ಚಿತ್ರೋತ್ಸವದಲ್ಲಿ ಸಾಕ್ಷ್ಯಚಿತ್ರ‌ಕ್ಕೆ ಅಪಮಾನ ; ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಕೇಂದ್ರದ ದಮನ

Most read

ಒಂದು ಸಾಕ್ಷ್ಯಚಿತ್ರಕ್ಕೆ ಕೇಂದ್ರ ಸರಕಾರವೇ ಯಾಕೆ ದಿಗಿಲು ಬಿದ್ದಿದೆ? ಯಾಕೆಂದರೆ ಕೇಂದ್ರ ಸರಕಾರದ ರೈತವಿರೋಧಿ ಕೃಷಿ ಕಾನೂನುಗಳ ವಿರುದ್ಧ 13 ತಿಂಗಳುಗಳ ಕಾಲ ದೆಹಲಿ ಗಡಿಗಳಲ್ಲಿ ನಡೆದ ರೈತರ ಆಂದೋಲನದ ಕುರಿತು ಇದನ್ನು ನಿರ್ಮಿಸಲಾಗಿದೆ. ರೈತ ಹೋರಾಟವನ್ನು ದಮನಿಸಲು ಮೋದಿ ಸರಕಾರ ಮಾಡಿದ ಎಲ್ಲಾ ತಂತ್ರ ಕುತಂತ್ರಗಳನ್ನು ಈ ಡಾಕ್ಯುಮೆಂಟರಿ ಚಿತ್ರವು ಎಳೆಎಳೆಯಾಗಿ ಬಿಚ್ಚಿಡುತ್ತದೆ. ಈ ಸತ್ಯ ದರ್ಶನ ಪ್ರಭುತ್ವಕ್ಕೆ ಅಪಥ್ಯವಾಗಿದೆ- ಶಶಿಕಾಂತ ಯಡಹಳ್ಳಿ, ರಂಗಕರ್ಮಿ

ಚಲನಚಿತ್ರಗಳ ನಿರ್ಮಾಣ ಎಂಬುದು ಸೃಜನಶೀಲ ಕಲಾ ಮಾಧ್ಯಮ. ದೃಶ್ಯಮಾಧ್ಯಮಗಳ ಮೂಲಕ ಪ್ರಭುತ್ವವನ್ನು ಪ್ರಶ್ನಿಸುವುದೂ ಸಹ ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗ. ಆದರೆ ಆಳುವ ಸರಕಾರಗಳು ತಮಗೆ ವ್ಯತಿರಿಕ್ತವಾದ ಅಂಶಗಳ ಮೇಲೆ ಅಂಕುಶ ಹಾಕುವುದು ಸಾಂವಿಧಾನಿಕ ಅಪಚಾರ. ಕಲೆ ಸಾಹಿತ್ಯ ಪತ್ರಿಕಾ ಮಾಧ್ಯಮಗಳಿಗಿಂತಲೂ ಹೆಚ್ಚು ದಮನಕ್ಕೊಳಗಾಗಿದ್ದು ಸಿನೆಮಾ ಮಾಧ್ಯಮ. ಬೇರೆ ಯಾವುದೇ ಮಾಧ್ಯಮಗಳಿಗೂ ಇಲ್ಲದ ನಿಯಂತ್ರಣವನ್ನು ಕೇಂದ್ರ ಸರಕಾರಗಳು ದೃಶ್ಯಮಾಧ್ಯಮಕ್ಕೆ ಅಳವಡಿಸಲಾಗಿದೆ. ಚಲನಚಿತ್ರಗಳು ನೇರವಾಗಿ ಬಹುಸಂಖ್ಯಾತ ಜನರನ್ನು ತಲುಪುವ ಕಾರಣಕ್ಕೆ ಅದರ ಮೇಲೆ ಕಣ್ಗಾವಲು ಇಡಲಾಗುತ್ತದೆ. ಅದಕ್ಕಾಗಿಯೇ ಸೆನ್ಸಾರ್ ಬೋರ್ಡ್ ನ್ನು ಅಸ್ತಿತ್ವಕ್ಕೆ ತರಲಾಗಿದ್ದು, ಅದರ ಸಂಪೂರ್ಣ ನಿಯಂತ್ರಣ ಕೇಂದ್ರ ಸರಕಾರದ  ಮಾಹಿತಿ ಮತ್ತು ಪ್ರಸಾರ (ಐ ಆಂಡ್ ಬಿ) ಸಚಿವಾಲಯದ್ದಾಗಿದೆ. ಯಾವುದನ್ನು ಜನರಿಗೆ ತೋರಿಸಬೇಕು, ಯಾವುದನ್ನು ತೋರಿಸಬಾರದು ಎಂಬುದನ್ನು ಈ ಇಲಾಖೆ ನಿರ್ಧರಿಸುತ್ತದೆ. 

