ಬೆಂಗಳೂರು: ಆರ್.‌ ಅಶೋಕ್‌ ಗೆ ಏಡ್ಸ್‌ ಚುಚ್ಚುಮದ್ದು; ಬಿಜೆಪಿ ಶಾಸಕ ಮುನಿರತ್ನಗೆ ಸಹಕಾರ ನೀಡಿದ ಇನ್‌ ಸ್ಪೆಕ್ಟರ್‌ ಐಯಣ್ಣ ರೆಡ್ಡಿ ಬಂಧನ

Most read

ಬೆಂಗಳೂರು: ಬಿಜೆಪಿ ಮುಖಂಡ, ರಾಜರಾಜೇಶ್ವರಿನಗರ ಶಾಸಕ ಮುನಿರತ್ನ ಅವರು ನಡೆಸಿದ್ದಾರೆ ಎನ್ನಲಾದ ಹನಿಟ್ರ್ಯಾಪ್‌ ಪ್ರಕರಣದಲ್ಲಿ ಸಂಚು ರೂಪಿಸಿದ್ದ ಆರೋಪದ ಅಡಿಯಲ್ಲಿ ಹೆಬ್ಬಗೋಡಿ ಪೊಲೀಸ್‌ ಇನ್‌ ಸ್ಪೆಕ್ಟರ್‌ ಐಯಣ್ಣ ರೆಡ್ಡಿ ಅವರನ್ನು ಸಿಐಡಿ ವಿಶೇಷ ತನಿಖಾ ದಳ (ಎಸ್‌ ಐಟಿ) ಪೊಲೀಸರು ಬಂಧಿಸಿ ವಶಕ್ಕೆ ಪಡೆದಿದ್ದಾರೆ. ಮುನಿರತ್ನ ಅವರು ತಮ್ಮ ಸಹದ್ಯೋಗಿ ಪ್ರತಿಪಕ್ಷದ ನಾಯಕ ಆರ್. ಅಶೋಕ್‌ ಅವರಿಗೆ ಏಡ್ಸ್‌ ಚುಚ್ಚುಮದ್ದು ನೀಡಲು ಸಂಚು ರೂಪಿಸಿದ್ದರು. ಐಯಣ್ಣ ರೆಡ್ಡಿಗೆ ವಿಷಯ ತಿಳಿದಿದ್ದರೂ ಇಲಾಖೆಗೆ ಮಾಹಿತಿ ನೀಡಿರಲಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಪೊಲೀಸ್‌ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿಯೇ ಐಯಣ್ಣ ರೆಡ್ಡಿ ಅವರನ್ನು ಎಸ್‌ ಐಟಿ ವಶಕ್ಕೆ ಪಡೆದಿದೆ. ನಂತರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಐಯಣ್ಣ ಅವರನ್ನು ಕಸ್ಟಡಿಗೆ ಪಡೆಯಲಾಗಿದೆ.

ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿಯಲ್ಲಿ ರಾಮನಗರ ಜಿಲ್ಲೆಯ ಕಗ್ಗಲಿಪುರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಮುನಿರತ್ನ ಅವರನ್ನು ಬಂಧಿಸಲಾಗಿತ್ತು. ಷರತ್ತುಬದ್ದ ಜಾಮೀನಿನ ಮೇಲೆ ಅವರು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಇವರ ಮೇಲೆ ಆರೋಪ ಕೇಳಿ ಬಂದ ನಂತರ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ, ಬಿಬಿಎಂಪಿ ಗುತ್ತಿಗೆದಾರರೊಬ್ಬರಿಗೆ ಬೆದರಿಕೆ ಹಾಕಿದ ಪ್ರಕರಣ ಮತ್ತು ಜಾತಿ ನಿಂದನೆ ಪ್ರಕರಣದ ತನಿಖೆಯನ್ನು ಸರ್ಕಾರ ಎಸ್‌ ಐಟಿಗೆ ವಹಿಸಿತ್ತು.

ಐಯಣ್ಣ ರೆಡ್ಡಿ ಬೆಂಗಳೂರಿನ ಹೆಬ್ಬಗೋಡಿ ಪೊಲೀಸ್‌ ಠಾಣೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಅವರು ರಾಜಗೋಪಾಲ ನಗರ, ಯಶವಂತಪುರ ಮತ್ತು ಪೀಣ್ಯ ಪೊಲೀಸ್‌ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದರು. ಇವರು ಬಹುತೇಕ ಮುನಿರತ್ನ ಅವರು ಪ್ರತಿನಿಧಿಸುತ್ತಿದ್ದ ಯಶವಂತಪುರ ಪೊಲೀಸ್‌ ಠಾಣೆಗಳಲ್ಲೇ ಕರ್ತವ್ಯ ನಿರ್ವಹಿಸಿದ್ದಾರೆ ಎನ್ನುವುದು ಶಾಸಕರೊಂದಿಗೆ ನಿಕಟ ಬಾಂದವ್ಯ ಹೊಂದಿರುವುದಕ್ಕೆ ನಿದರ್ಶನವಾಗಿದೆ.

ಮುನಿರತ್ನ ನಡೆಸುತ್ತಿದ್ದ ಹನಿಟ್ರ್ಯಾಪ್‌ ಗೆ ಐಯಣ್ಣ ರೆಡ್ಡಿ ಸಹಕಾರ ನೀಡುತ್ತಿದ್ದ ಆರೋಪ ಕೇಳಿ ಬಂದಿದೆ. ಮುನಿರತ್ನ ಕೆಲವು ರಾಜಕಾರಣಿಗಳಿಗೆ ಏಡ್ಸ್‌ ಚುಚ್ಚುಮದ್ದು ನೀಡಲು ಸಂಚು ರೂಪಿಸಿದ್ದ ಸಂಗತಿ ಗೊತ್ತಿದ್ದರೂ ಇನ್‌ ಸ್ಪೆಕ್ಟರ್‌ ಐಯಣ್ಣ ವಿಷಯವನ್ನು ಬಹಿರಂಗಗೊಳಿಸದೆ ಗುಟ್ಟು ಕಾಪಾಡಿದ್ದರು ಎಂಬ ಆರೋಪದಡಿಯಲ್ಲಿ ಐಯಣ್ಣ ಅವರನ್ನು ಬಂಧಿಸಲಾಗಿದೆ ಎಂದು ಎಸ್‌ ಐಟಿ ಮೂಲಗಳು ತಿಳಿಸಿವೆ.

ಈ ಪ್ರಕರಣದ ಸಂತ್ರಸ್ತೆ ಹಾಗೂ ಬಿಬಿಎಂಪಿ ಮಾಜಿ ಸದಸ್ಯ ವೇಲು ನಾಯ್ಕರ್‌ ಅವರನ್ನು ಕೆಲವು ದಿನಗಳ ಹಿಂದೆ ವಿಚಾರಣೆಗೊಳಪಡಿಸಲಾಗಿತ್ತು. ವಿಚಾರಣೆ ಸಂದರ್ಭದಲ್ಲಿ ಇನ್‌ ಸ್ಪೆಕ್ಟರ್‌ ಒಳಸಂಚು ರೂಪಿಸಿದ್ದರ ಬಗ್ಗೆ ಮಾಹಿತಿ ನೀಡಿದ್ದರು. ಈ ಮಾಹಿತಿಯನ್ನಾಧರಿಸಿ ಐಯಣ್ಣ ರೆಡ್ಡಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

More articles

Latest article