ಸೇರಿಗೆ ಸವ್ವಾಸೇರು: ಇಂಗ್ಲೆಂಡ್ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾ ಭಾರತ?

Most read

ಗಯಾನಾ (ವೆಸ್ಟ್ ಇಂಡೀಸ್): ಎರಡು ದಿನಗಳಿಂದ ದಿಗ್ಗಜರ ಕಾಳಗಕ್ಕೆ ಸಾಕ್ಷಿಯಾಗಬೇಕಿರುವ ಗಯಾನಾ ನಗರ ಬಿರುಸಿನ ಮಳೆಗೆ ತೊಪ್ಪೆಯಾಗಿ ಹೋಗಿದೆ. ಕ್ರಿಕೆಟ್ ಜಗತ್ತು ಕಾತರದಿಂದ ಕಾಯತ್ತಿರುವ ಎರಡನೇ ಸೆಮಿಫೈನಲ್ ಪಂದ್ಯ ನಡೆಯುವುದೇ ಅನುಮಾನವೆಂಬ ಸ್ಥಿತಿ ಇದೆ.

ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮತ್ತೊಮ್ಮೆ ಟಿ 20 ವಿಶ್ವಕಪ್ ಸೆಮಿಫೈನಲ್ ನಲ್ಲಿ ಪರಸ್ಪರ ಸೆಣಸಾಡಲಿವೆ. ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಪಂದ್ಯ ಆರಂಭವಾಗಲಿದೆ. ಆದರೆ ಗಯಾನಾದಲ್ಲಿ ಪಂದ್ಯ ನಡೆಯುವುದು ಬೆಳಗಿನ ಹೊತ್ತು. ಹವಾಮಾನ ತಜ್ಞರು ಬೆಳಿಗ್ಗೆ ಗಯಾನಾದಲ್ಲಿ ಮಳೆ ಸುರಿಯಬಹುದು ಎಂದು ಹೇಳುತ್ತಿದ್ದಾರೆ. ಹೀಗಾಗಿ ಇವತ್ತು ಮಳೆ ಆಡಲಿರುವ ಆಟವೇ ಮುಖ್ಯವಾಗಲಿದೆ.

2022ರ ಟಿ 20 ವಿಶ್ವಕಪ್ ನಲ್ಲಿ ಭಾರತ ತಂಡಕ್ಕೆ ಆದ ಗಾಯವನ್ನು ಮರೆಯುವಂತಿಲ್ಲ. ಇದೇ ಇಂಗ್ಲೆಂಡ್ ತಂಡ ಭಾರತಕ್ಕೆ ಸೋಲುಣಿಸಿತ್ತು. ಸೋಲು ಗೆಲುವು ಇದ್ದಿದ್ದೇ, ಆದರೆ ಇಂಗ್ಲೆಂಡ್ ಆ ಪಂದ್ಯವನ್ನು ಹತ್ತು ವಿಕೆಟ್ ಗಳಿಂದ ಅಧಿಕಾರಯುತವಾಗಿ ಗೆದ್ದಿತ್ತು. ಈ ಅವಮಾನದ ಸೇಡು ತೀರಿಸಿಕೊಳ್ಳುವ ಅವಕಾಶ ಈಗ ಒದಗಿ ಬಂದಿದೆ.

