ಕೇಂದ್ರ ಸರ್ಕಾರ ಮೇಕೆದಾಟು ಯೋಜನೆಗ ಯೋಜನೆಗೆ ಕೂಡಲೇ ಅನುಮತಿ ನೀಡಬೇಕು: ಜಯಚಂದ್ರ

Most read

ಬೆಂಗಳೂರು: 2050  ರ ವೇಳೆಗೆ ರಾಜಧಾನಿ ಬೆಂಗಳೂರಿನ ಜನಸಂಖ್ಯೆ 3 ಕೋಟಿ ತಲುಪಲಿದ್ದು ಕುಡಿಯುವ ನೀರಿಗೆ ಅಭಾವ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಬಹಳ ದಿನಗಳಿಂದ ನೆನೆಗುದ್ದಿಗೆ ಬಿದ್ದಿರುವ ಮೇಕೆದಾಟು ಯೋಜನೆಯನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಅಗತ್ಯ ಅನುಮತಿಗಳನ್ನು ನೀಡಬೇಕು ಎಂದು ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ ಜಯಚಂದ್ರ ಒತ್ತಾಯಿಸಿದ್ದಾರೆ. ಅವರು ರಾಜಪಾಲರ ಭಾಷಣದ ಮೇಲೆ ವಂದನಾ  ನಿರ್ಣಯ ಸಲ್ಲಿಸುವ  ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದರು.

 ಬೆಂಗಳೂರಿನ ನಗರ ಸೇರಿದಂತೆ ಸುತ್ತಮುತ್ತಲಿನ ಐದು ಜಿಲ್ಲೆಗಳಲ್ಲಿ ಅಂತರ್ಜಲವನ್ನು ಮಿತಿಮೀರಿ ಬಳಸಲಾಗಿದ್ದು ಜನಸಂಖ್ಯೆಗೆ ತಕ್ಕಂತೆ ಕುಡಿಯುವ ನೀರು ಒದಗಿಸಲು ಭವಿಷ್ಯದಲ್ಲಿ ತೊಂದರೆಯಾಗಲಿದೆ . ಹೀಗಾಗಿ ಮೇಕೆದಾಟು ಯೋಜನೆ ಅನುಷ್ಠಾನಗೊಂಡರೆ 67 ಟಿಎಂಸಿ ನೀರು ಸಿಗಲಿದ್ದು ಬೆಂಗಳೂರು ಹಾಗೂ ಸುತ್ತಮುತ್ತಲ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಪೂರೈಸಲು ಸಹಕಾರಿಯಾಗಲಿದೆ ಎಂದು ಇದೇ ವೇಳೆ ಪ್ರತಿಪಾದಿಸಿದರು.

 ಅದೇ ರೀತಿ ಬರಡು ಜಿಲ್ಲೆಗಳಾದ ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ನೀರಾವರಿ ಹಾಗೂ ಕುಡಿಯುವ ನೀರಿನ ಯೋಜನೆಗಾಗಿ ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಕೇಂದ್ರ ಸರ್ಕಾರ ಈ ಕೂಡಲೇ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಿ ಕೇಂದ್ರ ಸರ್ಕಾರದ ಪಾಲಿನ 5300 ಕೋಟಿ ಹಣವನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಕೃಷ್ಣ ಮೇಲ್ದಂಡೆ ಯೋಜನೆ ಹಾಗೂ ಮಹದಾಯಿ ಯೋಜನೆಗಳನ್ನು ತ್ವರಿತವಾಗಿ  ಅನುಷ್ಠಾನಗೊಳಿಸಿದರೆ ರಾಜ್ಯದ ರೈತರಿಗೆ ಅನುಕೂಲವಾ ಗಲಿದೆ ಎಂದು ಹೇಳಿದರು.

