ಪದೋನ್ನತಿ ಸೇರಿದಂತೆ ಎಲ್ಲ ಪರೀಕ್ಷೆಗಳನ್ನು ಕಡ್ಡಾಯವಾಗಿ ಕನ್ನಡದಲ್ಲೂ ನಡೆಸಬೇಕು; ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಬೇಕಾದೀತು: ನೈರುತ್ಯ ರೈಲ್ವೇ ಇಲಾಖೆಗೆ ಕರವೇ ಅಧ್ಯಕ್ಷ ಟಿ.ಎ. ನಾರಾಯಣಗೌಡ ಎಚ್ಚರಿಕೆ

Most read

ಬೆಂಗಳೂರು:ನೈರುತ್ಯ ರೈಲ್ವೇ ವಿಭಾಗ ನಡೆಸುವ ಪದೋನ್ನತಿ ಪರೀಕ್ಷೆಗಳು ಸೇರಿದಂತೆ  ರೈಲ್ವೇ ಇಲಾಖೆಯ ಎಲ್ಲಪರೀಕ್ಷಗಳನ್ನು ಕಡ್ಡಾಯವಾಗಿ ಕನ್ನಡ ಭಾಷೆಯಲ್ಲೂ ನಡೆಸಬೇಕು ಎಂದು ನೈರುತ್ಯ ರೈಲ್ವೇ ವಿಭಾಗ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು (ಡಿಆರ್ ಎಂ)ಅವರಿಗೆಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಆಗ್ರಹಿಸಿದ್ದಾರೆ. ಅವರು ಇಂದು ಖುದ್ದು ನೈರುತ್ಯ ರೈಲ್ವೇ ವಿಭಾಗ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಗೆ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.

ಈ ಸಂಬಂಧ ಪತ್ರ ಬರೆದಿರುವ ಅವರು, ಪರೀಕ್ಷೆಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಸೇರಿಸಿ, ಕನ್ನಡಿಗ ಉದ್ಯೋಗಿಗಳ ಹಕ್ಕುಗಳನ್ನು ರಕ್ಷಿಸಬೇಕು. ಒಂದು ವೇಳೆ ಕನ್ನಡಿಗರ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಂಡರೆ ಕರ್ನಾಟಕ ರಕ್ಷಣಾ ವೇದಿಕೆಯು ರೈಲ್ವೇ ಇಲಾಖೆಯ ವಿರುದ್ಧ ರಾಜ್ಯವ್ಯಾಪಿ ಹೋರಾಟವನ್ನು ತೀವ್ರಗೊಳಿಸಲಿದೆ. ರೈಲುಗಳನ್ನು ತಡೆಯುವುದು, ನಿಲ್ದಾಣಗಳನ್ನು ಮುಚ್ಚುವುದು ಸೇರಿದಂತೆ ಉಗ್ರ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಕನ್ನಡ ಭಾಷೆಯ ಗೌರವ ಮತ್ತು ಕನ್ನಡಿಗರ ಹಕ್ಕುಗಳನ್ನು ಕಸಿದುಕೊಳ್ಳುವ ಯಾವುದೇ ಪ್ರಯತ್ನವನ್ನು ನಾವು ಸಹಿಸುವುದಿಲ್ಲಎಂದು ಎಚ್ಚರಿಕೆ ನೀಡಿದ್ದಾರೆ.

ರೈಲ್ವೇ ಇಲಾಖೆಯು ಇತ್ತೀಚಿಗೆ ಹೊರಡಿಸಿರುವ ಪದೋನ್ನತಿ ಪರೀಕ್ಷೆಗಳ ನೋಟಿಫಿಕೇಷನ್ ನಲ್ಲಿ ಕನ್ನಡ ಭಾಷೆಯನ್ನು ಬಳಸಲು ಅವಕಾಶ ನಿರಾಕರಿಸಲಾಗಿರುವುದು ಕರವೇ ಗಮನಕ್ಕೆ ಬಂದಿರುತ್ತದೆ. ನೈರುತ್ಯ ರೈಲ್ವೇಯ ಬೆಂಗಳೂರು, ಹುಬ್ಬಳ್ಳಿ ಮತ್ತು ಮೈಸೂರು ವಿಭಾಗಗಳಲ್ಲಿ ಹೊರಡಿಸಲಾದ ಗೂಡ್ಸ್ ಟ್ರೈನ್ ಮ್ಯಾನೇಜರ್ (ಜಿಟಿಎಂ) ಪದೋನ್ನತಿ ಅಧಿಸೂಚನೆಗಳ ಪೈಕಿ ಬೆಂಗಳೂರು ವಿಭಾಗದಲ್ಲಿ ಮಾತ್ರ ಕನ್ನಡದಲ್ಲಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಹಕ್ಕನ್ನು ದಮನ ಮಾಡಲಾಗಿದೆ.

