ಬೆಂಗಳೂರು: ದೇಶದ ರಾಷ್ಟ್ರಗೀತೆಯನ್ನು ಬ್ರಿಟಿಷ್ ಅಧಿಕಾರಿಯ ಸ್ವಾಗತಕ್ಕಾಗಿ ಬರೆಯಲಾಗಿತ್ತು ಎಂಬ ಬಿಜೆಪಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಹೇಳಿಕೆಯನ್ನು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಖಂಡಿಸಿದ್ದಾರೆ.
ಹೇಳಿಕೆ ಅಸಂಬದ್ಧ’ ಎಂದು ಜಿಲ್ಲಾ ಉಸ್ತುವಾರಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಖಂಡಿಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಸಂಸದ ಕಾಗೇರಿ ಮಾತನಾಡಿರುವ ವಿಡಿಯೋ ಹಂಚಿಕೊಂಡಿರುವ ಸಚಿವರು ಇದು ಆರ್.ಎಸ್.ಎಸ್ ನ ಮತ್ತೊಂದು ವಾಟ್ಸ್ ಆ್ಯಪ್ ಇತಿಹಾಸ ಪಾಠ. ಕಾಗೇರಿ ಅವರು ನಮ್ಮ ರಾಷ್ಟ್ರಗೀತೆಯು ಬ್ರಿಟಿಷ್ ಸ್ವಾಗತ ಗೀತೆ ಎಂದು ಪ್ರತಿಪಾದಿಸಿದ್ದಾರೆ. ಇದು ಸಂಘ ಪರಿವಾರದವರ ಮತ್ತೊಂದು ಅಸಂಬದ್ಧ ಹೇಳಿಕೆ ಎಂದು ಟೀಕಿಸಿದ್ದಾರೆ.
ರವೀಂದ್ರನಾಥ ಟ್ಯಾಗೋರ್ ಅವರು 1911ರಲ್ಲಿ ಭರೋತೋ ಭಾಗ್ಯೋ ಬಿಧಾತ ಎಂಬ ಗೀತೆಯನ್ನು ಬರೆದಿದ್ದು, ಅದರ ಮೊದಲ ಚರಣ ‘ಜನ ಗಣ ಮನ’ ಎಂದಿದೆ. ಇದನ್ನು ಮೊದಲು 1911ರ ಡಿಸೆಂಬರ್ 27ರಂದು ಕೋಲ್ಕತ್ತದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಲ್ಲಿ ಹಾಡಲಾಗಿತ್ತು. ಯಾವ ರಾಜಮನೆತನದ ಗೌರವಕ್ಕಾಗಿ ಅಲ್ಲ ಎಂದು ತಿರುಗೇಟು ನೀಡಿದ್ದಾರೆ.
ಸ್ವತಃ ಟ್ಯಾಗೋರ್ ಅವರೇ 1937 ಮತ್ತು 1939 ರಲ್ಲಿ ಎರಡು ಬಾರಿ ಇದು ‘ಭಾರತ ಭಾಗ್ಯ ವಿಧಾತ’ನನ್ನು ವಂದಿಸುವ ಗೀತೆಯೇ ಹೊರತು ಐದನೇ ಜಾರ್ಜ್ ಅವರನ್ನು ಸ್ವಾಗತಿಸುವ ಗೀತೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೂ ಬಿಜೆಪಿ, ಆರ್‌ಎಸ್‌ಎಸ್ ಮುಖಂಡರು ಇತಿಹಾಸವನ್ನು ಪುನರ್ ವಿಮರ್ಶಿಸಬೇಕು ಎಂದು ಹೇಳುತ್ತಾರೆ. ಈ ಮೂಲಕ ಸಂವಿಧಾನ, ತ್ರಿವರ್ಣ ಧ್ವಜ ಹಾಗೂ ರಾಷ್ಟ್ರಗೀತೆಯನ್ನು ಅವಮಾನಿಸುತ್ತಲೇ ಬಂದಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ. ಈ viRSS ಅನ್ನು ಗುಣಪಡಿಸಬೇಕಾಗಿದೆ ಎಂದೂ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.

