ಮುಂಬೈ: ಹಿಂದೂ ಮಹಾಸಾಗರದಲ್ಲಿ ಬೃಹತ್ ಕಾರ್ಯಾಚರಣೆ ನಡೆಸಿದ ಭಾರತೀಯ ನೌಕಾಪಡೆಯ ʼಐಎನ್‌ಎಸ್ ತರ್‌ಕಶ್’ ಯುದ್ಧ ನೌಕೆಯು 2500 ಕೆ.ಜಿ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದೆ. ಪಶ್ಚಿಮ ಹಿಂದೂ ಮಹಾಸಾಗರದಲ್ಲಿ ಮಾರ್ಚ್ 31ರಂದು ಮಾದಕವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ನೌಕಾಪಡೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ನಡೆದ ಅತಿ ದೊಡ್ಡ ಪ್ರಮಾಣದ ಜಪ್ತಿ ಇದಾಗಿದೆ ಎಂದು ಹೇಳಲಾಗುತ್ತಿದೆ. ಅನುಮಾನಾಸ್ಪದ ನೌಕೆಗಳ ಚಲನವಲನಗಳ ಬಗ್ಗೆ ನೌಕಾಪಡೆಯ ಪಿ-81 ಯುದ್ಧವಿಮಾನವು ಗಸ್ತು ತಿರುಗುತ್ತಿದ್ದ ‘ಐಎನ್‌ಎಸ್ ತರ್‌ಕಶ್’ ನೌಕೆಗೆ ಮಾಹಿತಿ ನೀಡಿತ್ತು. ಕೂಡಲೇ ಕಾರ್ಯಾಚರಣೆ ಆರಂಭಿಸಿದ ‘ತರ್‌ಕಶ್’ ಅನುಮಾನಾಸ್ಪದ ನೌಕೆಗಳ ಪರಿಶೀಲನೆ ನಡೆಸಿ ತನ್ನ ಹೆಲಿಕಾಪ್ಟರ್ ಮೂಲಕ ಅನುಮಾನಾಸ್ಪದ ನೌಕೆಯೊಂದನ್ನು ಪತ್ತೆ ಹಚ್ಚಿತು. ನೌಕಾಪಡೆಯ ಕಮಾಂಡೊಗಳು ಮತ್ತು ವಿಶೇಷ ತಂಡ ಆ ನೌಕೆಯಲ್ಲಿ ಶೋಧ ನಡೆಸಿದಾಗ 2386 ಕೆ.ಜಿ ಹ್ಯಾಶಿಶ್ ಮತ್ತು 121 ಕೆ.ಜಿ ಹೆರಾಯಿನ್ ಸೇರಿದಂತೆ 2500 ಕೆ.ಜಿಗೂ ಅಧಿಕ ಪ್ರಮಾಣದ ಮಾದಕ ವಸ್ತುಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.