ಜನಸಮುದಾಯಕ್ಕೆ, ದೇಶದ ಭದ್ರತೆಗೆ ಅಪಾಯಕಾರಿ ಎನ್ನಬಹುದಾದ ಚಲನಚಿತ್ರಗಳಿಗೆ ಸೆನ್ಸಾರ್ ಮಂಡಳಿ ಅನುಮತಿ ನಿರಾಕರಿಸಿದರೆ ಅಭ್ಯಂತರವಿಲ್ಲ. ಆದರೆ ಜನಪರ ಹೋರಾಟಗಳಿಗೆ, ಜನಸಮುದಾಯದ ಪ್ರತಿರೋಧಗಳಿಗೆ ಸಂಬಂಧಿಸಿದ ಚಲನಚಿತ್ರಗಳು ಪ್ರಭುತ್ವ ವಿರೋಧಿ ಗುಣವನ್ನು ಹೊಂದಿವೆ ಎನ್ನುವ ಕಾರಣಕ್ಕೆ ಪ್ರದರ್ಶನಕ್ಕೆ ಅನುಮತಿ ನಿರಾಕರಿಸುವುದು ಪ್ರಭುತ್ವದ ಸರ್ವಾಧಿಕಾರಿ ಮನಸ್ಥಿತಿಯಾಗಿದೆ. ಈಗ ಕೇಂದ್ರ ಸರಕಾರದ ಕೆಂಗಣ್ಣು ಫಿಲಂ ಫೆಸ್ಟಿವಲ್‌ನಲ್ಲಿ ಪ್ರದರ್ಶನಗೊಳ್ಳಬಹುದಾಗಿದ್ದ ಸಾಕ್ಷ್ಯಚಿತ್ರದ ಮೇಲೂ ಬಿದ್ದಿದ್ದು ಆತಂಕಕಾರಿಯಾಗಿದೆ. 

ಫಿಲಂ ಫೆಸ್ಟಿವಲ್ ನಲ್ಲಿ ಪ್ರದರ್ಶನಗೊಳ್ಳಬಹುದಾದ ಚಲನಚಿತ್ರಗಳನ್ನು ಆಯ್ಕೆ ಮಾಡಲು ಒಂದು ಸಮಿತಿ ನೇಮಿಸಲಾಗಿರುತ್ತದೆ. ಇಡೀ ಜಗತ್ತಿನಾದ್ಯಂತ ಕಳೆದೊಂದು ವರ್ಷದಲ್ಲಿ ಬಿಡುಗಡೆಯಾದ ಉತ್ತಮ ಎನ್ನಬಹುದಾದ ಚಲನಚಿತ್ರಗಳನ್ನು ಗುರುತಿಸಿ ಆಹ್ವಾನಿಸಲಾಗುತ್ತದೆ. ವಿದೇಶಿ ಸಿನೆಮಾಗಳು ಭಾರತದ ಸೆನ್ಸಾರ್ ಮಂಡಳಿಯಲ್ಲಿ ಅನುಮತಿ ಪತ್ರ ಪಡೆಯದೇ ಇರುವುದರಿಂದ ಚಿತ್ರೋತ್ಸವದಲ್ಲಿ ಆಯ್ಕೆಯಾದ ಎಲ್ಲಾ ಚಲನಚಿತ್ರಗಳನ್ನೂ ಕೇಂದ್ರದ ಐ ಆಂಡ್ ಬಿ ಸಚಿವಾಲಯಕ್ಕೆ ಕಳುಹಿಸಿ ಫಿಲಂ ಫೆಸ್ಟಿವಲ್‌ನಲ್ಲಿ ಪ್ರದರ್ಶಿಸಲು ಅನುಮತಿಯನ್ನು ಫೆಸ್ಟಿವಲ್ ಕಮಿಟಿ ಕೇಳಿಕೊಳ್ಳುತ್ತದೆ. ಕೇಂದ್ರದ ಅನುಮತಿ ಪಡೆದ ಸಿನೆಮಾಗಳನ್ನು ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗುತ್ತದೆ.‌ 

