ಅಂಬೇಡ್ಕರ್‌ ಗೆ ಅವಮಾನ; ಗೃಹ ಸಚಿವ ಅಮಿತ್‌ ವಜಾ ಮಾಡಲು ಆಗ್ರಹಿಸಿ ಜ.3ರಂದು ಕೋಲಾರ ಬಂದ್‌

Most read

ಕೋಲಾರ: ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ರವರನ್ನು ಅವಮಾನಿಸಿದ ಗೃಹ ಸಚಿವ ಅಮಿತ್‌ಷಾ ಅವರನ್ನು ಸಂಪುಟದಿಂದ ವಜಾ ಮಾಡಿ, ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಜನವರಿ 3 ರಂದು ಕೋಲಾರ ಬಂದ್ ನಡೆಸಲು ಜಿಲ್ಲೆಯ ಪ್ರಗತಿಪರ ಸಂಘಟನೆಗಳು ಕರೆ ನೀಡಿವೆ.

ಆರಂಭದಿಂದಲೂ ಅಂಬೇಡ್ಕರ್ ರಚಿಸಿದ ಸಂವಿಧಾನವನ್ನೇ ಒಪ್ಪದ ಆರ್.ಎಸ್.ಎಸ್. ಅಂಬೇಡ್ಕರ್ ರವರನ್ನು ಒಪ್ಪಲು ಸಾಧ್ಯವೇ ಇಲ್ಲ. ಮನಸಂಸ್ಕೃತಿಯನ್ನೇ ಸಂವಿಧಾನವಾಗಿಸಬೇಕೆಂಬ ಅಂತರ್ಗತ ಕಾರ್ಯಸೂಚಿ ಇಟ್ಟುಕೊಂಡು ಕಳೆದ ನೂರು ವರ್ಷಗಳಿಂದ ಶತಾಯ ಗತಾಯ ಪ್ರಯತ್ನಿಸುತ್ತಿರುವ ಹಿಂದುತ್ವವಾದಿ ಆರ್.ಎಸ್.ಎಸ್. ಭಾರತದ ಸಂವಿಧಾನದ ವಿರೋಧಿ ಎನ್ನುವುದು ಹಲವಾರು ಬಾರಿ ಸಾಬೀತಾಗಿದೆ. ಕೋಮುವಾದಿ ಬಿಜೆಪಿ ನಾಯಕರಾದ ಪ್ರಧಾನಿ ಮೋದಿ ಮತ್ತು ಅಮಿತ್‌ಶಾ ರವರಿಗೆ ಸಂವಿಧಾನವೆನ್ನುವುದು ಅಧಿಕಾರ ಗಿಟ್ಟಿಸಿಕೊಳ್ಳಲು ಬೇಕಾದ ಮೆಟ್ಟಲಾಗಿ ಮಾತ್ರ ಬೇಕಾಗಿದೆ ಎಂದು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಅಂಬೇಡ್ಕರ್‌ ಅವರ ಹೆಸರು ಸಂಘ ಸಂತಾನಗಳಿಗೆ ತಾಳಲಾಗದ ಸಮಸ್ಯೆಯಾಗಿದೆ. ಅಂಬೇಡ್ಕರ್ ರವರ ಹೆಸರನ್ನು ಹಿನ್ನೆಲೆಗೆ ಸರಿಸಲು ಭಗವಂತ ಹೆಸರಲ್ಲಿ ಸ್ವರ್ಗ ನರಕಗಳ ಕರ್ಮಸಿದ್ಧಾಂತವನ್ನು ಮುನ್ನಲೆಗೆ ತರಲು ಪ್ರಯತ್ನಿಸಲಾಗುತ್ತಿದೆ. ಅದಕ್ಕಾಗಿಯೇ ದೇಶಾದ್ಯಂತ ರಾಮನನ್ನು ವೈಭವೀಕರಿಸಿ ಅಧಿಕಾರ ಪಡೆದಿದ್ದಾರೆ. ರಾಮ ಮಂದಿರ ನಿರ್ಮಾಣದ ಮೂಲಕ ಜನರ ಚಿತ್ತವನ್ನು ದೇವರತ್ತ ಹರಿಸಲು ಪ್ರಯತ್ನಿಸಲಾಯಿತಾದರೂ ಜನರೆದೆಯ ಉಸಿರಾದ ಅಂಬೇಡ್ಕರ್ ರವರ ಪ್ರಭಾವ ಕಡಿಮೆಯಾಗದ ಹೆಚ್ಚುತ್ತಲೇ ಹೋಯಿತು. ಸಂವಿಧಾನವನ್ನು ದುರ್ಬಲಗೊಳಿಸುವ ಪ್ರಯತ್ನ ನಡೆದಷ್ಟೂ ಸಂವಿಧಾನದ ಪರವಾದ ಧ್ವನಿಗಳು ಮೊಳಗುತ್ತಲೇ ಹೋದವು. ಅಂಬೇಡ್ಕರ್ ಹೆಸರು ಹೇಳುವುದು ಶೋಕಿಯಾಗಿದೆ. ಅಂಬೇಡ್ಕರ್ ಅಂಬೇಡ್ಕರ್ ಅಂಬೇಡ್ಕರ್, ಇದರ ಬದಲಾಗಿ ದೇವರ ನಾಮ ಸ್ಮರಣೆ ಮಾಡಿದ್ದರೆ ಏಳು ಜನ್ಮದಲ್ಲಿ ಸ್ವರ್ಗ ದೊರೆಯುತ್ತಿತ್ತು. ಎಂದು ಹೇಳುವ ಮೂಲಕ ತಮ್ಮ ಅಂತರಂಗವನ್ನು ಬಹಿರಂಗಗೊಳಿಸಿ ಬೆತ್ತಲಾಗಿದ್ದಾರೆ ಎಂದು ಟೀಕಿಸಿವೆ.

