ಬೀದರ್: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಕುರಿತು ಅವಮಾನಕಾರಿ ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆ ಪಡೆಯಬೇಕು ಮತ್ತು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ವಿವಿದ ದಲಿತ ಹಾಗೂ ಪ್ರಗತಿಪರ ಸಂಘಟನೆಗಳು ನಾಳೆ ಗುರುವಾರ ಬೀದರ್ ಮತ್ತು ಹುಬ್ಬಳ್ಳಿ-ಧಾರವಾಡ ಬಂದ್ ಗೆ ಕರೆ ನೀಡಿವೆ.
ಮುನ್ನೆಚ್ಚರಿಕೆಯ ಕ್ರಮವಾಗಿ ಬೀದರ್‌ನಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಬೀದರ್ ತಾಲೂಕಿನ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲಾ-ಕಾಲೇಜುಗಳಿಗೆ ರಜೆ ಘೊಷಣೆ ಮಾಡಲಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಶಾಲಾ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆಗಳು ರಜೆ ಘೋಷಣೆ ಮಾಡಿವೆ. ಈ ಬಗ್ಗೆ ಡಿಡಿಪಿಐ ಪ್ರಸನ್ನಕುಮಾರ್, ಡಿಡಿಪಿಯು ಚಂದ್ರಕಾಂತ್ ಆದೇಶ ಹೊರಡಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಲ್ಲೂ ಅಮಿತ್ ಶಾ ಹೇಳಿಕೆ ಖಂಡಿಸಿ ಬಂದ್ ಗೆ ಕರೆ ನೀಡಲಾಗಿದೆ. ಈಗಾಗಲೇ ವಿವಿಧ ಸಂಘಟನೆಗಳು ಹಲವು ಸುತ್ತಿನ ಚರ್ಚೆ ನಡೆಸಿದ್ದು ಬಂದ್ ಯಶಸ್ಸಿಗೆ ಮನವಿ ಮಾಡಿಕೊಂಡಿವೆ. ಆದರೆ ಅವಳಿ ನಗರದಲ್ಲಿ ಇದುವರೆಗೂ ರಜೆ ಘೋಷಿಸಿಲ್ಲ.