ಆದರೆ ಸಾಕ್ಷ್ಯಚಿತ್ರಗಳನ್ನು ಈ ಅನುಮತಿ ಪ್ರಕ್ರಿಯೆಯಲ್ಲಿ ಗಂಭೀರವಾಗಿ ಪರಿಗಣಿಸಲಾಗುವುದಿಲ್ಲ. ಅದೊಂದು ಔಪಚಾರಿಕ ಪ್ರಕ್ರಿಯೆಯಾಗಿರುತ್ತದೆ. ಈ ಸಲದ ಫಿಲಂ ಫೆಸ್ಟಿವಲ್ ನ ಆರಂಭಕ್ಕೂ ಮೊದಲು ಕರ್ನಾಟಕದ ವಾರ್ತಾ ಮತ್ತು ಪ್ರಸಾರ ಇಲಾಖೆಯು ಪತ್ರಿಕಾಗೋಷ್ಟಿಯನ್ನು ಕರೆದಿತ್ತು. “ಸಾಕ್ಷ್ಯ ಚಿತ್ರಗಳಿಗೂ ಸೆನ್ಸಾರ್ ಅನುಮತಿ ಬೇಕಾ?” ಎಂದು ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದ ಇಲಾಖಾ ಆಯುಕ್ತರಾದ ಮಾನ್ಯ ನಿಂಬಾಳ್ಕರ್ ರವರು “ಡಾಕ್ಯುಮೆಂಟರಿ ಫಿಲಂಗಳಿಗೆ ಅಂತಹ ಯಾವುದೇ ಅನುಮತಿಯ ಅಗತ್ಯವಿಲ್ಲ” ಎಂದು ಹೇಳಿದರು. 

ಆದರೆ.. ಈ ಫಿಲಂ ಫೆಸ್ಟಿವಲ್‌ನಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿದ್ದ ಸಾಕ್ಷ್ಯಚಿತ್ರವೊಂದರ ಪ್ರದರ್ಶನವನ್ನು ಅನುಮತಿ ಪತ್ರ ಇಲ್ಲವೆಂಬ ನೆಪ ಹೇಳಿ ತಡೆಹಿಡಿಯಲಾಯ್ತು. ಅದು ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಕೇಸರಿ ಹರವೂ ರವರ ‘ಕಿಸಾನ್ ಸತ್ಯಾಗ್ರಹ’ ಎನ್ನುವ ಚಿತ್ರ. ಕಳೆದ ಬಾರಿಯ ಚಿತ್ರೋತ್ಸವದಲ್ಲಿ ಈ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲು ಅವಕಾಶ ಕೋರಿ ಹರವೂರವರು ಕೇಳಿಕೊಂಡಿದ್ದರೂ ಅದನ್ನು ನಿರಾಕರಿಸಲಾಗಿತ್ತು. ಯಾಕೆಂದರೆ ಆಗ ಬಿಜೆಪಿ ಸರಕಾರ ಅಸ್ತಿತ್ವದಲ್ಲಿತ್ತು. ಈ ಸಲದ ಚಿತ್ರೋತ್ಸವದ ಸಮಿತಿಯು ಇ ದನ್ನು ತಾವೇ ಆಯ್ಕೆ ಮಾಡಿ ಆಹ್ವಾನಿಸಿದ್ದರು. ಆದರೆ ಕೇಂದ್ರದಲ್ಲಿ ಬಿಜೆಪಿ ಸರಕಾರ ಇರುವುದರಿಂದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧಿಕಾರಿಗಳು ಈ ಸಾಕ್ಷಚಿತ್ರವನ್ನು ಪ್ರದರ್ಶಿಸಬಾರದು ಎಂದು ಚಿತ್ರೋತ್ಸವದ ಸಮಿತಿಗೆ ಆದೇಶಿಸಿ ಆಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಿಸಿದರು. ಸೆನ್ಸಾರ್ ಅನುಮತಿ ಇಲ್ಲವಾದ್ದರಿಂದ ಈ ಡಾಕ್ಯುಮೆಂಟರಿಯ ಪ್ರದರ್ಶನವನ್ನು ರದ್ದುಪಡಿಸಲಾಗಿದೆ ಎಂದು ಕರ್ನಾಟಕದ ವಾರ್ತಾ ಮತ್ತು ಪ್ರಚಾರ ಇಲಾಖೆ ನಿರ್ದೇಶಕರಿಗೆ ಫೋನ್ ಮೂಲಕ ತಿಳಿಸಿತು.

