ನಾಳೆ ಕೇಂದ್ರ ಬಜೆಟ್‌ ಮಂಡನೆ; ಮಧ್ಯಮ ವರ್ಗದ ಜನತೆಗೆ ಪರಿಹಾರ ಸಿಗಲಿದೆಯೇ?

Most read

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಫೆಬ್ರುವರಿ 1ರಂದು 2025–26ನೇ ಸಾಲಿನ ಬಜೆಟ್‌ ಮಂಡಿಸಲಿದ್ದು, ಅವರ ಮುಂದೆ ಸಮಸ್ಯೆಗಳ ಆಗರವೇ ಇದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ. ಕೇಂದ್ರ ಹಣಕಾಸು ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಸೇರಿ ಹಿರಿಯ ಅಧಿಕಾರಿಗಳೊಟ್ಟಿಗೆ ನಿರ್ಮಲಾ ಬಜೆಟ್‌ ತಯಾರಿ ನಡೆಸಿದ್ದಾರೆ. ಈ ಬಾರಿಯ ಆಯವ್ಯಯದ ಗಾತ್ರವು ರೂ. 50 ಲಕ್ಷ ಕೋಟಿಗೆ ತಲುಪಲಿದೆ ಎಂದು ಅಂದಾಜು ಮಾಡಲಾಗಿದೆ. ಆದರೆ, ದೇಶದ ಆರ್ಥಿಕ ಬೆಳವಣಿಗೆ ದರವು ಇಳಿಕೆಯ ಪಥದಲ್ಲಿ ಸಾಗುತ್ತಿರುವುದು ಅವರಿಗೆ ಸವಾಲಾಗಿ ಪರಿಣಮಿಸಿದೆ ಎಂದು ಹೇಳಿದ್ದಾರೆ.

2024-25ನೇ ಆರ್ಥಿಕ ಸಾಲಿನ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಒಟ್ಟು ಆಂತರಿಕ ಉತ್ಪನ್ನವು (ಜಿಡಿಪಿ) ಎರಡು ವರ್ಷದ ಕನಿಷ್ಠ ಮಟ್ಟಕ್ಕೆ ದಾಖಲಾಗಿದೆ. ಅಲ್ಲದೆ, ಪೂರ್ಣ ಆರ್ಥಿಕ ವರ್ಷದಲ್ಲಿ ಶೇ. 6.4ರಷ್ಟು ದಾಖಲಾಗಲಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು ಅಂದಾಜಿಸಿದೆ. ಇದು 2023–24ನೇ ಸಾಲಿನಲ್ಲಿ ದಾಖಲಾಗಿದ್ದ ಶೇ. 8.2ಕ್ಕಿಂತಲೂ ಕಡಿಮೆಯಿದೆ. ಮತ್ತೊಂದು ಕಡೆ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿದೆ. ಆದರೆ, ಸಂಬಳ ಹಾಗೂ ಕೂಲಿ ದರದಲ್ಲಿ ಏರಿಕೆಯಾಗಿಲ್ಲ. ಇದರಿಂದ ಮಧ್ಯಮ ವರ್ಗದ ಜನರ ಬದುಕು ಹೈರಾಣಾಗಿದೆ. ಹಾಗಾಗಿ, ಎಲ್ಲಾ ವರ್ಗದ ಜನರ ಜೀವನಮಟ್ಟದ ಸುಧಾರಣೆಯನ್ನು ಗಮನದಲ್ಲಿಟ್ಟುಕೊಂಡು ನಿರ್ಮಲಾ ಅವರು ದೂರದೃಷ್ಟಿಯುಳ್ಳ ಬಜೆಟ್ ಮಂಡಿಸುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದ್ದಾರೆ. 

