ಬೆಂಗಳೂರು: ಪಕ್ಷದ ಸಂಘಟನೆ ಕುರಿತು ಚರ್ಚೆ ನಡೆಸಲು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಬೆಂಗಳೂರಿಗೆ ಆಗಮಿಸಿದ್ದಾರೆಯೇ ಹೊರತು ಪಕ್ಷದ ಆಂತರಿಕ ಭಿನ್ನಮತ ಕುರಿತು ಅಭಿಪ್ರಾಯ ಸಂಗ್ರಹಿಸಲು ಅಲ್ಲ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ.
ದೇಶಾದ್ಯಂತ ಸಂಘಟನಾ ಪರ್ವ ನಡೆಯುತ್ತಿದೆ. ಸದಸ್ಯತ್ವ ಅಭಿಯಾನ, ಜಿಲ್ಲಾ, ಮಂಡಲ ಸದಸ್ಯರ ನೇಮಕ ಪ್ರಕ್ರಿಯೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ತರುಣ್ ಚುಗ್ ಬೆಂಗಳೂರಿಗೆ ಬಂದಿದ್ದಾರೆ. ಪಕ್ಷದ ಕಚೇರಿಯಲ್ಲಿ ಇಡೀ ದಿನ ಸಂಘಟನಾ ಸಭೆಗಳು ನಡೆಯಲಿವೆ. ರಾಜಕೀಯ ಸೇರಿದಂತೆ ಯಾವುದೇ ವಿಷಯ ಕುರಿತು ಚರ್ಚೆ ನಡೆಯುವುದಿಲ್ಲ. ರಾಜಕೀಯ ಕುರಿತು ಚರ್ಚೆ ಇದ್ದಿದ್ದರೆ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಬರುತ್ತಿದ್ದರು. ತರುಣ್ ಚುಗ್ ಬಂದಿರುವುದು ಪಕ್ಷ ಸಂಘಟನೆ ದೃಷ್ಟಿಯಿಂದ ಮಾತ್ರ ಎಂದು ವಿಜಯೇಂದ್ರ ಹೇಳಿದರು. ಬೆಂಗಳೂರಿನಲ್ಲಿ ಸೋಮವಾರ ಸಭೆ ಸೇರಿದ್ದ 21 ಜಿಲ್ಲೆಗಳ ಜಿಲ್ಲಾಧ್ಯಕ್ಷರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ತರುಣ್ ಚುಗ್ಗೆ ದೂರು ನೀಡಲಿದ್ದಾರೆ ಎಂಬ ಮಾಹಿತಿಯೂ ಇದೆ.
ಅತ್ತ ದೆಹಲಿಯಲ್ಲಿ ಯತ್ನಾಳ್ ಮತ್ತು ಅವರ ತಂಡದ ಸದಸ್ಯರು ಸಭೆ ನಡೆಸುತ್ತಿದ್ದಾರೆ. ವಿಜಯೇಂದ್ರ ಕುರಿತು ವರಿಷ್ಠರಿಗೆ ದೂರು ನೀಡಲು ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ. ವಿಜಯೇಂದ್ರ ಅವರು ರಾಜ್ಯ ಅಧ್ಯಕ್ಷರಾಗಿ ವಿಫಲರಾಗಿದ್ದಾರೆ. ಅವರ ನೇತೃತ್ವದಲ್ಲಿ ಎದುರಿಸಲಾದ ಚುನಾವನೆಗಳಲ್ಲಿ ಪಕ್ಷ ಸೋತಿದೆ. ಆದ್ದರಿಂದ ಅವರನ್ನು ಬದಲಾಯಿಸಬೇಕು ಎಂದು ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದು ಬಂದಿದೆ. ಒಟ್ಟಿನಲ್ಲಿ ಪ್ರತಿಪಕ್ಷವಾಗಿ ಬಿಜೆಪಿ ಸಂಪೂರ್ಣವಾಗಿ ವಿಫಲವಾಗುತ್ತಿದೆ. ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಸೆಟೆದು ನಿಲ್ಲಬೇಕಾದ ಬಿಜೆಪಿ ಮುಖಂಡರು ತಮ್ಮ ತಮ್ಮಲ್ಲೇ ಕಚ್ಚಾಡುತ್ತಿದ್ದು ರಾಜ್ಯದ ಜನತೆಗೆ ಉಚಿತ ಮನರಂಜನೆ ಒದಗಿಸುತ್ತಿದ್ದಾರೆ.