ಹಾಗಾದರೆ ಆಯುಕ್ತರಿಗೆ ಸರಿಯಾದ ಮಾಹಿತಿ ಇರಲಿಲ್ಲವಾ? ಅಥವಾ ಕೇಂದ್ರದ ಆದೇಶಕ್ಕೆ ಹೆದರಿ ಮಾತು ಬದಲಾಯಿಸಿದರಾ?    

ಅನುಮತಿಯನ್ನು ಪಡೆಯುವ ಮುನ್ನವೇ ಚಲನಚಿತ್ರೋತ್ಸವದ ಕೈಪಿಡಿ ಪುಸ್ತಕದಲ್ಲಿ ‘ಕಿಸಾನ್ ಸತ್ಯಾಗ್ರಹ’ ಸಾಕ್ಷಚಿತ್ರದ ವಿವರಗಳನ್ನೂ ಮುದ್ರಿಸಿ ಪ್ರದರ್ಶನದ ದಿನಾಂಕವನ್ನೂ ನಮೂದಿಸಿದ್ದು ಯಾಕೆ? ಸಾಕ್ಷ್ಯಚಿತ್ರವನ್ನು ಆಹ್ವಾನಿಸಿ, ಅದರ ಪ್ರದರ್ಶನದ ಕುರಿತ ವಿವರಗಳನ್ನೂ ಘೋಷಿಸಿ ಕೊನೆಯ ಕ್ಷಣದಲ್ಲಿ ಪ್ರದರ್ಶನವನ್ನು ರದ್ದು ಮಾಡಿದ್ದು ಅದರ ನಿರ್ದೇಶಕರಿಗೆ ಮಾಡಿದ ಅಪಮಾನ ಅಲ್ಲವೇ? ಈ ಸಾಕ್ಷ್ಯಚಿತ್ರದ ಪ್ರದರ್ಶನದ ಕುರಿತು ಸೋಶಿಯಲ್ ಮೀಡಿಯಾಗಳಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಿ ಆಸಕ್ತರನ್ನು ಪ್ರದರ್ಶನ ನೋಡಲು ಆಹ್ವಾನಿಸಿದ್ದರಲ್ಲಾ, ಹಾಗೆ ಬಂದವರಿಗೆ ಆದ ನಿರಾಸೆ ಹಾಗೂ ಅವರನ್ನು ಆಹ್ವಾನಿಸಿದವರಿಗೆ ಆದ ನೋವು ಚಲನಚಿತ್ರೋತ್ಸವದ ಆಯೋಜಕರಿಗೆ ಅರ್ಥವಾಗಲಿಲ್ಲವೇ?. ಹೋಗಲಿ ಪ್ರದರ್ಶನ ರದ್ದಾದ ಕುರಿತು ವಾರ್ತಾ ಇಲಾಖೆಯೋ ಇಲ್ಲಾ ಫಿಲಂ ಫೆಸ್ಟಿವಲ್ ಕಮಿಟಿಯೋ ಪತ್ರಿಕಾಗೋಷ್ಟಿ ಕರೆದು ಮಾಹಿತಿ ಕೊಡಬಹುದಾಗಿತ್ತು. ಅದನ್ನೂ ಮಾಡದೇ ಯಾಕೆ ಮುಚ್ಚಿಟ್ಟಿತು? 

ಅದು ನಿಜಕ್ಕೂ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಪ್ರಭುತ್ವ ನಡೆಸಿದ ದಮನ. ಸಾಕ್ಷ್ಯಚಿತ್ರಕ್ಕೆ ಅನುಮತಿ ಬೇಕಿಲ್ಲ ಎಂದ ವಾರ್ತಾ ಇಲಾಖೆ ಆಯುಕ್ತರು ಇದಕ್ಕೆ ಕಾರಣರಾ? ಚಿತ್ರವನ್ನು ಆಹ್ವಾನಿಸಿ ಪ್ರದರ್ಶನವನ್ನು ಘೋಷಿಸಿ ನಂತರ ಯಾರಿಗೂ ಮಾಹಿತಿ ಕೊಡದೇ ಪ್ರದರ್ಶನವನ್ನು ರದ್ದು ಮಾಡಿದ ಚಲನಚಿತ್ರೋತ್ಸವ ಸಮಿತಿಯ ಯಡವಟ್ಟು ಕಾರಣವಾ? ಇಲ್ಲಾ ಕೇಂದ್ರ ಸರಕಾರದ ಜನವಿರೋಧಿ ಧೋರಣೆಯೇ ನೇರ ಕಾರಣವಾ? ಈ ಎಲ್ಲರೂ ಸೇರಿ ಸಾಕ್ಷ್ಯಚಿತ್ರವೊಂದರ ಪ್ರದರ್ಶನದ ಅವಕಾಶವನ್ನು ಕಿತ್ತುಕೊಂಡರು. ಸೃಜನಶೀಲ ಕಲಾ ಪ್ರಕಾರದ ಕತ್ತು ಹಿಚುಕಿದರು. ನಿರ್ದೇಶಕರಿಗೆ ಅಪಮಾನ ಮಾಡಿದರು. ಆಸೆಯಿಂದ ನೋಡಲು ಬಂದ ಪ್ರೇಕ್ಷಕರಿಗೂ ನಿರಾಸೆ ಮಾಡಿದರು.‌

