ಬೆಂಗಳೂರು: ರಕ್ಷಣಾ ವಲಯದ ಬಜೆಟ್ ಗಾತ್ರ ಹೆಚ್ಚಿಸಿ, ಪಾಕಿಸ್ತಾನದ ಮೇಲೆ ಯುದ್ಧ ಘೋಷಿಸಿ ಎಂದು ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಮನವಿ ಮಾಡಿಕೊಂಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ಯುದ್ಧ ಬೇಡ ಎಂದು ಹೇಳಿಲ್ಲ. ಅವರ ಹೇಳಿಕೆಯನ್ನ ತಪ್ಪಾಗಿ ಅರ್ಥೈಸಲಾಗಿದೆ. ಇದರಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದ್ದು, ವಿಪಕ್ಷ ನಾಯಕ ಅಶೋಕ್, ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರು ಸಿಎಂ ವಿರುದ್ಧ ಮಾತನಾಡುವುದು ಸರಿಯಲ್ಲ. ಕೂಡಲೇ ಇಬ್ಬರು ತಮ್ಮ ಹೇಳಿಕೆ ವಾಪಸ್ ಪಡೆಯಬೇಕು ಎಂದು ಆಗ್ರಹಪಡಿಸಿದರು.
ಸಿಎಂ ಅವರ ಹೇಳಿಕೆ ಪಾಕಿಸ್ತಾನದ ಮಾಧ್ಯಮಗಳಲಿ ವರದಿಯಾದರೆ ಅದಕ್ಕೂ ನಮಗೂ ಸಂಬಂಧವಿಲ್ಲ. ಸಿದ್ದರಾಮಯ್ಯ ಯಾವತ್ತೂ ದೇಶದ ವಿರುದ್ಧ ಮಾತಾಡಿಲ್ಲ ಎಂದು ಸಮರ್ಥಿಸಿಕೊಂಡರು.
ಇದೇ ವೇಳೆ ಪಾಕಿಸ್ತಾನದ ವಿರುದ್ಧ ಯುದ್ಧ ಘೋಷಿಸುವಂತೆ ಆಗ್ರಹ ಪಡಿಸಿದ ಅವರು, ರಕ್ಷಣಾ ವಲಯದ ಬಜೆಟ್ ಗಾತ್ರವನ್ನು 6.81 ಲಕ್ಷ ಕೋಟಿ ರೂ.ಗಳಿಂದ 12 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಿಸುವ ಸಂಬಂಧ ಚರ್ಚೆ ನಡೆಸಲು ಸಂಸತ್ ವಿಶೇಷ ಅಧಿವೇಶನವನ್ನು ಕರೆಯಬೇಕೆಂದು ಸಲಹೆ ನೀಡಿದರು.
ಕಾಶ್ಮೀರದಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಧಾನಮಂತ್ರಿಗಳು ವಿರೋಧ ಪಕ್ಷದ ನಿಯೋಗವನ್ನು ಅಲ್ಲಿಗೆ ಕರೆದೊಯ್ಯಬೇಕು. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಭಯೋತ್ಪಾದಕರ ಅಡಗುತಾಣಗಳ ಮೇಲೆ ಬಾಂಬ್ ದಾಳಿ ಮಾಡಬೇಕು. ಪಾಕಿಸ್ತಾನದ ವರ್ತನೆ ಕುರಿತು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಶ್ನಿಸಬೇಕು ಎಂದು ರಾಯರೆಡ್ಡಿ ಒತ್ತಾಯಿಸಿದರು.