ರೈಲ್ವೇ ಇಲಾಖೆಯು ಇತ್ತೀಚಿಗೆ ಹೊರಡಿಸಿರುವ ಪದೋನ್ನತಿ ಪರೀಕ್ಷೆಗಳ ನೋಟಿಫಿಕೇಷನ್ ನಲ್ಲಿ ಕನ್ನಡ ಭಾಷೆಯನ್ನು ಬಳಸಲು ಅವಕಾಶ ನಿರಾಕರಿಸಲಾಗಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ. ನೈರುತ್ಯ ರೈಲ್ವೇಯ ಬೆಂಗಳೂರು, ಹುಬ್ಬಳ್ಳಿ ಮತ್ತು ಮೈಸೂರು ವಿಭಾಗಗಳಲ್ಲಿ ಹೊರಡಿಸಲಾದ ಗೂಡ್ಸ್ ಟ್ರೈನ್ ಮ್ಯಾನೇಜರ್ (ಜಿಟಿಎಂ) ಪದೋನ್ನತಿ ಅಧಿಸೂಚನೆಗಳ ಪೈಕಿ ಬೆಂಗಳೂರು ವಿಭಾಗದಲ್ಲಿ ಮಾತ್ರ ಕನ್ನಡದಲ್ಲಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಹಕ್ಕನ್ನು ದಮನ ಮಾಡಲಾಗಿದೆ.

ಬೆಂಗಳೂರು ವಿಭಾಗದ ಅಧಿಸೂಚನೆ No B/P.608/I/Tfc/Goods Train manager/PRQ 60%/2024-25 ದಿನಾಂಕ ೧೧.೧೨.೨೦೨೫ರಲ್ಲಿ ಪರೀಕ್ಷಾ ಪ್ರಶ್ನೆಪತ್ರವನ್ನು ಕೇವಲ ದ್ವಿಭಾಷಾ (ಹಿಂದಿ ಅಥವಾ ಇಂಗ್ಲಿಷ್)ಯಲ್ಲಿ ನಡೆಸುವಂತೆ ಉಲ್ಲೇಖಿಸಲಾಗಿದ್ದು, ಕನ್ನಡವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಹುಬ್ಬಳ್ಳಿ ವಿಭಾಗದ ಅಧಿಸೂಚನೆ No.H/P.608/III/Guards/15%LDCE/Vol.16 ದಿನಾಂಕ ೦೬.೧೦.೨೦೨೫ರಲ್ಲಿ ಪ್ರಶ್ನೆಪತ್ರವನ್ನು ಕನ್ನಡ, ಹಿಂದಿ ಮತ್ತು ಇಂಗ್ಲಿಷ್ಲ್ಲಿ ಲಭ್ಯಗೊಳಿಸುವಂತೆ ಉಲ್ಲೇಖಿಸಲಾಗಿದೆ. ಮೈಸೂರು ವಿಭಾಗದ ಅಧಿಸೂಚನೆ No.Y/P.608/II/Goods Guard/VI (LDCE) ದಿನಾಂಕ ೦೧.೧೨.೨೦೨೫ರಲ್ಲಿ ತ್ರಿಭಾಷಾ (ಇಂಗ್ಲಿಷ್, ಹಿಂದಿ ಮತ್ತು ಕನ್ನಡ)ಯಲ್ಲಿ ಪರೀಕ್ಷೆ ನಡೆಸುವಂತೆ ಸ್ಪಷ್ಟವಾಗಿ ತಿಳಿಸಲಾಗಿದೆ.