ಒಂದು ಸಾಕ್ಷ್ಯಚಿತ್ರಕ್ಕೆ ಕೇಂದ್ರ ಸರಕಾರವೇ ಯಾಕೆ ದಿಗಿಲು ಬಿದ್ದಿದೆ? ಯಾಕೆಂದರೆ ಕೇಂದ್ರ ಸರಕಾರದ ರೈತವಿರೋಧಿ ಕೃಷಿ ಕಾನೂನುಗಳ ವಿರುದ್ಧ 13 ತಿಂಗಳುಗಳ ಕಾಲ ದೆಹಲಿ ಗಡಿಗಳಲ್ಲಿ ನಡೆದ ರೈತರ ಆಂದೋಲನದ ಕುರಿತು ಇದನ್ನು ನಿರ್ಮಿಸಲಾಗಿದೆ. ರೈತ ಹೋರಾಟವನ್ನು ದಮನಿಸಲು ಮೋದಿ ಸರಕಾರ ಮಾಡಿದ ಎಲ್ಲಾ ತಂತ್ರ ಕುತಂತ್ರಗಳನ್ನು ಈ ಡಾಕ್ಯುಮೆಂಟರಿ ಚಿತ್ರವು ಎಳೆಎಳೆಯಾಗಿ ಬಿಚ್ಚಿಡುತ್ತದೆ. ಈ ಸತ್ಯ ದರ್ಶನ ಪ್ರಭುತ್ವಕ್ಕೆ ಅಪಥ್ಯವಾಗಿದೆ.  ಹೀಗಾಗಿ ಕೃಷಿಕರ ಸತ್ಯಾಗ್ರಹ ಹಾಗೂ ಸರಕಾರದ ದೌರ್ಜನ್ಯವನ್ನು ಅನಾವರಣಗೊಳಿಸುವ ಚಿತ್ರದ ಮೇಲೆ ಕೇಂದ್ರ ಸರಕಾರದ ಕೆಂಗಣ್ಣು ಬಿದ್ದಿದೆ. ಸೆನ್ಸಾರ್ ಪ್ರಮಾಣ ಪತ್ರ ಸಿಗುವುದು ದೂರದ ಮಾತು. ಚಲನ ಚಿತ್ರೋತ್ಸವದಲ್ಲಿ ಪ್ರದರ್ಶಿಸಲೂ ಅನುಮತಿ ಇಲ್ಲದಂತೆ ಮಾಡಲಾಗಿದೆ.

