ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ಸಾಧಿಸುವ ಮೂಲಕ ಎರಡನೇ ಬಾರಿಗೆ ದಾಖಲೆಯ ಟಿ20 ವಿಶ್ವಕಪ್ ಗೆದ್ದು ಚಾಂಪಿಯನ್ ಆಗಿದೆ. ಭಾರತ ಈ ಗೆಲುವನ್ನು ಅನೇಕ ರಾಜಕೀಯ, ಸಿನಿಮಾ ತಾರೆಯರು, ಮಾಜಿ ಕ್ರಿಕೆಟ್ ಆಟಗಾರರು ಇನ್ನಿತರೆ ಗಣ್ಯರು ಸಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ತಿಳಿಸುತ್ತಿದ್ದಾರೆ.
ವಿಪಕ್ಷಗಳ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಟ್ವೀಟ್ ಮಾಡಿದ್ದು, ಟೀಂ ಇಂಡಿಯಾ 17 ವರ್ಷಗಳ ನಂತರ T20 ವಿಶ್ವಕಪ್ ಗೆದ್ದಿದೆ. ಟೀಂ ಇಂಡಿಯಾ ಬ್ಲೂ ಬಾಯ್ಸ್‌ಗೆ ಅಭಿನಂದನೆಗಳು. ವಿರಾಟ್ ಕೊಹ್ಲಿ, ಅಕ್ಷರ್ ಪಟೇಲ್ ಮತ್ತು ಅರ್ಷದೀಪ್ ಸಿಂಗ್ ಪಂದ್ಯದ ಮೂಲಕ ಮಿಂಚಿದರು. ಈ ಅದ್ಭುತ ವಿಜಯದ ಬಗ್ಗೆ ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡುತ್ತಾನೆ. ನಿಮ್ಮ ಸಾಧನೆಗಳನ್ನು ಯಾವಾಗಲೂ ಆಚರಿಸಲಾಗುತ್ತದೆ ಮತ್ತು ಗೌರವಿಸಲಾಗುತ್ತದೆ. ಭವಿಷ್ಯದ ಪಂದ್ಯಗಳಲ್ಲಿ ನಿಮ್ಮನ್ನು ಬೆಂಬಲಿಸಿ ಹುರಿದುಂಬಿಸಲು ನಾವು ಎದುರು ನೋಡುತ್ತಿದ್ದೇವೆ ಎಂದು ಅಭಿನಂದನೆ ತಿಳಿಸಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿಗಳ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿ, ವಿಶ್ವಕಪ್ ವಿಜೇತ ಭಾರತ ತಂಡಕ್ಕೆ ಅಭಿನಂದನೆಗಳು. ನಿರ್ಣಾಯಕ ಹಂತದಲ್ಲಿ ನಮ್ಮವರು ತೋರಿದ ಸಂಘಟಿತ ಪ್ರದರ್ಶನ ಪಂದ್ಯದ ದಿಕ್ಕನ್ನೇ ಬದಲಿಸಿತು. ಇಡೀ ಪಂದ್ಯಾವಳಿಯಲ್ಲಿ ಒಂದು ಪಂದ್ಯವನ್ನೂ ಸೋಲದೆ ಅಜೇಯರಾಗುಳಿದು ವಿಶ್ವಕಪ್ ಟಿ20 ಜಯಿಸಿದ ಭಾರತ ತಂಡದ ಸಾಧನೆ ನಿಜಕ್ಕೂ ಶ್ಲಾಘನೀಯ. ಒಂದು ಹಂತದಲ್ಲಿ ಗೆಲುವಿನ ಸನಿಹಕ್ಕೆ ಬಂದು ಕಡೇ ಕ್ಷಣದಲ್ಲಿ ಪಂದ್ಯ ಸೋತಿರುವ ದಕ್ಷಿಣ ಆಫ್ರಿಕಾ ತಂಡದ ಆಟವೂ ಮೆಚ್ಚತಕ್ಕದ್ದೆ. ಇದೊಂದು ಐತಿಹಾಸಿಕ ಕ್ಷಣ. ಕ್ರಿಕೆಟ್ ಪ್ರೇಮಿಯಾದ ನನಗೆ ನಮ್ಮವರ ಗೆಲುವು ಅತ್ಯಂತ ಖುಷಿಕೊಟ್ಟಿದೆ. ಕೋಟ್ಯಂತರ ಜನರ ಹರಕೆ, ಹಾರೈಕೆಗಳು ಕಡೆಗೂ ಫಲಕೊಟ್ಟಿದೆ, ವಿಶ್ವಕಪ್ ಮರಳಿ ಭಾರತದ ಮಡಿಲು ಸೇರಿದೆ ಎಂದು ಅಭಿನಂದನೆ ತಿಳಿಸಿದ್ದಾರೆ.