 ರಾಜ್ಯದ ಆರ್ಥಿಕ ಶಕ್ತಿಯನ್ನು ಒಂದು ಟ್ರಿಲಿಯನ್ ಡಾಲರ್ ಗೆ ಏರಿಸಬೇಕು. ರಾಷ್ಟ್ರದಲ್ಲಿ ಮಹಾರಾಷ್ಟ್ರ ರಾಜ್ಯದ ನಂತರ ಅತಿ ಹೆಚ್ಚು ತೆರಿಗೆ ಸಂಗ್ರಹ ಮಾಡುತ್ತಿರುವ ರಾಜ್ಯ ಕರ್ನಾಟಕ ಆಗಿದೆ. ಇತ್ತೀಚೆಗೆ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ರಾಜ್ಯ ಹೊಸ ದಾಖಲೆ ನಿರ್ಮಿಸಿದ್ದು 10.7 ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗುವ ಸಾಧ್ಯತೆ ಇದೆ. ಈಗಾಗಲೇ ರಾಜ್ಯ ಐಟಿಬಿಟಿ, ಔಷಧಿ ಹಾಗೂ ಉತ್ಪಾದನಾ ಕ್ಷೇತ್ರದಲ್ಲಿ ತನ್ನದೇ ಆದ ಸಾಧನೆಯನ್ನು ಮಾಡಿದೆ . ಕೃಷಿ ಕ್ಷೇತ್ರಕ್ಕೂ ಹೆಚ್ಚಿನ ಉತ್ತೇಜನ ನೀಡುವ ಮೂಲಕ ಮುಂದಿನ ದಿನಗಳಲ್ಲಿ ರಾಜ್ಯದ ಆರ್ಥಿಕ ಶಕ್ತಿಯನ್ನು ಒಂದು ಟ್ರಿಲಿಯನ್  ಡಾಲರ್ ಗೆ ಏರಿಕೆ ಮಾಡಬೇಕು ಎಂದು ಇದೇ ವೇಳೆ ತಿಳಿಸಿದರು.

ರೈತರು ಬೆಳೆದಿರುವ ಕೃಷಿ ಉತ್ಪನ್ನಗಳನ್ನು ಸಂಸ್ಕರಿಸಿ ವಿದೇಶಗಳಿಗೆ ರಫ್ತು ಮಾಡಲು ರಾಜ್ಯದಲ್ಲಿ ಏಳು ಫುಡ್ ಪಾರ್ಕ್ ಗಳನ್ನು ಸ್ಥಾಪಿಸಲು ನಿರ್ಧಾರ ಕೈಗೊಂಡು ಯೋಜನೆಯನ್ನು ಅನುಷ್ಠಾನಗೊಳಿಸಲಾಗಿತ್ತು .ಆದರೆ ಈ  ಪುಡ್ ಪಾರ್ಕ್ ಯೋಜನೆಗಳು ನೆನೆಗುದಿಗೆ ಬಿದ್ದಿರುವುದು ದುರದೃಷ್ಟಕರ ಸಂಗತಿಯಾಗಿದೆ. ಈ ಪುಡ್  ಪಾರ್ಕ್ ಗಳಿಗೆ ಹಣ ನೀಡುವ ಮೂಲಕ ಯೋಜನೆಯನ್ನು ಮುಂದುವರಿಸಬೇಕು. ಆ ಮೂಲಕ ಆಹಾರ ಪದಾರ್ಥಗಳನ್ನು ಸಂಸ್ಕರಣೆ ಮಾಡಿ ಹೆಚ್ಚು ವಿದೇಶಿ ವಿನಿಮಯ ಗಳಿಸಬೇಕು ಆಗಾದಾಗ ಮಾತ್ರ ರೈತರು ಉತ್ಪನ್ನಗಳಿಗೆ ಒಳ್ಳೆಯ ಬೆಲೆ ಸಿಗಲಿದೆ ಹಾಗೂ ವಿದೇಶಿ ವಿನಿಮಯವೂ ದೊರೆಯಲಿದೆ ಎಂದರು.

