ಭಾರತ–ಪಾಕ್ ಕದನ ವಿರಾಮ ಮಾಡಿಸಿದ್ದು ನಾನೇ; ಅದೇ ರೀತಿ ಇರಾನ್–ಇಸ್ರೇಲ್ ಒಪ್ಪಂದ ಮಾಡಿಕೊಳ್ಳಲಿ: ಡೊನಾಲ್ಡ್‌ ಟ್ರಂಪ್

Most read

ವಾಷಿಂಗ್ಟನ್: ಭಾರತ ಮತ್ತು ಪಾಕಿಸ್ತಾನ ಕದನ ವಿರಾಮ ಒಪ್ಪಂದ ಮಾಡಿಕೊಂಡಂತೆ ಯುದ್ಧದಲ್ಲಿ ಮುಳುಗಿರುವ ಇರಾನ್ ಮತ್ತು ಇಸ್ರೇಲ್ ದೇಶಗಳೂ ಸಹ ಕದನ ವಿರಾಮ ಒಪ್ಪಂದ ಮಾಡಿಕೊಳ್ಳಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ವ್ಯಾಪಾರದ ದೃಷ್ಟಿಕೋನವನ್ನು ಬಳಸಿಕೊಂಡು ಕಳೆದ ತಿಂಗಳು ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ನಿಲ್ಲಿಸಿದ್ದೇನೆ ಎಂಬ ತಮ್ಮ ಹೇಳಿಕೆಯನ್ನು ಅವರು ಪುನರುಚ್ಚರಿಸಿದ್ದಾರೆ.

ಟ್ರೂತ್ ಸೋಷಿಯಲ್‌ನಲ್ಲಿನ ಪೋಸ್ಟ್‌ ನಲ್ಲಿ, ಟ್ರಂಪ್, ಇರಾನ್ ಮತ್ತು ಇಸ್ರೇಲ್ ಯುದ್ಧ ಕುರಿತು ಹಲವು ಕರೆಗಳು ಬರುತ್ತಿದ್ದು, ಈ ನಿಟ್ಟಿನಲ್ಲಿ ಸಭೆಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.

ನಾನು ಭಾರತ ಮತ್ತು ಪಾಕಿಸ್ತಾನದ ನಡುವೆ ಒಪ್ಪಂದ ಮಾಡಿಸಿದಂತೆ ಇರಾನ್ ಮತ್ತು ಇಸ್ರೇಲ್ ಸಹ ಒಪ್ಪಂದ ಮಾಡಿಕೊಳ್ಳಬೇಕು. ಆ ಸಂದರ್ಭದಲ್ಲಿ, ಅಮೆರಿಕದೊಂದಿಗೆ ವ್ಯಾಪಾರದ ವಿಷಯವನ್ನು ಇಟ್ಟುಕೊಂಡು ಎರಡೂ (ಭಾರತಪಾಕ್) ದೇಶಗಳು ಒಪ್ಪಂದಕ್ಕೆ ಬರುವಂತೆ ಮಾಡಿದ್ದಾಗಿ ಟ್ರಂಪ್‌ ಮತ್ತೊಮ್ಮೆ ಹೇಳಿದ್ದಾರೆ.

ಆದರೆ, ಟ್ರಂಪ್ ಹೇಳಿಕೆಯನ್ನು ಭಾರತ ತಳ್ಳಿ ಹಕಿತ್ತು. ಅಮೆರಿಕ ಸೇರಿದಂತೆ ಯಾವುದೇ  ಮೂರನೇ ವ್ಯಕ್ತಿಯ ಪಾಲ್ಗೊಳ್ಳುವಿಕೆ ಇಲ್ಲದೆ ನಾಲ್ಕು ದಿನಗಳ ಸಂಘರ್ಷವನ್ನು ಕೊನೆಗೊಳಿಸಲು ಭಾರತ ಮತ್ತು ಪಾಕಿಸ್ತಾನ ಮೇ 10ರಂದು ಒಪ್ಪಂದಕ್ಕೆ ಬಂದಿದ್ದವು ಎಂದು ಸ್ಪಷ್ಟಪಡಿಸಿತ್ತು.

ಶುಕ್ರವಾರ ಮುಂಜಾನೆ ಇಸ್ರೇಲ್, ಇರಾನ್‌ ನ ಪರಮಾಣು, ಕ್ಷಿಪಣಿ ಮತ್ತು ಮಿಲಿಟರಿ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತ್ತು. ನಂತರ, ಇರಾನ್, ಇಸ್ರೇಲ್ ಮೇಲೆ ಪ್ರತೀಕಾರದ ದಾಳಿಯನ್ನು ಪ್ರಾರಂಭಿಸಿತ್ತು. ಇರಾನಿನ ಕ್ಷಿಪಣಿಗಳು ಟೆಲ್ ಅವಿವ್‌ ನಲ್ಲಿರುವ ಕಟ್ಟಡಗಳಿಗೆ ಅಪ್ಪಳಿಸಿದ್ದವು.

ತಮ್ಮ ಮೊದಲ ಅವಧಿಯಲ್ಲಿ ಸೆರ್ಬಿಯಾ ಮತ್ತು ಕೊಸೊವೊ ಯುದ್ಧ ಕೊನೆಗೊಳಿಸಿದ್ದಾಗಿ ಟ್ರಂಪ್‌ ನೆನಪಿಸಿದ್ದಾರೆ. ಈಜಿಪ್ಟ್ ಮತ್ತು ಇಥಿಯೋಪಿಯಾ ನಡುವಿನ ಸಂಘರ್ಷವನ್ನು ಸಹ ನಿಲ್ಲಿಸಿದ್ದೆ ಎಂದೂ ತಿಳಿಸಿದ್ದಾರೆ. ಅದೇ ರೀತಿ, ಇಸ್ರೇಲ್ ಮತ್ತು ಇರಾನ್ ನಡುವೆ ಶೀಘ್ರದಲ್ಲೇ ಶಾಂತಿ ಒಪ್ಪಂದವಾಗುವ ನಿರೀಕ್ಷೆ ಇದೆ. ಈ ಸಂಬಂಧ ಹಲವು ಕರೆಗಳು ಬರುತ್ತಿದ್ದು, ಸಭೆಗಳು ನಡೆಯುತ್ತಿವೆ. ಮಧ್ಯಪ್ರಾಚ್ಯವನ್ನು ಮತ್ತೆ ಶ್ರೇಷ್ಠಗೊಳಿಸಬೇಕಿದೆ ಎಂದೂ ತಮ್ಮ ಪೋಸ್ಟ್‌ ನಲ್ಲಿ ತಿಳಿಸಿದ್ದಾರೆ.

More articles

Latest article