ಈ ಅಸಮಾನತೆಯು ಒಂದೇ ರೈಲ್ವೇಯೊಳಗೆ ಹಲವು ಬಗೆಯ ನೀತಿಗಳು ಇರಲು ಸಾಧ್ಯವೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದಂತಾಗಿದೆ. ಅಷ್ಟೇ ಅಲ್ಲ, ಹಲವಾರು ಅನುಮಾನಗಳನ್ನು ಸೃಷ್ಟಿಸಿದೆ. ಬೆಂಗಳೂರು ವಿಭಾಗದಲ್ಲಿ ಕನ್ನಡವನ್ನು ನಿರ್ಲಕ್ಷಿಸುವುದು ಕನ್ನಡಿಗ ಉದ್ಯೋಗಿಗಳನ್ನು ಪದೋನ್ನತಿಯಿಂದ ವಂಚಿಸುವ ಕ್ರಮವಾಗಿದ್ದು, ಅವರ ವೃತ್ತಿ ಬೆಳವಣಿಗೆಗೆ ದೊಡ್ಡ ಅಡ್ಡಿಯನ್ನುಂಟುಮಾಡುತ್ತದೆ. ಕನ್ನಡಿಗ ಉದ್ಯೋಗಿಗಳು ಪರೀಕ್ಷೆಗಳನ್ನು ತಮ್ಮ ಮಾತೃಭಾಷೆಯಲ್ಲಿ ಬರೆಯಲು ಅವಕಾಶವಿಲ್ಲದೇ ಸಂಕಷ್ಟಕ್ಕೊಳಗಾಗಿದ್ದಾರೆ ಮತ್ತು ಇದು ಅವರ ಸೇವಾ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಇಂತಹ ಕ್ರಮಗಳು ಕನ್ನಡ ಭಾಷೆಯನ್ನು ದ್ವಿತೀಯ ದರ್ಜೆಯಲ್ಲಿ ಪರಿಗಣಿಸುವ, ಕನ್ನಡಿಗರನ್ನು ದ್ವಿತೀಯ ದರ್ಜೆ ನಾಗರಿಕರಂತೆ ಕಾಣುವ ಕೀಳು ಮನೋಭಾವವನ್ನು ತೋರುತ್ತವೆ. ಕನ್ನಡಿಗರ ಏಳಿಗೆಗೆ ಇಂಥ ನೀತಿಗಳು ಮಾರಕವಾಗಿವೆ.

ಕರ್ನಾಟಕ ರಕ್ಷಣಾ ವೇದಿಕೆ ಈ ಹುನ್ನಾರವನ್ನು ತೀವ್ರವಾಗಿ ಖಂಡಿಸುತ್ತದೆ. ಇದು ಕನ್ನಡಿಗರ ಮೇಲೆ ನೇರ ದಾಳಿ ಮತ್ತು ಕನ್ನಡ ಭಾಷೆಯನ್ನು ದಮನಿಸುವ ಕುತಂತ್ರವಾಗಿದ್ದು, ಭಾರತೀಯ ಸಂವಿಧಾನದ ಭಾಷಾ ಸಮಾನತೆಯ ತತ್ವಕ್ಕೆ ವಿರುದ್ಧವಾಗಿದೆ. ಕನ್ನಡಿಗರ ಹಕ್ಕುಗಳನ್ನು ಕಸಿದುಕೊಳ್ಳುವ ಈ ಅನ್ಯಾಯವನ್ನು ನಾವು ಸಹಿಸುವುದಿಲ್ಲ. ಇದು ಕೇವಲ ಕನ್ನಡ ಭಾಷೆಗೆ ಮಾಡಿದ ಅವಮಾನ ಮಾತ್ರವಲ್ಲ, ಕನ್ನಡಿಗ ಅಭ್ಯರ್ಥಿಗಳನ್ನು ಉದ್ಯೋಗಾವಕಾಶಗಳಿಂದ ವಂಚಿಸುವ ದುರುದ್ದೇಶಪೂರಿತ ಕ್ರಮವಾಗಿದೆ.

