ವಾಷಿಂಗ್ಟನ್: ಭಾರತ ಮತ್ತು ಪಾಕಿಸ್ತಾನ ನಡುವೆ ಅಣ್ವಸ್ತ್ರ ಯುದ್ಧ ನಡೆಯುವ ಸಾಧ್ಯತೆಗಳಿದ್ದು, ಅದನ್ನು ತಪ್ಪಿಸಿದ್ದು ನಾನೇ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಜತೆ ಇಂದು ಶೃಂಗಸಭೆ ನಡೆಯಲಿದ್ದು, ಸಭೆಗೂ ಮುನ್ನ ಈ ಹೇಳಿಕೆ ನೀಡಿದ್ದಾರೆ.
ಭಾರತ- ಪಾಕಿಸ್ತಾನ ನಡುವಿನ ಸಂಘರ್ಷದಲ್ಲಿ ಆರರಿಂದ ಏಳು ವಿಮಾನಗಳನ್ನು ಹೊಡೆದು ಉರುಳಿಸಲಾಗಿದೆ. ಎರಡೂ ದೇಶಗಳು ಅಣ್ವಸ್ತ್ರ ಯುದ್ಧಕ್ಕೂ ಸನ್ನದ್ದವಾಗಿದ್ದವು. ಆದರೆ ನಾವು ಉಭಯ ದೇಶಗಳ ಸಮಸ್ಯೆಯನ್ನು ಬಗೆಹರಿಸಿದೆವು ಎಂದು ಟ್ರಂಪ್ ಹೇಳಿದ್ದಾರೆ.
ಭಾರತ, ಪಾಕಿಸ್ತಾನ ಯುದ್ಧ ಸೇರಿದಂತೆ ನಾವು ಐದು ಯುದ್ಧಗಳನ್ನು ನಿಲ್ಲಿಸಿದ್ದೇವೆ. ಭಾರತ ಮತ್ತು ಪಾಕಿಸ್ತಾನ, ಕಾಂಗೋ ಮತ್ತು ರುವಾಂಡಾ, ಥೈಲ್ಯಾಂಡ್ ಮತ್ತು ಕಾಂಬೋಡಿಯಾ, ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ನಡುವಿನ ಸಂಘರ್ಷವನ್ನು ಬಗೆಹರಿಸಿರುವುದಾಗಿಯೂ ಅವರು ಹೇಳಿಕೊಂಡಿದ್ದಾರೆ.
ಯಾವುದೇ ದೇಶಕ್ಕೆ ಯುದ್ಧ ಒಳ್ಳೆಯದಲ್ಲ. ಅವುಗಳನ್ನು ಕೊನೆಗೊಳಿಸುವ ಸಾಮರ್ಥ್ಯ ತಮಗಿದೆ ಇದೆ ಎಂದೂ ಟ್ರಂಪ್ ಪ್ರತಿಪಾದಿಸಿದ್ದಾರೆ.