ಚಿಕ್ಕಮಗಳೂರು : ಕೇರಳದ ಪಾಲಕ್ಕಾಡ್ ಮೂಲದ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಚಿಕ್ಕಮಗಳೂರಿನ ಮುಳ್ಳಯ್ಯನಗಿರಿಯ ಮಾಣಿಕ್ಯಧಾರ ಜಲಪಾತದ ಬಳಿ ನಾಪತ್ತೆಯಾಗಿದ್ದು, ತೀವ್ರ ಹುಡುಕಾಟ ನಡೆದಿದೆ.
ನಂದನಾ ಎಂಬ 10 ನೇ ತರಗತಿ ವಿದ್ಯಾರ್ಥಿನಿ ಸುಮಾರು 40 ಮಂದಿ ಪ್ರವಾಸಿಗರ ತಂಡದೊಂದಿಗೆ ಪ್ರವಾಸಕ್ಕೆ ಆಗಮಿಸಿದ್ದಳು. ಮಂಗಳವಾರ ಸಂಜೆ ಕುಟುಂಬದ ಸದಸ್ಯರು ಜೊತೆಯಲ್ಲಿದ್ದಾಗಲೇ ನಂದನಾ ನಿಗೂಢವಾಗಿ ಕಣ್ಮರೆಯಾಗಿದ್ದು, ಪೋಷಕರನ್ನು ದಿಗಿಲು ಮೂಡಿಸುವಂತೆ ಮಾಡಿದೆ.
ಸಂಜೆ 6.30ರ ಸುಮಾರಿಗೆ ಚಂದ್ರದ್ರೋಣ ಸಾಲಿನಲ್ಲಿ ಪ್ರಕೃತಿ ಸೌಂದರ್ಯ ವೀಕ್ಷಣೆಗೆ ತೆರಳಿದ್ದರು. ಈ ವೇಳೆ ಕತ್ತಲಾಗಿದ್ದರಿಂದ ನಂದನ ನಾಪತ್ತೆಯಾಗಿದ್ದಾಳೆ. ಜೊತೆಗಿದ್ದವರು ಸಾಕಷ್ಟು ಹುಡುಕಾಡಿದರೂ ಪತ್ತೆಯಾಗಿಲ್ಲ.
ಬಳಿಕ ವಿದ್ಯಾರ್ಥಿನಿ ನಂದನಾ ನಾಪತ್ತೆ ಆಗಿರುವ ಬಗ್ಗೆ ಪೋಷಕರು ಠಾಣೆಗೆ ಬಂದು ದೂರು ನೀಡಿದ್ದಾರೆ. ನಿನ್ನೆ ಎಲ್ಲರ ಜೊತೆ ಫೋಟೋ ತೆಗೆಸಿಕೊಂಡು ಬೆಟ್ಟದ ಮೇಲೆ ಬರುವ ವೇಳೆ ನಂದನಾ ಕಾಣೆಯಾಗಿರುವುದಾಗಿ ಆಕೆಯ ಪೋಷಕರು ನೋವು ತೋಡಿಕೊಂಡಿದ್ದಾರೆ.
ಗ್ರಾಮಾಂತರ ಪೊಲೀಸರು ಮತ್ತು ಅರಣ್ಯ ಇಲಾಖೆಯ 30ಕ್ಕೂ ಹೆಚ್ಚು ಸಿಬ್ಬಂದಿ ಮಂಗಳವಾರ ಮಧ್ಯರಾತ್ರಿ 1 ಗಂಟೆಯವರೆಗೆ ಬೆಟ್ಟದ ಮೂಲೆ ಮೂಲೆಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಆದರೆ, ದಟ್ಟ ಮಂಜು ಮತ್ತು ಕತ್ತಲೆಯ ಕಾರಣದಿಂದ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ತಂಡಗಳು ವಾಪಾಸ್ಸಾಗಿದ್ದವು.
ಸದ್ಯ ಅರಣ್ಯ ಇಲಾಖೆ, ಅಗ್ನಿಶಾಮಕ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ವಿದ್ಯಾರ್ಥಿನಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ. ದಟ್ಟ ಕಾಡಿನಲ್ಲಿ ಡ್ರೋಣ್ ಕಾರ್ಯಾಚರಣೆ ಕೂಡ ಮಾಡುತ್ತಿದ್ದು, ಇಂದು ಕೂಡ ವಿದ್ಯಾರ್ಥಿನಿಯ ಹುಡುಕಾಟಕ್ಕಾಗಿ ಕಾರ್ಯಾಚರಣೆ ಮುಂದುವರಿಸಲಾಗಿದೆ.
ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ. ಪ್ರವಾಸಕ್ಕೆಂದು ಬಂದ ಮಗಳು ಕಾಣೆಯಾಗಿರುವುದು ಕುಟುಂಬದವರು ಆತಂಕದಲ್ಲಿದ್ದಾರೆ. ಸ್ಥಳೀಯರು ಕೂಡ ಹುಡುಕಾಟದಲ್ಲಿ ತೊಡಗಿದ್ದಾರೆ.