ಸದ್ಯ ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯದ ಕುಸಿತವು ಮುಂದುವರಿದಿದೆ. ಭಾರತೀಯ ರಿಸರ್ವ್‌ ಬ್ಯಾಂಕ್‌ನ ಮಧ್ಯಪ್ರವೇಶದ ಹೊರತಾಗಿಯೂ ರೂಪಾಯಿಯು ಚೇತರಿಕೆಯ ಹಳಿಗೆ ಮರಳಿಲ್ಲ. ಇದು ಸರ್ಕಾರದ ವರಮಾನ ಮತ್ತು ವೆಚ್ಚದ ನಡುವಣ ಅಂತರವಾದ ವಿತ್ತೀಯ ಕೊರತೆ ಹೆಚ್ಚಳಕ್ಕೆ ಎಡೆಮಾಡಿಕೊಟ್ಟಿದೆ. 2025–26ನೇ ಸಾಲಿನಲ್ಲಿ ವಿತ್ತೀಯ ಕೊರತೆಯನ್ನು ಶೇ 4.5ಕ್ಕೆ ತಗ್ಗಿಸುವ ಸರ್ಕಾರದ ಗುರಿಗೆ ಅಕ್ಷರಶಃ ಸವಾಲೊಡ್ಡಿದೆ. ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಸರಕು ಮತ್ತು ಸೇವೆಯ ಬೇಡಿಕೆ ಪ್ರಮಾಣ ತಗ್ಗಿದೆ. ಜಾಗತಿಕ ಬಿಕ್ಕಟ್ಟಿನಿಂದಾಗಿ ಖಾಸಗಿ ಹೂಡಿಕೆ ಪ್ರಮಾಣವು ಸ್ಥಿರವಾಗಿದೆ ಎಂದು ತಜ್ಞರು ಹೇಳಿದ್ದಾರೆ.

ನಿರ್ಮಲಾ ಅವರು ಸತತ ಎಂಟು ಬಾರಿ ಕೇಂದ್ರ ಬಜೆಟ್‌ ಮಂಡಿಸಿದ ಚಾರಿತ್ರಿಕ ಶ್ರೇಯಕ್ಕೆ ಭಾಜನರಾಗಲು ಸಜ್ಜಾಗಿದ್ದಾರೆ. ದೇಶದಲ್ಲಿ ವಿಭಿನ್ನ ಅವಧಿಯಲ್ಲಿ 10 ಬಾರಿ ಕೇಂದ್ರ ಬಜೆಟ್‌ ಮಂಡಿಸಿರುವ ಕೀರ್ತಿಗೆ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರಿಗೆ ಸಲ್ಲುತ್ತದೆ. ಮೊರಾರ್ಜಿ ಅವರು 1959–1964ರ ನಡುವೆ 6 ಬಾರಿ ಹಾಗೂ 1967–1969ರ ನಡುವೆ 4 ಸಲ ಬಜೆಟ್‌ ಮಂಡಿಸಿದ್ದಾರೆ. ಮಾಜಿ ಹಣಕಾಸು ಸಚಿವರಾದ ಪಿ. ಚಿದಂಬರಂ ಪ್ರಣಬ್‌ ಮುಖರ್ಜಿ ಅವರು ಕ್ರಮವಾಗಿ 9 ಹಾಗೂ 8 ಬಾರಿ ಬಜೆಟ್‌ ಮಂಡಿಸಿದ ಹೆಗ್ಗಳಿಕೆ ಹೊಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕಾರಾವಧಿಯಲ್ಲಿ ನಿರ್ಮಲಾ ಅವರು ಸತತವಾಗಿ ಎಂಟು ಬಾರಿ ಬಜೆಟ್‌ ಮಂಡಿಸುತ್ತಿರುವುದು ದಾಖಲಾಗಲಿದೆ. 2019ರಲ್ಲಿ ನಿರ್ಮಲಾಗೆ ಪೂರ್ಣಾವಧಿಯ ಹಣಕಾಸು ಸಚಿವೆಯಾಗಿ ಜವಾಬ್ದಾರಿ ನೀಡಲಾಯಿತು. ಕಳೆದ ವರ್ಷ ಮೂರನೇ ಅವಧಿಗೆ ನರೆಂದ್ರ ಮೋದಿ ಅವರು ಅಧಿಕಾರದ ಗದ್ದುಗೆ ಹಿಡಿದಾಗಲೂ ಅವರನ್ನು ಹಣಕಾಸು ಸಚಿವೆಯಾಗಿ ಮುಂದುವರಿಸಲಾಯಿತು. ಕಳೆದ ವರ್ಷದ ಫೆಬ್ರುವರಿಯಲ್ಲಿ ಮಂಡಿಸಿದ ಮಧ್ಯಂತರ ಬಜೆಟ್ ಸೇರಿ ಇಲ್ಲಿಯವರೆಗೆ ಅವರು ಏಳು ಬಾರಿ ಕೇಂದ್ರ ಬಜೆಟ್‌ ಮಂಡಿಸಿದ ಹೆಗ್ಗಳಿಕೆ ಪಡೆದಿದ್ದಾರೆ.

More articles

Latest article