ನೆರೆಯ ಕೇರಳ ರಾಜ್ಯದಲ್ಲಿ ಹೀಗೆಯೇ ಆಗಿತ್ತು. ಪ್ರತಿ ವರ್ಷದಂತೆ  2017 ರಲ್ಲಿಯೂ ಅಂತಾರಾಷ್ಟ್ರೀಯ ಸಾಕ್ಷ್ಯಚಿತ್ರ ಮತ್ತು ಕಿರುಚಿತ್ರ ಉತ್ಸವವನ್ನು ಕೇರಳದ ರಾಜಧಾನಿಯಲ್ಲಿ ಕೇರಳ ಸರಕಾರದ ಫಿಲಂ ಅಕಾಡೆಮಿ ಆಯೋಜಿಸಿತ್ತು. ಅದರಲ್ಲಿ ರೋಹಿತ್ ವೇಮುಲಾರವರ ಕುರಿತು ಸಾಕ್ಷ್ಯಚಿತ್ರ ಹಾಗೂ ಜೆಎನ್ ಯು ವಿದ್ಯಾರ್ಥಿಗಳು ನಿರ್ಮಿಸಿದ ಕಾಶ್ಮೀರದ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ಕೇಂದ್ರದ ಸಚಿವಾಲಯವು ತಡೆಹಿಡಿದಿತ್ತು. ಕೂಡಲೇ ಕೇರಳದ ವಾರ್ತಾ ಮತ್ತು ಪ್ರಸಾರ ಮಂತ್ರಿಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಕೇಂದ್ರದ ದಮನವನ್ನು ಖಂಡಿಸಿದರು. ಚಲನಚಿತ್ರ ಅಕಾಡೆಮಿಯು ನ್ಯಾಯಾಲಯದಲ್ಲಿ ಪ್ರಶ್ನಿಸಿತು. ಆರು ತಿಂಗಳ ವಿಚಾರಣೆಯ ನಂತರ ಕೇಂದ್ರ ಸರಕಾರದ ಆದೇಶದ ವಿರುದ್ಧ ತೀರ್ಪು ಬಂದು ಹೀಗೆಲ್ಲಾ ತಡೆಹಿಡಿಯುವಂತಿಲ್ಲ ಎಂದು ಕೋರ್ಟ್ ಹೇಳಿತು. ಕೇಂದ್ರದ ದಮನವನ್ನು ವಿರೋಧಿಸಿ SFI ಸಂಘಟನೆಯು ಈ ಎರಡನ್ನೂ ಕೇರಳದಾದ್ಯಂತ ಶಾಲೆ ಕಾಲೇಜುಗಳಲ್ಲಿ ಪ್ರದರ್ಶಿಸಿತು. ಆದರೆ ಇಂತಹ ಪ್ರತಿಭಟನೆ ಕರ್ನಾಟಕದಲ್ಲಿ ಸಾಧ್ಯವೇ?

ಕಾಂಗ್ರೆಸ್ ಸರಕಾರದ ವಾರ್ತಾ ಇಲಾಖೆಯ ಮಂತ್ರಿಗಳು ಇಲ್ಲವೇ ಮುಖ್ಯಮಂತ್ರಿಗಳು ಕೇಂದ್ರದ ಈ ದಮನಕಾರಿ ನಡೆಯನ್ನು ಖಂಡಿಸಬಹುದಾಗಿತ್ತು. ಯಾರೂ ಉಸಿರೆತ್ತಲಿಲ್ಲ. ಚಲನಚಿತ್ರ ಅಕಾಡೆಮಿಯಾದರೂ ಪ್ರತಿಭಟಿಸಬಹುದಾಗಿತ್ತು. ಅಕಾಡೆಮಿಯೇ ಕೋಮಾದಲ್ಲಿದೆ. ಹೋಗಲಿ ಫಿಲಂ ಫೆಸ್ಟಿವಲ್ ಆಯೋಜಕರಾದರೂ ವಿರೋಧಿಸಬಹುದಿತ್ತು. ಆ ತಾಕತ್ತು ಯಾರಿಗೂ ಇಲ್ಲದಾಗಿತ್ತು. ಸುದ್ದಿ ಮಾಧ್ಯಮಗಳಾದರೂ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಬ್ಬಾಳಿಕೆಯನ್ನು ಸುದ್ದಿ ಮಾಡಬಹುದಾಗಿತ್ತು. ಬಹುತೇಕ ಮಾರಿಕೊಂಡ ಮಾಧ್ಯಮಗಳಿಂದ ಅಂತಹುದನ್ನು ನಿರೀಕ್ಷಿಸುವುದೇ ಅಸಾಧ್ಯ. ಆದರೆ ಈ ಅನ್ಯಾಯದ ವಿರುದ್ಧ ಕೇಸರಿ ಹರವೂ ರವರು ಏಕಾಂಗಿಯಾಗಿ ತಮ್ಮ ಪ್ರತಿರೋಧ ವ್ಯಕ್ತಪಡಿಸಿದರು. ಚಲನ ಚಿತ್ರೋತ್ಸವದಲ್ಲಿ “I AM HERE, MY FILM ISN’T ಎಂದು ಬರೆದಿದ್ದ ಟೀಶರ್ಟ್ ಹಾಕಿಕೊಂಡು ಬಂದಿದ್ದರು. ಆದರೆ ಅವರ ಪ್ರತಿರೋಧಕ್ಕೆ ಧ್ವನಿಗೂಡಿಸುವ ಯಾವುದೇ ಪ್ರಯತ್ನವೂ ಯಾರಿಂದಲೂ ಅಲ್ಲಿ ನಡೆಯಲಿಲ್ಲ ಎನ್ನುವುದೇ ವಿಷಾದನೀಯ.  ಇಂತಹ ಪರಿಸ್ಥಿತಿಯಲ್ಲಿ ಕೆಲವು ಪ್ರಗತಿಪರ ಸಂಘಟನೆಗಳು ಮಾ. 16 ರಂದು ಕಿಸಾನ್ ಸತ್ಯಾಗ್ರಹ ಸಾಕ್ಷ್ಯಚಿತ್ರವನ್ನು ಗಾಂಧಿ ಭವನದಲ್ಲಿ ಪ್ರದರ್ಶಿಸಿ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದರು.

