ ಹಂಚಿಕೆ ಮಾಡಬೇಕು ಎಂದು ಶಿಫಾರಸ್ಸು ಮಾಡಿದೆ.