ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಕಾವೇರಿಯಲ್ಲಿ ಇಂದಿರಾ ಆಹಾರ ಕಿಟ್ ಯೋಜನೆ ಅನುಷ್ಠಾನ ಕುರಿತು ಸಭೆ ನಡೆಸಿದರು. ಸಭೆಯಲ್ಲಿ ಆಹಾರ ಸಚಿವರಾದ ಕೆ.ಹೆಚ್. ಮುನಿಯಪ್ಪ ಮತ್ತು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸಭೆಯಲ್ಲಿ ಮುಖ್ಯಮಂತ್ರಿಗಳು ಉತ್ತಮ ಗುಣಮಟ್ಟದ ಆಹಾರ ಸಾಮಗ್ರಿಗಳನ್ನು ಪೂರೈಸಲು ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಗುಣಮಟ್ಟದಲ್ಲಿ ರಾಜಿಯಾಗಬಾರದು. ಇದೇ ರೀತಿ ಅಳತೆಯಲ್ಲಿ ಹೆಚ್ಚು ಕಡಿಮೆಯಾಗದಂತೆ ಎಚ್ಚರಿಕೆ ವಹಿಸಬೇಕು. ಅತ್ಯುತ್ತಮ ಗುಣಮಟ್ಟ ಕಾಯ್ದುಕೊಳ್ಳಬೇಕು. ಯಾವುದೇ ರೀತಿಯ ದೂರಿಗೆ ಅವಕಾಶವಾಗದಂತೆ ಪಾರದರ್ಶಕವಾಗಿ ಯೋಜನೆಯನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಸಭೆಯ ಮುಖ್ಯಾಂಶಗಳು:
• ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5ಕೆ.ಜಿ ಅಕ್ಕಿ ಬದಲಾಗಿ ಇಂದಿರಾ (Integrated nutrition and dietary initiative for revitalizing annabhagya benefeciaries) ಆಹಾರ ಕಿಟ್ ವಿತರಿಸುವ ಕುರಿತು ಈಗಾಗಲೇ ಸಂಪುಟದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
• ಈ ಯೋಜನೆಯಡಿ ಕುಟುಂಬದ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಐದು ಕೆಜಿ ಅಕ್ಕಿ ಬದಲಾಗಿ ತೊಗರಿ ಬೇಳೆ, ಸೂರ್ಯಕಾಂತಿ ಎಣ್ಣೆ, ಸಕ್ಕರೆ, ಉಪ್ಪು ನೀಡಲಾಗುವುದು.
• ಪ್ರತಿ ತಿಂಗಳು ಪ್ರಸ್ತುತ 1,25,08,262 ಇಂದಿರಾ ಆಹಾರ ಕಿಟ್ ಅಗತ್ಯವಿದ್ದು, ಇದಕ್ಕಾಗಿ ಪ್ರತಿ ತಿಂಗಳು ರೂ.466 ಕೋಟಿ ವೆಚ್ಚ ಅಂದಾಜಿಸಲಾಗಿದೆ.
• ಈ ಯೋಜನೆಯಡಿ ಪ್ರತಿ ತಿಂಗಳು ಒಟ್ಟು 18628 ಮೆ.ಟನ್ ತೊಗರಿ ಬೇಳೆ ಮತ್ತು ತಲಾ 12419 ಮೆ.ಟನ್ ಸೂರ್ಯಕಾಂತಿ ಎಣ್ಣೆ, ಸಕ್ಕರೆ ಮತ್ತು ಉಪ್ಪು ಅಗತ್ಯ ಅಂದಾಜಿಸಲಾಗಿದೆ.
• ಆಹಾರ ಕಿಟ್ ನಲ್ಲಿ ಪೌಷ್ಟಿಕಾಂಶಗಳಿಂದ ಕೂಡಿರುವ ತೊಗರಿ ಬೇಳೆ ಗರಿಷ್ಟ ಪ್ರಮಾಣದಲ್ಲಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಅವರು ಸೂಚನೆ ನೀಡಿದರು.
• ನಾಫೆಡ್/ಎನ್ ಸಿಸಿ ಎಂ ನಂತಹ ಕೇಂದ್ರ ಸರಬರಾಜು ಸಂಸ್ಥೆಗಳ ಮೂಲಕ ಅಥವಾ ಖರೀದಿ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಕೆಟಿಪಿಪಿ ಅನ್ವಯ ಕೈಗೊಳ್ಳಲು ಕ್ರಮ ಕೈಗೊಳ್ಳಬೇಕು.
• ಪ್ರತಿ ನ್ಯಾಯಬೆಲೆ ಅಂಗಡಿಯಲ್ಲಿಯೂ ಸಹ ಕ್ಯೂಆರ್ ಸ್ಕ್ಯಾನ್ ಮಾಡಬಹುದಾದ ತಂತ್ರಾಂಶವನ್ನು ಅಳವಡಿಸಿ ಅದರ ಆಧಾರದ ಮೇಲೆ ಪಡಿತರ ಚೀಟಿದಾರರಿಗೆ ಇಂದಿರಾ ಫುಡ್ ಕಿಟ್ ವಿತರಣೆಗೆ ಕ್ರಮ ಕೈಗೊಳ್ಳಬೇಕು.
• ಸರಬರಾಜಾದ ಫುಡ್ ಕಿಟ್ ಗಳನ್ನು ನಿಗಮದ ಗೋದಾಮು/ಸಗಟು ಮಳಿಗೆಗಳ ಮೂಲಕ ನ್ಯಾಯಬೆಲೆ ಅಂಗಡಿಗಳಿಗೆ 10ನೇ ತಾರೀಕು ಒಳಗಾಗಿ ವಿತರಣೆ ಮಾಡಬೇಕು.
ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಅಪರ ಕಾರ್ಯದರ್ಶಿ ಅಂಜುಂ ಪರ್ವೇಜ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