ಈ ಹಿಂದೆಯೂ ರೈಲ್ವೇ ಇಲಾಖೆಯಲ್ಲಿ ಇಂತಹ ದ್ವಿಭಾಷಾ ನೀತಿಯನ್ನು ಅಳವಡಿಸಲು ಪ್ರಯತ್ನಿಸಲಾಗಿತ್ತು. ಲಾಲೂ ಪ್ರಸಾದ್ ಯಾದವ್ ಅವರು ಕೇಂದ್ರ ರೈಲ್ವೇ ಸಚಿವರಾಗಿದ್ದ ಸಂದರ್ಭದಲ್ಲಿ, ದ್ವಿಭಾಷಾ ಸೂತ್ರದಲ್ಲಿ ಪರೀಕ್ಷೆ ನಡೆಸುವ ಪ್ರಯತ್ನ ನಡೆದಿತ್ತು. ಆಗ ಕರ್ನಾಟಕ ರಕ್ಷಣಾ ವೇದಿಕೆಯು ಉಗ್ರ ಹೋರಾಟ ನಡೆಸಿ ಪರೀಕ್ಷೆಯನ್ನು ತಡೆಗಟ್ಟಿತ್ತು. ಎರಡು ವರ್ಷಗಳ ನಿರಂತರ ಹೋರಾಟದ ನಂತರ, ಮಮತಾ ಬ್ಯಾನರ್ಜಿ ಅವರು ರೈಲ್ವೇ ಸಚಿವರಾಗಿದ್ದಾಗ ನಮ್ಮ ಹೋರಾಟಕ್ಕೆ ಮನ್ನಣೆ ಸಿಕ್ಕಿತು. ರೈಲ್ವೆ ಇಲಾಖೆಯ ಪರೀಕ್ಷೆಗಳನ್ನು ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆಗಳಲ್ಲಿ ನಡೆಸುವಂತೆ ಆದೇಶ ಹೊರಡಿಸಲಾಗಿತ್ತು. ಆ ಸಂದರ್ಭದಲ್ಲಿ ೪೭೦೦ ಡಿ ದರ್ಜೆ ಹುದ್ದೆಗಳ ಪೈಕಿ ೩೮೦೦ ಕನ್ನಡಿಗರು ಆಯ್ಕೆಯಾಗಿದ್ದು, ಅದೊಂದು ಐತಿಹಾಸಿಕ ದಾಖಲೆಯಾಗಿತ್ತು. ಆದರೆ ಇದೀಗ ಮತ್ತೆ ಆ ಆದೇಶವನ್ನು ಧಿಕ್ಕರಿಸಿ, ಉತ್ತರ ಭಾರತದ ಹಿಂದಿ ಭಾಷಿಕ ರಾಜ್ಯಗಳಿಂದ ಬರುವ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಅಧಿಕಾರಿಗಳು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾತ್ರ ಪರೀಕ್ಷೆ ನಡೆಸುವ ಕುಯುಕ್ತಿಗೆ ಮುಂದಾಗಿದ್ದಾರೆ. ಇದು ತೀವ್ರ ಖಂಡನೀಯವಾಗಿದೆ. ಈ ನೀತಿಯಿಂದಾಗಿ ಕನ್ನಡಿಗ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಸಮಾನ ಅವಕಾಶ ಕಳೆದುಕೊಳ್ಳುತ್ತಿದ್ದಾರೆ ಮತ್ತು ಇದು ರಾಜ್ಯದ ಯುವಜನತೆಯ ಭವಿಷ್ಯಕ್ಕೆ ಧಕ್ಕೆಯನ್ನುಂಟುಮಾಡುತ್ತದೆ.