ವಿಶೇಷವೆಂದರೆ ಈ ವಿಶ್ವಕಪ್ ನಲ್ಲಿ ಆಡುತ್ತಿರುವ ಬಹುತೇಕರು ಆ ಪಂದ್ಯದಲ್ಲೂ ಆಡಿದ್ದರು. ಅಡಿಲೇಡ್ ಓವಲ್ ನಲ್ಲಿ 2022ರ ನವೆಂಬರ್ 10ರ ದಿನಾಂಕ ಭಾರತ ತಂಡದ ಪಾಲಿಗೆ ಕರಾಳ ದಿನವಾಗಿ ಹೋಯಿತು. ಭಾರತವನ್ನು 168 ರನ್ ಗಳಿಗೆ ನಿಯಂತ್ರಿಸಿದ ಇಂಗ್ಲೆಂಡ್ ಇದೇನು ದೊಡ್ಡ ಸ್ಕೋರೇ ಅಲ್ಲ ಎಂಬಂತೆ ಕೇವಲ 16 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 170 ರನ್ ಗಳಿಸಿ ಗೆದ್ದುಬಿಟ್ಟಿತ್ತು. ಅಲೆಕ್ ಹೇಲ್ಸ್ 86* (47), ಜೋಸ್ ಬಟ್ಲರ್ 80* (49) ಭಾರತದ ಬೌಲರ್ ಗಳನ್ನು ಹಣ್ಣುಗಾಯಿ ನೀರುಗಾಯಿ ಮಾಡಿದ್ದರು. ಒಂದು ವ್ಯತ್ಯಾಸವೆಂದರೆ ಈ ಪಂದ್ಯದಲ್ಲಿ ಬೌಲರ್ ಗಳ ಪೈಕಿ ಜಸ್ಪೀತ್ ಬುಮ್ರಾ, ರವೀಂದ್ರ ಜಡೇಜಾ ಇರಲಿಲ್ಲ. ಬದಲಾಗಿ ಭುವನೇಶ್ವರ ಕುಮಾರ್, ರವಿಚಂದ್ರನ್ ಅಶ್ವಿನ್ ಆಡಿದ್ದರು.

ಈ ಬಾರಿ ಮತ್ತೆ ಇಂಗ್ಲೆಂಡ್ ಮತ್ತು ಭಾರತ ಮತ್ತೆ ಸೆಮಿಫೈನಲ್ ತಂಡಗಳು ಮುಖಾಮುಖಿಯಾಗಲಿವೆ. ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಕ್ರಿಕೆಟ್ ಹ್ಯಾಂಡಲ್ ನಲ್ಲಿ ಭಾರತವನ್ನು ಕೆಣಕುವ ಪೋಸ್ಟ್ ಹಾಕಿತ್ತು. ಕಳೆದ ಬಾರಿ ಏನಾಯಿತು ಎಂದು ಯಾರಿಗಾದರೂ ಗೊತ್ತೆ? ಎಂಬ ಒಕ್ಕಣೆಯೊಂದಿಗೆ ಜೋಸ್ ಬಟ್ಲರ್ ಕಳೆದ ವಿಶ್ವಕಪ್ ಸೆಮಿಫೈನಲ್ ನಲ್ಲಿ ಗೆಲುವಿನ ನಂತರ ಸಂಭ್ರಮಾಚರಣೆ ಮಾಡುವ ಫೊಟೋ ಪೋಸ್ಟ್ ಮಾಡಿತ್ತು. ಇದಕ್ಕೆ ಭಾರತ ಕ್ರಿಕೆಟ್ ಅಭಿಮಾನಿಗಳು ಗರಂ ಆಗಿದ್ದು, ಈ ಬಾರಿ ಫಲಿತಾಂಶ ಉಲ್ಟಾ ಆಗಲಿದೆ ಎಂದು ಪ್ರತಿಕ್ರಿಯಿಸುತ್ತಿದ್ದಾರೆ.

ಅವರು ಆಕ್ರಮಣಕಾರಿ ಆಟವಾಡುತ್ತಾರೆ ಎಂಬುದು ನಮಗೆ ಗೊತ್ತು, ನಾವೂ ಕೂಡ ಅಷ್ಟೇ ಆಕ್ರಮಣಕಾರಿಯಾಗಿ ಆಡುತ್ತೇವೆ ಎಂದು ಜೋಸ್ ಬಟ್ಲರ್ ಹೇಳಿರುವ ಪೋಸ್ಟರ್ ಕೂಡ ದೊಡ್ಡದಾಗಿ ಸದ್ದು ಮಾಡುತ್ತಿದೆ.

ಇದೆಲ್ಲದರ ನಡುವೆ ಭಾರತ ಕ್ರಿಕೆಟ್ ಅಭಿಮಾನಿಗಳು ಇಂದು ಮ್ಯಾಚ್ ನಡೆಯಲೇಬೇಕು, ಇಂಗ್ಲೆಂಡ್ ತಂಡವನ್ನು ಹೀನಾಯವಾಗಿ ಸೋಲಿಸಬೇಕು. ಆಗಲೇ ನಮಗೆ ಸಮಾಧಾನ ಎಂದು ಹಠ ಹಿಡಿದು ಕುಳಿತಿದ್ದಾರೆ.

More articles

Latest article