ಗುಜರಾತ್ ಸರ್ಕಾರದಲ್ಲಿ  ಗೃಹಮಂತ್ರಿಯಾಗಿದ್ದ ಅಮಿತ್‌ಶಾ ಅವಧಿಯಲ್ಲಿ ಗೋದ್ರಾ ನರಮೇಧ ನಡೆಯಿತು. ಸಾವಿರಾರು ಜನ ಸತ್ತಾಗ ಇವರು ಏನೂ ಮಾಡಲಿಲ್ಲ ನಾಡಿನ ಖ್ಯಾತ ಸಾಹಿತಿಗಳಾದ ಎಂ..ಎಂ. ಕಲ್ಬುರ್ಗಿ, ಗೌರಿ ಲಂಕೇಶ್, ಇವರನ್ನು ಕೊಂದ ಸಂತತಿ ಯಾರು ? ಮಾಜಿ ರಾಷ್ಟ್ರಪತಿ  ರಾಮ್‌ನಾಥ್‌ಕೋವಿಂದ್ ದಂಪತಿಗಳು ದೇವಸ್ಥಾನ ಪ್ರವೇಶ ಮಾಡದಂತೆ ತಡೆದಿದ್ದು ಯಾರು ಎಂಬ ಪ್ರಶ್ನೆಗಳನ್ನು ಕೇಳಿವೆ.

ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ರವರನ್ನು ಅಪಮಾನ ಮಾಡಿದ ಗೃಹ ಸಚಿವ ಅಮಿತ್‌ಷಾ ರವರನ್ನು ಸಂಪುಟದಿಂದ ಕೂಡಲೇ ವಜಾ ಮಾಡಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ನಾಡಿನ ದಲಿತ ಸಂಘಟನೆಗಳು, ರೈತ ಸಂಘಗಳು, ವಿದ್ಯಾರ್ಥಿ ಯುವಜನ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಹಾಗೂ ಮಹಿಳಾ ಸಂಘಟನೆಗಳು ಸೇರಿದಂತೆ ಬಹುತೇಕ ಎಲ್ಲಾ ಸಂಘಟನೆಗಳು ಒಮ್ಮತದಿಂದ ತೀರ್ಮಾನಿಸಿ ಜನವರಿ 3 ರಂದು ಕೋಲಾರ ಬಂದ್ ಆಚರಣೆ ಮಾಡಲು ಕರೆ ನೀಡಲಾಗಿದೆ.  ಜಿಲ್ಲೆಯ ನಾಗರೀಕರು ಸ್ವಯಂ ಪ್ರೇರಿತವಾಗಿ ಬೆಂಬಲ ನೀಡುವ ಮೂಲಕ ಈ ಬಂದ್‌ ಅನ್ನು ಯಶಸ್ವಿಮಾಡಬೇಕೆಂದು ಪ್ರಗತಿಪರ ಸಂಘಟನೆಗಳು ಕೋರಿವೆ.

More articles

Latest article