ಪ್ರತಿಭಟನೆ ಹಾಗೂ ಪ್ರತಿರೋಧ ಎನ್ನುವುದು ಭಾರತೀಯರಿಗೆ ಸಂವಿಧಾನದತ್ತವಾಗಿ ಬಂದ ಹಕ್ಕಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಪ್ರಜಾಪ್ರಭುತ್ವದಲ್ಲಿ ಅವಕಾಶ ಇದೆ. ಆಳುವ ಸರಕಾರದ ಜನವಿರೋಧಿ ನೀತಿಯನ್ನು ಪ್ರಶ್ನಿಸುವುದು ಹಾಗೂ ಅಂತವುಗಳ ವಿರುದ್ಧ ಹೋರಾಡುವುದು ಅಪರಾಧವೂ ಅಲ್ಲ. ದೇಶದ್ರೋಹದ ಕೃತ್ಯವೂ ಅಲ್ಲ. ಆದರೆ ಕೇಂದ್ರದಲ್ಲಿರುವ ಫ್ಯಾಸಿಸ್ಟ್ ಸರಕಾರ ಸಂವಿಧಾನ ದಯಪಾಲಿಸಿದ ಪ್ರತಿರೋಧದ ಹಕ್ಕುಗಳನ್ನು ದಮನಿಸುತ್ತಲೇ ಬಂದಿದೆ. ರೈತ ಹೋರಾಟದ ಬಗ್ಗೆ ಸಾಕ್ಷ್ಯಚಿತ್ರ ಮಾಡುವುದು ಅಪರಾಧವಾ? ಆಳುವ ಪ್ರಭುತ್ವದ ರೈತ ವಿರೋಧಿ ದಮನವನ್ನು ಪ್ರಶ್ನಿಸುವುದಕ್ಕೆ ನಿರ್ಬಂಧ ಇದೆಯಾ?

ಕೇಂದ್ರ ಸರಕಾರದ ಆಧೀನದಲ್ಲಿರುವ ಸೆನ್ಸಾರ್ ಮಂಡಳಿ ಯಾವತ್ತೂ ಕೇಂದ್ರದ ಹಿತರಕ್ಷಣೆಗಾಗಿಯೇ ಇರುವಂತಹುದು. ಕಾಶ್ಮೀರ ಫೈಲ್ಸ್, ಕೇರಳ ಡೈರಿ, ಆರ್ಟಿಕಲ್ 370 ಯಂತಹ ಧರ್ಮದ್ವೇಷವನ್ನು ಸಾರುವ ಸಂಘಿ ಸಿದ್ಧಾಂತದ ಸಿನೆಮಾಗಳಿಗೆ ಅದೆಷ್ಟೇ ಪ್ರತಿರೋಧ ಬಂದರೂ ಸೆನ್ಸಾರ್ ಪ್ರಮಾಣಪತ್ರ ಕೊಡಲಾಗುತ್ತದೆ. ಆದರೆ ಜನಹೋರಾಟದ ಕುರಿತಾದ ಚಲನಚಿತ್ರಗಳು ಪ್ರದರ್ಶನವಾಗದಂತೆ ತಡೆಯುತ್ತದೆ. ಭಾರತ ಎನ್ನುವ ಒಕ್ಕೂಟ ವ್ಯವಸ್ಥೆಯಲ್ಲಿ ಈ ಕೇಂದ್ರೀಕೃತ ಸೆನ್ಸಾರ್ ಮಂಡಳಿ ಇರುವುದೇ ಅಸಾಂವಿಧಾನಿಕ.  ಪ್ರತಿಯೊಂದು ರಾಜ್ಯವೂ ಸಾಂಸ್ಕೃತಿಕವಾಗಿ ಹಾಗೂ ಸಾಮಾಜಿಕವಾಗಿ ಭಿನ್ನವಾಗಿರುವಾಗ ಆಯಾ ರಾಜ್ಯದಲ್ಲಿ ತಯಾರಾಗುವ ಸಿನೆಮಾಗಳನ್ನು ವೀಕ್ಷಿಸಿ ಪ್ರದರ್ಶನಕ್ಕೆ ಅನುಮತಿ ಕೊಡುವ ನಿಯಂತ್ರಣವನ್ನು ಆಯಾ ರಾಜ್ಯ ಸರ್ಕಾರಗಳಿಗೆ ಕೊಡುವುದು ನ್ಯಾಯಸಮ್ಮತ. ಕರ್ನಾಟಕದಲ್ಲೂ ಸೆನ್ಸಾರ್ ಬೋರ್ಡ್ ಇದೆ. ಆದರೆ ಅದರ ನಿಯಂತ್ರಣ ಸಂಪೂರ್ಣವಾಗಿ ಕೇಂದ್ರ ಸರಕಾರದಿಂದ ನಿಯೋಜನೆಗೊಂಡ ಅಧಿಕಾರಿಯ ಕೈಯಲ್ಲಿದೆ. ಕೇಂದ್ರ ಸರಕಾರದ ಜನವಿರೋಧಿ ಧೋರಣೆಯನ್ನು ವಿರೋಧಿಸುವ ಸಿನೆಮಾಗಳಿಗೆ ಅನುಮತಿ ನಿರಾಕರಿಸಲಾಗುತ್ತದೆ. 

