ಬೀದರ್, ಹುಬ್ಬಳ್ಳಿ-ಧಾರವಾಡ: ಸಂವಿಧಾನಶಿಲ್ಪಿ ಅಂಬೇಡ್ಕರ್ ಅವರನ್ನು ಅವಹೇಳನ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ವಿವಿಧ ಸಂಘಟನೆಗಳು ಕರೆ ನೀಡದ್ದ ಹುಬ್ಬಳ್ಳಿ-ಧಾರವಾಡ ಮತ್ತು ಬೀದರ್ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಅದರಲ್ಲೂ ಹಳೆ ಹುಬ್ಬಳ್ಳಿ ಭಾಗದಲ್ಲಿ ಶೇ.ನೂರರಷ್ಟು ಯಶಸ್ವಿಯಾಗಿದೆ. ಅರವಿಂದನಗರದ ಶ್ರೀನಗರ ಆಟೊ ನಿಲ್ದಾಣ, ಹಳೆ ಹುಬ್ಬಳ್ಳಿಯ ದುರ್ಗದಬೈಲ್ ವೃತ್ತದಲ್ಲಿ ,ನ್ಯೂ ಇಂಗ್ಲಿಷ್ ಶಾಲೆ, ಇಂಡಿ ಪಂಪ್, ಬಂಕಾಪುರ ಚೌಕ್ ನಲ್ಲಿ ಟೈರ್ ಗೆ ಬೆಂಕಿ ಹಚ್ಚಿ, ರಸ್ತೆ ತಡೆದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಸಚಿವ ಅಮಿತ್ ಶಾ ವಿರುದ್ಧ ಘೋಷಣೆ ಕೂಗಿದರು. ಹುಬ್ಬಳ್ಳಿಯಿಂದ ಶಿರಸಿ, ದಾವಣಗೆರೆ, ಹಾವೇರಿ ಸೇರಿದಂತೆ ವಿವಿಧ ಕಡೆ ಹೋಗುವ ಬಸ್ ಗಳನ್ನು ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗಬ್ಬೂರು ಕ್ರಾಸ್ ಬಳಿ ತಡೆದರು.
ಬೀದರ್ ಬಂದ್ ಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದಲ್ಲಿರುವ ಮಳಿಗೆಗಳು, ಹೋಟೆಲ್ ಗಳು ಬಂದ್ ಆಗಿವೆ. ಸಾರಿಗೆ ಸಂಚಾರ ಸ್ಥಗಿತಗೊಂಡಿದೆ. ಆಟೋ, ಟಂಟಂ, ಕ್ರೂಸರ್ ಸೇರಿದಂತೆ ಯಾವುದೇ ವಾಹನಗಳು ರಸ್ತೆಗೆ ಇಳಿದಿಲ್ಲ. ಪ್ರಮುಖ ರಸ್ತೆಗಳಲ್ಲಿ ಜನರ ಓಡಾಟ ವಿರಳವಾಗಿದೆ. ಜಿಲ್ಲಾಡಳಿತ ಶಾಲಾ, ಕಾಲೇಜುಗಳಿಗೆ ಬುಧವಾರ ಸಂಜೆ ರಜೆ ಘೋಷಿಸಿದ್ದರಿಂದ ಸರ್ಕಾರಿ ಹಾಗೂ ಖಾಸಗಿ ಶಾಲಾ, ಕಾಲೇಜುಗಳೆಲ್ಲ ಬಂದ್ ಆಗಿವೆ. ಪ್ರಮುಖ ವೃತ್ತಗಳು, ರಸ್ತೆಗಳು, ಕೇಂದ್ರ ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸಮಿತಿಯ ಕಾರ್ಯಕರ್ತರು ವಾಹನಗಳಿಗೆ ನೀಲಿ ಧ್ವಜಗಳನ್ನು ಕಟ್ಟಿಕೊಂಡು ಸಂಚರಿಸುತ್ತಿದ್ದಾರೆ.
ಮಹಾರಾಷ್ಟ್ರ ಹಾಗೂ ತೆಲಂಗಾಣದ ಸಾರಿಗೆ ಸಂಸ್ಥೆಯ ಬಸ್ ಗಳು ಗಡಿಭಾಗದ ವರೆಗೆ ಸಂಚರಿಸಿ ಹಿಂತಿರುಗುತ್ತಿವೆ. ಅಂಬೇಡ್ಕರ್ ಅಂಬೇಡ್ಕರ್ ಎನ್ನುವುದು ಕೆಲವರಿಗೆ ಫ್ಯಾಶನ್ ಆಗಿದೆ. ಅಂಬೇಡ್ಕರ್ ಬದಲು ದೇವರ ಹೆಸರು ಹೇಳಿದರೆ ಸ್ವರ್ಗ ಸಿಗುತ್ತದೆ ಎಂದು ಗೃಹಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ಹೇಳಿಕೆ ಕೊಟ್ಟಿದ್ದರು. ಅವರ ಹೇಳಿಕೆಗೆ ಕ್ಷಮೆಯಾಚಿಸಿ ರಾಜೀನಾಮೆ ಕೊಡಬೇಕು ಎಂದು ವಿವಿಧ ಸಂಘ ಸಂಸ್ಥೆಗಳು ಒತ್ತಾಯಿಸುತ್ತಿವೆ.
ಈ ಬಂದ್ ಗೆ ದಲಿತ, ರೈತ ಪ್ರಗತಿಪರ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ವಾದಿಗಳ ಹೋರಾಟ ಸಮಿತಿ ಬಂದ್ ಗೆ ಕರೆ ನೀಡಿದ್ದವು.