ಬಹುಭಾಷಾ ನಟ ಪ್ರಕಾಶ್ ರೈ ಟ್ವೀಟ್ ಮಾಡಿ, ಎಂತಹಾ ಪಂದ್ಯ, ತುಂಬಾ ಹೃದಯದ ಧನ್ಯವಾದಗಳು ಟೀಂ ಇಂಡಿಯಾ ನಮಗೆ ಹೆಮ್ಮೆಯಾಗುತ್ತಿದೆ ಎಂದು ತಿಳಿಸಿದ್ದಾರೆ.
ಖ್ಯಾತ ಯೂಟ್ಯೂಬರ್ ಧ್ರುವ್ ರಾಥಿ ಟ್ವೀಟ್ ಮಾಡಿ, ಭಾರತಕ್ಕೆ ಎಂತಹ ಅಧ್ಬುತ ಗೆಲುವು. ಈ ಪಂದ್ಯವನ್ನು ನೋಡಲು ರೋಚಕವಾಗಿತ್ತು. ಪಂದ್ಯದಲ್ಲಿ ತುಂಬಾ ರೋಚಕ ತಿರುವುಗಳಿದ್ದವು. ಆದರೆ ಈ ಗೆಲುವಿಗಾಗಿ ಶ್ರಮಿಸಿದ ರೋಹಿತ್, ವಿರಾಟ್, ಬುಮ್ರಾ ಮತ್ತು ಸೂರ್ಯಕುಮಾರ್ ಅವರಿಗೆ ವಿಶೇಷ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ಕೇಂದ್ರ ಸಚಿವ ಕುಮಾರ ಸ್ವಾಮಿ ಟ್ವೀಟ್ ಮಾಡಿದ್ದು, ಟಿ20 ವಿಶ್ವಕಪ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ರೋಚಕ ಗೆಲುವು ಸಾಧಿಸಿದ ರೋಹಿತ್ ಶರ್ಮ ನೇತೃತ್ವದ ಭಾರತ ತಂಡಕ್ಕೆ ಶುಭಾಶಯಗಳು ಮತ್ತು ಸಮಸ್ತ ಭಾರತೀಯರ ಪರವಾಗಿ ಅಭಿನಂದನೆಗಳು. ಅನೇಕ ರೋಚಕ ತಿರುವುಗಳ ಫೈನಲ್ ಪಂದ್ಯ ಭಾರತೀಯರೆಲ್ಲರನ್ನೂ ತುದಿಗಾಲ ಮೇಲೆ ನಿಲ್ಲಿಸಿತ್ತು. ಎಲ್ಲರ ಆಕಾಂಕ್ಷೆ, ನಿರೀಕ್ಷೆಯಂತೆ ಭಾರತ ಗೆದ್ದು ಬೀಗಿದೆ. ನಮ್ಮ ಹೆಮ್ಮೆಯ ತಂಡಕ್ಕೆ ಶುಭವಾಗಲಿ ಎಂದು ಹೇಳಿದ್ದಾರೆ.
ಲೋಕಸಭೆ ಪತಿಪಕ್ಷಗಳ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು, ವಿಶ್ವಕಪ್ ವಿಜಯ ಮತ್ತು ಅದ್ಭುತ ಪ್ರದರ್ಶನಕ್ಕಾಗಿ ಟೀಮ್ ಇಂಡಿಯಾಕ್ಕೆ ಅಭಿನಂದನೆಗಳು. ಸೂರ್ಯ, ಎಂತಹ ಅದ್ಭುತ ಕ್ಯಾಚ್! ರೋಹಿತ್, ಈ ಗೆಲುವು ನಿಮ್ಮ ನಾಯಕತ್ವಕ್ಕೆ ಸಾಕ್ಷಿ. ರಾಹುಲ್, ಟೀಮ್ ಇಂಡಿಯಾ ನಿಮ್ಮ ಮಾರ್ಗದರ್ಶನವನ್ನು ವಂಚಿತವಾಗುತ್ತದೆ ಎಂದು ಬೇಸರವಾಗುತ್ತಿದೆ. ಭಾರತದ ಬ್ಯೂ ಬಾಯ್ಸ್ ನಮ್ಮ ದೇಶವನ್ನು ಹೆಮ್ಮೆ ಪಡುವಂತೆ ಮಾಡಿದ್ದಾರೆ ಎಂದು ಹೇಳಿದ್ದಾರೆ.