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಆಯೋಜಿಸುವುದು ಕರ್ನಾಟಕ ಸರಕಾರ. ಅದಕ್ಕೆ ಬೇಕಾದ ಅನುದಾನವನ್ನು ಕೊಡುವುದೂ ಸಹ ರಾಜ್ಯ ಸರಕಾರ. ಇದರಲ್ಲಿ ಕೇಂದ್ರ ಸರಕಾರದ ಯಾವುದೇ ಸಹಭಾಗಿತ್ವವಿಲ್ಲ. ಫಿಲಂ ಫೆಸ್ಟಿವಲ್ ನಲ್ಲಿ ಯಾವ ಸಿನೆಮಾವನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಬೇಕು ಎನ್ನುವುದಕ್ಕೆ ಆಯ್ಕೆ ಸಮಿತಿ ಇದೆ. ಅದರೆ ಸಮಿತಿ ಆಯ್ಕೆ ಮಾಡಿದ ಸಿನೆಮಾ ಪ್ರದರ್ಶಿಸಲು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅನುಮತಿ ಯಾಕೆ ಬೇಕು? ಇದು ಒಕ್ಕೂಟ ವ್ಯವಸ್ಥೆಯ ಮೇಲೆ ಕೇಂದ್ರ ಸರಕಾರ ಮಾಡುತ್ತಿರುವ ದಬ್ಬಾಳಿಕೆ ಅಲ್ಲವೆ? ಕಿಸಾನ್ ಸತ್ಯಾಗ್ರಹದಂತಹ ಇನ್ನೂ ಎಷ್ಟು ಚಲನಚಿತ್ರಗಳು ಕೇಂದ್ರದ ಧೋರಣೆಗೆ ಬಲಿಯಾಗಬೇಕು?. ಇದನ್ನು ಕನ್ನಡಿಗರು ಕೇಳಬೇಕಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಕೇಂದ್ರದ ಹೇರಿಕೆಯನ್ನು ರಾಜ್ಯ ಸರಕಾರ ನ್ಯಾಯಾಲಯದಲ್ಲಿ ಪ್ರಶ್ನಿಸಬೇಕಿದೆ. ರಾಷ್ಟ್ರಪ್ರಶಸ್ತಿ ಪುರಸ್ಕೃತರಾದ ಕೇಸರಿ ಹರವೂ ರವರಿಗೆ ಆದ ಅಪಮಾನ ಹಾಗೂ ಸಾಕ್ಷ್ಯ ಚಿತ್ರಕ್ಕಾದ ಅನ್ಯಾಯ ಮುಂದೆ ಮರುಕಳಿಸದಂತೆ ತಡೆಯಬೇಕಿದೆ. 

ಶಶಿಕಾಂತ ಯಡಹಳ್ಳಿ

ರಂಗಕರ್ಮಿ

More articles

Latest article