ಈ ಎಲ್ಲಾ ಅನ್ಯಾಯಗಳು ಕನ್ನಡ ಭಾಷೆ ಮತ್ತು ಕನ್ನಡಿಗರನ್ನು ಉದ್ದೇಶಪೂರ್ವಕವಾಗಿ ದಮನಿಸುವ ಪಿತೂರಿಯಾಗಿದ್ದು, ಭಾರತದ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ. ನಾವು ಈಗಾಗಲೇ ಹುಬ್ಬಳ್ಳಿ, ಮೈಸೂರು ಮತ್ತು ಬೆಂಗಳೂರುಗಳಲ್ಲಿ ರಸ್ತೆಗಿಳಿದು ಉಗ್ರ ಪ್ರತಿಭಟನೆ ನಡೆಸಲು ತಯಾರಿ ನಡೆಸಿದ್ದೇವೆ. ರೈಲ್ವೇ ನಿಲ್ದಾಣಗಳಿಗೆ ಮುತ್ತಿಗೆ ಹಾಕಿ, ಕನ್ನಡ ಕಡೆಗಣನೆ ವಿರುದ್ಧ ಚಳವಳಿ ಸಂಘಟಿಸುತ್ತೇವೆ. ಈ ಸಂಘರ್ಷ ಬೇಡ ಎನ್ನುವುದಾದರೆ, ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಬಾರದು ಎಂಬ ಕಾಳಜಿ ಇದ್ದಲ್ಲಿ ನೈರುತ್ಯ ರೈಲ್ವೆ ಇಲಾಖೆ ನಡೆಸುವ ಎಲ್ಲ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸಲೇಬೇಕು. ಇದಕ್ಕೆ ಸಂಬಂಧಪಟ್ಟ ಆದೇಶ ಹೊರಡಿಸಬೇಕು ಎಂದು ಆಗ್ರಹಿಸುತ್ತೇವೆ. ರೈಲ್ವೇ ಇಲಾಖೆಯ ಎಲ್ಲಾ ಪದೋನ್ನತಿ ಪರೀಕ್ಷೆಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಸೇರಿಸಿ, ಕನ್ನಡಿಗ ಉದ್ಯೋಗಿಗಳ ಹಕ್ಕುಗಳನ್ನು ರಕ್ಷಿಸಬೇಕು ಎಂದು ಒತ್ತಾಯಿಸುತ್ತೇವೆ.

ಈ ಬೇಡಿಕೆಗಳನ್ನು ತಕ್ಷಣ ಈಡೇರಿಸದಿದ್ದರೆ, ಕರ್ನಾಟಕ ರಕ್ಷಣಾ ವೇದಿಕೆಯು ರೈಲ್ವೇ ಇಲಾಖೆಯ ವಿರುದ್ಧ ರಾಜ್ಯವ್ಯಾಪಿ ಹೋರಾಟವನ್ನು ತೀವ್ರಗೊಳಿಸಲಿದೆ. ರೈಲುಗಳನ್ನು ತಡೆಗಟ್ಟುವುದು, ನಿಲ್ದಾಣಗಳನ್ನು ಮುಚ್ಚುವುದು ಸೇರಿದಂತೆ ಉಗ್ರ ಕ್ರಮಗಳನ್ನು ಕೈಗೊಳ್ಳಲು ನಾವು ಹಿಂಜರಿಯುವುದಿಲ್ಲ. ಕನ್ನಡ ಭಾಷೆಯ ಗೌರವ ಮತ್ತು ಕನ್ನಡಿಗರ ಹಕ್ಕುಗಳನ್ನು ಕಸಿದುಕೊಳ್ಳುವ ಯಾವುದೇ ಪ್ರಯತ್ನವನ್ನು ನಾವು ಸಹಿಸುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಪತ್ರದಲ್ಲಿ ವಿವರಿಸಿದ್ದಾರೆ.

ಪ್ರತಿಗಳನ್ನು ಕೇಂದ್ರ ರೈಲ್ವೇ ಸಚಿವರು, ಕರ್ನಾಟಕ ಮುಖ್ಯಮಂತ್ರಿಗಳು, ಅಧ್ಯಕ್ಷರು ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ರೈಲ್ವೆ ಬೋರ್ಡ್, ನೈರುತ್ಯ ರೈಲ್ವೇ ಮುಖ್ಯಸ್ಥರಿಗೂ ಕರವೇ ರವಾನಿಸಿದೆ.

More articles

Latest article