 ಹುಣಿಸೇ ಪಾರ್ಕ್ :

ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಕಡಿಮೆ ಮಳೆ ಬೀಳುತ್ತಿದ್ದು ಹುಣಸೆಹಣ್ಣು ಅಲ್ಲಿನ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಹುಣಸೆಹಣ್ಣಿನಲ್ಲಿ ಔಷಧಿ ಅಗತ್ಯವಿರುವ ಅಂಶಗಳಿದ್ದು ದೇಶವಿದೇಶಗಳಲ್ಲಿ ಬಹಳ ಬೇಡಿಕೆ ಇದೆ. ದಕ್ಷಿಣ ಆಫ್ರಿಕಾದ ನಂತರ ಅತಿ ಹೆಚ್ಚು ಹುಣಿಸೆಯನ್ನು ಬೆಳೆಯುವುದು ನಮ್ಮ ರಾಜ್ಯದಲ್ಲಿ ಹೀಗಾಗಿ ಹುಣಿಸೇ ಪಾರ್ಕ್‌  ಅನ್ನು ಸ್ಥಾಪಿಸಬೇಕು . ಈಗಾಗಲೇ ಹುಣಸೆ ಪಾರ್ಕ್ ನಿರ್ಮಾಣಕ್ಕಾಗಿ 20 ಎಕರೆ  ಭೂಮಿಯನ್ನು  ತುಮಕೂರು ಜಿಲ್ಲೆಯಲ್ಲಿ ಗುರುತಿಸಲಾಗಿದೆ ಎಂದು ಇದೇ ವೇಳೆ ಜಯಚಂದ್ರ ಅವರು ಹೇಳಿದರು‌‌.

 ಶಿರಾ ತಾಲೂಕಿನಲ್ಲಿ ಪ್ರಸಕ್ತ 32,000 ಎಕರೆಯಲ್ಲಿ  ಬಿಟಿ  ಹತ್ತಿಯನ್ನ ಬೆಳೆಯಲಾಗುತ್ತಿದೆ .ಆ ಭಾಗದ ಜನರಿಗೆ ಇದು ಪ್ರಮುಖ ವಾಣಿಜ್ಯ ಬೆಳೆ ಆಗಿದೆ .ಮುಂದಿನ ದಿನಗಳಲ್ಲಿ ಮೆಣಸಿನಕಾಯಿ ಹಾಗೂ ಹತ್ತಿ ಬೆಳೆಯಲು ರೈತರಿಗೆ ಹೆಚ್ಚಿನ ಪೋತ್ಸಾಹ ನೀಡಬೇಕೆಂದು ಇದೇ ವೇಳೆ ತಿಳಿಸಿದರು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ನುಡಿದಂತೆ ನಡೆಯುವ ಸರ್ಕಾರವಾಗಿದ್ದು ಐದು ಗ್ಯಾರಂಟಿ ಯೋಜನೆಗಳನ್ನು  ಸರ್ಕಾರ ಅಸ್ತಿತ್ವಕ್ಕೆ ಬಂದ ತಕ್ಷಣ  ಅನುಷ್ಠಾನ ಗೊಳಿಸಲಾಗಿದ್ದು ಯಾವುದೇ ಮಧ್ಯ ವರ್ತಿಗಳಿಲ್ಲದೆ ನಾಲ್ಕೂವರೆ ಕೋಟಿ ಜನಕ್ಕೆ ಗ್ಯಾರಂಟಿ ಯೋಜನೆಗಳು ತಲುಪುತ್ತಿವೆ ಎಂದರು .ಈ ಯೋಜನೆಗಳಿಂದ ರಾಜ್ಯದ ಜನತೆಯ ಆರ್ಥಿಕ ಹಾಗೂ ಸಾಮಾಜಿಕ ಶಕ್ತಿ ವೃದ್ಧಿಗೊಂದಿದೆ ಎಂದಿದ್ದಾರೆ.

More articles

Latest article